Homeಕರ್ನಾಟಕಮದ್ದೂರಿನ ಹೆಸರು ಅರ್ಜುನಪುರಿಯೇ? ಊರ ಹೆಸರುಗಳ ಮೇಲೂ ಪುರೋಹಿತಶಾಹಿ ಆಕ್ರಮಣ!

ಮದ್ದೂರಿನ ಹೆಸರು ಅರ್ಜುನಪುರಿಯೇ? ಊರ ಹೆಸರುಗಳ ಮೇಲೂ ಪುರೋಹಿತಶಾಹಿ ಆಕ್ರಮಣ!

ಇದು ಹೀಗೆ ಮುಂದುವರೆದರೆ ಬೆಂಗಳೂರಿನ ಲಾಲ್‌ಬಾಗ್ ಪುಷ್ಪೋದ್ಯಾನಕ್ಕೆ ಸಾವರ್ಕರ್ ಪುಷ್ಪ ಕಾಶಿ ಎಂದು ಹೆಸರಿಡಲು ಹೇಸುವವರಲ್ಲ...

- Advertisement -
- Advertisement -

ಊರುಗಳ ಹೆಸರು ತಿರುಚುವ ಹಿಂದಿನ ಬ್ರಾಹ್ಮಣ್ಯಶಾಹಿ ಹುನ್ನಾರ. ಭಾಗ -1

  • ನಿಖಿಲ್ ಕೋಲ್ಪೆ

    ಊರ ಹೆಸರುಗಳಿಗೆ ಒಂದು ಹಿನ್ನೆಲೆಯಿರುತ್ತದೆ. ಅದು ಐತಿಹಾಸಿಕ, ಭೌಗೋಳಿಕ, ಸಾಂಸ್ಕೃತಿಕ ಮತ್ತು ಭಾಷಾಸಂಬಂಧಿ ಅಂಶಗಳನ್ನು ಹೊಂದಿರಬಹುದು. ಜನರ ಬಾಯಿಯಲ್ಲಿ ಕಾಲಕ್ರಮೇಣ ಹಲವು ಬದಲಾವಣೆಗಳನ್ನು ಕಂಡಿರಬಹುದು. ಆದರೆ, ಏಕಾಏಕಿಯಾಗಿ ಮತೀಯ ಸ್ಥಳಪುರಾಣಗಳನ್ನು ಹುಟ್ಟುಹಾಕಿ, ಸಂಸ್ಕೃತಮಯ, ಧರ್ಮಸಂಬಂಧಿ ಹೆಸರುಗಳನ್ನು ಶೋಧಿಸುವ ಮೂಲಕ ಸೂಕ್ಷ್ಮವಾಗಿ ಸ್ಥಳೀಯ ಸಂಸ್ಕೃತಿಗಳ ಮೇಲೆ ನಡೆಸಲಾಗುತ್ತಿರುವ ಆಕ್ರಮಣ ಅಪಾಯಕಾರಿ.

ಕೆಲದಿನಗಳ ಹಿಂದೆ ವಾಟ್ಸಾಪ್ ಯುನಿವರ್ಸಿಟಿಯ ವಿಧ್ವಂಸಕ ವಿದ್ವಾಂಸರೊಬ್ಬರು ಮದ್ದೂರಿನ ಹೆಸರು ಅರ್ಜುನಪುರಿ ಎಂಬ ಭಯಾನಕ ಸಂಶೋಧನೆಯನ್ನು ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟಿದ್ದರು. ಉತ್ತರದ ಅರ್ಜುನನೆಲ್ಲಿ! ದಕ್ಷಿಣದ ಮದ್ದೂರು ಎಲ್ಲಿ? ಈ ಹಿನ್ನೆಲೆಯಲ್ಲಿ ಊರಿನ ಹೆಸರುಗಳ ಹೆಸರಿನಲ್ಲಿ ನಡೆಸಲಾಗುವ ಸೂಕ್ಷ್ಮ ಸಾಂಸ್ಕೃತಿಕ ಆಕ್ರಮಣಗಳನ್ನು ಇಲ್ಲಿ ಆಳವಾಗಿ ಅಲ್ಲವಾದರೂ, ಸ್ಥೂಲವಾಗಿ ನೋಡೋಣ. ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿರುವ ಟಿಪ್ಪು ಸುಲ್ತಾನ್ ಹೆಸರನ್ನು ಪಠ್ಯಗಳಿಂದ ತೆಗೆದುಹಾಕುವ ಕೋಮುವಾದಿ ಮನಸ್ಸುಗಳಲ್ಲಿ ಅಡಗಿರುವ ಪಿತೂರಿಗಳನ್ನು ಗುರುತಿಸಲು ಇದು ಸಹಕಾರಿಯಾಗಬಲ್ಲದು.

ಹಿಂದೆ ರಾಜರುಗಳು, ಸುಲ್ತಾನರು ತಾವು ಕಟ್ಟಿದ ನಗರಗಳಿಗೆ, ಕಟ್ಟಡಗಳಿಗೆ, ಸ್ಮಾರಕಗಳಿಗೆ ತಮಗೆ ಇಷ್ಟಬಂದ ಹೆಸರುಗಳನ್ನು ಇಟ್ಟಿದ್ದರು. ಪ್ರಜಾಪ್ರಭುತ್ವವಿಲ್ಲದ ರಾಜಪ್ರಭುತ್ವದಲ್ಲಿ ಅದು ಅಸಹಜವೇನಲ್ಲ. ಇದನ್ನೇ ಬ್ರಿಟಿಷರೂ ಮುಂದುವರಿಸಿದರು. ಜೊತೆಗೆ, ಅವರು ಮತ್ತು ಇತರ ವಿದೇಶೀಯರು ದೇಶೀಯ ಹೆಸರುಗಳನ್ನು ತಮ್ಮ ಉಚ್ಛಾರಣೆಗೆ ತಕ್ಕಂತೆ ಬದಲಾಯಿಸಿದರು. ನಾವು ನಮ್ಮ ಗುಲಾಮಿ ಬುದ್ದಿಗೆ ತಕ್ಕಂತೆ ಈ ಅಪಭ್ರಂಶಗೊಂಡ ಹೆಸರುಗಳನ್ನೇ ಹೆಮ್ಮೆಯಿಂದ ಉಚ್ಛರಿಸುತ್ತಾ ಖಾಯಂಗೊಳಿಸಿದೆವು. ಉದಾಹರಣೆಗೆ ಡೆಲ್ಲಿ, ಬಾಂಬೆ, ಮಡ್ರಾಸ್, ಬ್ಯಾಂಗಲೋರ್, ಕ್ಯಾಲಿಕಟ್ ಇತ್ಯಾದಿ ಹೆಸರುಗಳು.

ಇಂತಹಾ ಹೆಸರುಗಳನ್ನು ನಾವೀಗ ಒಂದು ಹಂತಕ್ಕೆ ಮೂಲ ಎನಿಸಬಲ್ಲ(?) ಹೆಸರುಗಳಿಗೆ ಬದಲಿಸಿದ್ದೇವೆ. ಇದರಲ್ಲಿ ತಪ್ಪೇನೂ ಇಲ್ಲ. ಅವು ಅಪಭ್ರಂಶಗೊಂಡ ನಮ್ಮದೇ ಹೆಸರುಗಳು. ಆದರೆ, ರಾಜರಿರಲಿ, ಸುಲ್ತಾನರಿರಲಿ, ಬ್ರಿಟಿಷರೇ ಇರಲಿ- ಅವರೇ ಕಟ್ಟಿದ ನಗರ ಮತ್ತು ನಿರ್ಮಾಣಗಳಿಗೆ ಇಟ್ಟ ಐತಿಹಾಸಿಕ ಹೆಸರುಗಳನ್ನು ಬದಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಏಳುತ್ತದೆ. ಅವರೇನು ತಮ್ಮ ಹಣದಿಂದ ಕಟ್ಟಿಲ್ಲ; ಜನರ, ದೇಶದ ಹಣದಿಂದ ಕಟ್ಟಿದರು ಎಂದು ವಾದಿಸಬಹುದು. ಇದನ್ನು ಒಪ್ಪಬಹುದಾದರೆ, ಇದು ಮುಸ್ಲಿಂ ದೊರೆಗಳು ಮತ್ತು ಬ್ರಿಟಿಷರಿಗೆ ಮಾತ್ರ ಅನ್ವಯವಾಗಿ ಹಿಂದೂ ರಾಜರಿಗೆ ಅನ್ವಯವಾಗದಿರುವುದು ಹೇಗೆ? ಆಗ ಬರಬಹುದಾದ ಉತ್ತರವೆಂದರೆ, ಹಿಂದೂ ರಾಜರು ನಮ್ಮವರು; ಉಳಿದವರು ಹೊರಗಿನವರು ಎಂಬುದು. ಹಿಂದೂಗಳು, ಮುಸ್ಲಿಮರು ಮತ್ತು ಕ್ರೈಸ್ತರು ಎಂದು ಸೂಕ್ಷ್ಮವಾಗಿ ಸೂಚಿಸಿ, ಪ್ರತ್ಯೇಕಿಸುವ ಹುನ್ನಾರವೇ ಈ ಹೆಸರಿನ ರಾಜಕೀಯದಲ್ಲಿ ಅಡಗಿರುವುದು. ಇಲ್ಲಿ ಹೇಳಲಾದ ‘ಹಿಂದೂ’ಗಳು ಯಾರೆಂಬುದನ್ನು ಮುಂದೆ ಪರಿಶೀಲಿಸೋಣ.

ಇತ್ತೀಚೆಗೆ ಹೆಸರುಗಳನ್ನು ಕೋಮುವಾದಿ ಕಾರಣಗಳಿಗಾಗಿ ಬದಲಿಸುವ ಪರಿಪಾಠ ಹೆಚ್ಚಾಗುತ್ತಿದೆ. ಫಿರೋಜ್ ಶಾ ಕೋಟ್ಲಾ ಮೈದಾನವನ್ನು ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಬದಲಿಸಲಾಯಿತು. ಇದೇ ರೀತಿ ಹಲವಾರು ಇಸ್ಲಾಮಿಕ್ ಹೆಸರುಗಳನ್ನು ಬದಲಾಯಿಸಲಾಯಿತು. ಇನ್ನೂ ಹಲವಾರು ನಗರ ಪಟ್ಟಣಗಳು ಪಟ್ಟಿಯಲ್ಲಿವೆ. ಟಿಪ್ಪು ಸುಲ್ತಾನ್ ಹೆಸರನ್ನು ಪಠ್ಯಗಳಿಂದ ತೆಗೆಯಲು ಹೊರಟವರು, ಆತ ನಿರ್ಮಿಸಿದ ಬೆಂಗಳೂರಿನ ಲಾಲ್‌ಬಾಗ್ ಪುಷ್ಪೋದ್ಯಾನಕ್ಕೆ ಸಾವರ್ಕರ್ ಪುಷ್ಪ ಕಾಶಿ ಎಂದು ಹೆಸರಿಡಲು ಹೇಸುವವರಲ್ಲ. ಇದರ ಹಿಂದೆ ಅಡಗಿರುವುದು ಸಾರಾಸಗಟು ಮುಸ್ಲಿಂ ದ್ವೇಷ. ಅವರು ಈ ದೇಶದವರಲ್ಲ; ಹೊರಗಿನವರು ಎಂಬ ಸೂಕ್ಷ್ಮ ಮನಶ್ಶಾಸ್ತ್ರೀಯ ಸೂಚನೆ (Psychological suggestion) ನೀಡಿ, ಜನರನ್ನು ಒಡೆಯುವ ತಂತ್ರದ ಭಾಗವಿದು. ಇಂತಹ ಪ್ರಯತ್ನಗಳು ಹುಟ್ಟು ಹಾಕುವ ವಿವಾದಗಳು ಕೂಡಾ ಕೋಮುವಾದೀಕರಣದಲ್ಲಿ ನೆರವಾಗುತ್ತದೆ.

ಅದರಲ್ಲೂ ಇವರು ಪ್ರತಿಪಾದಿಸುವ ‘ಹಿಂದೂ’ ಹೆಸರುಗಳು ಯಾವುವು? ಕೆಲಸಮಯದ ಹಿಂದೆ ಗುರ್ಗಾಂವ್ (ಗುರುಗಾಂವ್) ಹೆಸರನ್ನು ಗುರುಗ್ರಾಮ್ ಎಂದು ಬದಲಿಸಲಾಯಿತು. ಎರಡರ ನಡುವೆ ಇದ್ದಂತಹಾ ಮಹಾನ್ ವ್ಯತ್ಯಾಸ ಏನು? ಗಾಂವ್ ಎಂದರೆ ಹಿಂದಿ, ಹರ್ಯಾಣ್ವಿ ಮತ್ತು ಪಂಜಾಬಿಯಲ್ಲೂ ಗ್ರಾಮವೇ. ಹಾಗಿದ್ದರೂ, ಈ ಬದಲಾವಣೆಗೆ ಪ್ರೇರಣೆ ಎಂದರೆ ಗುರು ಗ್ರಾಮ್ ಎಂಬುದು ಸಂಸ್ಕೃತ! ‘ಹಿಂದೂ’ ಹೆಸರಿನಲ್ಲಿ ಅದೇ ಧರ್ಮ ಅನುಸರಿಸುವ ಬ್ರಾಹ್ಮಣೇತರರ ಸಂಸ್ಕೃತಿ ಭಾಷೆಗಳ ಮೇಲೆ ತಮ್ಮ ಸಂಸ್ಕೃತಿ, ಸಂಸ್ಕೃತವನ್ನು ಹೇರುವ ಯತ್ನವಿದು. ಇದು ದೇಶದಾದ್ಯಂತ ನಡೆಯುತ್ತಲೇ ಬಂದಿದೆ. ಈಗ ಹೆಚ್ಚಾಗಿದೆ ಅಷ್ಟೇ.

ಇನ್ನೊಂದು ಹಳೆಯ ಚಾಳಿ ಎಂದರೆ, ಒಂದು ಧಾರ್ಮಿಕ ಅಥವಾ ಮತೀಯವಾದ ಸ್ಥಳ ಪುರಾಣ ಎಂಬ ಕಟ್ಟುಕತೆಯನ್ನು ಕಟ್ಟಿ, ಊರಿನ ಒಂದು ದೇವಸ್ಥಾನಕ್ಕೆ ಊರಿನ ಹೆಸರಿನ ಜೊತೆ ಸಂಬಂಧ ಕಲ್ಪಿಸಿ, ಅದನ್ನು ಊರ ದೇವಸ್ಥಾನ ಎಂದು ನಂಬಿಸಿ ಲಾಭ ಮಾಡಿಕೊಳ್ಳುವುದು; ಶೂದ್ರ ದಲಿತರು ಹಿಂದಿನಿಂದಲೂ ಆರಾಧಿಸಿಕೊಂಡು ಬರುತ್ತಿರುವ ಗ್ರಾಮೀಣ ದೇವತೆಗಳಿಗೆ ಪೌರಾಣಿಕ ಬಣ್ಣಹಚ್ಚಿ, ಅವರ ಗುಡಿದೇಗುಲಗಳ ಪಾರುಪತ್ಯ ವಹಿಸಿಕೊಳ್ಳುವುದು; ಆ ಗ್ರಾಮೀಣ ದೇವತೆಗಳಿಗೆ ಸಂಬಂಧಿಸಿದಂತೆ ಇರುವ ಗ್ರಾಮಗಳ ಹೆಸರುಗಳನ್ನು ಸಂಸ್ಕೃತಮಯ ಗೊಳಿಸಿ ಬದಲಿಸುವುದು. ಈ ಪುರಾಣಗಳನ್ನು ನೋಡಿದರೆ, ರಾಮ, ಲಕ್ಷ್ಮಣ, ಸೀತೆ, ಹನುಮಂತ, ಭೀಮಾರ್ಜುನರಾದಿ ಪಾಂಡವರು ‘ಭೇಟಿ’ ನೀಡದ ಊರುಗಳೇ ಭಾರತದಲ್ಲಿಲ್ಲ!

ಆ ದೇವಾಲಯದಿಂದ ಈ ಹೆಸರು ಬಂದಿದೆ; ಈ ದೇವರಿಂದ ಆ ಊರಿಗೆ ಈ ಹೆಸರು ಬಂದಿದೆ ಎಂದು ಹೇಳುವವರು ಒಂದು ತರ್ಕವನ್ನು ಮರೆತುಬಿಡುತ್ತಾರೆ. ಅದೆಂದರೆ, ಊರಿದ್ದರೆ ತಾನೇ ದೇವಾಲಯ! ಊರು ಮೊದಲು ಹುಟ್ಟುತ್ತದೋ, ದೇವಾಲಯವೊ?!

ಕೆಲವರ್ಷಗಳಿಂದ ಇನ್ನೊಂದು ಚಾಳಿ ಬೆಳೆದುಬಂದಿದೆ. ಊರಿನ ಹಳೆಯ ಹೆಸರುಗಳನ್ನು ಕಡೆಗಣಿಸಿ ಶ್ರೀರಾಮ ನಗರ, ಅಯೋಧ್ಯಾ ನಗರ, ದ್ವಾರಕಾ ನಗರ ಎಂದು ಅನಧಿಕೃತವಾಗಿ ಹೆಸರಿಡುವುದು. ಗತಿಸಿದ ಪ್ರಸಿದ್ಧ ವ್ಯಕ್ತಿಗಳು ಅಥವಾ ಯಾವುದೇ ಜಾತ್ಯತೀತವಾದ ಹೆಸರಿಡುವುದು ದಶಕಗಳಿಂದ ನಡೆದುಕೊಂಡುಬಂದಿದೆ. ಉದಾಹರಣೆಗೆ ಕುವೆಂಪು ನಗರ, ವಿವೇಕಾನಂದ ನಗರ, ಶಾಂತಿ ನಗರ ಇತ್ಯಾದಿ. ಇವುಗಳಲ್ಲಿ ಜಾತಿ ಧರ್ಮಗಳ ಹಂಗಿಲ್ಲ. ಆದರೆ, ಇದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಮುಸ್ಲಿಮರಾಗಲೀ, ಕ್ರೈಸ್ತರಾಗಲೀ, ದಲಿತರಾಗಲೀ ತಮ್ಮ ಬಾಹುಳ್ಯದ ಪ್ರದೇಶಗಳಿಗೆ ಟಿಪ್ಪುನಗರ, ಹಿದಾಯತ್ ನಗರ, ಸೆಬಾಸ್ಟಿಯನ್ ನಗರ, ಅಂಬೇಡ್ಕರ್ ನಗರ, ಭೀಮ ನಗರ ಎಂದು ಹೆಸರಿಟ್ಟರೆ, ಅದು ಕೋಮುವಾದಿ ಅನಿಸಿಕೊಳ್ಳುವುದು ವಿಪರ್ಯಾಸ. ಇವು ಕೂಡಾ ಅಷ್ಟೇ ಜಾತ್ಯತೀತ ಹೆಸರುಗಳು!

ಯಾವುದೇ ಊರಿನ ಹೆಸರು ಬದಲಿಸಬೇಕೆಂದರೆ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಿರ್ಣಯವಾಗಿ ಸರಕಾರಿ ಪ್ರಕಟಣೆ ಹೊರಡಬೇಕು. ಆದರೆ, ಈಗ ಮನ ಬಂದಂತೆ ಹೆಸರಿನ ಫಲಕಗಳನ್ನು ಹಾಕಲಾಗುತ್ತಿದೆ. ಹತ್ತಿರ ಹತ್ತಿರವೇ ಮೂರ್ನಾಲ್ಕು ಒಂದೇ ಹೆಸರಿನ ‘ನಗರ’ಗಳು ಕಾಣಸಿಗುತ್ತವೆ. ಅಂಚೆಯವರು ಕೂಡಾ ಪತ್ರದಲ್ಲಿ ಊರಿನ ಮೂಲ ಹೆಸರು ಬರೆಯದೇ ಇದ್ದರೆ, ಯಾವ ಊರಿನ ‘ನಗರ’ವಿದು ಎಂದು ತಲೆ ಕೆರೆದುಕೊಳ್ಳಬೇಕಾದ ಪರಿಸ್ಥಿತಿ!

ಯಾರು ಯಾವ ಊರಿನ ಹೆಸರನ್ನು ಏನೆಂದು ಬೇಕಾದರೂ ಬದಲಿಸಲಿ, ಸಾಮಾನ್ಯ ಜನರು ಮಾತ್ರ ಹಳೆಯ ಹೆಸರುಗಳನ್ನೇ ಬಳಸುತ್ತಾರೆ. ಉದಾಹರಣೆಗೆ ಮಂಗಳೂರು ವಿಶ್ವದಾಖಲೆ ಎನಿಸಬಹುದಾದಷ್ಟು ಹೆಸರುಗಳನ್ನು ಹೊಂದಿದೆ. ಮಂಗಳಾದೇವಿ ದೇವಸ್ಥಾನ ಇರುವುದರಿಂದ ಮಂಗಳೂರು ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ, ನಂಬಲಾಗುತ್ತಿದೆ. ಇದು ಎಷ್ಟು ನಿಜವಿರಬಹುದು? ಏಕೆಂದರೆ, ಬಹುಸಂಖ್ಯಾತರಾಗಿರುವ ತುಳುವರು ಅದನ್ನು ಕುಡಲ ಅಥವಾ ಕುಡ್ಲ ಎಂದು ಇಂದಿಗೂ ಕರೆಯುತ್ತಾರೆ. ಅದೇ ರೀತಿ ಗೌಡ ಸಾರಸ್ವತ ಕೊಂಕಣಿಗರು ಕೊಡಿಯಾಲ, ಕ್ರೈಸ್ತರು ಮಂಗ್ಲೂರು, ಬ್ಯಾರಿ ಭಾಷೆ ಮಾತಾಡುವ ಮುಸ್ಲಿಮರು ಮೈಕಾಲ, ಮಲಯಾಳಿಗಳು ಮಂಗಳಾಪುರಂ ಎಂದು ಇಂದಿಗೂ ಕರೆಯುತ್ತಾರೆ. ಬ್ರಿಟಿಷರು ಇದನ್ನು ಮ್ಯಾಂಗಲೋರ್ ಮಾಡಿದರು. ಇಂಗ್ಲಿಷ್ ಕಲಿತವರೂ ಹಾಗೆಯೇ ಕರೆಯುತ್ತಿದ್ದರು, ಹಾಗೆಯೇ ಕರೆಯುತ್ತಿದ್ದಾರೆ. ಪೋರ್ಚುಗೀಸರು ಮಂಜರೂನ್ ಎಂದರು. ಹಾಗಾದರೆ, ಹೆಸರಿಗೂ, ಭಾಷೆಗೂ, ಸಂಸ್ಕೃತಿಗೂ, ಮಣ್ಣಿಗೂ ಸಂಬಂಧವಿದೆ ಎಂದಾಯಿತು. ಏಕಾಏಕಿ ಊರುಗಳ ಹೆಸರುಗಳನ್ನು ಬದಲಿಸಲು ಅವುಗಳೇನು ಬಣ್ಣ ಬದಲಿಸುವ ಗೋಸುಂಬೆಗಳೆ?

ಇಲ್ಲಿ ಇನ್ನೊಂದು ಗಂಭೀರ ವಿಷಯವನ್ನು ಗಮನಿಸಬೇಕು. ತನ್ನ ಬಹು ಹೆಸರುಗಳ ಮೂಲಕವೇ ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಗಳನ್ನು ಸಾಕಿಕೊಂಡುಬಂದ ಊರು ತಾನೆಂದು ಸೂಚಿಸುವ ಮಂಗಳೂರೇ ಇಂದು ಏಕಭಾಷೆ, ಏಕ ಸಂಸ್ಕೃತಿ, ಏಕಧರ್ಮವನ್ನು ಪ್ರತಿಪಾದಿಸುವ ಆದರೆ ಮಾನವರೆಲ್ಲರೂ ಏಕ ಜಾತಿ ಎಂದು ಎಂದೆಂದಿಗೂ ಒಪ್ಪದ ವಿಭಜನಕಾರಿ ಕೋಮುವಾದಿಗಳ ಪ್ರಯೋಗಶಾಲೆಯಾಗಿರುವುದು ದುರಂತ! ಇದೇ ಕರಾವಳಿಯನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಇನ್ನಷ್ಟು ವಿಷಯಗಳನ್ನು ಮುಂದಿನ ಭಾಗದಲ್ಲಿ ನೋಡೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...