ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿ ಎರಡು ತಿಂಗಳು ಕಳೆದಿದ್ದರೂ, ಅಧಿಕೃತ ಡಿನೋಟಿಫಿಕೇಶನ್ ಆದೇಶ ಹೊರಡಿಸದ ಕಾರಣ, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಭಾನುವಾರ ಸಭೆ ಸೇರಿ ಮುಂದಿನ ಹೋರಾಟದ ಕುರಿತು ಚರ್ಚಿಸಿತು.
ಚನ್ನರಾಯಪಟ್ಟಣದ ರೈತರು, ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 25ರಂದು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಘೋಷಿಸಿದ್ದರು. ಈ ನಿರ್ಧಾರ ದೇಶದಾದ್ಯಂತ ಸುದ್ದಿಯಾಗಿತ್ತು ಮತ್ತು ಸರ್ಕಾರವು ರೈತಪರ ನಿಲುವು ತೆಗೆದುಕೊಂಡಿದ್ದಾಗಿ ಪ್ರಚಾರ ಪಡೆದಿತ್ತು ಎಂದು ಸಭೆಯಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕಾರಳ್ಳಿ ಶ್ರೀನಿವಾಸ್ ನೆನಪಿಸಿದರು.
ಸಿಎಂ ಘೋಷಣೆ ಮಾಡಿ ತಿಂಗಳುಗಳು ಕಳೆದರೂ ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲ. ಈ ನಡುವೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಎರಡು ಹಳ್ಳಿಗಳ 439 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಬೆಲೆ ನಿಗದಿಗೆ ಸಭೆ ಕರೆಯಲಾಗಿದೆ ಎಂದು ನೋಟೀಸ್ ನೀಡುವ ಮೂಲಕ ಗೊಂದಲ ಸೃಷ್ಟಿಸಿತ್ತು. ರೈತರು ಹೋರಾಟ ತೀವ್ರಗೊಳಿಸುವ ಸೂಚನೆ ನೀಡಿದ ನಂತರ ಈ ಸಭೆಯನ್ನು ಮುಂದೂಡಲಾಗಿದೆ. ಸಿಎಂ ಆದೇಶಕ್ಕೆ ಬೆಲೆ ನೀಡದವರನ್ನು ಹೇಗೆ ನಂಬುವುದು ಎಂದು ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸಂಯುಕ್ತ ಹೋರಾಟದ ಮುಂಖಂಡರು ಈ ವಿಷಯವನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದಾರೆ ಮತ್ತು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಆದರೆ, ದಸರಾ ಹಬ್ಬ ಮತ್ತಿತರ ಕಾರಣಗಳಿಂದ ಭೇಟಿ ಸಾಧ್ಯವಾಗಿಲ್ಲ. “ಮುಖ್ಯಮಂತ್ರಿ ತಾವು ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ದಸರಾ ಮುಗಿಯುವವರೆಗೆ ಕಾಯೋಣ, ಆ ನಂತರ ನಮ್ಮ ಹೋರಾಟವನ್ನು ತೀವ್ರಗೊಳಿಸೋಣ” ಎಂದು ಸಭೆಯಲ್ಲಿದ್ದ ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಚಂದ್ರ ತೇಜಸ್ವಿ ಮಾತನಾಡಿ, ರೈತರು ತಮ್ಮ ತಮ್ಮ ಊರುಗಳಲ್ಲಿ ಮತ್ತೊಮ್ಮೆ ಸಂಘಟಿತರಾಗಿ ಹೋರಾಟವನ್ನು ಚುರುಕುಗೊಳಿಸಬೇಕು ಎಂದು ಕರೆ ನೀಡಿದರು. ಯಾವುದೇ ಸಂದರ್ಭದಲ್ಲಿ ತಕ್ಷಣಕ್ಕೆ ಎಲ್ಲ ರೀತಿಯ ಹೋರಾಟಕ್ಕೆ ಸಜ್ಜಾಗಿರಬೇಕು. ಈ ಬಾರಿ ಹಿಂದಿಗಿಂತಲೂ ಉಗ್ರವಾದ ಹೋರಾಟ ರೂಪುಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.
ಸರ್ಕಾರ ಆದಷ್ಟು ಬೇಗ ಡಿನೋಟಿಫಿಕೇಶನ್ ಆದೇಶ ಹೊರಡಿಸಬೇಕು. ಇಲ್ಲವಾದರೆ ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ರೈತರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್, ರೈತ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ, ಅಶ್ವಥಪ್ಪ, ಶ್ರೀನಿವಾಸ್, ಸುಬ್ರಹ್ಮಣಿ, ನಂದೀಶ್, ನಂದನ್, ಗೋಪಿನಾಥ್, ಮುನಿವೆಂಕಟಮ್ಮ, ಲಕ್ಷ್ಮಮ್ಮ, ಮೋಹನ್, ವೆಂಕಟೇಶ್, ಪಿಳ್ಳಣ್ಣ, ಮರಿಯಣ್ಣ, ಲಕ್ಷ್ಮಣ್ಣ ಸೇರಿದಂತೆ ಹಲವು ಗ್ರಾಮಗಳ ರೈತರು ಭಾಗವಹಿಸಿದ್ದರು.


