ಸುಲಿಗೆ ಮತ್ತು ಕ್ರಿಮಿನಲ್ ಸ೦ಚು ಆರೋಪದಡಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ ಹಾಗೂ ಇತರರ ವಿರುದ್ದ ನೀಡಲಾಗಿದ್ದ ದೂರಿಗೆ ಎಫ್‌ಐಆರ್ ದಾಖಲಿಸದ ಪೊಲೀಸ್ ಅಧಿಕಾರಿಗೆ ನೋಡಿಸ್ ನೀಡಲಾಗಿದೆ. ವಿಜಯೇಂದ್ರ ವಿರುದ್ಧ ನೀಡಿದ್ದ ದೂರನ್ನು ಕ್ಲೋಸ್ ಮಾಡಿದ್ದ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಅವರಿಗೆ 65 ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ನೋಟೀಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ ಮರಡಿಯವರ ವಿರುದ್ಧ ಸುಲಿಗೆ ಮತ್ತು ವಸೂಲಿ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಜಸಂಪ (ಜನಾಧಿಕಾರ ಸಂಘರ್ಷ ಪರಿಷತ್) ಸಲ್ಲಿಸಿದ್ದ ದೂರನ್ನು ಪೊಲೀಸರು ವಜಾಗೊಳಿಸಿದ್ದರು. ಹೀಗಾಗಿ ಜಸಂಪ ಪದಾಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಸಿಎಂ ಮಗ ವಿಜಯೇಂದ್ರ ಮೇಲೆ FIR ದಾಖಲಿಸದ ಇನ್ಸ್‌ಪೆಕ್ಟರ್ ವಿರುದ್ದ ನ್ಯಾಯಾಲಯದಲ್ಲಿ ದೂರು
ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 7 ಕ್ಕೆ ಮುಂದೂಡಿದೆ. ಆರೋಪಿಗಳ ವಿರುದ್ದ ಲಂಚ ಆರೋಪವಿದ್ದರೂ ಯಾವುದೆ ದೂರು ದಾಖಲಿಸದೆ ಮುಕ್ತಾಯಗೊಳಿಸಿದ್ದಕ್ಕೆ ಜನಾಧಿಕಾರ ಸಂಘರ್ಷ ಪರಿಷತ್ ಮಾರ್ಚ್ 3 ರಂದು ದೂರು ದಾಖಲಿಸಿತ್ತು.
ಶೇಷಾದ್ರಿಪುರಂ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಅವರಿಗೆ ಜನಾಧಿಕಾರ ಸ೦ಘರ್ಷ ಪರಿಷತ್ 2020 ರ ಸೆಪ್ಟ೦ಬರ್ 25 ರಂದು ಸುಲಿಗೆ ಮತ್ತು ಕ್ರಿಮಿನಲ್ ಸ೦ಚು ಆರೋಪದಡಿಯಲ್ಲಿ ದೂರು ಸಲ್ಲಿಸಿತ್ತು. ನಿಯಮದಂತೆ ಇಂತಹ ದೂರು ಸಲ್ಲಿಕೆಯಾದರೆ, ದೂರು ಸಲ್ಲಿಕೆಯಾದ 24 ಗ೦ಟೆಯೊಳಗೆ ಆರೋಪಿತರ ವಿರುದ್ಧ ಎಫ್‌ಐಆರ್ ದಾಖಲಿಸಬೇಕಾಗುತ್ತದೆ. ಆದರೆ ಠಾಣೆಯ ಇನ್ಸ್‌ಪೆಕ್ಟರ್ ಅವರು ಈ ನಿಮಯವನ್ನು ಉಲ್ಲಂಘಿಸಿದ್ದರು.
ಇದನ್ನೂ ಓದಿ: ಸಿಎಂ ಮಗ ವಿಜಯೇಂದ್ರ ಮೇಲೆ FIR ದಾಖಲಿಸದ DCP ವಿರುದ್ದ ದೂರು ದಾಖಲು!