ಜಾತಿ ಆಧಾರಿತ ತಾರತಮ್ಯ ತಡೆಗಟ್ಟುವ ಸಾಂವಿಧಾನಿಕ ರಕ್ಷಣೆ ಮತ್ತು ಪ್ರಬಲ ಕಾನೂನುಗಳ ಹೊರತಾಗಿಯೂ, ದೇಶದಾದ್ಯಂತ ದಲಿತರು ವ್ಯಾಪಕ ಕಿರುಕುಳ ಎದುರಿಸುತ್ತಿದ್ದಾರೆ. ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ. ದಲಿತರ ಮೇಲೆ ಹೆಚ್ಚಾಗಿ ಹಿಂಸೆ, ಸಾಮಾಜಿಕ ಬಹಿಷ್ಕಾರ ಮತ್ತು ಆರ್ಥಿಕ ಶೋಷಣೆಗೆ ಒಳಪಡಿಸಲಾಗುತ್ತದೆ. ಪರಿಶಿಷ್ಟ ಸಮುದಾಯದ ಮೇಲೆ ನಡೆಯುತ್ತಿರುವ ನಿರಂತರ ಕಿರುಕುಳದ ಭಾಗವಾಗಿ 17 ವರ್ಷದ ಪರಿಶಿಷ್ಟ ಜಾತಿಯ ಹುಡುಗನನ್ನು ಅನ್ಯಜಾತಿಯ ಹುಡುಗಿಯನ್ನು ಭೇಟಿಯಾದ ಕಾರಣಕ್ಕಾಗಿ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದು, ಜಾತಿ ಹೆಸರಿಡಿದು ನಿಂದಿಸಲಾಗಿದೆ.
ಶುಕ್ರವಾರ (ಸೆಪ್ಟೆಂಬರ್ 12) ತಮಿಳುನಾಡಿನ ಚೆನ್ನೈನ ಸೆಕ್ರೆಟರಿಯೇಟ್ ಕಾಲೋನಿಯಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಬಾಲಕ ಹುಡುಗಿಯನ್ನು ಭೇಟಿಯಾಗಲು ಹೋಗಿದ್ದ.
ಆರೋಪಿಗಳನ್ನು ಬಿಜೆಪಿಯ ಮಾಜಿ ಕಾರ್ಯಕರ್ತ ಎಂದು ಹೇಳಲಾಗುವ ಸರವಣನ್ ಮತ್ತು ಅವನ ಸಹೋದರ ಲೋಗೇಶ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಹುಡುಗಿಯ ಸಂಬಂಧಿಕರು ಹುಡುಗನನ್ನು ಒಂದು ಕೋಣೆಯಲ್ಲಿ ಬಂಧಿಸಿ, ನಂತರ ಸರವಣನ್ ಬಾಲಕನನ್ನು ಕರೆಸಿದರು. ಸಹೋದರನೊಂದಿಗೆ ಸೇರಿಕೊಂಡು ಹುಡುಗನ ಮೇಲೆ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪರಿಶಿಷ್ಟ ಜಾತಿ (ಆದಿ ದ್ರಾವಿಡರ್) ಸಮುದಾಯಕ್ಕೆ ಸೇರಿದ ಹುಡುಗ, ಅತ್ಯಂತ ಹಿಂದುಳಿದ ವರ್ಗ (ವನ್ನಿಯಾರ್) ಸಮುದಾಯದ ಹುಡುಗಿಯೊಂದಿಗೆ ಹಲವು ವರ್ಷಗಳಿಂದ ಸ್ನೇಹಿತನಾಗಿದ್ದ. ಬೇರೆ ಬೇರೆ ಶಾಲೆಗಳಿಗೆ ಹೋದ ನಂತರವೂ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ.
“ಹುಡುಗನನ್ನು ಕೆಟ್ಟದಾಗಿ ಥಳಿಸಿ ಅವಮಾನಿಸಲಾಯಿತು. ಸರವಣನ್ ಅವನ ವಿರುದ್ಧ ಜಾತಿ ನಿಂದನೆಗಳನ್ನು ಮಾಡಿದ್ದಾನೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹದಿಹರೆಯದವರು ಈಗ ಕಿಲ್ಪಾಕ್ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಜೊತೆಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಹಲವು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಅಶ್ಲೀಲ ಕೃತ್ಯ, ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು, ಕೊಲೆಗೆ ಯತ್ನಿಸುವುದು ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳು ಸೇರಿವೆ.
ತುಮಕೂರು ದಲಿತನ ಕೊಲೆ ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ ಭೂಮಿ, ಪರಿಹಾರ ನೀಡಲು ಹೋರಾಟಗಾರರ ಒತ್ತಾಯ


