Homeಅಂತರಾಷ್ಟ್ರೀಯದೇಶಕಾಲಗಳ ಹುಡುಕಾಟದ ನಿರ್ದೇಶಕ ಡೆನಿ ವಿಲೆನವ್

ದೇಶಕಾಲಗಳ ಹುಡುಕಾಟದ ನಿರ್ದೇಶಕ ಡೆನಿ ವಿಲೆನವ್

- Advertisement -

ರಾಜಶೇಖರ್ ಅಕ್ಕಿ |

ಹೀಗೊಂದಿಷ್ಟು ಊಹಿಸಿ; ಹುಬ್ಬಳ್ಳಿಯಿಂದ ನೀವು ಮತ್ತು ನಿಮ್ಮ ಸ್ನೇಹಿತೆ ಬೇರೆ ಬೇರೆ ಕಾರುಗಳಲ್ಲಿ ಬೆಂಗಳೂರಿಗೆ ಬರುತ್ತಿದ್ದೀರಿ. ನೀವು ಎಂಟು ಗಂಟೆಯಲ್ಲಿ ಬೆಂಗಳೂರಿಗೆ ತಲುಪಿದರೆ ನಿಮ್ಮ ಸ್ನೇಹಿತೆಯ ಕಾರು ಕೆಟ್ಟು ತುಮಕೂರಿನಲ್ಲಿ ನಿಂತಿದ್ದಾಳೆ. ನಿಮಗೆ ವಿಷಯ ತಿಳಿದು ತುಮಕೂರಿಗೆ ಹೋಗುವ ಪ್ಲ್ಯಾನ್ ಮಾಡುತ್ತೀರಿ. ಇದು ಸ್ಪೇಸ್. ನೀವು ಎಲ್ಲಿಂದ ಬಂದಿರೋ ಅಲ್ಲಿಗೆ ಮರಳುವ ಅವಕಾಶವಿದೆ. ಆದರೆ ಹಿಂದಿನ ಸಮಯಕ್ಕೆ ಮರಳುವ ಅವಕಾಶವಿದೆಯಾ? ಅಥವಾ ಮುಂದಿನ ಸಮಯಕ್ಕೆ ಹೋಗಬಲ್ಲಿರಾ? 1980 ರಲ್ಲಿ ಹುಟ್ಟಿದವನು ಇಂದು 40 ವರ್ಷ ವಯಸ್ಸು ಆಗುತ್ತಿರುವಾಗ ನೀವು 80 ವರ್ಷಗಳ ಪ್ರಯಾಣವನ್ನು ಕ್ರಮಿಸಬಲ್ಲಿರಾ? ನಮ್ಮ ಬ್ರಹ್ಮಾಂಡ ಎಷ್ಟು ದೊಡ್ಡದು? ಕೊನೆ ಎನ್ನುವುದು ಎಲ್ಲಾದರೂ ಇರಬೇಕಲ್ವಾ? ಇಲ್ಲವಾದರೇ ನಾನ್ಯಾರು? ನಾನೊಬ್ಬನೇ ಇರುವುದಾ ಈ ಬ್ರಹ್ಮಾಂಡದಲ್ಲಿ? ಇತರ ಜೀವಜಾಲ ಇರದಿರಲು ಹೇಗೆ ಸಾಧ್ಯ? ನಾವು ನಮ್ಮ ಜಗತ್ತನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಪಂಚೇಂದ್ರಿಯಗಳಿಂದ, ಈ ಐದೇ ಏಕೆ? ಇವುಗಳನ್ನು ಹೊರತುಪಡಿಸಿಯೂ ಮತ್ತೇನಾದರೂ ಇರಬೇಕಲ್ವಾ?
ಗೊತ್ತಿಲ್ಲ; ಐನ್‍ಸ್ಟೇನ್‍ನ ಸಾಪೇಕ್ಷ ಸಿದ್ಧಾಂತವನ್ನು ನಾನು ತಿಳಿದುಕೊಂಡಿದ್ದು ಹೀಗೆ ಅಥವಾ ಅದರಿಂದ ಮೂಡಿದ ಪ್ರಶ್ನೆಗಳು ಇಂತವು.
ಅಂದರೆ ಮಾಡೋದು ಏನು? ಸರಳ ಉತ್ತರ; ಹುಡುಕಾಟ.
ನಾವೆಲ್ಲಾ ನಮ್ಮದೇ ರೀತಿಯಲ್ಲಿ ಹುಡುಕಾಡುತ್ತಿರುತ್ತೇವೆ, ü ನಮ್ಮ ಊಹೆ ಮತ್ತು ಅದಕ್ಕಿಂತ ಮುಖ್ಯವಾಗಿ ಹುಡುಕಾಟದಲ್ಲಿ ನಾವೆಷ್ಟರ ಮಟ್ಟಿಗೆ ತೊಡಗಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಹುಡುಕಾಟದ ಪರಿಧಿ ನಿರ್ಣಯವಾಗುತ್ತದೆ. ಡೆನಿ ವಿಲೆನವ್ (denis villeneuve) ಕೂಡ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ; ತಮ್ಮ ಸಿನೆಮಾಗಳಲ್ಲಿ.
ನಾನು ನೋಡಿದ ಅವರ ಮೊದಲ ಸಿನೆಮಾ ‘ಇನ್ಸೆಂಡಿಯಸ್’ ‘incendies’’. ಇದರಲ್ಲಿಯ ಮುಖ್ಯ ಪಾತ್ರಧಾರಿ ಒಬ್ಬ ಗಣಿತಜ್ಞೆ. ಅವಳ ತಾಯಿ ತೀರಿಕೊಂಡಾಗ ತಾಯಿಯ ಸ್ನೇಹಿತ ಇವಳಿಗೆ ಮತ್ತು ಇವಳ ಅವಳಿ ಸಹೋದರನಿಗೆ ಒಂದು ಪತ್ರವನ್ನು ನೀಡುತ್ತಾನೆ. ಅಸ್ತಿತ್ವದಲ್ಲಿದ್ದಾರೆ ಎಂದು ಇಬ್ಬರಿಗೂ ಗೊತ್ತಿಲ್ಲದ ಇವರ ಅಣ್ಣ ಮತ್ತು ತಂದೆಯನ್ನು ಇವರಿಬ್ಬರೂ ಸೇರಿ ಹುಡುಕಬೇಕಿದೆ. ಈ ಚಿತ್ರ ದೇಶಕಾಲದಲ್ಲಿ ಸಂಚರಿಸುತ್ತದೆ. ನಮಗೆ, ಮುಖ್ಯಪಾತ್ರಧಾರಿಗಳಿಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಬಿಚ್ಚಿಡುತ್ತದೆ. ಇಲ್ಲಿಯ ಸಾಪೇಕ್ಷತೆ ಬರೀ ಸಮಯ ಮತ್ತು ದೇಶಕ್ಕೆ ಸೀಮಿತವಾದುದ್ದಲ್ಲ. ದೇಶ, ಯುದ್ಧ, ಧರ್ಮ, ಹಿಂಸೆಗಳನ್ನು, ಒಂದೊಕ್ಕೊಂದು ಇರುವ ಸಂಬಂಧಗಳನ್ನು ಕೆದಕುವ ಈ ಚಿತ್ರ ಮುನುಷ್ಯನ, ಸಮಾಜದ ಒಳಗಿರುವ ಹಿಂಸೆಯ ಸಾಪೇಕ್ಷತೆಯ ಹುಡುಕಾಟದ ಸಿನೆಮಾ.
ಇನ್ಸೆಂಡಿಯಸ್ ಚಿತ್ರವು ಲೆಬಾನಾನ್ ಮೂಲದ ಕೆನಡಾದ ನಾಟಕಕಾರ ವಾಜಿ ಮೊವಾದ್ ಅವರು ಬರೆದ ನಾಟಕದ ಮೇಲೆ ಆಧಾರಿತವಾಗಿತ್ತು. ಮೋವಾದ್ ಅವರು ತುಂಬಾ ಹಿಂಜರಿಕೆಯಿಂದಲೇ ಈ ಕೃತಿಯ ಹಕ್ಕುಗಳನ್ನು ಸಿನೆಮಾ ಮಾಡಲು ವಿಲೆನವ್ ಅವರಿಗೆ ನೀಡುದ್ದರು. ನನಗೆ ವೈಯಕ್ತಿಕವಾಗಿ ನಾಟಕ ಆಧಾರಿತ ಸಿನೆಮಾಗಳೆಂದರೆ ಸಂಭಾಷಣೆಗಳೇ ತುಂಬಿರುತ್ತವೆ ಎನ್ನುವ ಭಾವನೆ ಹಾಗೂ ನಿರಾಸಕ್ತಿ. ಆದರೆ ಒಂದು ನಾಟಕವನ್ನಾಧಾರಿಸಿ ಮಾಡಿದ ಈ ಚಿತ್ರ ನನ್ನನ್ನು ದಂಗುಬಡಿಸಿತು. ನಾಟಕದ ಎಲ್ಲಾ ಮಾಂಸರಕ್ತಗಳನ್ನು ತೆಗೆದುಹಾಕಿ ಬರೀ ಮೂಳೆಗಳನ್ನೇ ಉಳಿಸಿಕೊಂಡು ದೇಶಕಾಲದೊಂದಿಗೆ ಆಟವಾಡಿ ಸಿನೆಮಾ ಮಾಧ್ಯಮದ ಸಾಧ್ಯತೆಯ ಒಂದು ಅದ್ಭುತ ಉದಾಹರಣೆ ಈ ಚಿತ್ರ. ಮೂಲ ನಾಟಕಕಾರ ಮೊವಾದ್ ಕೂಡ ತನ್ನ ನಾಟಕವನ್ನು ಇನ್ನಷ್ಟು ಎತ್ತರಕ್ಕೆ ವಿಲೆನವ್ ತೆಗೆದುಕೊಂಡು ಹೋಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
1967ರಲ್ಲಿ ಕೆನಡಾದ ಕ್ಯುಬೆಕ್‍ನಲ್ಲಿ ಹುಟ್ಟಿದ ವಿಲೆನವ್, ಮೊಂಟ್ರಿಯಿಲ್‍ನಲ್ಲಿ ತಮ್ಮ ಸಿನೆಮಾ ಶಿಕ್ಷಣವನ್ನು ಮುಗಿಸಿ, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿ, 1998ರಲ್ಲಿ ತಮ್ಮ ಮೊದಲ ಚಿತ್ರ ‘ಆಗಸ್ಟ್ 32 ಆನ್ ಅರ್ಥ್’ ನಿರ್ದೇಶಿಸಿದರು. ಈ ಚಿತ್ರದಲ್ಲಿ ಆ ದೇಶದ ಯುವಜನರ ಸಂಬಂಧಗಳ ಬಗ್ಗೆ ಕೆದಕಿದ ವಿಲೆನವ್, 2000ದಲ್ಲಿ ಮೇಲ್‍ಸ್ಟ್ರಾಮ್ ಎನ್ನುವ ಚಿತ್ರ ನಿರ್ದೇಶಿಸಿದರು. ಈ ಚಿತ್ರದ ನಿರೂಪಕ ಒಂದು ದೊಡ್ಡ ಮೀನು. ವಾಸ್ತವ, ಅವಾಸ್ತವ, ಮನುಷ್ಯರ ಬೇಜವಬ್ದಾರಿತನ, ತಪ್ಪಿತಸ್ಥ ಭಾವನೆ ಮತ್ತು ಪ್ರೀತಿಯನ್ನು ಹುಡುಕುವ ಈ ಸಿನೆಮಾದ ಕೊನೆಯಲ್ಲಿ ಜೀವನವೆಂದರೆ ಏನು ಎಂದು ನಿರೂಪಕ ಮೀನು ಹೇಳಬೇಕೆನ್ನುವಷ್ಟರಲ್ಲಿ ಅದನ್ನು ಕೊಲ್ಲಲಾಗುತ್ತದೆ. ವಿಲೆನವ್ ಅವರ ಮುಂಬರುವ ಚಿತ್ರಗಳಲ್ಲಿ ಕಂಡುಬರುವ ಮಾಂತ್ರಿಕತೆಯ ಝಲಕ್ ಈ ಚಿತ್ರದಲ್ಲಿ ಕಂಡುಬರುತ್ತದೆ.
2013ರಲ್ಲಿ ಬಂದ ಪ್ರಿಸನರ್ಸ್ ಮತ್ತು ಎನಿಮಿ ಚಿತ್ರಗಳೆರಡೂ ಮನುಷ್ಯನ ಆಳವನ್ನು ಪರಿಶೀಲಿಸುತ್ತವೆ. ಪ್ರಿಸನರ್ಸ್‍ನಲ್ಲಿ ಮನುಷ್ಯನ ಒಳಗೆ ಅಡಗಿರುವ ಹಿಂಸೆಯನ್ನು ಕೆದಕಿದರೆ, ಎನಿಮಿ ಚಿತ್ರದಲ್ಲಿ ಒಬ್ಬ ವ್ಯಕ್ತಿಯು ತನ್ನೊಳಗಿರುವ ಇನ್ನೊಬ್ಬನನ್ನು ಹುಡುಕುತ್ತಾನೆ. ಆ ಇನ್ನೊಬ್ಬ ತಾನೋ ಅಥವಾ ಇನ್ನಾರೋ ಎನ್ನುವುದು ಪ್ರೇಕ್ಷಕರ ಊಹೆಗೆ ಬಿಡಲಾಗಿದೆ. 2015ರಲ್ಲಿ ಸಿಕಾರಿಯೋ ಎನ್ನುವ ಕ್ರೈಮ್ ಥ್ರಿಲರ್ ನಿರ್ದೇಶಿಸಿದ ವಿಲೆನವ್ 2016ರಲ್ಲಿ ಅರೈವಲ್ (Arrival) ಎನ್ನುವ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಸಾಪೇಕ್ಷ ಸಿದ್ಧಾಂತವನ್ನು ಒರೆಗೆ ಹಚ್ಚಿದರು. ಹೊರಜಗತ್ತಿನಿಂದ ಭೂಮಿಯ ಬೇರೆ ಬೇರೆ ಭಾಗದಲ್ಲಿ ಬಂದಿಳಿದ ಹನ್ನೆರಡು ಬೃಹತ್ ಅಪರಿಚಿತ ಗಗನನೌಕೆಗಳು, ಅದರೊಂದಿಗೆ ಬಂದ ಜೀವಿಗಳು. ಭಾಷಾಶಾಸ್ತ್ರಜ್ಞೆಯೊಬ್ಬಳು ಆ ಜೀವಿಗಳೊಂದಿಗೆ ಸಂಭಾಷಿಸಿ ಭೂಮಿಗೆ ಒದಗಿರುವ ಗಂಡಾಂತರದಿಂದ ಪಾರು ಮಾಡಬೇಕಿದೆ. ಮನುಷ್ಯನಿಗಿರುವ ಪಂಚೇಂದ್ರಿಯಗಳು ಮತ್ತು ಭಾಷೆಯಿಂದ ಹೊರಜೀವಿಗಳೊಂದಿಗೆ ಮಾತನಾಡಿಸಲಾಗುವುದೇ? ಆ ಜೀವಿಗಳು ಬರೀ ಸ್ಪೇಸ್ ಅಷ್ಟೇ ಅಲ್ಲದೇ ವಿವಿಧ ಸಮಯಗಳಿಗೂ ಸಂಚರಿಸಬಲ್ಲವೇ? ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿರುವ ಈಕೆ ಭವಿಷ್ಯವನ್ನು ನೋಡಬಲ್ಲಳೇ? ಹೀಗೆ ಉತ್ತರಿಸಲಾಗದ ಪ್ರಶ್ನೆಗಳನ್ನು ಈ ಚಿತ್ರ ಕೆದಕುತ್ತದೆ. ಹುಡುಕಾಟ ಮುಂದುವರೆಯುತ್ತದೆ. ಈ ಚಿತ್ರದ ನಂತರ ವಿಲೆನವ್ ಅವರು ಬ್ಲೇಡ್ ರನರ್ 2049 ಎನ್ನುವ ಮತ್ತೊಂದು ಸೈನ್ಸ್ ಫಿಕ್ಷನ್ ಸಿನೆಮಾ ನಿರ್ದೇಶಿಸಿದರು. ಈ ಚಿತ್ರದಲ್ಲೂ ಮನುಷ್ಯನ ಊಹೆಯ ಪರಿಧಿಯನ್ನು ವಿಸ್ತರಿಸುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ ವಿಲೆನವ್ ಈಗ ಫ್ರ್ಯಾಂಕ್ ಹರ್ಬರ್ಟ್ ಅವರ ಪ್ರಸಿದ್ಧ ಸೈನ್ಸ್ ಫಿಕ್ಷನ್ ಕೃತಿ ‘ಡ್ಯೂನ್’ ಅನ್ನು ತೆರೆಗೆ ತರುತ್ತಿದ್ದಾರೆ.
ಸಿನೆಮಾ ಎನ್ನುವುದು ನಮ್ಮ ನೆರಳುಗಳನ್ನು ಅನ್ವೇಷಿಸುವ ಒಂದು ಸಾಧನ ಎಂದು ಹೇಳಿದ ವಿಲೆನವ್ ನಮ್ಮ ವಿಶ್ವದ ಅನೇಕ ಪ್ರಶ್ನೆಗಳಿಗೆ ಸಿನೆಮಾ ಮಾಧ್ಯಮದಿಂದ ನಿರಂತರ ಹುಡುಕಾಟದಲ್ಲಿದ್ದಾರೆ.
ಸಾಪೇಕ್ಷ ಸಿದ್ಧಾಂತ, ಹುಡುಕಾಟ ಇವುಗಳೇ ಡನಿ ವಿಲೆನವ್ ಅವರ ಚಿತ್ರಗಳ ಪ್ರಮುಖ ಥೀಮ್ ಎಂದು ಅನೇಕರಿಗೆ ಅನಿಸದೇ ಇರಬಹುದು, ಸ್ವತಃ ವಿಲೆನವ್ ಕೂಡ ಈ ವಿಷಯಗಳನ್ನು ಬೇರೊಂದು ರೀತಿಯಲ್ಲೇ ಕಾಣುತ್ತಿರಬಹುದು. ಆದರೆ ಒಂದು ಸಿನೆಮಾ ನೋಡಿದ ಎಲ್ಲರೂ ತಮ್ಮದೇ ಆದ ಬೇರೆ ಬೇರೆ ದೃಷ್ಟಿಯಲ್ಲಿ ನೋಡಿದರೆ ಅದೇ ಆ ಶಿಲ್ಪಿಯ ಸಾರ್ಥಕತೆಯಲ್ಲವೇ?
ವಿಲೆನವ್ ಅವರ ಸಿನೆಮಾಗಳಂತೆ ನಾವೆಲ್ಲರೂ ಒಂದಲ್ಲಾ ಒಂದು ರೀತಿಯ ಹುಡುಕಾಟದಲ್ಲಿದ್ದೇವೆ. ಕೆಲವೊಮ್ಮೆ ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರ ಸಿಕ್ಕರೆ ಅನೇಕ ಬಾರಿಯ ಉತ್ತರ- ಹುಡುಕಾಟ. 2020 ರಲ್ಲಿ ಬಿಡುಗಡೆಯಾಗಲಿರುವ ‘ಡ್ಯೂನ್’ ಈ ನಮ್ಮ ಹುಡುಕಾಟವನ್ನು ಎಲ್ಲಿಗೆ ಕೊಂಡೊಯ್ಯುವುದು ಎನ್ನುವ ಕಾತರದಲ್ಲಿದ್ದೇನೆ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್‌ ಮೈದಾನ ಸಜ್ಜು, ಸಾರ್ವಜನಿಕರಿಗಿಲ್ಲ ಪ್ರವೇಶ

0
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ  ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ...
Wordpress Social Share Plugin powered by Ultimatelysocial
Shares