Homeಮುಖಪುಟಸಿನಿಮಾ ವಿಮರ್ಶೆ: ಆದಿವಾಸಿ ಭೂ ಹಕ್ಕಿನ ನಿಜ ಕಥನ ‘ಪಡ’

ಸಿನಿಮಾ ವಿಮರ್ಶೆ: ಆದಿವಾಸಿ ಭೂ ಹಕ್ಕಿನ ನಿಜ ಕಥನ ‘ಪಡ’

- Advertisement -
- Advertisement -

ಅಲಕ್ಷಿತ ಸಮುದಾಯಗಳ ಪ್ರತಿರೋಧ ಹಾಗೂ ಭೂಮಿ ಹಕ್ಕಿನ ಕಥನಗಳನ್ನು ಕಟ್ಟುವಲ್ಲಿ ತಮಿಳು ಚಿತ್ರರಂಗ ಈಗಾಗಲೇ ಚಾಪು ಮೂಡಿಸಿದೆ. ಪ.ರಂಜಿತ್‌, ವೆಟ್ರಿಮಾರನ್‌, ಮಾರಿಸೆಲ್ವರಾಜ್‌, ಟಿ.ಜಿ.ಜ್ಞಾನವೇಲ್‌ ಥರದ ನಿರ್ದೇಶಕರು ತಮಿಳು ಚಿತ್ರರಂಗಕ್ಕೆ ಹೊಸ ಉರುಪು ತಂದಿದ್ದಾರೆಂಬುದು ನಿರ್ವೀವಾದ.

ಸೃಜನಶೀಲತೆ ಹಾಗೂ ವಿಶಿಷ್ಟ ಕಥನಗಳ ಮೂಲಕ ಗಮನ ಸೆಳೆದಿರುವ ಮಲಯಾಳಂ ಚಿತ್ರರಂಗ ಅಲಕ್ಷಿತ ಸಮುದಾಯಗಳ ಕಥೆಗಳನ್ನು ಹೇಳುವಲ್ಲಿ ಅಷ್ಟಾಗಿ ಗಮನ ಹರಿಸಿಲ್ಲ ಎಂಬ ಟೀಕೆಗಳೂ ಸಹಜವಾಗಿವೆ. 2016ರಲ್ಲಿ ರಾಜೀವ್‌ ರವಿ ನಿರ್ದೇಶನದ ‘ಕಮ್ಮಟ್ಟಿಪಾಡಂ’ ಸಿನಿಮಾ, ಭೂಮಿ ಹಕ್ಕಿನ ಕುರಿತು ಒಂದಿಷ್ಟು ಮಾತನಾಡಿತ್ತು. ಆದರೆ ಶೋಷಿತ ಸಮುದಾಯಗಳ ಕಥನದ ದೃಷ್ಟಿಯಲ್ಲಿ ತಮಿಳು ಚಿತ್ರರಂಗ ಸಾಧಿಸಿರುವ ಮೇಲುಗೈ ಎದುರು ಮಲಯಾಳಂ ಚಿತ್ರರಂಗದ ಪ್ರಯೋಗಗಳು ವಿರಳಾತೀವಿರಳ ಎನ್ನಲಾಗುತ್ತದೆ. ಹೀಗಾಗಿಯೇ ‘ಪಡ’ದಂತಹ ಮಲಯಾಳಂ ಸಿನಿಮಾ ಹೊಸ ಚರ್ಚೆಗೆ ನಾಂದಿಹಾಡಿದೆ.

“ಆದಿವಾಸಿ ಕಥನಗಳನ್ನು ಮಲಯಾಳಂ ಚಿತ್ರರಂಗ ಮಾತನಾಡಿಯೇ ಇಲ್ಲ ಎಂದು ಹೇಳಲಾಗದು. ಆದರೆ ನಿರ್ದೇಶಕನ ದೃಷ್ಟಿಕೋನವೂ ಮುಖ್ಯವಾಗುತ್ತದೆ. ಆದಿವಾಸಿಗಳನ್ನು ಯಾವ ಆಯಾಮದಲ್ಲಿ ತೋರಿಸುತ್ತಿದ್ದಾರೆ ಎಂಬುದು ಚಿತ್ರ ನಿರ್ದೇಶಕನ ಹಿನ್ನೆಲೆಯಿಂದ ನಿರ್ಧರಿತವಾಗುತ್ತವೆ” ಎಂದೂ ಮಲಯಾಳಂ ಸಿನಿಮಾ ವಿಮರ್ಶಕರು ಹೇಳುತ್ತಾರೆ.

‘ಬಾಂಬೂ ಬಾಯ್ಸ್‌’ (2002) ಎಂಬ ಸಿನಿಮಾದಲ್ಲಿ ಆದಿವಾಸಿಗಳನ್ನು ಹಾಸ್ಯಾಸ್ಪದವಾಗಿ ತೋರಿಸಲಾಗಿದೆ. ಟಾಯ್ಲೆಟ್‌ ಒಳಗೆ ಕೈ ತೊಳೆಯುವುದು, ಮನೆಯಲ್ಲಿರುವ ಪಕ್ಷಿಯನ್ನು ಕೊಂದು ತಿನ್ನುವುದು – ಹೀಗೆ ಚಿತ್ರಿಸಲಾಗಿತ್ತು. ಅಂದರೆ ನಿರ್ದೇಶಕನ ದೃಷ್ಟಿಕೋನ ಇಲ್ಲಿ ಕೆಲಸ ಮಾಡಿದೆ.

ಆದಿವಾಸಿ ಸಮುದಾಯದ ಚಿತ್ರ ನಿರ್ದೇಶಕಿ ಲೀಲಾ ಸಂತೋಷ್ ಅವರು ತಮ್ಮ ಮೊದಲ ಸಿನಿಮಾದಲ್ಲಿ ‘ಕರಿಂತಂದನ್‌’ ಎಂಬ ಟ್ರೈಬಲ್‌ ನಾಯಕನ ಕುರಿತು ಚಿತ್ರಿಸಿದ್ದರು. ಪಶ್ಚಿಮ ಘಟ್ಟಕ್ಕೆ ದಾರಿಯನ್ನು ತೋರಿಸಿದ ಮಹಾನ್ ವ್ಯಕ್ತಿ ಕರಿಂತಂದನ್‌ ಎಂಬುದನ್ನು ಲೀಲಾ ಕಟ್ಟಿಕೊಟ್ಟಿದ್ದರು. ಆದಿವಾಸಿ ಕಥನಗಳನ್ನು ಆದಿವಾಸಿಗಳ ದೃಷ್ಟಿಕೋನದಲ್ಲಿ ಹೇಳಬೇಕೆಂದು ಪ್ರತಿಪಾದಿಸುತ್ತಾರೆ ಲೀಲಾ ಸಂತೋಷ್. ಸಮುದಾಯವೊಂದರ ಕಥೆಯನ್ನು ಹೇಳುವಲ್ಲಿ ನಿರ್ದೇಶಕನ ಸ್ವಅನುಭವಗಳೂ ಪ್ರಭಾವ ಬೀರುತ್ತವೆ.

ಇತ್ತೀಚೆಗೆ ನ್ಯೂಸ್‌ ಮಿನಿಟ್‌ನೊಂದಿಗೆ ಮಾತನಾಡಿದ್ದ ‘ಪಡ’ ಸಿನಿಮಾದ ನಿರ್ದೇಶಕ ಕೆ.ಎಂ.ಕಮಲ್‌, “ಮಲಯಾಳಂ ಚಿತ್ರರಂಗವು ಯಾವಾಗಲೂ ಜಾತಿಯ ಬಗ್ಗೆ ಮಾತನಾಡುವುದರಿಂದ ದೂರವಿರುತ್ತದೆ. ವರ್ಗ ವ್ಯತ್ಯಾಸಗಳು ಸಾಮಾನ್ಯವಾಗಿ ಸಿನಿಮಾ, ರಂಗಭೂಮಿ ಮತ್ತು ಸಂಗೀತದಲ್ಲಿ ಪ್ರತಿಫಲಿಸುತ್ತದೆ. ಆದರೆ ಸಮಾಜದಲ್ಲಿನ ಅಧಿಕಾರ ರಚನೆಗಳನ್ನು ವ್ಯಾಖ್ಯಾನಿಸುವ ಜಾತಿಯ ವಿಷಯಕ್ಕೆ ಬಂದರೆ, ಮಲಯಾಳಂ ಚಿತ್ರರಂಗ ಈ ವಿಷಯದಿಂದ ವಿಮುಖವಾಗಿತ್ತು” ಎಂದಿದ್ದರು.

ಮತ್ತೆ ‘ಪಡ’ ವಿಚಾರಕ್ಕೆ ಬರುವುದಾದರೆ ‘ಪ್ರಭುತ್ವ’ ಹಾಗೂ ‘ಆದಿವಾಸಿ’ ನಡುವಿನ ಸಂಘರ್ಷದ ನಿಜ ಘಟನೆ ಆಧಾರಿತ ಸಿನಿಮಾವಿದು. ದೃಷ್ಟಿಕೋನ- ಭೂಮಿ ಹೋರಾಟ. ದೀರ್ಘಕಾಲ ಅಧಿಕಾರದಲ್ಲಿರುವ ಮೇಲ್ಜಾತಿ ಪ್ರಣೀತ ಎಡ-ಬಲ ಪಕ್ಷಗಳೆರಡೂ ಆದಿವಾಸಿಗಳನ್ನು ನಿರ್ಲಕ್ಷಿಸಿದ್ದನ್ನು, ಒಕ್ಕಲೆಬ್ಬಿಸಿದ್ದನ್ನು, ನಿರ್ಗತಿಕರನ್ನಾಗಿ ಮಾಡಿ ಪುನವರ್ಸತಿಗೆ ದೂಡಿದ್ದನ್ನು ‘ಪಡ’ ಮಾತನಾಡುತ್ತದೆ.

ಮಾರ್ಚ್ 10ರಂದು ತೆರೆಕಂಡ ‘ಪಡ’ ಈಗ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲೂ ಲಭ್ಯವಿದೆ. 1996ರಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿರುವ ಈ ಸಿನಿಮಾ, ಆದಿವಾಸಿ ಭೂಮಿ ಹಕ್ಕಿನ ಕುರಿತು ದಿಟ್ಟವಾಗಿ ಮಾತನಾಡುತ್ತದೆ. ಆದಿವಾಸಿ ಭೂ ಕಾಯಿದೆ 1975ರ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕೆಂಬ ಹೋರಾಟ 1996ರಲ್ಲಿ ಇ.ಕೆ.ನಾಯನಾರ್ ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌‌ (ಎಲ್‌ಡಿಎಫ್‌) ಸರ್ಕಾರದ ವಿರುದ್ಧ ನಡೆದಿತ್ತು.

ಅಕ್ಟೋಬರ್ 4, 1996ರಂದು, ಆಗಿನ ಪಾಲಕ್ಕಾಡ್ ಜಿಲ್ಲಾಧಿಕಾರಿಯಾಗಿದ್ದ ಡಬ್ಲ್ಯುಆರ್ ರೆಡ್ಡಿ ಅವರನ್ನು ನಾಲ್ವರು ಆದಿವಾಸಿ ಹಕ್ಕುಗಳ ಕಾರ್ಯಕರ್ತರು ಒತ್ತೆಯಾಳಾಗಿ ಇರಿಸಿಕೊಂಡರು. ಸಾಂವಿಧಾನಿಕ ಹೋರಾಟಕ್ಕೆ ಪ್ರಭುತ್ವ ಯಾವುದೇ ಬೆಲೆ ಕೊಡದಿದ್ದಾಗ, ನೈಜ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು ಹಿಂಸೆಯ ಮಾರ್ಗವನ್ನು ಹೋರಾಟಗಾರರು ಹಿಡಿಯುತ್ತಾರೆ.

‘ಜನರ ಕೂಗು ಕೇಳದ ಸರ್ಕಾರ ನಿಜವಾದ ಭಯೋತ್ಪಾದನೆ ಮಾಡುತ್ತಿದೆ’ ಎನ್ನುವ ಇವರು ‘ಅಯ್ಯಂಕಾಲಿ ಪಡ’ದ ಸದಸ್ಯರೆಂದು ಹೇಳಿಕೊಳ್ಳುತ್ತಾರೆ. “ಆದಿವಾಸಿಗಳ ಭೂಮಿ ಕಾಯ್ದೆ ಬಂದ ನಂತರ ಎಡ- ಬಲ ಪಕ್ಷಗಳೆರಡೂ ಆಡಳಿತ ನಡೆಸಿವೆ. ಆದಿವಾಸಿಗಳನ್ನು ಶೋಷಿಸಿವೆ. ಮಿಲಿಯನ್‌ಗಟ್ಟಲೆ ಹಣವನ್ನು ಆದಿವಾಸಿಗಳಿಗೆ ಮೀಸಲಿಡುತ್ತಿದ್ದರೂ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ” ಎನ್ನುತ್ತಾರೆ.

ಒತ್ತೆಯಾಳಾಗಿರುವ ಅಧಿಕಾರಿಗೆ ಹೇಳುತ್ತಾರೆ: “ಆದಿವಾಸಿಗಳು ನಿಜವಾದ ಒತ್ತೆಯಾಳುಗಳು. ಅವರನ್ನು ನಿರಾಶ್ರಿತರನ್ನಾಗಿ ಮಾಡಲಾಗಿದೆ. ಅವರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಜಾಪ್ರಭುತ್ವ ಕೆಲವರಿಗೆ ಮಾತ್ರ ಮೀಸಲಾಗಿದೆ. ಇದನ್ನು ನಾವು ಹೇಳಲು ಬಯಸುತ್ತಿದ್ದೇವೆ”.

ಹೀಗೆ ಕ್ರಾಂತಿಯ ಮಾರ್ಗ ಹಿಡಿದವರ ಒತ್ತಾಯಗಳನ್ನು ಸರ್ಕಾರ ಒಪ್ಪಿತೆ? ಆದಿವಾಸಿಗಳ ಸ್ಥಿತಿ ಬದಲಾಯಿತೆ? – ಎಂಬ ಗಂಭೀರ ವಿಚಾರಗಳನ್ನು ಈ ಸಿನಿಮಾ ಚರ್ಚಿಸುತ್ತದೆ. ಆದಿವಾಸಿಗಳ ನಿತ್ಯದ ನೋವು ಹಾಗೂ ಪ್ರಭುತ್ವ ನೀಡುವ ಭೀಕರ ಪ್ರಕ್ರಿಯೆಗಳಿಗೆ ಅಂತ್ಯವಿಲ್ಲವೇ ಎಂಬ ಪ್ರಶ್ನೆಗಳನ್ನು ಪ್ರೇಕ್ಷಕರ ಮುಂದಿಡುತ್ತದೆ. “ಓ ಭೂಮಿಯೇ, ಈ ಕಾಡಿನ ಅಳಲು ಕೇಳಿದೆಯಾ? ನೀನು ನೋಡಿದೆಯಾ ಅವರು ನಗುತ್ತಿದ್ದಾರೆ” ಎಂಬ ಹಾಡಿನ ಸಾಲುಗಳು ಪ್ರಭುತ್ವವನ್ನು ಹಾಗೂ ಪಾಲಿಸಿಗಳನ್ನು ಉದ್ದೇಶಿಸುತ್ತವೆ.

ಪ್ರಕಾಶ್‌ ರಾಜ್‌, ಕುಂಚಾಕೊ ಬೋಬನ್, ವಿನಾಯಕನ್, ದಿಲೀಶ್ ಪೋತನ್ ಮತ್ತು ಜೋಜು ಜಾರ್ಜ್ ಥರದ ಪ್ರತಿಭಾವಂತ ನಟರು ಮುಖ್ಯಭೂಮಿಯಲ್ಲಿದ್ದಾರೆ. ವಿಷ್ಣು ವಿಜಯ್‌ ಅವರ ಹಿನ್ನಲೆ ಸಂಗೀತ ಇಡೀ ಸಿನಿಮಾದ ತೂಕವನ್ನು ಹೆಚ್ಚಿಸಿವೆ. ಈವರೆಗೆ ಬಂದಿರುವ ಒತ್ತೆಯಾಳು ಕಥೆಯಾಧಾರಿಸಿದ ಸಿನಿಮಾಗಳಿಗಿಂತ ‘ಪಡ’, ಆದಿವಾಸಿ ಕಥನದ ಹಿನ್ನೆಲೆಯಲ್ಲಿ ಭಿನ್ನವಾಗಿ ನಿಲ್ಲುತ್ತದೆ.


ಇದನ್ನೂ ಓದಿರಿ: ದಮನಿತರ ಭೂಮಿ ಹಕ್ಕಿನ ಕಥೆ ‘ಪಡ’: ತಮಿಳು ಚಿತ್ರರಂಗದ ಹಾದಿಯಲ್ಲಿ ‘ಮಲಯಾಳಂ’ ಸಿನಿಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸ್ವಾಗತಿಸುವ ಫ್ಲೆಕ್ಸ್ ಬೋರ್ಡ್‌; ದಂಡ ವಿಧಿಸಿದ ಬಿಜೆಪಿ ಆಡಳಿತದ ತಿರುವನಂತಪುರಂ ಮಹಾನಗರ ಪಾಲಿಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಗೆ ಸಂಬಂಧಿಸಿದಂತೆ ನಗರದಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಫ್ಲೆಕ್ಸ್ ಬೋರ್ಡ್‌ಗಳನ್ನು ಅಳವಡಿಸಿದ್ದಕ್ಕಾಗಿ ಬಿಜೆಪಿ ಆಡಳಿತವಿರುವ ತಿರುವನಂತಪುರಂ ಮಹಾನಗರ ಪಾಲಿಕೆ ತನ್ನದೇ ಪಕ್ಷಕ್ಕೆ ದಂಡ ವಿಧಿಸಿದೆ. ಪೊಲೀಸ್ ಠಾಣೆಯಲ್ಲಿ ದೂರು...

ಲಂಚ ಪ್ರಕರಣ : ಅದಾನಿಗೆ ಸಮನ್ಸ್ ತಲುಪಿಸಲು ಎರಡು ಬಾರಿ ನಿರಾಕರಿಸಿದ ಕೇಂದ್ರ

ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರಿಗೆ ಕಾನೂನು ಸಮನ್ಸ್ ಕಳುಹಿಸಿತ್ತು. ಆದರೆ, ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯ ಈ...

ನಕಾರಾತ್ಮಕ ಪರಿಣಾಮ ಕಡಿಮೆ ಮಾಡಲು ಸಾಮಾಜಿಕ ಮಾಧ್ಯಮ ನಿಯಂತ್ರಣ ಅಗತ್ಯ: ಕೈಲಾಶ್‌ ಸತ್ಯಾರ್ಥಿ

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಅವರು ಅಪ್ರಾಪ್ತರಿಗೆ ಸಾಮಾಜಿಕ ಮಾಧ್ಯಮದ ನಿಯಂತ್ರಣ ನಿರ್ಧಾರವನ್ನು ಬೆಂಬಲಿಸಿದ್ದಾರೆ. 'ಇದರ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು, ಸಕಾರಾತ್ಮಕವಾಗಿ ನೈತಿಕ ಮೌಲ್ಯಗಳನ್ನು ಹರಡಲು ಮತ್ತು ಸಮುದಾಯಗಳನ್ನು...

ನ್ಯೂಸ್ ಲಾಂಡ್ರಿ ಸಂಪಾದಕಿ ಬಗ್ಗೆ ತಪ್ಪು ವರದಿ: ದೆಹಲಿ ಹೈಕೋರ್ಟ್ ಅಸಮಾಧಾನ

ನ್ಯೂಸ್ ಲಾಂಡ್ರಿ ವ್ಯವಸ್ಥಾಪಕ ಸಂಪಾದಕಿ ಮನೀಷಾ ಪಾಂಡೆ ಅವರ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ, ಕೋರ್ಟ್‌ನ ಮೌಖಿಕ ಅವಲೋಕನಗಳ ಕುರಿತು ಕೆಲ ಮಾಧ್ಯಮಗಳ ವರದಿ ಮಾಡಿದ ರೀತಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಅಸಮಾಧಾನ...

ಇಬ್ಬರು ಬಂಗಾಳಿ ವಲಸೆ ಕಾರ್ಮಿಕರ ಶವ ಪತ್ತೆ : ಒಬ್ಬರನ್ನು ಹಿಂದುತ್ವ ಗುಂಪು ಥಳಿಸಿ ಕೊಂದಿರುವ ಆರೋಪ

ಪ್ರತ್ಯೇಕ ರಾಜ್ಯಗಳಲ್ಲಿ ಇಬ್ಬರು ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದು, ದೇಶದಲ್ಲಿ ಬಂಗಾಳಿ ಮಾತನಾಡುವ ಕಾರ್ಮಿಕರ ವಿರುದ್ದ ಹೆಚ್ಚುತ್ತಿರುವ ಹಿಂಸಾಚಾರದ ಭಾಗವಾಗಿ ಇಬ್ಬರನ್ನೂ ಕೊಲ್ಲಲಾಗಿದೆ ಎಂದು ಅವರ ಕುಟುಂಬಗಳು ಆರೋಪಿಸಿವೆ. ಆಂಧ್ರ ಪ್ರದೇಶದ...

ಡಿಜಿಟಲ್ ಅರೆಸ್ಟ್‌ನಲ್ಲಿ ಬರೋಬ್ಬರಿ 23 ಕೋಟಿ ರೂ. ಕಳೆದುಕೊಂಡ ವ್ಯಕ್ತಿ : ಹಣ ಮರುಪಾವತಿ, ವಂಚನೆ ತಡೆಗೆ ಮಾರ್ಗಸೂಚಿ ಕೋರಿ ಸುಪ್ರೀಂ ಮೊರೆ

ಸೈಬರ್ ವಂಚನೆಯಾದ ಡಿಜಿಟಲ್ ಅರೆಸ್ಟ್‌ನಲ್ಲಿ ಬರೋಬ್ಬರಿ 23 ಕೋಟಿ ರೂಪಾಯಿ (22.92 ಕೋಟಿ) ಕಳೆದುಕೊಂಡ 82 ವರ್ಷದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್...

ಒಡಿಶಾ| ಗುಂಪು ಹಲ್ಲೆಯ ನಂತರ ಪಾದ್ರಿ ಕುಟುಂಬ ವಾಸವಿದ್ದ ಬಾಡಿಗೆ ಮನೆ ಖಾಲಿ ಮಾಡುವಂತೆ ಒತ್ತಡ

ಈ ತಿಂಗಳ ಆರಂಭದಲ್ಲಿ ಗುಂಪೊಂದು ಹಲ್ಲೆ ನಡೆಸಿ ಸಾರ್ವಜನಿಕವಾಗಿ ಅವಮಾನಿಸಿತ್ತು ಎನ್ನಲಾದ ಒಡಿಶಾ ಪಾದ್ರಿ ಕುಟುಂಬ ಎಂಟು ವರ್ಷಗಳ ಕಾಲ ವಾಸಿಸುತ್ತಿದ್ದ ಮನೆಯಿಂದ ಖಾಲಿ ಮಾಡುವಂತೆ ಒತ್ತಾಯಿಸಲಾಗಿದೆ. ಇದರಿಂದಾಗಿ ಅವರ ಕುಟುಂಬ ಭಯಭೀತರಾಗಿ...

ಆಧಾರ್ ಕಾರ್ಡ್‌ ಇಲ್ಲದೆ ದಾಖಲಿಸಿಕೊಳ್ಳದ ವೈದ್ಯರು : ಹೆರಿಗೆಗೆ ಆಸ್ಪತ್ರೆ ಸಿಗದೆ ಅಲೆಮಾರಿ ಮಹಿಳೆ ಪರದಾಟ

ಆಧಾರ್ ಕಾರ್ಡ್‌ ಇಲ್ಲದ ಕಾರಣ ವೈದ್ಯರು ದಾಖಲಿಸಿಕೊಳ್ಳಲು ನಿರಾಕರಿಸಿದ್ದು, ಪರಿಣಾಮ ಹೆರಿಗೆಗೆ ಆಸ್ಪತ್ರೆ ಸಿಗದೆ ಅಲೆಮಾರಿ ಸಮುದಾಯದ ಮಹಿಳೆಯೊಬ್ಬರು ಪರದಾಡುತ್ತಿರುವ ಬಗ್ಗೆ ತೆಲಂಗಾಣದ ಕರೀಂನಗರ ಜಿಲ್ಲೆಯಿಂದ ವರದಿಯಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ...

ಲ್ಯಾಂಡ್‌ಲಾರ್ಡ್: ಜಮೀನ್ದಾರಿ ವ್ಯವಸ್ಥೆ, ಜಾತಿ ಪ್ರಶ್ನೆ ಮತ್ತು ಸಂವಿಧಾನ – ಕನ್ನಡ ಚಿತ್ರರಂಗದ ಒಂದು ಮಹತ್ವದ ತಿರುವು

ಕನ್ನಡ ಮುಖ್ಯವಾಹಿನಿ ಸಿನೆಮಾ ಅಪರೂಪಕ್ಕೊಮ್ಮೆ ಮಾತ್ರ ಸಮಾಜದ ಮೂಲಭೂತ ಪ್ರಶ್ನೆಗಳತ್ತ ನೇರವಾಗಿ ಮುಖ ಮಾಡುತ್ತದೆ. ಜಾತಿ, ಭೂಮಿ, ಅಧಿಕಾರ ಎಲ್ಲವನ್ನು ಒಟ್ಟಿಗೆ ಹಿಡಿದು ಪ್ರಶ್ನಿಸುವ ಚಿತ್ರಗಳು ಇನ್ನೂ ವಿರಳ. ನಿರ್ದೇಶಕ–ಕಥಾಲೇಖಕ ಜಡೆಶ್ ಕೆ....

ಕುಡುಪು ಗುಂಪು ಹತ್ಯೆ : ಮತ್ತೊಬ್ಬ ಆರೋಪಿಗೆ ಜಾಮೀನು

ಮಂಗಳೂರು ಹೊರವಲಯದ ಕುಡುಪು ಬಳಿ 2025ರ ಏಪ್ರಿಲ್ 27ರಂದು ನಡೆದ ಕೇರಳ ಮೂಲದ ಮುಹಮ್ಮದ್ ಅಶ್ರಫ್ ಅವರ ಗುಂಪು ಹತ್ಯೆ ಪ್ರಕರಣದ ಆರೋಪಿ ನಟೇಶ್ ಕುಮಾರ್‌ಗೆ ಹೈಕೋರ್ಟ್ ಶುಕ್ರವಾರ (ಜ.23) ಜಾಮೀನು ಮಂಜೂರು...