ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿರುವ 630 ಸಿಂಗಲ್ ಸ್ಕ್ರೀನ್ (ಏಕ ಪರದೆ) ಚಿತ್ರಮಂದಿರಗಳಿಗೆ 2021–22ನೇ ಸಾಲಿನ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ವಾರ್ತಾ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷದಿಂದಲೂ ಚಿತ್ರಮಂದಿರಗಳು ಬಹುತೇಕ ಬಂದ್ ಆಗಿದ್ದವು. ರಾಜ್ಯದಲ್ಲಿ 14 ತಿಂಗಳಿನಿಂದ ಬಹುತೇಕ ಚಿತ್ರಮಂದಿರಗಳ ಬಾಗಿಲು ತೆರೆದಿಲ್ಲ. ಆದರೆ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಇನ್ನಿತರೆ ಶುಲ್ಕಗಳನ್ನು ಪಾವತಿಸಲೇ ಬೇಕಿತ್ತು. ವರ್ಷದಿಂದಲೂ ಸಂಕಷ್ಟದಲ್ಲಿರುವ ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಪಾವತಿ ರದ್ದು ಮಾಡಬೇಕು ಎಂದು ರ್ನಾಟಕ ಚಿತ್ರ ಪ್ರದರ್ಶಕರ ಸಂಘ, ಏಕ ಪರದೆ (ಸಿಂಗಲ್ ಸ್ಕ್ರೀನ್) ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು.
ಚಿತ್ರ ಪ್ರದರ್ಶಕರ ಸಂಘದ ಬೇಡಿಕೆಯನ್ನು ಆಧರಿಸಿ ಏಕ ಪರದೆಯ ಚಿತ್ರಮಂದಿರಗಳ ಪ್ರಸಕ್ತ ವರ್ಷದ ಆಸ್ತಿ ತೆರಿಗೆಯನ್ನು ಮನ್ನಾ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 9 ಕೋಟಿ ಹೊರೆಯಾಗಲಿದೆ ಎಂದು ವಾರ್ತಾ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಅಮೃತಮತಿ: ನಟಿ ಹರಿಪ್ರಿಯಾಗೆ ಒಲಿದು ಬಂತು ಹಾಲಿವುಡ್ ಪ್ರಶಸ್ತಿ

ಕೊರೊನಾ ಮಹಾಮಾರಿಯಿಂದ ರಾಜ್ಯದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಏಕಪರದೆ ಚಿತ್ರಮಂದಿರ ನೌಕರರು ಮತ್ತು ಮಾಲೀಕರ ಹಿತದೃಷ್ಟಿಯಿಂದಾಗಿ ಈ ಕ್ರಮ ಕೈಗೊಂಡಿರುವುದಾಗಿ ಸರ್ಕಾರವು ಜುಲೈ 07 ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ರಾಜ್ಯದಲ್ಲಿ 630 ಏಕಪರದೆ (ಸಿಂಗಲ್ ಸ್ಕ್ರೀನ್) ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಏಕಪರದೆ ಚಿತ್ರಮಂದಿರಗಳಿಗೂ 2021-22 ನೇ ಸಾಲಿನ ಆಸ್ತಿ ತೆರಿಗೆಯಿಂದ ವಿನಾಯಿತಿ ದೊರೆತಿದೆ. ಆದರೆ ಮಲ್ಟಿಫ್ಲೆಕ್ಸ್‌ಗಳಿಗೆ ಯಾವುದೇ ವಿನಾಯಿತಿಯನ್ನು ಸರ್ಕಾರ ನೀಡಿಲ್ಲ.
ಕಳೆದ ವರ್ಷದ ಅಂತ್ಯದಲ್ಲಿ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕ ಕೆಲವೇ ದಿನಗಳಲ್ಲಿ ಕೊರೊನಾ ಎರಡನೇ ಅಲೆ ಪ್ರರಂಭವಾಗಿ ಚಿತ್ರಮಂದಿರಗಳನ್ನು ಮತ್ತೆ ಬಂದ್ ಮಾಡಲಾಯಿತು. ಅನ್‌ಲಾಕ್ 3.0 ನಲ್ಲೂ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಿಲ್ಲ. ಮುಂದಿನ ವಾರ ಜಾರಿಯಾಗಲಿರುವ ಅನ್‌ಲಾಕ್ 4.0 ದಲ್ಲಿ ಚಿತ್ರಮಂದಿರಗಳು ತೆರೆಯಲು ಅನುಮತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಕೊರೊನಾ ಎರಡನೇ ಅಲೆಯಲ್ಲಿ ಪರಿಹಾರ ಪ್ಯಾಕೇಜ್ ಘೋಷಿಸುವ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿತ್ರರಂಗದ 22,000 ಕಾರ್ಮಿಕರಿಗೆ 3,000 ಸಹಾಯಧನ ಘೋಷಿಸಿದ್ದರು.
ಇದನ್ನೂ ಓದಿ: ಸಿನಿಮಾಟೋಗ್ರಾಫ್ ಆಕ್ಟ್‌ಗೆ ಸ್ಟಾಲಿನ್ ವಿರೋಧ: ನಿರ್ಧಾರ ಹಿಂಪಡೆಯುವಂತೆ ಒಕ್ಕೂಟ ಸಚಿವರಿಗೆ ಪತ್ರ


