ರಷ್ಯಾ ಸೇನೆ ಉಕ್ರೇನ್ ಮೇಲೆ ತನ್ನ ದಾಳಿಯನ್ನು ಮುಂದುವರೆಸುತ್ತಿರುವ ಮಧ್ಯೆ, ಭಾರತವು ತನ್ನ ಎಲ್ಲಾ ನಾಗರಿಕರನ್ನು ‘ತುರ್ತಾಗಿ ರೈಲುಗಳು ಅಥವಾ ಲಭ್ಯವಿರುವ ಯಾವುದೇ ವಿಧಾನಗಳ ಮೂಲಕ’ ಉಕ್ರೇನ್ ರಾಜಧಾನಿ ಕೈವ್‌ನಿಂದ ತೊರೆಯುವಂತೆ ಒತ್ತಾಯಿಸಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸುತ್ತಿದ್ದಂತೆ, ಇದೂವರೆಗೂ ಉಕ್ರೇನ್ನಲ್ಲಿ 352 ನಾಗರೀಕರು ಸಾವನ್ನಪ್ಪಿದ್ದು, 1,684 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಟ್ವೀಟ್ ಮಾಡಿರುವ ಉಕ್ರೇನ್‌ನ ಕೈವ್‌ನಲ್ಲಿರುವ ಭಾರತದ ರಾಯಭಾರ ಕಚೇರಿ, “ಕೈವ್‌ನಲ್ಲಿರುವ ಭಾರತೀಯರಿಗೆ ಸಲಹೆ… ಲಭ್ಯವಿರುವ ರೈಲುಗಳ ಮೂಲಕ ಅಥವಾ ಲಭ್ಯವಿರುವ ಯಾವುದೇ ಇತರ ವಿಧಾನಗಳ ಮೂಲಕ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ಪ್ರಜೆಗಳಿಗೆ ಇಂದು ತುರ್ತಾಗಿ ಕೈವ್ ತೊರೆಯುವಂತೆ ಸೂಚಿಸಲಾಗಿದೆ” ಎಂದು ಹೇಳಿದೆ.
Advisory to Indians in Kyiv
All Indian nationals including students are advised to leave Kyiv urgently today. Preferably by available trains or through any other means available.
— India in Ukraine (@IndiainUkraine) March 1, 2022
ಕೈವ್‌ನ ವಾಯುವ್ಯ ರಸ್ತೆಗಳಲ್ಲಿ ರಷ್ಯಾದ ಮಿಲಿಟರಿ ವಾಹನಗಳ ದೀರ್ಘ ಬೆಂಗಾವಲುಗಳ ಉಪಗ್ರಹ ಚಿತ್ರಗಳು ಹೊರಹೊಮ್ಮಿದ ಗಂಟೆಗಳ ನಂತರ ಈ ಸಲಹೆಯನ್ನು ಭಾರತೀಯ ರಾಯಭಾರಿ ಕಚೇರಿ ಈ ಪೋಸ್ಟ್ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಅಮೆರಿಕಾ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಬಿಡುಗಡೆ ಮಾಡಿದ ಈ ಚಿತ್ರಗಳಲ್ಲಿ ನೂರಾರು ಟ್ಯಾಂಕ್‌ಗಳು, ಫಿರಂಗಿಗಳು, ಶಸ್ತ್ರಸಜ್ಜಿತ ಲಾಜಿಸ್ಟಿಕ್ ವಾಹನಗಳು ಕಾಣುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಉಕ್ರೇನ್ ಮೇಲಿನ ದಾಳಿಯ ನಂತರ ಪುಟಿನ್ ಅವರು ಮೋದಿ ಜೊತೆಗೆ ಮಾತುಕತೆಗೆ ಮನವಿ ಮಾಡಿಲ್ಲ
ಭಾರತೀಯ ರಾಯಭಾರಿಯ ಈ ನಡೆಯನ್ನು ವಿರೋಧಿಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ, “ಸಾವು-ಬದುಕಿನ ನಡುವೆ ಇರುವ ಸಾವಿರಾರು ಭಾರತೀಯರಿಗೆ ‘ಸಹಾಯ’ ಮಾಡುವ ಬದಲು ‘ಆತ್ಮನಿರ್ಭರ ಸಲಹೆ’ ಮಾತ್ರ ನೀಡುವುದೇ? ಕಳೆದ 5 ದಿನಗಳಿಂದ ಉಕ್ರೇನ್‌ನಲ್ಲಿ ಮೋದಿ ಸರ್ಕಾರ ಸಾವಿರಾರು ಮಕ್ಕಳನ್ನು ಇಲ್ಲಿಂದ ಅಲ್ಲಿಗೆ ಓಡಿಸುತ್ತಿದೆಯೇ? ಇಂತಹ ವಿನಾಶದಿಂದ ಹೊರಬರುವುದು ಹೇಗೆ, ಅಷ್ಟು ದೂರವನ್ನು ಹೇಗೆ ಕ್ರಮಿಸುವುದು ಮತ್ತು ಎಲ್ಲಿಗೆ ಹೋಗಬೇಕು? ಮಕ್ಕಳ ಬದುಕಿನೊಂದಿಗೆ ಎಷ್ಟು ದಿನ ಆಟವಾಡುತ್ತಿದ್ದೀರಿ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
जिंदगी और मौत के बीच हज़ारों भारतीयों को 'सहायता' की बजाय केवल 'आत्मनिर्भर सलाह'?
बीते 5 दिनों से #Ukrain में मोदी सरकार हज़ारों बच्चों को बस यहाँ से वहाँ भगा रही है?
तबाही के मंज़र में भला बाहर कैसे निकलें, दूरी कैसे तय करें और कहाँ जाय?
बच्चों की ज़िन्दगी से खिलवाड़ कब तक? pic.twitter.com/uBqxCPXmNg
— Randeep Singh Surjewala (@rssurjewala) March 1, 2022
ಇದನ್ನೂ ಓದಿ: ರಷ್ಯಾ-ಉಕ್ರೇನ್ ಬಿಕ್ಕಟ್ಟು: 352 ಉಕ್ರೇನಿಯನ್ ನಾಗರಿಕರು ಸಾವು, 1,684 ಮಂದಿಗೆ ಗಾಯ
ಉಕ್ರೇನ್‌ನಲ್ಲಿ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಇನ್ನೂ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ಗುರುವಾರ ರಷ್ಯಾದ ದಾಳಿ ಪ್ರಾರಂಭವಾದಾಗಿನಿಂದ ಅವರು ಅಡಗಿರುವ ಭೂಗತ ಬಂಕರ್‌ಗಳು, ಮೆಟ್ರೋ ನಿಲ್ದಾಣಗಳು ಮತ್ತು ಬಾಂಬ್ ಶೆಲ್ಟರ್‌ಗಳ ಫೋಟೊ ಮತ್ತು ವಿಡಿಯೊಗಳನ್ನು ಅನೇಕ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇಲ್ಲಿಯವರೆಗೆ ಸುಮಾರು 8,000 ಭಾರತೀಯ ಪ್ರಜೆಗಳು ಉಕ್ರೇನ್‌ನಿಂದ ತೆರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
ಸೋಮವಾರ, ರಾಯಭಾರ ಕಚೇರಿಯು ಕೈವ್‌ನಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಹೋಗಲು ವಿದ್ಯಾರ್ಥಿಗಳನ್ನು ಕೇಳಿತ್ತು. ಅಲ್ಲಿ ಜನರನ್ನು ಪಶ್ಚಿಮ ಪ್ರದೇಶಕ್ಕೆ ಕರೆದೊಯ್ಯಲು ಉಕ್ರೇನ್ ವಿಶೇಷ ಸ್ಥಳಾಂತರಿಸುವ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಪಾಸ್‌ಪೋರ್ಟ್, ಸಾಕಷ್ಟು ನಗದು ಮತ್ತು ಬೆಚ್ಚಗಿನ ಬಟ್ಟೆಗಳನ್ನು ತೆಗೆದುಕೊಂಡು ಹೋಗುವಂತೆ ಕೇಳಲಾಗಿತ್ತು.
“ಎಲ್ಲಾ ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳು ಶಾಂತಿಯುತವಾಗಿ ಮತ್ತು ಒಗ್ಗಟ್ಟಿನಿಂದ ಇರುವಂತೆ ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ. ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಇರಬಹುದಾದ್ದರಿಂದ ಎಲ್ಲಾ ಭಾರತೀಯ ವಿದ್ಯಾರ್ಥಿಗಳು ತಾಳ್ಮೆ ಮತ್ತು ಸಂಯಮದಿಂದಿರಬೇಕು. ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸಬಾರದು” ಎಂದು ಸಲಹೆ ನೀಡಿತ್ತು.
ಇದನ್ನೂ ಓದಿ: ’ಬಿಡಾಡಿ ದನಗಳ ಸಂರಕ್ಷಣೆಯಲ್ಲಿ ಅದ್ಭುತ ಕೆಲಸ ಮಾಡಿದ್ದೇವೆ’- ಉತ್ತರ ಪ್ರದೇಶ ಸರ್ಕಾರ
ಈ ಮಧ್ಯೆ, ಅನೇಕ ವಿದ್ಯಾರ್ಥಿಗಳು ತಮ್ಮನ್ನು ರೈಲು ಹತ್ತಲು ಅನುಮತಿಸಲಿಲ್ಲ ಅಥವಾ ಅಧಿಕಾರಿಗಳು ತಮ್ಮೊಂದಿಗೆ ಕೆಟ್ಟದಾಗಿ ನಡೆಸಿಕೊಂಡರು ಎಂದು ದೂರಿದ್ದಾರೆ.
ಆದಾಗ್ಯೂ, ಕಳೆದ ವಾರದಿಂದ ರಾಯಭಾರ ಕಚೇರಿಯ ಬಳಿ ನೆಲೆಸಿರುವ ಸುಮಾರು 400 ವಿದ್ಯಾರ್ಥಿಗಳು ಸೇರಿದಂತೆ ಸೋಮವಾರ ಕೈವ್‌ನಿಂದ ಪಶ್ಚಿಮ ಉಕ್ರೇನ್ ಕಡೆಗೆ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸ್ಥಳಾಂತರ ಮಾಡಲಾಗಿದೆ ಎಂದು ರಾಯಭಾರ ಕಚೇರಿ ಖಚಿತಪಡಿಸಿದೆ ಎಂದು ಸರ್ಕಾರಿ ಮೂಲಗಳು ಹೇಳಿಕೊಂಡಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಭಾರತೀಯ ವಿದ್ಯಾರ್ಥಿಗಳನ್ನು ಹಂಗೇರಿ, ಪೋಲೆಂಡ್, ರೊಮೇನಿಯಾ, ಸ್ಲೋವಾಕ್ ಗಣರಾಜ್ಯಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈ ಎಲ್ಲಾ ದೇಶಗಳು ಉಕ್ರೇನ್‌ನೊಂದಿಗೆ ಗಡಿಯನ್ನು ಹಂಚಿಕೊಡಿದ್ದು, ಅಲ್ಲಿಂದ ಅವರನ್ನು ಆಪರೇಷನ್ ಗಂಗಾ ಅಡಿಯಲ್ಲಿ ಭಾರತಕ್ಕೆ ಸ್ಥಳಾಂತರಿಸಲಾಗುತ್ತದೆ ಎನ್ನಲಾಗಿದೆ.
ರಷ್ಯಾ ಒಕ್ಕೂಟದಿಂದ ಉಕ್ರೇನ್ ಬೇರ್ಪಟ್ಟ ನಂತರ, ಅಮೆರಿಕಾ ನೇತೃತ್ವದ NATO ಜೊತೆಗೆ ಸೇರಿಕೊಕೊಳ್ಳಲು ಯತ್ನಿಸುತ್ತಿದೆ. ಅದಕ್ಕಾಗಿ, ಅಮೆರಿಕಾ ಸಾಕಷ್ಟು ಯುದ್ದ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ನಲ್ಲಿ ಶೇಖರಣೆ ಮಾಡಿದೆ. ಇದು ರಷ್ಯಾ ವಿರುದ್ದದ ಷಡ್ಯಂತ್ರದ ಭಾಗವಾಗಿದ್ದು, ಉಕ್ರೇನ್ನಲ್ಲಿ ನ್ಯಾಟೋ ನೆಲೆಗೂಡುವುದನ್ನು ರಷ್ಯಾ ವಿರೋಧಿಸಿತ್ತು ಮತ್ತು ಯುದ್ದಾಸ್ತ್ರಗಳನ್ನು ಹಿಂಪಡೆಯುವಂತೆ ಹಲವು ತಿಂಗಳಿನಿಂದ ನ್ಯಾಟೋಗೆ ಹೇಳುತ್ತಲೇ ಇತ್ತು. ಕೊನೆಗೆ ಕಳೆದ ಗುರುವಾರ ಬೆಳಿಗ್ಗೆ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಮುರುಘ ಶರಣರು ಸೇರಿದಂತೆ ಹಲವು ಸ್ವಾಮೀಜಿಗಳು ಭಾಗಿ


