Homeಕರ್ನಾಟಕತೀವ್ರ ಕೇಂದ್ರೀಕರಣ ಆರೋಪ; ಸರ್ಕಾರಿ ಸಂಸ್ಥೆಯಾಗುತ್ತಿದೆಯೇ ’ಕಸಾಪ’?

ತೀವ್ರ ಕೇಂದ್ರೀಕರಣ ಆರೋಪ; ಸರ್ಕಾರಿ ಸಂಸ್ಥೆಯಾಗುತ್ತಿದೆಯೇ ’ಕಸಾಪ’?

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಮತ್ತೆ ಸುದ್ದಿಯಲ್ಲಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಹೇಶ್ ಜೋಶಿಯವರು ಕಸಾಪ ಬೈಲಾವನ್ನು ಬದಲಾಯಿಸಲು ಹೊರಟು ವಿವಾದ ಸೃಷ್ಟಿಸಿದ್ದಾರೆ. ಇಡೀ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕಸಾಪ, ಜನಪದರನ್ನು ಹೊರಗಿಡುವ ಪ್ರಕ್ರಿಯೆಯಲ್ಲಿ ತೊಡಗುವ ಜೊತೆಗೆ, ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ.

ಅಧಿಕಾರ ವಿಕೇಂದ್ರೀಕರಣ ತತ್ವವನ್ನು ಒಡೆದುಹಾಕಲು ಮಹೇಶ್ ಜೋಶಿಯವರು ಹೊರಟಿದ್ದಾರೆಂಬ ಆರೋಪಗಳು ಬಂದಿವೆ. “ನೂರು ವರ್ಷಗಳಿಂದ ಬೈಲಾ ತಿದ್ದುಪಡಿಯೇ ಆಗಿಲ್ಲ” ಎಂದು ತಪ್ಪು ಮಾಹಿತಿ ನೀಡುತ್ತಾ, ಬೈಲಾ ತಿದ್ದುಪಡಿ ಮಾಡಲೆಂದು ಸದರಿ ಅಧ್ಯಕ್ಷರು ಸಮಿತಿಯೊಂದನ್ನು ರಚಿಸಿದ್ದಾರೆ ಎಂಬುದು ಹಲವರ ಆಕ್ಷೇಪವಾಗಿದೆ.

ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ವೇಳೆ ಬಿಜೆಪಿ ಪಕ್ಷದ ಬೆಂಬಲ ಮಹೇಶ್ ಜೋಶಿಯವರಿಗೆ ದೊರೆತಿತ್ತು. ಹೀಗಾಗಿ ಕಸಾಪದ ವಿದ್ಯಮಾನಗಳಲ್ಲಿ ರಾಜಕೀಯ ಆಯಾಮಗಳನ್ನೂ ನೋಡಲಾಗುತ್ತಿದೆ.

“ಈಗಾಗಲೇ ಕಸಾಪದಲ್ಲಿ ಮೂವತ್ತು ಸಾವಿರ ಹೆಬ್ಬೆಟ್ಟಿನವರು ಸದಸ್ಯರಾಗಿದ್ದಾರೆ” ಎಂದು ಅಧ್ಯಕ್ಷರು ಹೇಳಿದ ಮಾತು ಗಂಭೀರ ಚರ್ಚೆಗೆ ಒಳಗಾಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ಕಸಾಪದ ಆಂತರಿಕ ವ್ಯವಸ್ಥೆಯನ್ನೇ ಬದಲಾಯಿಸುವ ಕೆಲಸಕ್ಕೆ ಕೈಹಾಕಲಾಗುತ್ತಿದೆ.

ಚರ್ಚೆಯ ಕೇಂದ್ರವಾಗಿರುವ ತಿದ್ದುಪಡಿಗಳೇನು?

’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ಹಿರಿಯ ಸಾಹಿತಿ, ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಬೈಲಾ ತಿದ್ದುಪಡಿಯ ಅಂಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಜೊತೆಗೆ ತಮ್ಮ ಆತಂಕವನ್ನು ತೋಡಿಕೊಂಡರು.

ಪ್ರೊ.ಬರಗೂರು ಅವರು ಹೇಳುವುದಿಷ್ಟು:

“ಹೊಸ ತಿದ್ದುಪಡಿಯ ಪ್ರಕಾರ ಕಸಾಪ ಕಾರ್ಯಕಾರಿ ಸಮಿತಿಗೆ ಇದ್ದ ಅಧಿಕಾರವನ್ನು ಕಸಾಪ ಅಧ್ಯಕ್ಷರು ಕೇಂದ್ರೀಕರಿಸಿಕೊಳ್ಳುತ್ತಿದ್ದಾರೆ. ಕಾರ್ಯಕಾರಿ ಸಮಿತಿಯು ಪರಿಷತ್ ಆಡಳಿತವನ್ನು ಈವರೆಗೆ ನಡೆಸುತ್ತಿದ್ದರು. ಅಧ್ಯಕ್ಷರು ಸಮಿತಿಯ ಪ್ರತಿನಿಧಿಯಾಗಿರುತ್ತಿದ್ದರು. ಆದರೀಗ ಅಧ್ಯಕ್ಷರೇ ಎಲ್ಲಕ್ಕೂ ಮುಖ್ಯವಾಗುತ್ತಾರೆ. ಹೊರರಾಜ್ಯ, ಕೇಂದ್ರಾಡಳಿತ, ವಿದೇಶದ ಕಸಾಪ ಘಟಕಗಳಿಗೆ ಅಧ್ಯಕ್ಷರೇ ನೇರವಾಗಿ ನಾಮನಿರ್ದೇಶನ ಮಾಡಲಿದ್ದಾರೆ. ಹೋಬಳಿ ಘಟಕದ ನೇಮಕ, ಅಲ್ಲಿನ ಕಾರ್ಯಕಾರಿ ಸಮಿತಿ ನೇಮಕವನ್ನೂ ಕಸಾಪ ಅಧ್ಯಕ್ಷರೇ ಮಾಡಲಿದ್ದಾರೆ. ಈವರೆಗೆ ತಾಲ್ಲೂಕು ಅಥವಾ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಿಸಿಕೊಳ್ಳುವಾಗ ಹೆಸರುಗಳನ್ನು ಪ್ರಕಟಿಸುವುಧಕ್ಕಿಂತ ಮುಂಚೆ ಅಧ್ಯಕ್ಷರ ಅನುಮತಿ ಪಡೆಯಬೇಕೆಂದಿತ್ತು. ಅಂದರೆ ಇವರ ಗಮನಕ್ಕೆ ತರಬೇಕಿತ್ತಷ್ಟೇ. ಈಗ ಕಸಾಪ ಕೇಂದ್ರ ಕಚೇರಿಯು ನಿರ್ಧಾರ ಮುಖ್ಯವಾಗುತ್ತದೆ”.

ಪ್ರೊ. ಬರಗೂರು ರಾಮಚಂದ್ರಪ್ಪ

“ಕೇಂದ್ರ ಸಮಿತಿಗೆ ಯಾರಾದರೂ ಧಕ್ಕೆ ತಂದಾಗ ಅಮಾನತು ಮಾಡುವ ಅಧಿಕಾರ ಕಾರ್ಯಕಾರಿ ಸಮಿತಿಗೆ ಇರುತ್ತಿತ್ತು. ಉದಾಹರಣೆಗೆ ಜಿಲ್ಲಾ ಘಟಕದ ಅಧ್ಯಕ್ಷನೋ, ತಾಲ್ಲೂಕು ಘಟಕದ ಅಧ್ಯಕ್ಷನೋ ಸಮಾಜಘಾತುಕನಾಗಿ ನಡೆದುಕೊಂಡಾಗ, ದುರ್ನಡತೆ ತೋರಿದಾಗ ಕಾರ್ಯಕಾರಿ ಸಮಿತಿ ಚರ್ಚಿಸಿ ಅಮಾನತು ಮಾಡಲು ನಿರ್ಧರಿಸುತ್ತಿತ್ತು. ಈಗ ಚರ್ಚೆ ನಡೆಯುವುದಿಲ್ಲ. ತಪ್ಪು ಮಾಡಿರುವುದು ಮೇಲುನೋಟಕ್ಕೆ ಕಂಡು ಬಂದರೆ ನೇರವಾಗಿ ಅಧ್ಯಕ್ಷರೇ ಅಮಾನತು ಮಾಡಬಹುದೆಂದು ತಿದ್ದುಪಡಿಯಲ್ಲಿ ಸೇರಿಸಲಾಗಿದೆ”.

“ಯಾರಾದರೂ ರಾಜೀನಾಮೆ ಕೊಟ್ಟಾಗ ಅದು ಕಾರ್ಯಕಾರಿ ಸಮಿತಿಯ ಮುಂದೆ ಬರಬೇಕಾಗಿತ್ತು. ಈಗ ಅಧ್ಯಕ್ಷರೇ ರಾಜೀನಾಮೆ ಸ್ವೀಕರಿಸುವ ಅಥವಾ ನಿರಾಕರಿಸುವ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಉಪಸಮಿತಿಯ ರಚನೆಯಲ್ಲೂ ಕಾರ್ಯಕಾರಿ ಸಮಿತಿಗೆ ಪಾತ್ರವಿಲ್ಲ, ಅಲ್ಲಿಯೂ ಅಧ್ಯಕ್ಷರೇ ಮುಖ್ಯವಾಗುತ್ತಾರೆ”.

“ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಯ ಸಿಬ್ಬಂದಿ ನೇಮಕವೂ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಯಾಗಬೇಕಿತ್ತು. ಈಗ ನೇಮಕಾತಿಯ ಸಂಪೂರ್ಣ ಅಧಿಕಾರ ಅಧ್ಯಕ್ಷರಿಗೆ ನೀಡಲಾಗಿದೆ. ಅಂದರೆ ಅಧ್ಯಕ್ಷರು ತಮಗೆ ಬೇಕಾದವರನ್ನು ಸಿಬ್ಬಂದಿಯನ್ನಾಗಿ ನೇಮಿಸಬಹುದು, ಬೇಡವಾದಾಗ ವಜಾ ಮಾಡಬಹುದು!”

“ಮಹಿಳಾ ಪ್ರತಿನಿಧಿ, ಎಸ್‌ಸಿ, ಎಸ್‌ಟಿ ಪ್ರತಿನಿಧಿ ಇತ್ಯಾದಿಯವರನ್ನು ನೇಮಿಸಿಕೊಳ್ಳುವುದೂ ಅಧ್ಯಕ್ಷರಿಗೆ ಸಂಬಂಧಿಸಿದೆ. ಜಿಲ್ಲಾ ಸಮ್ಮೇಳನ, ತಾಲ್ಲೂಕು ಸಮ್ಮೇಳನಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ನಿರ್ಧರಿಸುವಾಗಲೂ ಕೇಂದ್ರ ಅಧ್ಯಕ್ಷರ ಅನುಮತಿ ಕಡ್ಡಾಯ. ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರೂ ಚುನಾವಣೆಯಲ್ಲಿ ಗೆದ್ದು ಬಂದಿರುತ್ತಾರೆ. ಆದರೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡುವಾಗ ಕೇಂದ್ರ ಅಧ್ಯಕ್ಷರ ಅನುಮತಿ ಪಡೆಯಬೇಕು ಎನ್ನುವುದು ಎಷ್ಟು ಸರಿ?”

“ಆಕಸ್ಮಿಕವಾಗಿ ಜಿಲ್ಲಾ ಘಟಕ, ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನ ತೆರವಾದರೂ ಅಲ್ಲಿಗೆ ನೇಮಕ ಮಾಡುವ ಅಧಿಕಾರ ಕೇಂದ್ರ ಘಟಕದ ಅಧ್ಯಕ್ಷರಿಗಿರುತ್ತದೆ. ಇಲ್ಲಿಯೂ ಕಾರ್ಯಕಾರಿ ಸಮಿತಿ ಗೌಣ. ಕೇಂದ್ರ ಘಟಕದ ಅಧ್ಯಕ್ಷರೊಂದಿಗೆ ಚರ್ಚೆ ಮಾಡೋದು ಬೇರೆ, ಆದರೆ ನಿರ್ಧಾರವನ್ನು ಹೇರುವುದು ಬೇರೆ. ಜಿಲ್ಲಾ ಘಟಕಕ್ಕೂ ಅಧಿಕಾರ ಇರಬೇಕು. ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲವೆ?”

“ಐದು ಜನ ಗೌರವ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ. ಮೊದಲು ಇಬ್ಬರು ಮಾತ್ರ ಇರುತ್ತಿದ್ದರು. ಸಂಘಟನಾ ಕಾರ್ಯದರ್ಶಿ ಎಂಬ ಸ್ಥಾನವೇ ಇರಲಿಲ್ಲ. ಈಗ ಐದು ಜನ ಸಂಘಟನಾ ಕಾರ್ಯದರ್ಶಿಗಳನ್ನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಸಂಘ ಸಂಸ್ಥೆಗಳ ಪ್ರತಿನಿಧಿ ಎಂದು ಒಬ್ಬರನ್ನು ನೇಮಿಸಿಕೊಳ್ಳಲು ಅವಕಾಶವಿತ್ತು. ಈಗ ಅದನ್ನೂ ಐದು ಮಂದಿಗೆ ಏರಿಕೆ ಮಾಡಲಾಗುತ್ತಿದೆ. ಅಧ್ಯಕ್ಷರು ಕಾರ್ಯಕಾರಿ ಸಮಿತಿಯಲ್ಲಿ ಮೇಲುಗೈ ಸಾಧಿಸುವ ಅಜೆಂಡಾವಿದು”.

“ಕಾರ್ಯಕಾರಿ ಸಮಿತಿಯಲ್ಲಿ ಕಸಾಪದ ನಿಕಟಪೂರ್ವ ಅಧ್ಯಕ್ಷರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರು (ಮುಂದಿನ ಅಧ್ಯಕ್ಷರು ಬರುವವರೆಗೆ) ಇರುತ್ತಿದ್ದರು. ಹಿರಿಯರ ಮಾರ್ಗದರ್ಶನ ಇರಬೇಕೆಂಬುದು ಇದರ ಉದ್ದೇಶವಾಗಿತ್ತು. ಆದರೀಗ ಹೊಸ ತಿದ್ದುಪಡಿಯ ಪ್ರಕಾರ ಇವರಿಬ್ಬರನ್ನೂ ಸಮಿತಿಯಿಂದ ಹೊರಗಿಡಲಾಗಿದೆ”.

“ಪದನಿಮಿತ್ತ ಸದಸ್ಯರ ಪಟ್ಟಿಯನ್ನು ಕಸಾಪ ಮಾಡಲಿದೆ. ಇದು ಸರ್ಕಾರಿ ಸಂಸ್ಥೆಯಲ್ಲಿ ಮಾತ್ರ ಸಾಧ್ಯ. ಕಸಾಪ ಕನ್ನಡಿಗರ ಪ್ರಾತಿನಿಧಿಕ ಸ್ವಾಯತ್ತ ಸಂಸ್ಥೆ. ಆದರೆ ಕಸಾಪಕ್ಕೆ ಕನ್ನಡ ವಿವಿ, ಜಾನಪದ ವಿವಿ, ಸಂಗೀತ ವಿವಿ, ಅಕ್ಕಮಹಾದೇವಿ ಮಹಿಳಾ ವಿವಿಗಳ ಕುಲಪತಿಗಳನ್ನು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು, ಗಡಿ ಪ್ರಾಧಿಕಾರದ ಅಧ್ಯಕ್ಷರನ್ನು ಪದನಿಮಿತ್ತ ಸದಸ್ಯರನ್ನಾಗಿ ಮಾಡಲಾಗುತ್ತಿದೆ. ಇದು ಅವಾಸ್ತವಿಕ. ಯಾಕೆಂದರೆ ಒಬ್ಬ ಕುಲಪತಿ ಪದನಿಮಿತ್ತ ಸದಸ್ಯರಾಗಿರಬೇಕಾದರೆ ಸಂಬಂಧಪಟ್ಟ ಸಂಸ್ಥೆಗೆ ಉನ್ನತ ಶಿಕ್ಷಣ ಸಚಿವರು ಅಧ್ಯಕ್ಷರಾಗಿರಬೇಕು. ಸಾಹಿತ್ಯ ಪರಿಷತ್‌ಗೆ ಕುಲಪತಿಯೊಬ್ಬರು ಪದನಿಮಿತ್ತ ಸದಸ್ಯರಾಗಲು ಸಾಧ್ಯವೇ ಇಲ್ಲ. ಹಾಗೇನಾದರೂ ಕುಲಪತಿ ಒಪ್ಪಿಕೊಂಡರೆ ತಮ್ಮ ಸ್ಥಾನಕ್ಕೆ ತಾವೇ ಅವಮಾನ ಮಾಡಿಕೊಂಡಂತೆ. ವಾರ್ತಾ ಮತ್ತು ಪ್ರಸಾರ ಇಲಾಖೆ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಪಿಯು ಬೋರ್ಡ್ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಇವರೆಲ್ಲರೂ ಪದನಿಮಿತ್ತ ಸದಸ್ಯರಾಗಬೇಕು ಎಂದು ಹೊಸ ಬೈಲಾ ಹೇಳುತ್ತದೆ. ವಿಚಿತ್ರವೆಂದರೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯಕ್ಷರೂ ಇದಕ್ಕೆ ಪದನಿಮಿತ್ತ ಸದಸ್ಯರು! ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಇರಬೇಕಂತೆ”.

“ಮತ್ತೊಂದು ವಿಚಿತ್ರವೆಂದರೆ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿದ್ದು 1890ರಲ್ಲಿ. ಕಸಾಪಕ್ಕಿಂತ ಹಳೆಯದ್ದು. ಏಕೀಕರಣಕ್ಕಾಗಿ ಮೊದಲು ದನಿ ಎತ್ತಿದ ಸಂಸ್ಥೆ ಅದು. ಆ ಸಂಸ್ಥೆಯೇ ಯಾರನ್ನೂ ಪದನಿಮಿತ್ತ ಸದಸ್ಯರನ್ನು ಮಾಡಿಕೊಂಡಿಲ್ಲ. ಆದರೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಕಸಾಪಕ್ಕೆ ಪದನಿಮಿತ್ತ ಸದಸ್ಯರಂತೆ!”

“ಕಸಾಪ ಸದಸ್ಯರಾಗಲು ಕನಿಷ್ಠ 7ನೇ ತರಗತಿ ಓದಿರಬೇಕು (ಮೊದಲು 10ನೇ ತರಗತಿಯ ಶೈಕ್ಷಣಿಕ ಮಾನದಂಡ ಚರ್ಚೆಯಲ್ಲಿತ್ತು) ಎಂದು ಮಾಡಿರುವುದು ಸದ್ಯ ಹೆಚ್ಚು ಚರ್ಚೆಯಾಗುತ್ತಿದೆ. ಇಂತಹ ಅವಾಸ್ತವಿಕ ಸಂಗತಿಗಳೇ ಬೈಲಾದಲ್ಲಿ ತುಂಬಿವೆ” ಎನ್ನುವ ಪ್ರೊ. ಬರಗೂರು, “ಕನ್ನಡ ಸಾಹಿತ್ಯ ಪರಿಷತ್ ಹೆಸರನ್ನು ಕೇಂದ್ರ ಸಾಹಿತ್ಯ ಪರಿಷತ್ ಎಂದು ಮಾಡಬೇಕು ಎಂಬ ಚರ್ಚೆ ಇದೆಯಲ್ಲ, ಅದರ ಬದಲು ಕೇಂದ್ರೀಕೃತ ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದ್ದಾರೆ ಎನಿಸುತ್ತಿದೆ. ಕಸಾಪ ಒಂದು ರೀತಿಯಲ್ಲಿ ಸರ್ಕಾರಿ ಸಂಸ್ಥೆಯಂತಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಜನಪದರನ್ನು ಹೊರಗಿಡುವ ಹುನ್ನಾರ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ’ನ್ಯಾಯಪಥ’ದೊಂದಿಗೆ ಮಾತನಾಡಿ, “ಜನಪದ ಕಲಾವಿದರನ್ನು, ಜನಪದ ಕಾಯಕ ಜೀವಿಗಳನ್ನು, ಜನಪದ ಸಾಹಿತ್ಯವನ್ನು ಇದುವರೆಗೂ ಕಸಾಪ ತುಂಬಾ ಗೌರವದಲ್ಲಿ ಒಳಗೊಂಡಿದೆ ಹಾಗೂ ಅಷ್ಟೇ ಘನತೆಯಲ್ಲಿ ಅವರನ್ನು ನಡೆಸಿಕೊಂಡಿದೆ. ಈ ಸನ್ಮಾನ್ಯ ಅಧ್ಯಕ್ಷರು ಅವರನ್ನು ಹೊರಗಿಡುವ ನಿಯಮ ರೂಪಿಸಿದಂತೆ ಮಾತನಾಡುತ್ತಿದ್ದಾರೆ. ಇದರ ಹಿಂದಿನ ಉದ್ದೇಶವೇನು? ’ಕುರಿತೋದದೆಯುಮ್ ಕಾವ್ಯಪ್ರಯೋಗ ಪರಿಣತಮತಿಗಳ್ ನಾಡವರ್ಗಳ್’ ಎಂದು ನೃಪತುಂಬ ಹೇಳಿದ್ದನ್ನು ಕಸಾಪ ಅಧ್ಯಕ್ಷರು ನೆನೆಯಬೇಕು” ಎಂದಿದ್ದಾರೆ.

ಪ್ರೊ.ಎಸ್.ಜಿ.ಸಿದ್ದರಾಮಯ್ಯ

“ವಿಕೇಂದ್ರೀಕರಣ ನೀತಿಯಲ್ಲಿ ವಿಸ್ತರಿಸಿಕೊಂಡಿದ್ದ ಕಸಾಪದ ಬೆಳವಣಿಗೆಯನ್ನು ಏಕವ್ಯಕ್ತಿ ಕೇಂದ್ರಿತ ಅಧಿಕಾರದ ಅಡ್ಡೆಯಾಗಿಸಲಾಗುತ್ತಿದೆ. ಈಗಿನ ತಿದ್ದುಪಡಿಗಳು ಸರ್ವಾಧಿಕಾರಿ ಧೋರಣೆಗೆ ಅಧ್ಯಕ್ಷರನ್ನು ಬೆಳೆಸುತ್ತವೆ ಮತ್ತು ಕಾರ್ಯಕಾರಿ ಸಮಿತಿಯ ಅಗತ್ಯವನ್ನೇ ಅಪ್ರಸ್ತುತಗೊಳಿಸುವ ನಿಯಮಗಳಾಗಿವೆ” ಎಂದು ತಿಳಿಸಿದ್ದಾರೆ.

ಜನಪದರನ್ನು ಸರ್ವೇ ಮಾಡಿದ್ದಾರೆಯೇ?: ಪ್ರೊ.ಪಿ.ಕೆ.ರಾಜಶೇಖರ್

ಪ್ರೊ.ಪಿ.ಕೆ.ರಾಜಶೇಖರ್

ಜಾನಪದ ವಿದ್ವಾಂಸ ಪ್ರೊ.ಪಿ.ಕೆ. ರಾಜಶೇಖರ್ ಪ್ರತಿಕ್ರಿಯಿಸಿ, “ಕಸಾಪದ ಮೇಲೆ ಕನ್ನಡಿಗರೆಲ್ಲರಿಗೂ ಅಧಿಕಾರವಿದೆ. ಅಕ್ಷರಸ್ಥರು, ಅನಕ್ಷರಸ್ಥರು ಎಂಬ ತಾರತಮ್ಯ ಸಲ್ಲದು. ಓದು ಬರಹ ಗೊತ್ತಿಲ್ಲದ ಕನ್ನಡಿಗರು ಅದ್ಭುತವಾದ ಕಾವ್ಯವನ್ನು ಕಟ್ಟಿದ್ದಾರೆ. ಅವರನ್ನೆಲ್ಲ ಅವಿದ್ಯಾವಂತರು ಎನ್ನುತ್ತೀರಾ? ಅವರು ನಿಮ್ಮಂತೆ ಅಕ್ಷರಸ್ಥರಲ್ಲದಿರಬಹುದು ಆದರೆ ವಿದ್ಯಾವಂತರು, ನೀವು ಅಕ್ಷರಸ್ಥರಾಗಿಬಹುದು ಆದರೆ ಅವಿದ್ಯಾವಂತರು. ಹಳ್ಳಿಹಳ್ಳಿಗೆ ಹೋಗಿ ಸರ್ವೇ ಮಾಡಿದ್ದೀರಾ? ಬೀಸುವಾಗ, ಭತ್ತ ಕುಟ್ಟುವಾಗ, ಸೋಬಾನೆ ಹಾಡುವಾಗ, ಮಗುವನ್ನು ತೂಗುವಾಗ- ಗಮನಿಸಿದ್ದೀರಾ? ಅವರೆಲ್ಲರೂ ನಿಮಗೆ ಜನಪದರಲ್ಲವಾ? ನಗರದಲ್ಲಿ ಹಾಡುವವರು ಮಾತ್ರವೇ ಜನಪದರೆಂದು ತಿಳಿದಿದ್ದಾರಾ? ಸಮಗ್ರ ಜನಪದ ಜೀವನ ಇದೆಯಲ್ಲ ಅದೆಲ್ಲವೂ ಒಂದು ವಿದ್ಯೆ. ಅದು ಅನಕ್ಷರಸ್ಥ ವಿದ್ಯೆ. ಕಸಾಪ ತರಲು ಹೊರಟಿರುವ ಬೈಲಾ ಎಲ್ಲಾ ಜನವರ್ಗವನ್ನು ಒಳಗೊಳ್ಳಲಿ” ಎಂದು ಆಶಿಸಿದರು.

ತಿದ್ದುಪಡಿ ಕೈಬಿಡಲಿ: ಎಸ್.ಸಿ.ದಿನೇಶ್‌ಕುಮಾರ್

ಎಸ್.ಸಿ.ದಿನೇಶ್‌ಕುಮಾರ್

ಕನ್ನಡಪರ ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಎಸ್.ಸಿ. ದಿನೇಶ್ ಕುಮಾರ್ ಮಾತನಾಡಿ, “ಅನಕ್ಷರಸ್ಥರನ್ನು ಸಾಹಿತ್ಯ ಪರಿಷತ್ ಸದಸ್ಯ ಸ್ಥಾನದಿಂದ ಹೊರಗಿಡುವ ಮಾತುಗಳು ಆಘಾತಕಾರಿ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ಜಾನಪದ ಕವಿಗಳು. ಅವರು ಓದು ಬರೆಹ ಕಲಿತವರಲ್ಲ. ಜಾನಪದ ಗೀತೆ, ಕಾವ್ಯ, ಕಥೆ, ಲಾವಣಿಗಳನ್ನು ಹಾಡಿ ಜನಪ್ರಿಯಗೊಳಿಸಿದವರು ಜಾನಪದ ಕಲಾವಿದರು. ಅವರೂ ಸಹ ಓದು ಬರೆಹ ಕಲಿತವರಲ್ಲ. ಇವರೆಲ್ಲರನ್ನು ಬಿಟ್ಟು ಕನ್ನಡ ಸಾಹಿತ್ಯವೂ ಇಲ್ಲ, ಕನ್ನಡವೂ ಇಲ್ಲ. ಕನ್ನಡ ಸಾಹಿತ್ಯ ಪರಿಷತ್ ಬೈಲಾ ಬದಲಾವಣೆಯ ಆತುರದಲ್ಲಿ ಇಂಥ ನಿರ್ಧಾರಗಳನ್ನು ಕೈಬಿಡಲಿ” ಎಂದು ಆಗ್ರಹಿಸಿದರು.

ತಂತ್ರಜ್ಞಾನ ಅಡವಡಿಕೆಗೆ ವಿರೋಧವಿಲ್ಲ: ರಾಮಣ್ಣ

ಬೆಂಗಳೂರು ನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಕೋಡಿಹೊಸಹಳ್ಳಿ ರಾಮಣ್ಣ ಎಲ್ಲಾ ಜಿಲ್ಲಾ ಕಸಾಪ ಅಧ್ಯಕ್ಷರಿಗೆ ಪತ್ರವನ್ನು ಬರೆದು ತಿದ್ದುಪಡಿ ಬೈಲಾದಲ್ಲಿನ ಅಂಶಗಳತ್ತ ಗಮನ ಸೆಳೆದಿದ್ದಾರೆ. “ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಯಾರದೂ ವಿರೋಧ ಇರಲಾರದು. ಆದರೆ ಕೇಂದ್ರ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುವುದಕ್ಕೆ ಎಡೆಮಾಡಿ ಕೊಡುವ ಯಾವ ತಿದ್ದುಪಡಿಗೂ ಜಿಲ್ಲಾ, ಗಡಿನಾಡು ಅಧ್ಯಕ್ಷರು ಸಮ್ಮತಿ ನೀಡಬಾರದು” ಎಂದು ಒತ್ತಾಯಿಸಿದ್ದಾರೆ.

ಕೋಡಿಹೊಸಹಳ್ಳಿ ರಾಮಣ್ಣ

ಕೊನೆಯದಾಗಿ, ಹೆಸರು ಹೇಳಲಿಚ್ಛಿಸದ ಕಸಾಪ ಉನ್ನತ ಸ್ಥಾನದಲ್ಲಿದ್ದವರೊಬ್ಬರು ಹೇಳಿದ್ದು ಹೀಗೆ: “ದೇಶವನ್ನು ಕಾಪಾಡಿರೋದು ಈ ಹೆಬ್ಬೆಟ್ಟುಗಳು. ಅಕ್ಷರ ಕಲಿತವರಿಗಿಂತ ಹೆಬ್ಬೆಟ್ಟಿನವರೇ ಹೆಚ್ಚು ಪ್ರಾಮಾಣಿಕರು. ದೇಶವನ್ನು ಉಳಿಸಿದವರು, ಕನ್ನಡ ಉಳಿಸಿದವರು, ಹೆಬ್ಬೆಟ್ಟುಗಳೇ. ಅವರ ಕುರಿತು ಹಗುರವಾಗಿ ಮಾತನಾಡಬಾರದು” ಎಂದು ಎಚ್ಚರಿಸಿದರು.

***

ಕಸಾಪ ಹೇಳುವುದೇನು? ಅಧ್ಯಕ್ಷರು ಪ್ರತಿಕ್ರಿಯೆ ಏನು?

ಬೈಲಾ ಸಂಬಂಧಿಸಿದಂತೆ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಫೆಬ್ರುವರಿ 17ರಂದು ಕಸಾಪ ಸಭೆಯನ್ನು ನಡೆಸಿದೆ. ಅನೇಕರು ಇಲ್ಲಿ ಪಾಲ್ಗೊಂಡಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ್ದು, “ಈ ಮಹತ್ವದ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಪರಿವರ್ತನೆ ತರುವ ಸಂದರ್ಭದಲ್ಲಿ ಕೆಲವರ ವಿರೋಧಗಳು ಸಹಜವಾಗಿದ್ದು, ಪರಿಷತ್ತಿನ ಮೂಲೋದ್ದೇಶಗಳಿಗೆ ಯಾವ ಧಕ್ಕೆಯೂ ಬಾರದಂತೆ ರೂಪಿಸಲಾಗಿರುವ ಈ ತಿದ್ದುಪಡಿಗಳನ್ನು, ಆಮೂಲಾಗ್ರ ಬದಲಾವಣೆಗಳನ್ನು ಜಾರಿಗೆ ತಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊಸ ಹೊಸ ಕಾರ್ಯಯೋಜನೆಗಳನ್ನು ಕಾರ್ಯಗತಗೊಳಿಸುವ ತಮ್ಮ ಸದುದ್ದೇಶ ಯಶಸ್ವಿಯಾಗಲಿ ಎಂದು ಸಭೆ ಒಮ್ಮತದಿಂದ ತೀರ್ಮಾನಿಸಿತು” ಎಂದು ತಿಳಿಸಲಾಗಿದೆ.

“ಸದಸ್ಯತ್ವಕ್ಕೆ ನಿಗದಿಪಡಿಸಿರುವ ಶೈಕ್ಷಣಿಕ ಮಾನದಂಡಗಳಿಗೆ ಸಂಬಂಧಿಸಿದಂತೆ ಜಾನಪದ, ರಂಗಭೂಮಿ, ಚಿತ್ರಕಲಾ, ಕರಕುಶಲ ಕಲಾವಿದರನ್ನು ವಿಶೇಷವಾಗಿ ಪರಿಗಣಿಸಿ ಅವರುಗಳಿಗೆ ಶೈಕ್ಷಣಿಕ ಮಾನದಂಡಗಳಿಗೆ ವಿನಾಯಿತಿ ನೀಡಬೇಕು. 45 ವರ್ಷ ಕೆಳಗಿನ ವಯಸ್ಸಿನವರಿಗೆ ಮಾತ್ರ ಈ ನಿಯಮವನ್ನು ಜಾರಿಗೆ ತರಬೇಕು. ಜೊತೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಜಾನಪದ, ರಂಗಭೂಮಿ ಕಲಾವಿದರು ಸದಸ್ಯತ್ವ ನೋಂದಾಯಿಸಿಕೊಳ್ಳಲು ಆಹ್ವಾನಿಸಬೇಕೆಂದು ಜಾನಪದ ವಿದ್ವಾಂಸರು, ಸಂಸ್ಕೃತಿ ಚಿಂತಕರು ಸಲಹೆ ನೀಡಿದ್ದಾರೆ” ಎಂದು ಪತ್ರಿಕಾ ಪ್ರಕಟಣೆ ಹೇಳುತ್ತಿದೆ.

ಮಹೇಶ್ ಜೋಶಿಯವರು ’ಪ್ರಜಾವಾಣಿ’ಯಲ್ಲಿ ಬರೆದ ಲೇಖನದಲ್ಲಿ, “1915ರಲ್ಲಿ ಕಸಾಪ ರಚನೆಯಾಗಿದ್ದಾಗ ಇದ್ದ ನಿಯಮಗಳು ಅಂದಿನ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಜೀವನ ಶೈಲಿಗೆ ಅನುಗುಣವಾಗಿದ್ದವು. 1915ರಿಂದ 2022ರ ನಡುವೆ ಅಗಾಧವಾದ ಅಂತರವಿದೆ” ಎನ್ನುತ್ತಾರೆ. ಮತ್ತೊಂದೆಡೆ, “ಕಸಾಪ ಸದಸ್ಯರಾಗಬಯಸುವವರು 18 ವರ್ಷ ವಯೋಮಾನದವರಾಗಿರಬೇಕು ಹಾಗೂ ಕನ್ನಡ ಓದು, ಬರಹ ಬಲ್ಲವರಾಗಿರಬೇಕು ಎಂಬುದನ್ನು ಕಸಾಪ ಸ್ಥಾಪನಾ ಕಾಲವಾದ 1915ರ ನಿಬಂಧನೆಗಳು ಸ್ಪಷ್ಟಪಡಿಸಿವೆ” ಎನ್ನುತ್ತಾರೆ. ವಿಕೇಂದ್ರೀಕರಣ ವ್ಯವಸ್ಥೆಯನ್ನು ಒಡೆದುಹಾಕುತ್ತಿರುವ ಸಂಬಂಧ ಅವರು ಯಾವುದೇ ಮಾತನಾಡುವುದಿಲ್ಲ.

’ನ್ಯಾಯಪಥ’ದೊಂದಿಗೆ ಮಾತನಾಡಿದ ಡಾ.ಮಹೇಶ್ ಜೋಶಿಯವರು, “ಬೈಲಾ ಟೀಕಿಸುವವರು ಸರಿಯಾಗಿ ಬೈಲಾವನ್ನು ಓದಿಲ್ಲ. ಕಸಾಪ ಸಭೆಗೆ ಬಂದಿದ್ದವರೆಲ್ಲ ಬೈಲಾವನ್ನು ಒಪ್ಪಿದ್ದಾರೆ. ಕಸಾಪ ರಾಜ್ಯಾಧ್ಯಕ್ಷರಿಗೆ ಎಲ್ಲರೂ ಮತ ಹಾಕುತ್ತಾರೆ. ಹೀಗಾಗಿ ನನಗೆ ಜವಾಬ್ದಾರಿಗಳಿರುತ್ತವೆ. ಕೆಲವರು ಪೋಸ್ಟ್ ಆಫೀಸರ್ ರೀತಿ ಕೆಲಸ ಮಾಡುತ್ತಾರೆ. ನಾನು ಪರಿಶೀಲನೆ ಮಾಡ್ತೀನಿ ಅನ್ನೋದು ಸರ್ವಾಧಿಕಾರ ಅನ್ನಲು ಸಾಧ್ಯವಾಗುತ್ತದಾ?” ಎಂದು ಪ್ರಶ್ನಿಸಿದರು.

ಅನಕ್ಷರಸ್ಥರನ್ನು ಹೊರಗಿಡುತ್ತಿರುವುದನ್ನು ಪ್ರಶ್ನಿಸಿದಾಗ, “ಕಸಾಪ ಚುನಾವಣೆಗೆ ಬರುವ ಅನೇಕರಿಗೆ ಕನ್ನಡ ಬರಲ್ಲ. ಅವರ ಮಾತೃಭಾಷೆಯೂ ಕನ್ನಡವಾಗಿರುವುದಿಲ್ಲ. ಸಾಹಿತ್ಯ ಪರಿಷತ್ ಎಂದರೆ ಏನೆಂಬುದೇ ಅವರಿಗೆ ಗೊತ್ತಿಲ್ಲ. ಅಂಥವರಿಂದ ಕನ್ನಡ ಉದ್ಧಾರವಾಗುತ್ತದೆಯೇ?” ಎಂದು ಮರುಪ್ರಶ್ನಿಸಿದರು.

ಕರ್ನಾಟಕದಲ್ಲಿ ಹತ್ತು ಹಲವು ಭಾಷೆಗಳಿವೆ. ಎಷ್ಟೋ ಜನರಿಗೆ ’ಮಾತೃಭಾಷೆ’ ಎಂಬುದೇನು ಅಥವಾ ತಾವು ಮಾತನಾಡುತ್ತಿರುವುದಕ್ಕೆ ಮಾತೃಭಾಷೆ ಎನ್ನುತ್ತಾರೆ ಎಂಬುದು ಕೂಡ ತಿಳಿದಿರುವುದಿಲ್ಲ. ಹಾಗೆಂದ ಮಾತ್ರಕ್ಕೆ ಅದು ಅವರ ತಪ್ಪೇನು ಅಲ್ಲ. ಕರ್ನಾಟಕದಲ್ಲಿ ನೆಲೆಸಿರುವ ಅಂತಹ ಸಾಮಾನ್ಯ ಜಾನಪದರ ಹಿತವನ್ನೂ ಕಾಯುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆಯದ್ದಾಗಿರಬೇಕು. ಇನ್ನು ಕರ್ನಾಟಕದಲ್ಲಿ ಬದುಕಿರುವ ಪ್ರತಿಯೊಬ್ಬನಲ್ಲಿಯೂ/ಳಲ್ಲಿಯೂ ಜಾನಪದ ಅಂಶ ಇದ್ದೇ ಇರುತ್ತದೆ. ಸಾಹಿತ್ಯ ಮೂಲ ಧಾತು ಆ ಜಾನಪದವೇ. ಅದು ಅಕ್ಷರರೂಪದಲ್ಲಿ ಇಂದು ಬೆಳೆದಿರಬಹುದಷ್ಟೇ. ಆದರೆ ಅಕ್ಷರ ಬರೆಯುವುದು ಓದುವುದು ಮಾತ್ರ ಜಾನಪದವಲ್ಲ. ಸಾಹಿತಿಗಳು, ಸಾಹಿತ್ಯ ಇಂತಹ ಜಾನಪದದಿಂದ ಗಳಿಸಿರುವುದೇ ಹೆಚ್ಚು. ಆದುದರಿಂದ ಅಕ್ಷರ ಓದುವ-ಬರೆಯುವ ಮಾನದಂಡದ ಮೂಲಕ ಸಾಹಿತ್ಯ ಪರಿಷತ್ ಸದಸ್ಯತ್ವವನ್ನು ನಿರಾಕರಿಸುವುದು ನಾಡಿನ ಶ್ರೀಸಾಮಾನ್ಯನಿಗೆ ಮಾಡುವ ಅವಮಾನ. ಇದನ್ನು ಎಲ್ಲರೂ ದಿಟ್ಟವಾಗಿ ವಿರೋಧಿಸಬೇಕಿದೆ ಎಂಬುದು ಲಕ್ಷಾಂತರ ಪ್ರಜ್ಞಾವಂತ ನಾಗರಿಕರ ಧ್ವನಿಯಾಗಿದೆ.


ಇದನ್ನೂ ಓದಿ: ಕಸಾಪ ನೂತನ ಅಧ್ಯಕ್ಷರಾದ ಮಹೇಶ್‌ ಜೋಶಿ ಬಿಜೆಪಿ ಬೆಂಬಲಿತರು ಎಂಬುದಕ್ಕೆ ಇಲ್ಲಿದೆ ಪುರಾವೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...