Homeಮುಖಪುಟ90ರ ದಶಕದ ರಾಜಕೀಯ ಬೆಳವಣಿಗೆಗಳು ಮತ್ತು ರೈತರು

90ರ ದಶಕದ ರಾಜಕೀಯ ಬೆಳವಣಿಗೆಗಳು ಮತ್ತು ರೈತರು

- Advertisement -
- Advertisement -

80ರ ದಶಕದಲ್ಲಿ ಹುಟ್ಟಿ ಅಬ್ಬರಿಸಿದ ರೈತ ಚಳವಳಿಗಳೆಲ್ಲ 90ರ ದಶಕದಲ್ಲಿ ಇಳಿಮುಖವಾಗತೊಡಗಿದವು. ಕರ್ನಾಟಕ ರಾಜ್ಯ ರೈತ ಸಂಘದ ಇಳಿಮುಖವೂ ಈ ಪ್ರಕ್ರಿಯೆಯ ಅವಿಭಾಜ್ಯ ಅಂಗ. 80ರ ದಶಕದಲ್ಲಿ ಈ ಎಲ್ಲ ಚಳವಳಿಗಳ ಹುಟ್ಟನ್ನು 70ರ ದಶಕದ ಬೆಳವಣಿಗೆಗಳ ಹಿನ್ನೆಲೆಯಲ್ಲಿಯೇ ಅರ್ಥೈಸಬೇಕು. ಈ ಚಳವಳಿಗಳ ಬೆಳವಣಿಗೆಯನ್ನು ಅರ್ಥೈಸಲು 80ರ ದಶಕದ ರಾಜಕೀಯ, ಆರ್ಥಿಕ ಹಾಗೂ ಕೃಷಿ ನೀತಿಗಳ ಹಿನ್ನೆಲೆ ಅವಶ್ಯ. ಹಾಗೆಯೇ ಈ ಚಳವಳಿಗಳ ಇಳಿಮುಖವನ್ನೂ 90ರ ದಶಕದ ರಾಜಕೀಯ, ಆರ್ಥಿಕ, ಕೃಷಿ ನೀತಿಗಳು, ಅವುಗಳಿಂದಾಗಿ ರೈತ ಮನಸ್ಥಿತಿಯಲ್ಲಾದ ಬದಲಾವಣೆಯಲ್ಲಿಯೇ
ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಈ ಚಳವಳಿಗಳ ನಾಯಕರ ವೈಯಕ್ತಿಕ ಗುಣಾವಗುಣಗಳು ಇಳಿಮುಖತೆಗೆ ಕೊಡುಗೆ ನೀಡಿವೆ. ಆದರೆ ಈ ನಾಯಕರ ವಿಭಿನ್ನ ವ್ಯಕ್ತಿತ್ವ, ವಿಭಿನ್ನ ಗುಣಾವಗುಣಗಳು ಈ ಇಳಿಮುಖವನ್ನು ತಡೆಯಲು ಸಹಾಯವಾಗಲಿಲ್ಲ. ಆದ್ದರಿಂದ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಬೇಕಾದರೆ 90ರ ದಶಕದ ಹಿನ್ನೆಲೆ ಅಗತ್ಯ.

ಕರಾಳ ಅಧ್ಯಾಯ

90ರ ದಶಕ ದೇಶದ ಚರಿತ್ರೆಯಲ್ಲಿ ಒಂದು ಬಹು ದೊಡ್ಡ ಕರಾಳ ಅಧ್ಯಾಯ. ಈ ದಶಕದ ಆರಂಭದಲ್ಲೇ ಅತಂತ್ರದ ಚಂದ್ರಶೇಖರ್ ಸರ್ಕಾರ ರಿಸರ್ವ್ ಬ್ಯಾಂಕ್ ಸುಪರ್ದಿನಲ್ಲಿದ್ದ ಚಿನ್ನವನ್ನು ತರಾತುರಿಯಲ್ಲಿ ಅಡವಿಟ್ಟ ದುರ್ನೀತಿಗೆ ನಾಂದಿ ಹಾಡಿದ್ದು ಮತ್ತು ರಾಜೀವ್ ಗಾಂಧಿಯ ಕೊಲೆ ಎಂಬ ದುರ್ಘಟನೆ ನಡೆದದ್ದು. ನಂತರದಲ್ಲಿ ಒಂದು ಕಡೆ ಮತ್ತೆ ದೊಡ್ಡ ಮೊತ್ತದ ಐಎಂಎಫ್ ಸಾಲ, ಭಾರತದ ಆರ್ಥಿಕ ಸಾರ್ವಭೌಮತ್ವಕ್ಕೆ ಧಕ್ಕೆ, ದೇಶದ ಕೃಷಿ, ಕೈಗಾರಿಕೆಗಳಿಗೆ ವಿದೇಶಿ ಆಮದುಗಳಿಂದ ರಕ್ಷಣೆ ಎಂಬ ಕೋಟೆಯ ನಾಶ, ಮತ್ತೊಂದು ಕಡೆ ಬಾಬರಿ ಮಸೀದಿಯ ನಾಶದೊಂದಿಗೆ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಆಘಾತ, ಕೋಮು ದಂಗೆಗಳು ಮತ್ತು ಭಯೋತ್ಪಾದಕ ಹತ್ಯೆಗಳ ಸರಮಾಲೆ.

ಮೊಟ್ಟಮೊದಲ ಬಿಜೆಪಿ ಸರ್ಕಾರ ರಚನೆ. ಸ್ವಾತಂತ್ರ್ಯ ಸಮಯದ ಕೋಮುದಂಗೆಯ ಸಾವುಗಳ ಭೀಕರತೆಯನ್ನು ಮತ್ತೆ ನೆನಪಿಗೆ ತಂದ ಗುಜರಾತ್ ನರಮೇಧಕ್ಕೆ ಅಡಿಪಾಯ. ಈ ದಶಕದಲ್ಲಿಯೇ ಪ್ರಾದೇಶಿಕ ಪಕ್ಷಗಳು ಹಲವು ರಾಜ್ಯಗಳಲ್ಲಿ ಗೆದ್ದು ತಮ್ಮ ರಾಜಕೀಯ ಪ್ರಭಾವವನ್ನು ಹೆಚ್ಚಿಸಿಕೊಂಡವು. ಅವು ಕೇಂದ್ರದ ಸಂಯುಕ್ತ ರಂಗ ಸರ್ಕಾರದಲ್ಲಿ ಪ್ರಧಾನ ಪಾತ್ರ ವಹಿಸಿದವು.

ಜಾಗತಿಕ ವಿದ್ಯಮಾನಗಳು

ಜಾಗತೀಕರಣ ಎಂದಕೂಡಲೇ ಜಗತ್ತಿನ ವಿದ್ಯಮಾನಗಳ ಮುಖ್ಯ ಪಾತ್ರ ಮತ್ತು ಅದರ ಜೊತೆಗೆ ಹೆಣೆದುಕೊಂಡ ಪರಿಣಾಮಗಳು ಮುಖ್ಯವಾಗುತ್ತವೆ. ಈ ಹಿನ್ನೆಲೆಯಲ್ಲಿ ಅಂದಿನ ವಿಶ್ವಮಟ್ಟದ ಬೆಳವಣಿಗೆಗಳನ್ನು ಗಮನಿಸಬೇಕು.

ಜಾಗತೀಕರಣದ ಆಘಾತಕ್ಕೆ ತುತ್ತಾದ ದೇಶ ಕೇವಲ ಭಾರತ ಮಾತ್ರವೇ ಆಗಿರಲಿಲ್ಲ. ಮೂರನೇ ಜಗತ್ತಿನ ಹಲವು ದೇಶಗಳು ಆರ್ಥಿಕ ಬಿಕ್ಕಟ್ಟಿನೊಳಗೆ ಸಿಲುಕಿ ವಿಲವಿಲನೆ ಒದ್ದಾಡಲಾರಂಭಿಸಿದವು. ಅಮೆರಿಕ ಮತ್ತು ಯುರೋಪಿನ ಸಾಮ್ರಾಜ್ಯಶಾಹಿ ದೇಶಗಳೊಡನೆ ಮೂರನೇ ದೇಶಗಳ ವಾಣಿಜ್ಯ ವ್ಯವಹಾರಗಳಲ್ಲಿ 80ರ ದಶಕದಲ್ಲಿಯೇ ಆರಂಭವಾದ ಬಹು ದೊಡ್ಡ ಅಸಮಾನತೆಯೇ ಇದಕ್ಕೆ ಮೂಲ ಕಾರಣ.

ಅಮೆರಿಕ ಮೊದಲಾದ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಕೈಗಾರಿಕೆ ಹಾಗೂ ಹೊಸ ತಂತ್ರಜ್ಞಾನದ ವಸ್ತುಗಳ ಬೆಲೆ ಹೆಚ್ಚಾಯಿತು. ಮೂರನೇ ಜಗತ್ತಿನ ಕೃಷಿ, ಗಣಿ ಮತ್ತು ಪಾರಂಪರಿಕ ಕುಶಲ ಕರ್ಮದ ಉತ್ಪನ್ನಗಳ ಬೆಲೆಯನ್ನು ಕುಗ್ಗಿಸಲಾಯಿತು. ಇದರ ಪರಿಣಾಮ ಮೂರನೇ ಜಗತ್ತಿನ ದೇಶಗಳಿಗೆ ವಿದೇಶಿ ವಿನಿಮಯದ ಕೊರತೆಯಾಗಿ ಅವು ಭಾರತದಂತೆಯೇ ಐಎಂಎಫ್ ಕಡೆಗೆ ಸಾಲಕ್ಕೆ ಕೈ ಚಾಚಿದವು. ಅವುಗಳ ಈ ದುಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಮೂರನೇ ಜಗತ್ತಿನ ದೇಶಗಳ ಮೇಲೆ ಒಂದಾದ ಮೇಲೊಂದರಂತೆ ಜಾಗತೀಕರಣದ ಷರತ್ತುಗಳನ್ನು ಹೇರಲಾಯಿತು.

ಇದೇ ಸಮಯದಲ್ಲಿ 80ರ ದಶಕದ ಕೊನೆಯಿಂದ ಆರಂಭಿಸಿ 1991ರವರೆಗೆ ಸೋವಿಯತ್ ರಷ್ಯಾವೂ ಸೇರಿದಂತೆ ಸಮಾಜವಾದಿ ದೇಶಗಳು ಕುಸಿದು ಹೋದವು. ಅಮೆರಿಕ ಮತ್ತು ಯುರೋಪಿನ ಬೃಹತ್ ಕಾರ್ಪೊರೇಟ್‌ಗಳು ಈ ದೇಶಗಳ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡು ಬಲಕಾಯಿಸಿದವು. ವಿಶ್ವದಲ್ಲಿ ಸಾಮ್ರಾಜ್ಯಶಾಹಿ ದೇಶಗಳಿಗೆ ಎದುರಾಳಿಗಳೇ ಇಲ್ಲದಂತಾಯಿತು. ಸಾರ್ವಜನಿಕ ರಂಗ ಪ್ರಧಾನತೆಯ ಕೈಗಾರಿಕೆ, ಬ್ಯಾಂಕುಗಳು, ವಿಮೆ, ಶಿಕ್ಷಣ, ಆರೋಗ್ಯ, ಸಾರಿಗೆ, ಸಂಚಾರ ವ್ಯವಸ್ಥೆಯನ್ನು ರೂಪಿಸಿದ್ದ ಸಮಾಜವಾದಿ ದೇಶಗಳ ಕುಸಿತ ಇಡೀ ವಿಶ್ವದಲ್ಲಿ ಖಾಸಗಿ ಶ್ರೇಷ್ಠತೆಯನ್ನು ಒಂದು ಪ್ರಬಲ ಸಿದ್ಧಾಂತವಾಗಿ ಪ್ರತಿಪಾದಿಸಲು ಹಾಗೂ ಹೇರಲು ನೆಪವಾಯಿತು. ಕಾರ್ಪೊರೆಟ್‌ಗಳು ತಮ್ಮ ಮನಸ್ಸಿಗೆ ಬಂದಂತೆ ವ್ಯವಹಾರ ನಡೆಸುವ ಸ್ವಾತಂತ್ರ್ಯವನ್ನು ಮೊಟಕು ಮಾಡಿ ಜನರ ಕಲ್ಯಾಣದ ನಿರ್ದಿಷ್ಟ ಗುರಿಗಳಿಗನುಸಾರವಾಗಿ ರೂಪಿಸಿದ ಯೋಜನೆಗಳ ಅಧೀನದಲ್ಲಿ ತಮ್ಮ ವ್ಯವಹಾರ ನಡೆಸಬೇಕಾದ ಅನಿವಾರ್ಯತೆಯನ್ನು ಕಿತ್ತುಹಾಕಿತು.

ಈ ಅವಕಾಶವನ್ನು ಬಳಸಿಕೊಂಡ ಅಮೆರಿಕ ಮೂರನೇ ಜಗತ್ತಿನ ಮೇಲೆ ಆರ್ಥಿಕ ಹಿಡಿತ ಪಡೆಯುವುದು ಮಾತ್ರವಲ್ಲದೆ ಅವುಗಳನ್ನು ಅಧೀನಮಾಡಿಕೊಳ್ಳುವ ದುಷ್ಟ ನೀತಿಗೆ ಕೈ ಹಾಕಿತು. ಪನಾಮಾ ದೇಶದ ಮೇಲೆ ಆಕ್ರಮಣ, ಇರಾಕ್ ಮೇಲೆ ಆಕ್ರಮಣ ಈ ದಶಕದಲ್ಲಿನ ಜ್ವಲಂತ ಉದಾಹರಣೆಗಳು.

ಮುಂದಿನ ಅವಧಿಯಲ್ಲಿ ಆಫ್ಘಾನಿಸ್ತಾನ, ಲಿಬಿಯಾ ಮತ್ತಿತರ ದೇಶಗಳ ಆಕ್ರಮಣ, ಇನ್ನೂ ಅನೇಕ ದೇಶಗಳಲ್ಲಿ ಸರ್ಕಾರಗಳನ್ನೇ ಉರುಳಿಸುವುದು ಅಮೆರಿಕದ ನೀತಿಯ ಭಾಗವಾಯಿತು. ಅಮೆರಿಕ, ಯುರೋಪಿನ ಕಾರ್ಪೊರೆಟ್‌ಗಳು ಆ ದೇಶಗಳ ಸಂಪತ್ತು, ಕೃಷಿ ಭೂಮಿ ಮತ್ತು ಬೆಳೆಗಳನ್ನು ತಮ್ಮ ಅತಿಲಾಭದ ಗಳಿಕೆಗೆ ಸಾಧನಗಳನ್ನಾಗಿಸಿಕೊಂಡವು.

ರೈತ ಚಳವಳಿಗಳ ಮೇಲೆ ಪರಿಣಾಮ

ಈ ಎಲ್ಲ ಘಟನೆಗಳು 90ರ ದಶಕದಲ್ಲಿ ರೈತ ಚಳವಳಿಗಳ ಮೇಲೆ ಬಹು ದೊಡ್ಡ ಪರಿಣಾಮ ಬೀರಿದವು. ಅಂದಿನಿಂದ ಇಂದಿನವರೆಗೂ ಜನತೆ ಈ ಜಾಗತೀಕರಣ ಮತ್ತು ಕೋಮುದ್ವೇಷದ ನೀತಿಗಳಿಗೆ ಇರುವ ತಮ್ಮ ಅಸಮ್ಮತಿ ಮತ್ತು ವಿರೋಧವನ್ನು, ಹೋರಾಟಗಳು, ಬೃಹತ್ ಮುಷ್ಕರಗಳೂ ಸೇರಿದಂತೆ ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ತಮ್ಮ ಮತದಾನದ ಹಕ್ಕನ್ನು ಬಳಸಿಕೊಂಡು ಪ್ರತಿ ಚುನಾವಣೆಯ ನಂತರವೂ ಹಿಂದಿನ ಸರ್ಕಾರಗಳನ್ನು ಎರಡು ಬಾರಿಗೆ ಮೀರದಂತೆ ಸೋಲಿಸುತ್ತಾ ಬಂದಿದ್ದಾರೆ. ಆದರೂ, ಈ ಅತೃಪ್ತಿಯ, ಸಿಟ್ಟಿನ ಫಲವಾಗಿ ಅಧಿಕಾರಕ್ಕೆ ಬಂದ ಯಾವುದೇ ಪಕ್ಷ, ಪಕ್ಷಗಳ ಸರ್ಕಾರಗಳು ಭಾರತ ಸರ್ಕಾರದ ಈ ದುರ್ನೀತಿಗಳನ್ನು ಬದಲಾವಣೆ ಮಾಡಲಿಲ್ಲ ಮಾತ್ರವಲ್ಲ, ಈ ಹಾನಿಕರ ನೀತಿಗಳು ಹೆಚ್ಚುಹೆಚ್ಚು ಬಲಗೊಳ್ಳುವಂತೆ ನೋಡಿಕೊಂಡವು. 90ರ ದಶಕ ಮತ್ತು ನಂತರದ ರೈತ ಚಳವಳಿಗಳ ಬಲಹೀನತೆ ಈ ಸಮಸ್ಯೆಗೆ ದೊಡ್ಡ ಕೊಡುಗೆ ಕೊಟ್ಟಿದೆ.

ಈ ದಶಕದಲ್ಲಿ ರಾಜ್ಯದಲ್ಲಿ ಬಂಗಾರಪ್ಪ, ಮೊಯಿಲಿ ನೇತೃತ್ವದ ಕಾಂಗ್ರೆಸ್ ಸರ್ಕಾರಗಳು, ನಂತರ 1994ರಲ್ಲಿ ಕಾಂಗ್ರೆಸ್ ಸೋತು ಜನತಾ ದಳದ ಗೆಲುವು. 94-96ರಲ್ಲಿ ಪ್ರಧಾನ ಮಂತ್ರಿಯಾಗುವವರೆಗೆ ಅಲ್ಪ ಕಾಲದವರೆಗೆ ದೇವೇಗೌಡರ, ನಂತರ ಜೆ.ಎಚ್.ಪಟೇಲರ ಸರ್ಕಾರ. 1999ರಲ್ಲಿ ಮತ್ತೆ ಕಾಂಗ್ರೆಸ್ ಗೆಲುವು, ಎಸ್.ಎಂ.ಕೃಷ್ಣ ಸರ್ಕಾರ ಅಸ್ತಿತ್ವಕ್ಕೆ ಬಂದವು.

ಬಾಬರಿ ಮಸೀದಿ ನಾಶದ ನಂತರದ ಕೋಮು ದಂಗೆಗಳು, ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ, ಅದರ ಪರಿಹಾರ, ಕಾಂಗ್ರೆಸ್‌ನಲ್ಲಿ ಅತೀವ ಗುಂಪುಗಾರಿಕೆಯಿಂದ ಪದೇಪದೇ ಮುಖ್ಯಮಂತ್ರಿಗಳ ಬದಲಾವಣೆ, ಜನತಾದಳದಲ್ಲಿ ಮತ್ತೆಮತ್ತೆ ಒಡಕಾಗಿ ಉತ್ತರ ಕರ್ನಾಟಕ ಬಿಜೆಪಿಯ ತೆಕ್ಕೆಗೆ ಸರಿದದ್ದು – ಇವೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ, ರೈತ ಸಮುದಾಯದ ಮನಸ್ಥಿತಿಯಲ್ಲಿ ಆದ ಹಾನಿಕರ ಬದಲಾವಣೆಗೆ ಕಾರಣವಾಯಿತು.

ಈ ಬೆಳವಣಿಗೆಗಳು ಕರ್ನಾಟಕದ ರೈತ ಚಳವಳಿಗಳ ಮೇಲೆ ಗಣನೀಯ ಪರಿಣಾಮ ಬೀರಿವೆ. ಅದೇ ಸಮಯದಲ್ಲಿ ರಾಜ್ಯ ರೈತ ಸಂಘದ ಇಳಿಮುಖ ಬೆಳವಣಿಗೆ ಮತ್ತು ಒಡಕುಗಳು ಈ ಹಾನಿಕರ ಬೆಳವಣಿಗೆಗೆ ಕೊಡುಗೆ ನೀಡಿವೆ.

ಆರ್ಥಿಕ ಸಾರ್ವಭೌಮತೆಯ ನಾಶ

1981ರಲ್ಲಿ ಇಂದಿರಾ ಸರ್ಕಾರ ತೆಗೆದುಕೊಂಡ ಐಎಂಎಫ್ ಸಾಲವೇ 1991ರಲ್ಲಿ ಮತ್ತೆ ಐಎಂಫ್ ಕೈಗೆ ಜುಟ್ಟು ಕೊಟ್ಟ ಸಮಸ್ಯೆಗೆ ಕಾರಣವಾಯಿತು. 500 ಮಿಲಿಯನ್ ಡಾಲರುಗಳಷ್ಟು ಬೃಹತ್ ಮೊತ್ತದ ಸಾಲಕ್ಕೆ ಕೈ ಚಾಚಿಸಲಾಯಿತು. ಇದು ಭಾರತವನ್ನು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಸಾಲಗಾರ ದೇಶವನ್ನಾಗಿಸಿತು. 1981ರ ಸಾಲದ ಷರತ್ತುಗಳು ಮತ್ತು ಈ ಸಾಲದ ಷರತ್ತುಗಳು ಮತ್ತು ಅದರ ಪರಿಣಾಮಗಳು ಮುಂದೆ ಕೇವಲ ಮಕ್ಕಳಾಟ ಎಂಬಂತೆ ಆಯಿತು. ಏಕೆಂದರೆ ಇವು ಕೇವಲ ಸಾಲದ ಷರತ್ತುಗಳಾಗಿರದೆ ಇಡೀ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಗೆ ಕೊಡಲಿ ಪೆಟ್ಟು ಹಾಕಿ ಇದುವರೆಗೂ ಅನುಸರಿಸಿಕೊಂಡು ಬಂದಿದ್ದ ಅರೆಬರೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ಸಾರ್ವಜನಿಕ ರಂಗದ ಪಾತ್ರವನ್ನು ಕಿತ್ತೆಸೆದು ಜಾಗತೀಕರಣ, ಖಾಸಗೀಕರಣ, ಉದಾರಿಕರಣ ಯುಗವನ್ನೇ ಉದ್ಘಾಟನೆ ಮಾಡಿತು.

ಹೊಸ ಆರ್ಥಿಕ ನೀತಿ, ತೆರೆದ ಬಾಗಿಲ ನೀತಿ ಎಂಬ ಹೆಸರಿನಲ್ಲಿ ಕೈಗಾರಿಕಾ ನೀತಿ, ಕೃಷಿ ನೀತಿ, ಬೀಜನೀತಿ, ಆಮದು ರಫ್ತು ನೀತಿ, ಬ್ಯಾಂಕ್ ನೀತಿ, ತೆರಿಗೆ ನೀತಿ, ವಿದೇಶಿ ಬಂಡವಾಳ ಹೂಡಿಕೆ ನೀತಿ, ಆ ನೀತಿ, ಈ ನೀತಿಗಳನ್ನು ಜಾರಿಗೆ ತರಲಾಯಿತು.

ಎಲ್ಲಕ್ಕಿಂತ ಮೊದಲು ನರಸಿಂಹರಾವ್-ಮನಮೋಹನ ಸಿಂಗ್ ಜೋಡಿ ಕೈಗೊಂಡಿದ್ದು ರೂಪಾಯಿಯ ಅಪಮೌಲ್ಯ. 1991ರಲ್ಲಿ ಮಾಡಿದ ಶೇ.20ರಷ್ಟು ದೊಡ್ಡ ಪ್ರಮಾಣದ ಅಪಮೌಲ್ಯೀಕರಣದ ನಂತರ ಮತ್ತೆ 1992ರಲ್ಲಿ ಮತ್ತೆ ಶೇ.20ರಷ್ಟು ಅಪಮೌಲ್ಯ. ನಂತರ ಗೊತ್ತಿರುವ ಅಥವಾ ಗೊತ್ತಿಲ್ಲದ ಹಾಗೆ ನಿರಂತರ ಅಪಮೌಲ್ಯ.

ಅಪಮೌಲ್ಯವೆಂದರೆ ವಿದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳು ದುಬಾರಿ, ನಾವು ರಫ್ತು ಮಾಡುವ ವಸ್ತುಗಳು ಅಗ್ಗ. ಮೇಲೆ ಹೇಳಿದಂತೆ ಯಾವ ವಾಣಿಜ್ಯ ಅಸಮಾನತೆಯಿಂದಾಗಿ ಸಾಲಕ್ಕೆ ಸಿಕ್ಕಿಕೊಳ್ಳುವಂತಾಯಿತೋ ಅದನ್ನು ಮತ್ತಷ್ಟು ಉಲ್ಬಣಗೊಳಿಸುವುದು. ಅಷ್ಟೇ ಅಲ್ಲದೆ ದೇಶದ ಒಳಗೆ ವಿಪರೀತ ಬೆಲೆ ಏರಿಕೆ. ರೈತರು ಬೆಳೆದ ಬೆಳೆಗಳು ಅಗ್ಗವಾಗಿ ರೈತರ ದುಡಿಮೆಗೆ ಸಿಗುತ್ತಿದ್ದ ಪ್ರತಿಫಲ ಮತ್ತಷ್ಟು ಕಡಿಮೆಯಾಗುವುದು. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳು, ರಸಗೊಬ್ಬರ, ಔಷಧಿಗಳು ಇತ್ಯಾದಿಗಳ ಬೆಲೆ ಹೆಚ್ಚುವುದು. ಅದರಿಂದಾಗಿ ಕೃಷಿ ಉತ್ಪಾದನಾ ವೆಚ್ಚ ಹೆಚ್ಚುವುದು.

ಹೊಸ ಕೈಗಾರಿಕಾ ನೀತಿ 1992ರಲ್ಲಿಯೇ ದೇಶದ 34 ಕೈಗಾರಿಕಾ ರಂಗಗಳಲ್ಲಿ ವಿದೇಶಿ ಬಂಡವಾಳಿಗರಿಗೆ ಆಡಳಿತವನ್ನು ಒಪ್ಪಿಸುವಂತೆ ಶೇ.51ರಷ್ಟು ಪಾಲಿಗೆ ವಿದೇಶಿ ಬಂಡವಾಳಕ್ಕೆ ಅನುಮತಿ ನೀಡಿತು. ನೂರಕ್ಕೆ ನೂರರಷ್ಟು ವಿದೇಶಿ ಬಂಡವಾಳಕ್ಕೂ ಅವಕಾಶ ನೀಡುವುದಾಗಿ ಘೋಷಿಸಲಾಯಿತು. ಲೈಸೆನ್ಸ್ ನೀಡಿಕೆ ಪದ್ಧತಿಯನ್ನು ರದ್ದು ಪಡಿಸಲಾಯಿತು.

ಗಣಿ, ಅಣು ವಿದ್ಯುತ್, ರೈಲ್ವೆ, ರಕ್ಷಣಾ ಉತ್ಪಾದನೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ರಂಗಗಳ ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸುವುದು ಅದರ ನೀತಿಯಾಯಿತು. (ಇದು ಆಗಿನ ನೀತಿ. ಈಗ ಇವುಗಳನ್ನೂ ವಿದೇಶಿಗಳಿಗೆ ತೆರೆದಿಡಲಾಗಿದೆ). ಗುತ್ತೇದಾರಿ ನಿಯಂತ್ರಣ ಕಾನೂನು, ವಿದೇಶಿ ವಿನಿಮಯ ನಿಯಂತ್ರಣ ಕಾನೂನುಗಳನ್ನು ಸರಿಸುಮಾರು ಇಲ್ಲವಾಗಿಸಲಾಯಿತು.

ಆಮದು ನಿಷೇಧದ ಪಟ್ಟಿಯಲ್ಲಿದ್ದ ಕೃಷಿ ಫಸಲುಗಳೂ ಸೇರಿದಂತೆ 144 ವಸ್ತುಗಳ ಮೇಲಿನ ನಿಷೇಧವನ್ನು ಕಿತ್ತೆಸೆಯಲಾಯಿತು. ದೇಶದೊಳಗಿನ ಉತ್ಪಾದನೆಗಳಿಗೆ ರಕ್ಷಣೆ ನೀಡಲೆಂದು ವಿಧಿಸಲಾಗಿದ್ದ ಆಮದು ಸುಂಕಗಳನ್ನು ಶೇ.250ರಿಂದ ಶೇ.150ಕ್ಕೆ ಇಳಿಸಲಾಯಿತು. ನಗರಗಳ ಅತಿ ಶ್ರೀಮಂತರಿಗೆ ವಿದೇಶಿ ಆಮದು ಕಾರು, ಟಿವಿ, ಫ್ರಿಜ್ ಮತ್ತು ಇತರ ಅನೇಕ ಶೋಕಿ ವಸ್ತುಗಳು ಅಗ್ಗವಾಗಿ ದೊರೆತು ಖುಷಿಯಾದರು.

ಈ ಎಲ್ಲ ನೀತಿಗಳು ಕೃಷಿಯ ಮೇಲೆ ಹಾನಿಕರ ಪರಿಣಾಮಗಳನ್ನು ಬೀರಿದವು. ಈ ನೀತಿಗಳ ಉರಿಯ ಮೇಲೆ ಮೆಣಸಿನ ಖಾರ ಸವರಿದಂತೆ ವಿಶ್ವ ವಾಣಿಜ್ಯ ಸಂಸ್ಥೆ ಎಂಬ ಹೊಸ ಹೆಸರಿನಲ್ಲಿ ಅಮರಿಕೊಂಡ ಕೃಷಿ ವ್ಯಾಪಾರ ಒಪ್ಪಂದ, ಬೀಜ ಹಕ್ಕು ನಾಶಕ, ಪೇಟೆಂಟ್ ಕಾನೂನು ಇತ್ಯಾದಿಗಳು ಕೃಷಿಕರ ಬದುಕನ್ನು ಹಾಳುಗೆಡವಲಾರಂಭಿಸಿದವು.

ಈ ನೀತಿಗಳ ಬಗ್ಗೆ 80ರ ದಶಕದ ರೈತ ಚಳವಳಿಗಳ ನಾಯಕರು ವಿಭಿನ್ನ ನಿಲುವುಗಳನ್ನು ತಳೆದರು. ಆದರೆ ಈ ನೀತಿಗಳನ್ನು ಬಹಳ ದೃಢವಾಗಿ ವಿರೋಧಿಸಿದ 80ರ ದಶಕದ ರೈತ ಚಳವಳಿಗಳ ನಾಯಕರಲ್ಲಿ ನಂಜುಂಡಸ್ವಾಮಿಯವರು ಮುಖ್ಯರು.

ಈ ನೀತಿಗಳು ಹಾಗೂ ನಂಜುಂಡಸ್ವಾಮಿಯವರು ಇವುಗಳ ವಿರುದ್ಧ ರೂಪಿಸಿದ ಪ್ರತಿಭಟನೆಗಳ ಬಗ್ಗೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ರೈತ ಚಳವಳಿಗಳಲ್ಲಿನ ಭಾಗವಹಿಸುವಿಕೆ ಬಗ್ಗೆ ಮುಂದಿನ ವಾರ.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ರೈತ ಹೋರಾಟ; 80-90ರ ದಶಕದ ಬೆಳವಣಿಗೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...