ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ (ಸೆ.15) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಈ ವಿವಾದದ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, ಉಮರ್ ಖಾಲಿದ್ ಅವರನ್ನು ಸಮರ್ಥಿಸಿಕೊಂಡರು. ಅವರನ್ನು ಪ್ರಶ್ನಿಸಲು ಎಬಿವಿಪಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದರು.
“ಉಮರ್ ಖಾಲಿದ್ ಒಬ್ಬ ದೇಶಭಕ್ತ. ಅವರ ಬಗ್ಗೆ ಮಾತನಾಡಲು ಎಬಿವಿಪಿಗೆ ಯಾವುದೇ ಹಕ್ಕಿಲ್ಲ” ಎಂದು ಹರಿಪ್ರಸಾದ್ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವಿದ್ಯಾರ್ಥಿ ಸಂಘಟನೆ ವ್ಯಕ್ತಪಡಿಸಿದ ವಿರೋಧವನ್ನು ತೀವ್ರವಾಗಿ ಆಕ್ಷೇಪಿಸಿದರು.
ಖಾಲಿದ್ ವಿರುದ್ಧ ಎಬಿವಿಪಿಯ ಟೀಕೆಗಳು ಡಾಂಬಿಕತನದಿಂದ ಕೂಡಿವೆ ಎಂದು ಆರೋಪಿಸಿದ ಅವರು,ದೇಶಭಕ್ತಿಯ ಬಗ್ಗೆ ತೀರ್ಪು ನೀಡಲು ಸಂಘಟನೆಗೆ ಇರುವ ಅರ್ಹತೆಯನ್ನು ಪ್ರಶ್ನಿಸಿದರು.
“ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ಎಬಿವಿಪಿ ಆರಾಧಿಸುತ್ತದೆ; ಪೂಜಿಸುತ್ತದೆ. ಗೋಡ್ಸೆ ದೇಶದ್ರೋಹಿ ಮತ್ತು ದೇಶದ ಮೊದಲ ಭಯೋತ್ಪಾದಕ” ಎಂದು ಅವರು ಹೇಳಿದರು.
“ಉಮರ್ ಖಾಲಿದ್ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ” ಎಂದು ಹರಿಪ್ರಸಾದ್ ಕಿಡಿಕಾರಿದರು.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಖಾಲಿದ್‌ಗೆ ಸಂಬಂಧಿಸಿದ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಎಬಿವಿಪಿ ಸದಸ್ಯರ ವಿರೋಧದ ನಡುವೆ ಈ ಹೇಳಿಕೆಗಳು ಬಂದಿವೆ. ಈ ವಿಷಯವು ಅಭಿವ್ಯಕ್ತಿ ಸ್ವಾತಂತ್ರ್ಯ, ಕ್ಯಾಂಪಸ್ ಚಟುವಟಿಕೆಗಳು ಮತ್ತು ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಭಾಗವಹಿಸುವಿಕೆಯ ಗಡಿಗಳ ಕುರಿತು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ.
ಹರಿಪ್ರಸಾದ್ ಅವರ ಹೇಳಿಕೆಗಳು ಈ ಪ್ರದರ್ಶನದ ಸುತ್ತಲಿನ ರಾಜಕೀಯ ವಾಗ್ವಾದವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದ್ದು, ಕಾಂಗ್ರೆಸ್ ಮತ್ತು ಎಬಿವಿಪಿ ಈ ವಿಷಯದಲ್ಲಿ ಸಂಪೂರ್ಣ ಭಿನ್ನ ನಿಲುವುಗಳನ್ನು ತಳೆದಿವೆ.
ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಎಬಿವಿಪಿ ಆಕ್ಷೇಪ ವ್ಯಕ್ತಪಡಿಸಿದ್ದರೆ, ಹರಿಪ್ರಸಾದ್ ಅವರು ಖಾಲಿದ್ ವಿರುದ್ಧ ಆಕ್ಷೇಪ ಎತ್ತಲು ಆ ಸಂಘಟನೆಗೆ ಇರುವ ಅಧಿಕಾರವನ್ನೇ ಪ್ರಶ್ನಿಸಿದ್ದಾರೆ.


