ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಕೋರಿದೆ.
ಜೊತೆಗೆ, ಪ್ರಸ್ತಾವಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎನ್‌ಎಲ್‌ಎಸ್‌ಐಯು ಆಡಳಿತ ಮಂಡಳಿಯ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೆಂಗಳೂರು ಘಟಕವು ಸೋಮವಾರ ನೀಡಿರುವ ಹೇಳಿಕೆಯಲ್ಲಿ, ಈ ವಿಚಾರವಾಗಿ ಮಧ್ಯಪ್ರವೇಶಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕೇಂದ್ರ ಕಾನೂನು ಮತ್ತು ನ್ಯಾಯಪಾಲನೆ (ಸ್ವತಂತ್ರ ಉಸ್ತುವಾರಿ) ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದೆ.
ಲಲಿತ್ ವಾಚಾನಿ ನಿರ್ದೇಶನದ “ಪ್ರಿಸನರ್ ನಂ. 626710 ಈಸ್ ಪ್ರೆಸೆಂಟ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಇತ್ತೀಚೆಗೆ ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳನ್ನು ನೀಡಿ ಆಯೋಜಕರು ಮುಂದೂಡಿದ್ದರು.
ಆದರೆ ಈ ವಿಳಂಬವು ಸಾರ್ವಜನಿಕ ಆಕ್ರೋಶ ತಣಿಯಲು ಅನುವು ಮಾಡಿಕೊಡುವ “ಕಾಲಹರಣ ತಂತ್ರ” ಎಂದು ಎಬಿವಿಪಿ ಆರೋಪಿಸಿದೆ.
“2016ರ ಜೆಎನ್‌ಯು ವಿವಾದ, ಅಫ್ಜಲ್ ಗುರು ಸ್ಮರಣೆ, ಸಿಎಎ-ಎನ್‌ಆರ್‌ಸಿ ಪ್ರತಿಭಟನೆಗಳು ಹಾಗೂ 2020ರ ದೆಹಲಿ ಗಲಭೆಯ ಸಂದರ್ಭದಲ್ಲಿ ಪ್ರಚೋದನಾಕಾರಿ ಪ್ರಚೋದನೆಗಳಲ್ಲಿ ಭಾಗಿಯಾದ ಮತ್ತು ದೇಶವಿರೋಧಿ ಘೋಷಣೆಗಳಿಗೆ ನಂಟಿರುವ ವ್ಯಕ್ತಿಯನ್ನೇ ಕೇಂದ್ರಿಕರಿಸಿದ ರಾಜಕೀಯ ಪ್ರಚಾರದ ವೇದಿಕೆಯಾಗಿ ರಾಷ್ಟ್ರೀಯ ಖ್ಯಾತಿಯ ಶಿಕ್ಷಣ ಸಂಸ್ಥೆಗಳು ಬಳಸಲ್ಪಡಬಾರದು ಎಂಬುದು ಎಬಿವಿಪಿ ನಿಲುವಾಗಿದೆ” ಎಂದು ಹೇಳಿದೆ.
ಯಾವುದೇ ನೆಪದಲ್ಲೂ ಈ ಸಾಕ್ಷ್ಯಚಿತ್ರವನ್ನು ಕ್ಯಾಂಪಸ್‌ನಲ್ಲಿ ಚಿತ್ರೀಕರಿಸಲು, ಪ್ರದರ್ಶಿಸಲು ಅಥವಾ ಪ್ರಚಾರ ಮಾಡಲು ನೀಡಲಾದ ಎಲ್ಲಾ ಅನುಮತಿಗಳನ್ನು ಶಾಶ್ವತವಾಗಿ ರದ್ದುಗೊಳಿಸುವಂತೆ ಎನ್‌ಎಲ್‌ಎಸ್‌ಐಯು ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕೆಂದು ವಿದ್ಯಾರ್ಥಿ ಸಂಘಟನೆ ಕೇಂದ್ರವನ್ನು ಒತ್ತಾಯಿಸಿದೆ.
ವಿದ್ಯಾರ್ಥಿ ಸಂಘಟನೆಗಳು ನೀಡಿದ ಅಧಿಕೃತ ದೂರುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿರುವ ಎಬಿವಿಪಿ, ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಎನ್‌ಎಲ್‌ಎಸ್‌ಐಯು ಆಡಳಿತ ಮತ್ತು ಆಯೋಜಕ ಸಮಿತಿಯ ವಿರುದ್ಧ ಸಮಗ್ರ ತನಿಖೆ ನಡೆಸುವಂತೆಯೂ ಕೋರಿದೆ.
ಸಾರ್ವಜನಿಕ ಸಂಪನ್ಮೂಲಗಳಿಂದ ಧನಸಹಾಯ ಪಡೆಯುವ ಕೇಂದ್ರ ಮತ್ತು ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಮೂಲಸೌಕರ್ಯಗಳನ್ನು ಶೈಕ್ಷಣಿಕ ಸ್ವಾತಂತ್ರ್ಯದ ನೆಪದಲ್ಲಿ “ದೇಶವಿರೋಧಿ ನಿರೂಪಣೆಗಳಿಗೆ” ಬಳಸದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ಎಬಿವಿಪಿ ಆಗ್ರಹಿಸಿದೆ.
ಮುಕ್ತ ಚರ್ಚೆ ಮತ್ತು ಶೈಕ್ಷಣಿಕ ಸ್ವಾತಂತ್ರ್ಯವು ಸಾಂವಿಧಾನಿಕ ಹಕ್ಕುಗಳಾಗಿದ್ದರೂ, ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ ಮತ್ತು ಸಾಂಸ್ಥಿಕ ಸಮಗ್ರತೆಗಿಂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಲು ಸಾಧ್ಯವಿಲ್ಲ ಎಂದು ಸಂಘಟನೆ ಪ್ರತಿಪಾದಿಸಿದೆ.
ಉಮರ್ ಖಾಲಿದ್ ಸಾಕ್ಷ್ಯಚಿತ್ರದ ಕುರಿತು
ದೆಹಲಿ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮತ್ತು ಸಕ್ರಿಯ ಹೋರಾಟಗಾರ ಉಮರ್ ಖಾಲಿದ್ ಅವರ ಜೀವನ ಹಾಗೂ ಅವರ ಬಂಧನದ ಹಿನ್ನೆಲೆಯನ್ನು ಆಧರಿಸಿ “Prisoner No. 626710 is Present” (ಖೈದಿ ಸಂಖ್ಯೆ 626710 ಹಾಜರಿದ್ದಾನೆ) ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ. ಈ ಸಾಕ್ಷ್ಯಚಿತ್ರವನ್ನು ಪ್ರಸಿದ್ಧ ಸಾಕ್ಷ್ಯಚಿತ್ರ ನಿರ್ಮಾಪಕ ಲಲಿತ್ ವಾಚಾನಿ ಅವರು ನಿರ್ದೇಶಿಸಿದ್ದಾರೆ.
ಉಮರ್ ಖಾಲಿದ್ ಅವರ ವಿದ್ಯಾರ್ಥಿ ಚಳವಳಿಗಳು, ಸಿಎಎ-ಎನ್‌ಆರ್‌ಸಿ ವಿರೋಧಿ ಹೋರಾಟಗಳು, 2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೇಲಿನ ಆರೋಪಗಳು ಮತ್ತು ಅವರ ಸುದೀರ್ಘ ಜೈಲು ವಾಸದ ಸುತ್ತ ಈ ಚಿತ್ರ ಸುತ್ತುತ್ತದೆ.
ಖಾಲಿದ್ ಅವರ ಕುಟುಂಬದವರು, ಸ್ನೇಹಿತರು, ಹಾಗೂ ಪ್ರಾಧ್ಯಾಪಕರ ಸಂದರ್ಶನಗಳು ಮತ್ತು ಮಾಧ್ಯಮಗಳು ಅವರ ಕುರಿತು ನಡೆಸಿದ ವರದಿಗಳನ್ನು ಒಳಗೊಂಡಿದೆ.
ಸೆಪ್ಟೆಂಬರ್ 2026 ರಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ ಈ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಆದರೆ, ಎಬಿವಿಪಿ ಹಾಗೂ ಇತರ ಕೆಲವು ಸಂಘಟನೆಗಳ ತೀವ್ರ ವಿರೋಧ ಮತ್ತು ಭದ್ರತಾ ಕಾರಣಗಳಿಂದಾಗಿ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಈ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ತಾತ್ಕಾಲಿಕವಾಗಿ ಮುಂದೂಡಿದೆ.


