ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಹಾಕುವ ಉದ್ದೇಶವನ್ನು ಸರ್ಕಾರದ ಹೊಸ ಆದೇಶ ಹೊಂದಿದೆ ಎಂದು ಅತಿಥಿ ಉಪನ್ಯಾಸಕರು ಆರೋಪಿಸಿದ್ದು, ಮುಖ್ಯಮಂತ್ರಿ ಬೊಮ್ಮಾಯಿಯವರ ಟ್ವೀಟ್‌ಗಳೂ ಈ ಅನುಮಾನವನ್ನು ನಿಜವಾಗಿಸಿವೆ.
ಮುಖ್ಯಮಂತ್ರಿಯವರು ಹೊಸ ಆದೇಶದ ಬೆನ್ನಲ್ಲೇ ಜನವರಿ 14, ಸಮಯ 5.40ಕ್ಕೆ ಮಾಡಿದ ಟ್ವೀಟ್ ಹಾಗೂ ಜನವರಿ 14, ಸಮಯ 5.50ಕ್ಕೆ ಮಾಡಿದ ಟ್ವೀಟ್‌ಗೂ ಇರುವ ವ್ಯತ್ಯಾಸವನ್ನು ಅತಿಥಿ ಉಪನ್ಯಾಸಕರು ಗುರುತಿಸಿದ್ದಾರೆ. ಮೊದಲ ಟ್ವೀಟ್ ಅಳಿಸಿ ಹಾಕಿ, ಎರಡನೇ ಟ್ವೀಟ್ ಮಾಡಿರುವ ಸಿಎಂ, ಅರ್ಧಕ್ಕೆ ಅರ್ಧ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಹಾಕಲು ಸರ್ಕಾರ ಉದ್ದೇಶಿಸಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ ಎಂದು ಅತಿಥಿ ಉಪನ್ಯಾಸಕರು ಆರೋಪಿಸಿದ್ದಾರೆ.
ಮೊದಲ ಟ್ವೀಟ್‌ನಲ್ಲಿ, “ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 14 ಸಾವಿರ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಈ ಸಂಬಂಧ ರಚಿಸಲಾಗಿರುವ ಸಮಿತಿಯು ಮಾಡಿದ್ದ ಶಿಪಾರಸುಗಳ ಜಾರಿಗೆ ಹಣಕಾಸಿನ ಅನುಮೋದನೆ ನೀಡಲಾಗಿದೆ. ಇದರೊಂದಿಗೆ 14 ಸಾವಿರ ಹನ ಅತಿಥಿ ಉಪನ್ಯಾಸಕರಿಗೆ ಅನುಕೂಲ ಆಗಲಿದೆ. ಕರ್ನಾಟಕದ ಸರ್ಕಾರದ ವತಿಯಿಂದ ಎಲ್ಲ ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿಯ ಶುಭಾಶಯ ಕೋರುತ್ತೇನೆ” ಎಂದು ಸಿಂಎ ಹೇಳಿದ್ದರು.
ಹತ್ತೇ ನಿಮಿಷದಲ್ಲಿ ಟ್ವೀಟ್ ಅಳಿಸಿಹಾಕಿದ ಮುಖ್ಯಮಂತ್ರಿಯವರು, “ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಈ ಸಂಬಂಧ ರಚಿಸಲಾಗಿದ್ದ ಸಮಿತಿಯು ಮಾಡಿದ್ದ ಶಿಫಾರಸುಗಳ ಜಾರಿಗೆ ಹಣಕಾಸಿನ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಅತಿಥಿ ಉಪನ್ಯಾಸಕರಿಗೆ ಅನುಕೂಲ ಆಗಲಿದೆ” ಎಂದು ತಿದ್ದಿದ್ದಾರೆ.
ಇದನ್ನೂ ಓದಿರಿ: ಉನ್ನತ ಶಿಕ್ಷಣ ಸಚಿವರ ಎಫ್‌ಬಿ ಖಾತೆಯಲ್ಲಿ ‘ಉತ್ತಮ ಆಡಳಿತ ದಿನ’ ಲೈವ್: ಕಮೆಂಟ್ ಬಾಕ್ಸ್‌ನಲ್ಲಿ ಅತಿಥಿ ಉಪನ್ಯಾಸಕರ ಅಳಲು


ರಾಜ್ಯ ಸರ್ಕಾರವು ಶುಕ್ರವಾರ ಅತಿಥಿ ಉಪನ್ಯಾಸಕರ ವೇತನ ಹಚ್ಚಳದ ಆದೇಶ ಹೊರಡಿಸಿದೆ. ಆದರೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಕಲ್ಮನಿ, “ರಾಜ್ಯ ಸರ್ಕಾರದ ಈ ಆದೇಶ ‘ಅಳಿಯ ಅಲ್ಲ, ಮಗಳ ಗಂಡ’ ಎಂಬಂತಿದ್ದು, ಇದರಿಂದ ಅರ್ಧಕ್ಕರ್ಧ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಇಲ್ಲದಂತಾಗುತ್ತದೆ” ಎಂದು ಹೇಳಿದ್ದಾರೆ.
ರಾಜ್ಯದ ಸಾವಿರಾರು ಅತಿಥಿ ಉಪನ್ಯಾಸಕರು ಸೇವಾ ಅಭದ್ರತೆ, ವೇತನ ತಾರತಮ್ಯ ಖಂಡಿಸಿ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಅನಿರ್ದಿಷ್ಟಾವಧಿ ತರಗತಿ ಬಹಿಷ್ಕಾರವನ್ನೂ ಮಾಡಿದ್ದರು. ಹೀಗಾಗಿ ಒತ್ತಡಕ್ಕೆ ಸಿಲುಕಿದ್ದ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಹೆಚ್ಚಳ ಮಾಡುವುದಾಗಿ ಇಂದು ಘೋಷಿಸಿದೆ.
ಸರ್ಕಾರದ ಆದೇಶದಂತೆ, “ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಇದ್ದು, 5 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರು ಇನ್ನು ಮುಂದೆ ಮಾಸಿಕ 32 ಸಾವಿರ ರೂ. ಇದಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿರುವವರು ಮಾಸಿಕ 30 ಸಾವಿರ ರೂ. ಗೌರವ ಧನ ಪಡೆಯಲಿದ್ದಾರೆ.”
ಇದನ್ನೂ ಓದಿರಿ: ಅಶ್ವತ್ಥ್ ನಾರಾಯಣರೇ ನೀವೂ ನಿಮ್ಮ ಕೆಲಸವನ್ನು ತೋರಿಸಬೇಕಿದೆ: ಅತಿಥಿ ಉಪನ್ಯಾಸಕರ ಒತ್ತಾಯ
ಆದೇಶದಲ್ಲಿರುವ ಅಂಶಗಳು
“5 ವರ್ಷಕ್ಕಿಂತ ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ್ದರೂ ಯುಜಿಸಿ ನಿಗದಿಪಡಿಸಿದ ಅರ್ಹತೆ ಇಲ್ಲದೆ ಇರುವವರ ವೇತನವನ್ನು ರೂ. 28 ಸಾವಿರಕ್ಕೆ ಹೆಚ್ಚಿಸುವುದು. ಐದು ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ ರೂ. 26,000 ರೂಪಾಯಿ ನೀಡುವುದು. ಅತಿಥಿ ಉಪನ್ಯಾಸಕರ ಕಾರ್ಯಭಾರ ಅವಧಿ 8 ರಿಂದ 10 ಗಂಟೆ ಇದ್ದುದನ್ನು 15 ಗಂಟೆಗಳಿಗೆ ಹೆಚ್ಚಿಸುವುದು.”
“ಅತಿಥಿ ಉಪನ್ಯಾಸಕರನ್ನು ಸೆಮಿಸ್ಟರ್ ಬದಲಿಗೆ ಶೈಕ್ಷಣಿಕ ವರ್ಷಕ್ಕೆ (10 ತಿಂಗಳಿಗೆ) ನೇಮಕ ಮಾಡುವುದು. ಅತಿಥಿ ಉಪನ್ಯಾಸಕರ ಗೌರವಧನವನ್ನು ಪ್ರತಿ ತಿಂಗಳು 10ನೇ ತಾರೀಖಿನ ಒಳಗೆ ಪಾವತಿ ಮಾಡುವುದು.”
“ಅತಿಥಿ ಉಪನ್ಯಾಸಕರಾಗಿ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿದವರಿಗೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಪ್ರಾಧಾನ್ಯತೆ ಕೊಡುವುದು. ಇದಕ್ಕೆ ಸಂಬಂಧಪಟ್ಟ ಹಾಗೆ ಪ್ರಸ್ತುತ ಇಲಾಖೆಯಲ್ಲಿ ಅನುಸರಿಸುತ್ತಿರುವ ಮಾನದಂಡಗಳನ್ವಯ ಆಯ್ಕೆ ಪಟ್ಟಿ ತಯಾರಿಸುವುದು.”
“ಅತಿಥಿ ಉಪನ್ಯಾಸಕರಿಗೆ ಸಂಬಂಧಪಟ್ಟ ಕಾಲೇಜಿನಲ್ಲಿ ಗರಿಷ್ಠ 15 ಗಂಟೆಗಳ ಕಾರ್ಯಭಾರ ಲಭ್ಯವಿಲ್ಲದಿದ್ದರೆ, ಅಂತಹ ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರವಿರುವ ಇತರೆ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸುವುದು. ಇದರ ಹೊರತಾಗಿಯೂ 15 ಗಂಟೆಗಳಿಗಿಂತ ಕಡಿಮೆ ಕಾರ್ಯಭಾರವಿದ್ದಲ್ಲಿ ಎಷ್ಟು ಗಂಟೆಗಳ ಕಾರ್ಯಭಾರ ಉಪಲಬ್ದವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನ ನೀಡುವುದು. ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸಂಪೂರ್ಣ ನಿರ್ಬಂಧಿಸುವುದು.”
ಅತಿಥಿ ಉಪನ್ಯಾಸಕರ ಆಕ್ಷೇಪ
ಸಂಬಳ ಹೆಚ್ಚಳವನ್ನು ಮಾಡಲಾಗುತ್ತಿದೆ ಎಂಬುದನ್ನು ಬಿಟ್ಟರೆ, ಕೆಲಸ ಹೆಚ್ಚುಸುವುದು ಹಾಗೂ ಅರ್ಧಕ್ಕೆ ಅತಿಥಿ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ವಜಾ ಮಾಡುವುದು ಸರ್ಕಾರ ಉದ್ದೇಶವಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ ಎಂದು ಅತಿಥಿ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಕಲ್ಮನಿ, “ರಾಜ್ಯ ಸರ್ಕಾರದ ಈ ಆದೇಶ ಅಳಿಯ ಅಲ್ಲ, ಮಗಳ ಗಂಡ ಎಂಬಂತಿದೆ. ಹೊಸ ಆದೇಶದಿಂದಾಗಿ ಅರ್ಧಕ್ಕರ್ಧ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಇಲ್ಲದಂತಾಗುತ್ತದೆ. ಸರ್ಕಾರದ ಆದೇಶವನ್ನು ನಾವು ಸ್ವೀಕರಿಸುವುದಿಲ್ಲ, ನಮ್ಮ ಹೋರಾಟವು ಮುಂದುವರೆಯುತ್ತದೆ. ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ನಿಯೋಗ ಭೇಟಿ ಮಾಡಲಿದೆ” ಎಂದು ಹೇಳಿದ್ದಾರೆ.
ಅತಿಥಿ ಉಪನ್ಯಾಕರು ಸೇವಾ ಅಭದ್ರತೆ, ವೇತನ ತಾರತಮ್ಯ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದರು, ಆದರೆ ಸರ್ಕಾರ ಈ ಬಗ್ಗೆ ಯಾವುದೆ ಮಾತು ಆಡಿಲ್ಲ ಎಂದು ಹೊಸಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾಗಿರುವ ಡಾ.ಸಂದೀಪ್ ಡಿ.ಡಿ. ಅವರು ನಾನುಗೌರಿ.ಕಾಂಗೆ ಹೇಳಿದ್ದಾರೆ.
“ಈ ಹಿಂದೆ ವಾರಕ್ಕೆ ಎಂಟು ಗಂಟೆಗಳ ವರ್ಕ್ ಕೊಡುತ್ತಿದ್ದರು ಮತ್ತು ಈ ಕೆಲಸಕ್ಕೆ ಯುಜಿಸಿ ಅರ್ಹತೆ ಇದ್ದವರಿಗೆ 13 ಸಾವಿರ ರೂ. ಯುಜಿಸಿ ಅರ್ಹತೆ ಇಲ್ಲದವರಿಗೆ 11 ಸಾವಿರ ವೇತನ ನೀಡುತ್ತಿದ್ದರು. ಆದರೆ ಸರ್ಕಾರದ ಇಂದಿನ ಆದೇಶದಲ್ಲಿ ಒಬ್ಬರಿಗೆ 15 ಗಂಟೆಗಳ ವರ್ಕ್ ಕೊಡುವುದಾಗಿ ಹೇಳಿದ್ದಾರೆ. ಇದರಿಂದಾಗಿ ವರ್ಕ್‌ಲೋಡ್ ಕಡಿಮೆಯಾಗಿ, ಸುಮಾರು 7,500ಕ್ಕೂ ಹೆಚ್ಚು ಉಪನ್ಯಾಸಕರು ನಿರುದ್ಯೋಗಿಗಳಾಗುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಈಗ 14 ಸಾವಿರಕ್ಕಿಂತಲೂ ಹೆಚ್ಚು ಅತಿಥಿ ಉಪನ್ಯಾಕಸರು ಇದ್ದಾರೆ. ಅವರಿಗೆಲ್ಲ ವಾರಕ್ಕೆ ಎಂಟು ಗಂಟೆಗಳ ವರ್ಕ್ ಇತ್ತು. ಸರ್ಕಾರದ ಹೊಸ ಆದೇಶದಲ್ಲಿ 15 ಗಂಟೆಗಳ ವರ್ಕ್ ಕೊಡುವುದಾಗಿ ಹೇಳಿದ್ದಾರೆ. ಇದರ ಅರ್ಥ ಇನ್ನೊಬ್ಬರ ವರ್ಕ್ ಅನ್ನು ಕಿತ್ತು, ಮತ್ತೊಬ್ಬರಿಗೆ ಕೊಡುವುದಾಗಿದೆ” ಎಂದು ಸಂದೀಪ್ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿರಿ: ಸೇವಾ ಅಭದ್ರತೆ, ವೇತನ ತಾರತಮ್ಯ ಖಂಡಿಸಿ ಅತಿಥಿ ಉಪನ್ಯಾಸಕರ ಬೃಹತ್ ಪ್ರತಿಭಟನೆ
ಸರಕಾರದ ಈ ಆದೇಶ ಉಪನ್ಯಾಸಕರಿಗೆ ಮಾರಕವಾಗಲಿದೆ. ಇನ್ನು ಇವರಿಗೆ ೧೫ ಗ೦ಟೆಗಳ ಕೆಲಸ ಯಾಕೆ ಕೊಡಬೇಕು. ? ಒಬ್ಬ ಕೆಲಸಗಾರ ಕಾನೂನು ಪ್ರಕಾರ ೮ ಗ೦ಟೆಗಳಷ್ಟೇ ಕೆಲಸ ಮಾಡಬೇಕು. ಈ ರೀತಿ ಮಾಡೋದು ಸರೀನಾ
8 ಗಂಟೆ ಗಳು ಅವಧಿ ಸರಿ