Homeಮುಖಪುಟವ್ಯವಸ್ಥೆಯ ವಿರೋಧ, ಪ್ರಜಾಪ್ರಭುತ್ವವಾದಿ ಸಮಾನತೆಗೆ ಸಂಕೇತದಂತಿದ್ದ ನನ್ನ ಗುರು ಚಂಪಾ

ವ್ಯವಸ್ಥೆಯ ವಿರೋಧ, ಪ್ರಜಾಪ್ರಭುತ್ವವಾದಿ ಸಮಾನತೆಗೆ ಸಂಕೇತದಂತಿದ್ದ ನನ್ನ ಗುರು ಚಂಪಾ

- Advertisement -
- Advertisement -

ನನ್ನ ವಿದ್ಯಾಗುರುಗಳು, ಹೋರಾಟಗಳ ಗುರುಗಳು ಆದ ಚಂಪಾ ತೀರಿ ಹೋಗಿದ್ದಾರೆಂಬ ದುಃಖ ಎಲ್ಲೋ ಆಳದಲ್ಲಿ ಮುಂಜುಗಡ್ಡೆಯಂತೆ ಕುಳಿತಿದೆ. ಆದರೆ ಎಚ್ಚರದ ಮನಸ್ಸು, ದುಃಖ, ವಿಷಾದದ ಬದಲು ಅಸೀಮವಾದ ಜೀವಪರತೆ, ನಗು, ಖುಷಿ ಹಾಗೂ ಸ್ನೇಹದ ಚಂಪಾ ಅವರ ಬೆಚ್ಚಗಿನ ನೆನಪುಗಳಿಂದ ತುಂಬಿದೆ. ಅವರನ್ನು ಸಾವಿನ ಜೊತೆಗೆ ಇರಲಿ ವಿಷಾದದ ಜೊತೆಗೆ ಜೋಡಿಸಲು ಮನಸ್ಸು ಒಪ್ಪುವುದಿಲ್ಲ. ಅವರ ನಾಟಕದ ಟಿಂಗರ್ ಬುಡ್ಡಣ್ಣನಂತೆ ಅವರದು ನಿಲ್ಲದ ಮಾತು, ಮುಗಿಯದ ಉತ್ಸಾಹ. ಆದರೆ ಬುಡ್ಡಣ್ಣನಂತೆ ವಿನಾಶಕ ಬುದ್ಧಿಯವರಲ್ಲ. ಅವರೇ ಹೇಳಿಕೊಂಡಂತೆ ಪ್ರೀತಿಯಿಲ್ಲದಿದ್ದರೆ ದ್ವೇಷವನ್ನು ಮಾಡಲಾಗದ ಸೂಕ್ಷ್ಮ ಮನಸ್ಸು ಅವರದು. ವಿವಾದ, ಜಗಳ, ಹೋರಾಟ ಇವುಗಳ ಚಂಪಾ ಒಂದು ಸ್ಥಿರ ಚಿತ್ರದಂತೆ ಎಲ್ಲರ ಮನಸ್ಸಿನಲ್ಲಿದ್ದಾರೆ. ಆದರೆ ಎರಡು ವರ್ಷ ವಿದ್ಯಾರ್ಥಿಯಾಗಿ ಎರಡು ವರ್ಷ ಅವರ ಕಿರಿಯ ಸಹೋದ್ಯೋಗಿಯಾಗಿದ್ದ ನಾನು, ಅಪರೂಪಕ್ಕೆ ಮೌನವಾಗಿ ಕುಳಿತ, ಜೈಲಿನಲ್ಲಿದ್ದು ಸುರಾಪಾನದ ಹೂಗಳನ್ನು ಧ್ಯಾನಿಸಿದ ಚಂಪಾರನ್ನು ಕಂಡಿದ್ದೆ. ಆಳದಲ್ಲಿ ಅವರದು ಕವಿ ಮನಸ್ಸೇ. ಅದರ ಸೂಕ್ಷ್ಮ ಸಂವೇದನೆಗಳನ್ನು ಬಿಚ್ಚಿಡಲೆಂದೇ ಜಗಳಗಂಟ ಸಾರ್ವಜನಿಕ ವ್ಯಕ್ತಿತ್ವವನ್ನು ಚಂಪಾ ರೂಪಿಸಿಕೊಂಡರೆಂದು ನನ್ನ ಅನ್ನಿಸಿಕೆ. ಈ ಚಂಪಾ ’ಅಪ್ಪ’ ನಾಟಕದಲ್ಲಿ ಶಾಲ್ಮಲಾ ಪದ್ಯಗಳಲ್ಲಿ ಅವಿತುಕೊಂಡಿರುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನನ್ನ ಆಕ್ಷೇಪಣೆಯೆಂದರೆ ಅವರೊಳಗಿನ ಕವಿಯ ಮೌನಗಳನ್ನು ವ್ಯಂಗ್ಯ, ಕಟಕಿಯ ಆಕ್ಟಿವಿಸ್ಟ್ ಮರೆಯಾಗಿಸಿಬಿಡುತ್ತಾನೆ ಎಂದು. ಅದಕ್ಕೆ ಅವರ ಉತ್ತರವೆಂದರೆ ಹೀಗೆ ಒಳಗು-ಹೊರಗು ಎಂದು ಇಬ್ಭಾಗ ಮಾಡುವ ನನ್ನ ಮಧ್ಯಮವರ್ಗದ ಸಂವೇದನೆಯಲ್ಲಿಯೇ ಏನೋ ಸಮಸ್ಯೆ ಇದೆ ಎಂದು. ಪ್ರಾಯಶಃ ಅವರಿಗೆ ಎರಡೂ ಸಹಜವಾಗಿದ್ದವು- ಕವಿ ಮನಸ್ಸು, ಮತ್ತು ಸಾರ್ವಜನಿಕ ವ್ಯಕ್ತಿತ್ವ ಯಾವುದೂ ಮುಖವಾಡವಾಗಿರಲಿಲ್ಲ.

ಚಂಪಾ ಒಬ್ಬ ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದರು. ಅವರ ಹಠಮಾರಿತನ, ಜಗಳಗಂಟತನ ಇವೆಲ್ಲ ವ್ಯವಸ್ಥೆಯ ಭ್ರಷ್ಠತೆಯ ವಿರುದ್ಧದ ಅಸ್ತ್ರಗಳಾಗಿದ್ದವು. ಅದರ ಜೊತೆಗೆ ಶಾಮೀಲಾಗಬಾರದು ಎನ್ನುವ ಎಚ್ಚರವನ್ನು ಕಾಪಾಡಿಕೊಳ್ಳಲು ಅವು ಬೇಕಾಗಿದ್ದವು. ವಿದ್ಯಾರ್ಥಿಯಾಗಿ ಇಂಗ್ಲಿಷ್ ವಿಭಾಗಕ್ಕೆ
ಸೇರಿದ 19 ವರ್ಷದ ನನ್ನನ್ನು ತಮ್ಮ ಸಮಾನನಂತೆ ಕಂಡರು. ನನ್ನ ಇಂಗ್ಲಿಷ್ ಪದ್ಯಗಳನ್ನು ಓದಿಸಿ, ಗೆಳೆಯರಿಂದ ಅವುಗಳ ಕಟು ವಿಮರ್ಶೆಯನ್ನು ಕೇಳಿಸಿಕೊಳ್ಳುವುದನ್ನು ಹೇಳಿಕೊಟ್ಟರು. ಒಂದು ದಿನ ಸಾಯಂಕಾಲ ವಿದ್ಯಾವರ್ಧಕ ಸಂಘದ ಕೊಠಡಿಯೊಂದರಲ್ಲಿ ಅವರು ತಮ್ಮ ಪದ್ಯಗಳನ್ನು ಓದುತ್ತಿದ್ದರೆ ಸಿಗರೇಟು ಸೇದುತ್ತ ಅವರ ಪದ್ಯಗಳ ಕೊರತೆಯ ಬಗ್ಗೆ ನಾವು ಟಿಪ್ಪಣಿ ಮಾಡುವುದು. ಇದನ್ನು ಪ್ರಾಯಶಃ ಇಂದಿನ ಮಹಾನಗರದ ಖಾಸಗಿ ವಿಶ್ವವಿದ್ಯಾಲಯಗಳಲ್ಲೂ ಕಟ್ಟಿಸಿಕೊಳ್ಳಲಾರೆವು. ನಾನು ಮಾತನಾಡುತ್ತಿರುವುದು 1974-76ರ ಅವಧಿಯ ಬಗ್ಗೆ. ಗೆಳೆಯ ರಂಜಾನ್ ದರ್ಗಾ ಚಂಪಾ ಅವರಿಗೆ “ನೀವು ’ಜರ್ಮಿನಾಲ್’ ಕಾದಂಬರಿ ಓದಿ” ಎಂದು ಸಲಹೆ ನೀಡಿದಾಗ ಅಷ್ಟು ಪುಟಗಳ ಕಾದಂಬರಿಯನ್ನು ಓದುವುದಿಲ್ಲವೆಂದು ಭಿಡೆ ಇಲ್ಲದೆ ಹೇಳಿಕೊಂಡಿದ್ದರು. ನಮ್ಮನ್ನು ತರಗತಿ ಮುಗಿದ ಮೇಲೆ ಚಳವಳಿಗಳಿಗೆ-ಮೆರವಣಿಗೆಗಳಿಗೆ ಕರೆದುಕೊಂಡು ಹೋಗುವಾಗಲೂ ಅಷ್ಟೇ- ಮೊದಲು ಮುಕ್ತ ಚರ್ಚೆ, ಚಳವಳಿಯ ಉದ್ದಕ್ಕೂ ಯಾವ ನಿಬಂಧನೆಯೂ ಇಲ್ಲದ ಚರ್ಚೆ. ಗೋಸುಂಬೆತನ, ಅಪ್ರಮಾಣಿಕವಾಗಿ ಪೋಜು ಕೊಡುವುದು, ಉಪದೇಶ ಹರಿಕತೆ ಮಾಡುವುದು ಇವುಗಳನ್ನು ಅವರು ನಂಬುತ್ತಿರಲಿಲ್ಲ. ಕನ್ನಡ ಸಾಹಿತ್ಯದ ಋಷಿಸಮಾನ ಪವಿತ್ರ ಆತ್ಮಗಳನ್ನು ಇನ್ನಿಲ್ಲದಂತೆ ಗೇಲಿ ಮಾಡುತ್ತಿದ್ದರು. ಹೀಗಾಗಿ ವಿಭಾಗಕ್ಕೆ ಆಗಾಗ ಬಂದಿದ್ದ ಅನಂತಮೂರ್ತಿಯವರಿಂದ ಪರಿಚಯವಾಗುತ್ತಿದ್ದ ಜಾಗತಿಕ ಪ್ರಸಿದ್ಧಿಯ ವಿದ್ವಾಂಸರ ಯಾರ ಬಗ್ಗೆಯೂ ನಮಗೆ ವಿನೀತಭಾವನೆ ಇರಲಿಲ್ಲ. ನಮ್ಮ ಸ್ವಂತದ ಓದಿನಲ್ಲಿ ಕೃತಿ ಚೆನ್ನಾಗಿಲ್ಲ ಅನ್ನಿಸಿದರೆ ಮುಲಾಜಿಲ್ಲದೆ ಹೇಳುವುದನ್ನು ಕಲಿಸಿಕೊಟ್ಟರು. ಸಂಕ್ರಮಣವು ಅಂದು ಅನೇಕ ವಿವಾದಗಳಿಗೆ ವೇದಿಕೆಯಾಗಿತ್ತು.

ನವ್ಯ ಸಾಹಿತ್ಯ ಸಂದರ್ಭಕ್ಕೆ ವಿಶಿಷ್ಟವಾದ ಮುಕ್ತ ಚರ್ಚೆ, ಜಗಳಗಳ ವಾತಾವರಣವನ್ನು ನಿರ್ಮಿಸುವುದರಲ್ಲಿ ಚಂಪಾ ಅವರ ಪಾತ್ರ ಮುಖ್ಯವಾಗಿತ್ತು. ನವ್ಯ ಸಾಹಿತ್ಯ, ವಿಮರ್ಶೆಯ ಹಿಂದಣ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ನಾವೆಲ್ಲಾ ಬರೆದಿದ್ದೇವೆ. ಅವುಗಳಲ್ಲಿ ಸುಪ್ತವಾಗಿದ್ದ elitism, ಸಮಾಜವಿಮುಖತೆಯ ಬಗ್ಗೆ ಬರೆದಿದ್ದೇವೆ. ಆದರೆ ಕೃತಿಗಳ ಬಗ್ಗೆ ನಿಷ್ಠುರವಾಗಿ ಮಾತನಾಡುವ, ಭಿಡೆ ಇಲ್ಲದೆ ಟೀಕಿಸುವ ಮುಕ್ತತೆಯು ಈ ನವ್ಯದ ಒಂದು ಹಂತದ ನಂತರ ಹೊರಟೇಹೋಯಿತು. ಈಗಂತೂ ಕನ್ನಡ ಸಾಹಿತ್ಯ ಮತ್ತದರ ವಿಮರ್ಶೆ ಥೇಟು ವಾಸ್ತವ ರಾಜಕಾರಣದ ಮಾದರಿಯ ಸಂಸ್ಥೆಯಾಗಿದೆ. ಎರಡು ವರ್ಷ ಅತಿಥಿ ಉಪನ್ಯಾಸಕನಾಗಿ ನಾನು ಅವರ ಸಹೋದ್ಯೋಗಿಯಾದಾಗಲೂ ನಮ್ಮನ್ನು ಸಮಾನರನ್ನಾಗಿಯೇ ಅವರು ನೋಡಿಕೊಂಡರು. ವ್ಯವಸ್ಥೆಯ ವಿರೋಧ, ಪ್ರಜಾಪ್ರಭುತ್ವವಾದಿ ಸಮಾನತೆ ಇವೆರಡೂ ಚಂಪಾ ವ್ಯಕ್ತಿತ್ವದಲ್ಲಿ ಬೆರೆತುಕೊಂಡಿದ್ದವು.

ಗೋಕಾಕ್ ಚಳವಳಿ ಮತ್ತು ಜೆ.ಪಿ. ಚಳವಳಿಯ ಸಂದರ್ಭಗಳಲ್ಲಿ ನಾನು ಹತ್ತಿರದಿಂದ ನೋಡಿದಂತೆ ಚಂಪಾ ಅವರಿಗೆ ಪ್ರತಿರೋಧವು ಒಂದು passion ಆಗಿತ್ತು. ಸಂಪೂರ್ಣ ಬದ್ಧತೆಯ ವಿಷಯವಾಗಿತ್ತು. ಅದರಲ್ಲಿ ಲೆಕ್ಕಾಚಾರಗಳು ಇರಲಿಲ್ಲ. ಆದ್ದರಿಂದಲೇ, ಅವರು ಬೆಂಗಳೂರಿನ ಅಧಿಕಾರ ಕೇಂದ್ರಗಳಿಗೆ ಹೋಗಿದ್ದು, ಸಾಹಿತ್ಯ ಪರಿಷತ್ತು ಇವುಗಳನ್ನು ಸೇರಿದ್ದು ನನಗೆ ಇಷ್ಟವಾಗದ ಸಂಗತಿಯಾಗಿರಲಿಲ್ಲ. ಹಾಗೆಯೆ ಕನ್ನಡಪರ ಸಂಘಟನೆಗಳ ಜೊತೆಗಿನ ಸಖ್ಯದ ಬಗ್ಗೆ ನಮಗೆ ಅನುಮಾನಗಳಿದ್ದವು. ಆದರೆ
ಚಂಪಾ ವಾದವೆಂದರೆ ನಮ್ಮ ಕನ್ನಡಪರ ಹೋರಾಟಗಳು, ’ಪ್ರಜಾವಾಣಿ’ಗೆ ಓದುಗರ ಪತ್ರಕ್ಕೆ ಸೀಮಿತವಾಗಿರುತ್ತವೆ. ಕನ್ನಡದ ಹೋರಾಟಗಳನ್ನು ಬೀದಿಗಿಳಿದು ಮಾಡುವವರು ಯಾರು? ಕನ್ನಡ ಸಾಹಿತಿಗಳ ಮಡಿವಂತಿಕೆ ಬಗ್ಗೆ ನನಗೆ ನಂಬಿಕೆ ಇಲ್ಲ ಎನ್ನುತ್ತಿದ್ದರು. ಸಾಹಿತ್ಯ ಪರಿಷತ್ತಿನ ಬಗ್ಗೆ ನಮ್ಮ ಪೂರ್ವಾಗ್ರಹಗಳು ಗಟ್ಟಿಯಾಗಿದ್ದವು. ಆದರೆ ಶಿವಮೊಗ್ಗೆಯಲ್ಲಿ ನಡೆದ ಅದ್ಭುತವಾದ ಸಮ್ಮೇಳನದಲ್ಲಿ ಸರಕಾರವನ್ನು ಎದುರಿಸಿ ಗೌರಿ ಲಂಕೇಶ್ ಹಾಗೂ ಕಲ್ಕುಳಿ ವಿಠಲ್ ಹೆಗಡೆಯವರಿಗೆ ಭಾಷಣ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಅತ್ಯಂತ ಪ್ರಭಾವಿಯಾದ ಸಾಂಕೇತಿಕ ಘಟನೆಯೂ ಆಗಿತ್ತು. ಸಾಹಿತ್ಯ ಪರಿಷತ್ತು ಎನ್ನುವ ಸಂಸ್ಥೆಗೆ ತನ್ನ ಸ್ವಾಯತ್ತತೆ ಇದೆ ಎನ್ನುವುದನ್ನು ಸಮರ್ಥಿಸಿದ ಹೇಳಿಕೆಯಾಗಿತ್ತು.
ಈಗ ಅದು ಬಲಪಂಥೀಯ ಕಚೇರಿಯಾಗಿದೆ.

ಹೀಗೆ ಚಂಪಾ ಅವರ ಕ್ರಿಯೆಗಳಿಗೆ ಒಂದು ಗಂಭೀರವಾದ ಪ್ರಜಾಪ್ರಭುತ್ವವಾದಿ ಉದ್ದೇಶವಿರುತ್ತಿತ್ತು. ಅವರ ಮಾತು, ತಂತ್ರ ಇತ್ಯಾದಿಗಳು ಗೊಂದಲ ಹುಟ್ಟಿಸುವಂತಿರುತ್ತಿದ್ದವು. ಕೆಲವೊಮ್ಮೆ ಅತಿ ಎನಿಸುತ್ತಿತ್ತು. ಆದರೆ ಜಡವೂ, ದುಷ್ಟವೂ ಆದ ಸಂಸ್ಥೆಗಳೊಂದಿಗೆ ಈ ಅಸ್ತ್ರಗಳಿಲ್ಲದೆ ಹೋರಾಟವು ಸಾಧ್ಯವಿರಲಿಲ್ಲ. ಅನೇಕ ಬಾರಿ ಚಂಪಾ ನನಗೆ ಬ್ರೆಕ್ಟ್ ನಾಟಕವೊಂದರ ಪಾತ್ರದಂತೆ ಕಂಡಿದ್ದಾರೆ. ಅಂತಿಮವಾಗಿ ವ್ಯವಸ್ಥೆಗೆ ಮುಜುಗರ, ನಾಚಿಕೆ ಉಂಟುಮಾಡುವ ಬಂಡಾಯದ ಲಕ್ಷಣ ಅವರ ಕ್ರಿಯೆಗಳಿಗೆ ಇರುತ್ತಿತ್ತು. ನಾನು ಶಿವಮೊಗ್ಗೆಗೆ ಬಂದ ಒಂದು ವರ್ಷದಲ್ಲಿ ಅಲ್ಲಿ ಒಂದು ಕಾಲೇಜಿನಲ್ಲಿ ಬಿರುಕುಬಿಟ್ಟ ಗೋಡೆಯನ್ನು ಸರಿಪಡಿಸಲು ಯಜ್ಞವನ್ನು ಮಾಡಿಸಲಾಯಿತು. ಇದನ್ನು ವಿರೋಧಿಸಿ ಕೆಲವು ವಿಚಾರವಾದಿ ಗೆಳೆಯರು ಪ್ರತಿಭಟನಾ ಮೆರವಣಿಗೆ ಮಾಡಿದರು. ಅವರ ಮೇಲೆ ಏನೂ ಗೊತ್ತಿರದ ಕಾರ್ಮಿಕರಿಂದ ಹಲ್ಲೆ ಮಾಡಿಸಲಾಯಿತು. ಇದನ್ನು ಪ್ರತಿಭಟಿಸಲು ನಗರದ ಗೋಪಿ ವೃತ್ತದಲ್ಲಿ ಒಂದು ಪ್ರತಿಭಟನೆ ಏರ್ಪಡಿಸಲಾಯಿತು. ಚಂಪಾ ಅವರನ್ನು ಭಾಷಣ ಮಾಡಲು ನಾನು ಕರೆದೆ. ಅಂದು ಅಲ್ಲಿ ನಾನಿರಲಾಗಲಿಲ್ಲ. ಆದರೆ ಅದ್ಭುತ ಭಾಷಣ ಮಾಡಿ ಆ ವಾರ ಲಂಕೇಶ ಪತ್ರಿಕೆಯಲ್ಲಿ ತಮ್ಮ ಅಂಕಣದಲ್ಲಿ ಬರೆದರು. ಹೀಗೆ ಚಂಪಾ ಜಾತ್ಯತೀತ, ಕೋಮುವಾದ ವಿರೋಧಿ ಹೋರಾಟಗಳಲ್ಲಿ ಒಂದು ಶಕ್ತಿಯಾಗಿದ್ದರು. ಲಂಕೇಶರ ಜೊತೆಗೆ ಅವರ ಜಗಳ ಇಬ್ಬರ egoಗಳಿಂದ ಉಂಟಾದ ಸಮಸ್ಯೆಯಾಗಿತ್ತು ಎನಿಸುತ್ತದೆ. ಹೀಗೆ ಪರಸ್ಪರ ಮುನಿಸಿಕೊಳ್ಳುವುದು ಅಂದಿನ ಸಂದರ್ಭದ ಭಾಗವೇ ಆಗಿತ್ತು.


ಚಂಪಾ ಶುದ್ಧ ಕಾವ್ಯವನ್ನು ಬರೆಯಲು ಪ್ರಯತ್ನಿಸಲೆ ಇಲ್ಲ. ಹಾಗೆನ್ನುವ ವಸ್ತುವೊಂದಿದೆ ಎಂದು ಅವರು ನಂಬಲೂ ಇಲ್ಲ. ಅವರಿಗೆ ಕಾವ್ಯವೆಂದರೆ ಒಂದು ಸಂವಹನ ಕ್ರಿಯೆಯಾಗಿತ್ತು. ಅದು ವೈಯಕ್ತಿಕವೂ, ಸಾರ್ವಜನಿಕವೂ ಆಗಿರುತ್ತಿತ್ತು. ಹೀಗಾಗಿ ಆಳವಾದ ಸೂಕ್ಷ್ಮವಾದ ಅಂತರಂಗದ ಕಾವ್ಯವನ್ನು ಬರೆದ ಚಂಪಾ ಮೇಲ್‌ಸ್ತರದ ಕಟಕಿಗಳನ್ನೂ ಬರೆದರು. ಚುಟುಕಗಳನ್ನೂ ಬರೆದರು. ನನಗೆ ಅವರ ನಾಟಕ ’ಅಪ್ಪ’ ಅವರ ಅತ್ಯುತ್ತಮ ಕೃತಿಯಾಗಿ ಕಂಡಿದೆ. ಅದರಲ್ಲಿ ಸಂಕೀರ್ಣತೆ, ನೋವು, ಸಂದಿಗ್ಧತೆ, ತಿಳಿವಳಿಕೆ ಇವೆಲ್ಲವೂ ಹದವಾಗಿ ಕೂಡಿಕೊಂಡಿವೆ. ವೈಚಾರಿಕವಾಗಿ ಭಾರವೆನ್ನಿಸದೇ ಅನೇಕ ಅರ್ಥಗಳ ಪಾತಳಿಗಳನ್ನು ಅದು ಕಟ್ಟಿಕೊಡುತ್ತದೆ. ಹಾಗೆಯೆ ’ಟಿಂಗರ ಬುಡ್ಡಣ್ಣ’ ಕೂಡ ಮನುಷ್ಯನ ವಿಧ್ವಂಸಕ ಸ್ವಭಾವದ ಸಾಂಕೇತಿಕ ಕಥನವಾಗಿದೆ. ಮನುಷ್ಯ ಮತ್ತು ಪ್ರಕೃತಿಯ ಸಂಬಂಧದ ಬಗ್ಗೆ ಗಾಢವಾದದ್ದನ್ನು ಆಪ್ತವಾಗಿ ಹೇಳುತ್ತದೆ. ತುಂಬಾ slender ಆಗಿರುವ ’ಕೊಡೆಗಳು’ ನಾಟಕದ ಅನೇಕ ಭಾಗಗಳು ಕಾರ್ಲ್ ಯೂಂಗ್ ವಿವರಿಸಿದ introversion, extraversionಗಳ ಅದ್ಭುತ ಅಭಿವ್ಯಕ್ತಿಗಳಾಗಿದೆ. ಜೈಲಿನ ವಿಚಾರ ಲಹರಿ ಕೃತಿಯ ಅನೇಕ ಭಾಗಗಳು ಆಲ್ಬರ್ಟ್ ಕಮೂನನ್ನು ನೆನಪಿಗೆ ತರುತ್ತವೆ.

ಯೂಕೋ ಒಂದು ಯುಗವು ಮುಗಿಯುತ್ತಾ ಬಂದಿದೆ ಎಂದು ಖಿನ್ನನಾಗುತ್ತೇನೆ. ಇದು ಚಂಪಾ ಅವರ ಸಾವಿನಿಂದಲ್ಲ. ಚಂಪಾ ವ್ಯಕ್ತಿತ್ವದ ಸ್ವಚ್ಛಂದತೆ, ಕ್ರಿಯಾಶೀಲತೆ, ಪ್ರತಿರೋಧ ಇವೆಲ್ಲವೂ ಅಪರಾಧಗಳಾಗಿರುವ ಕಾಲದಲ್ಲಿ ನಾವಿದ್ದೇವೆ. ಹೀಗಾಗಿ ಬಹುಬೇಗ ಚಂಪಾ, ಲಂಕೇಶ ಇವರೆಲ್ಲ ನಮ್ಮ ಕಾಲಕ್ಕೆ ಸಂಬಂಧವೇ ಇಲ್ಲದ ಕಳೆದುಹೋದ ಕಾಲವೊಂದರ ಸಂಕೇತಗಳಾಗಿಬಿಟ್ಟಿದ್ದಾರೆ. ಅದರ ಬಗ್ಗೆ ಮರು ಹಂಬಲದಿಂದ ಪ್ರಯೋಜನವಿಲ್ಲ. ಏನಿದ್ದರೂ ನಮ್ಮ ಜಗಳಗಳನ್ನು ನಾವೇ ಆಡಬೇಕು. ಚಂಪಾ ಎನ್ನುವ ಗುರುವಿನ ಪ್ರಭಾವದಿಂದಾಗಿ ಇರುವಷ್ಟು ದಿನ ಪ್ರಕ್ಷುಬ್ಧತೆ, ಹೋರಾಟಗಳು ಇವು ಮುಗಿಯದೇ ಇರಲಿ. ಜೊತೆಗೆ ಜೀವನ್ಮುಖತೆಯೂ ಇರಲಿ.

DON’T REST IN PEACE
DON’T LET US REST IN PEACE

ಪ್ರೊ.ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು


ಇದನ್ನೂ ಓದಿ: ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...