Homeಚಳವಳಿಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಚಂಪಾರವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಬಿ.ಚಂದ್ರೇಗೌಡರು ಬರೆದ ಯಾಹೂ ಲೇಖನ

- Advertisement -
- Advertisement -

ಚಂಪಾರಿಗೆ ಎಪ್ಪತ್ತು! ನಂಬುವುದೇ ಕಷ್ಟ. ಅವರ ಬಂಡಾಯ, ಕಿಲಾಡಿ ಮತ್ತು ಕಿಡಿಗೇಡಿತನಕ್ಕೆ ಎಪ್ಪತ್ತು  ತುಂಬಲು ಸಾಧ್ಯವಿಲ್ಲ, ಅದು ಬಂಡಾಯ ಮತ್ತು ನವ್ಯದ ನಡುಕಾಲದಲ್ಲೇ ನಿಂತಿರಬೇಕು ಅನ್ನಿಸಿತು. ಆದರೂ ಅವರನ್ನು ಮಾತನಾಡಿಸಿ ಒಂದು ಹಾರೈಕೆ ಮಾತೇಳುವುದು ನಮ್ಮ ಕರ್ತವ್ಯವಲ್ಲವೆ. ಫೋನ್  ಮಾಡಿದ್ರೆ ಸಿಕ್ಕೇಬಿಟ್ರು.

“ಹಲೋ ನಮಸ್ಕಾರ ಸಾರ್, ನಾನು ಯಾಹೂ”

“ಯಾಹು ಅಂದ್ರ ಗೌರಿ ಲಂಕೇಶದಾಗ ಬರೀತಿರಲ್ಲಿ ಅವರ ಹೌದಲ್ಲೋ ?

“ಹೌದು ಸಾರ್”.

“ನಿಮ್ಮ ಹೆಸರೇನ್ರಿ ?”

“ಯಾಹೂ ಅಂತ ಸಾರ್ ?

“ಅದು ಖರೇರಿ, ತಂದಿ ತಾಯಿ ಇಟ್ಟ ಹೆಸರಿಲ್ಲೇನು ?”

“ಅದು ಕರಿಯಕ್ಕೆ ಚನ್ನಾಗಿಲ್ಲ ಅಂತ ಗೌರಿಮೇಡಂ ಯಾಹೂ ಅಂತ ಇಟ್ಟವರೆ ಸಾ”,

“ಅಂಗೆನ ಯದಕ ಫೋನ್ ಮಾಡಿದಿರಿ ಹೇಳ್ರಲ್ಲ ?”

“ಯಪ್ಪತ್ತು ವರ್ಸಾಯ್ತಂತಲ್ಲ ಸಾರ್ ನಿಮಗೆ ?”

 “ಅನಂತಮೂರ್ತಿಗಾಗ್ಲೆ ಎಪ್ಪತ್ತಾರಾತು ಗೊತ್ತೇನ ?”

“ಅವು ಎಪ್ಪತ್ತಾರಕ್ಕಿಂತ್ಲೂ ಜಾಸ್ತಿಯಾದಂಗೆ ಕಣ್ತಾರೆ. ಆದ್ರೆ ನೀವು ಮಾತ್ರ ಇನ್ನು ಐವತ್ತಾರು ವರ್ಷದಂಗೆ ಕಾಣ್ತೀರಿ. ಇದರ ಗುಟ್ಟೇನು ಸಾರ್ ?

“ಇದರಾಗ ಗುಟ್ಟೇನು ಬಂತ್ರಿ, ನನ್ನ ಮಾತುಕತಿ, ಬರವಣಿಗೆ, ನಡವಳಿಕೆ ಇವೇನದಾವು ಇವುಕೂ, ನನ್ನ ವಯಸಿಗೂ ಸಂಬಂದಿಲ್ಲ, ನಮ್ಮ ದೇಶದಾಗ ಒಂದೊಂದು ವಯೋಮಾನಕ್ಕೆ ಒಂದೊಂದು ನಡವಳಿಕೆ ಇರಾಕೆ ಬೇಕು ಅಂತ ಹೇಳಿ ನಿಯಮ ಮಾಡ್ಕಾರ, ಅದನ್ನ ಮುರಕೊಂಡ ಹೋದ್ರೆ ನಾವು ಅರಾಮಿರತೇವಿ, ಅಷ್ಟ”.

“ನೀವೀಗ ಯಾವುದನ್ನು ಮುರದಿದ್ದಿರಿ ಸಾರ್ ?”

“ಅರವತ್ತರ ಅರಳುಮರಳು ಮುರುದು ಹತ್ತು ವರ್ಸಾತು”

“ಈ ಎಪ್ಪತ್ತು ವರ್ಷದಲ್ಲಿ ಹಿಂತಿರುಗಿ ನೋಡಿದ್ರೆ ಏನನಸ್ತದೆ ಸಾರ್ ?

“ಭಾಳ ಮಂದಿ ಸಾವಿಗೆ ಸಂತಾಪ ಬರದೇನಿ, ಇನ್ನ ರಗಡ ಮಂದಿಗೆ ಬರಿಬೇಕಲ್ಲಪ್ಪಾ ಅನಸತೈತಿ.”

“ನೀವು ಸಂತಾಪ ಬರಿಯೋ ಮಂದಿ ಬಹಳ ಜನ ಉಳಿದಿಲ್ಲವಲ್ಲ ಸಾರ್ ?”

“ಏ, ಭಾಳ ಮಂದ್ಯದಾರ, ಪುರೋಹಿತರ ಪೈಕಿನ ಒಂದು ಡಜನ್ ಅದಾರ, ರಾಜಕಾರಣದಾಗ ಮೂರು ನಾಕು ಮಂದಿ ಆದಾರ, ಸಾಹಿತ್ಯ ಲೋಕದಾಗ ಆಯಸ್ಸು ಮುಗಿಸಿ ಹೋಗೋ ಮಂದಿಗಿಂತ ಲಬಕ್ಕನ ಹೋಗೋ ಮಂದಿ ಭಾಳದಾರ”.

“ಅದರಲ್ಲೂ ಬಂಡಾಯದೋರು ಬೇಗ ಹೋಗ್ತರಲ್ಲ ಸಾರ್ ?”

“ಹೌದ್ರಿ,  ನವೋದಯದವರು ಪಿಂಚಣಿ ತೊಗಂಡು ಆರಾಮವಾಗಿದ್ದಾರ. ನವ್ಯದವರು, ಬಂಡಾಯದವರು ಕೂಡೇ ಹೊಂಟ ಹೋದರ್‍ರಿ”.

“ಸಾಹಿತ್ಯ ಲೋಕದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಅಂತ ಕೆಲವು ಕಾಲಘಟ್ಟಗಳವಲ್ಲಾ ಸಾರ್, ನಿಮ್ಮ ಬರವಣಿಗೆ ಹೋರಾಟ, ಯಾವ ಘಟ್ಟದಲ್ಲಿ ತೀವ್ರವಾಗಿತ್ತು ಸಾರ್.

“ನೋಡಿ ಇವರೆ, ನಾವು ಯಾವ ಕಾಲಘಟ್ಟದಾಗೂ ಎರಡೂ ಕಾಲಿಟ್ಟವರಲ್ಲ. ಒಂದೊಂದೇ ಕಾಲಿಟ್ಟು ಹಿಂದ ತಗದೇವಿ”.

“ಯಾಕ್ ಸರ್ ?”

“ಯಾಕ್ ಅಂದ್ರ, ಒಂದು ಲೇಬಲ್ ಹಚಗೊಂಡು ಬರಿಯೂದಂದ್ರ ನನಗಾಗುದಿಲ್ರಿ,

ಮೊದಲಿಕ್ಕ ನವೋದಯದವರು ಬರಿಯಕ್ಕತ್ತಿದ್ರು. ಅವುರಿಗೆ ಆಗ ಲೇಬಲ್ ಇರಲಿಲ್ಲ. ಈ ನಮ್ಮ ಪಿತಾಮಹರಿಗೆ ಯಂಗೋ ಏನೋ ನವೋದಯದವರು ಅನ್ನೋ ಲೇಬಲ್ ಸಿಕ್ಕು ‘ಏ ನಮಗ ಲೇಬಲ್ ಸಿಕ್ತು’ ಅಂತೇಳಿ ಬರದು ಬರೆದು ಸುಸ್ತಾದರ್‍ರಿ.”

“ಆದ್ರು ಇವತ್ತಿಗೂ ಅವರನ್ನ ಓದಬವುದಲ್ಲ ಸಾರ್”…?

“ಕೆಲವು ಮಂದಿನ್ನ ಓದಬವುದು ಅಷ್ಟರಿ, ಇನ್ನ ಕೆಲವು ಮಂದಿ ಪುಸ್ತಕ ತೊಗಂಡು ಸಂತಾಪ ಸೂಚನೆ ಮಾಡಿ ಮುಂದೆ ಹೋಗಬಹುದು”.

“ಆ ತರ ಬರದಿರೋರು ಪ್ರಗತಿಶೀಲರಲ್ಲವ ಸಾರ್ ?”

“ಪ್ರಗತಿಶೀಲರು ಬರಕೊಂಡ್ ಬದುತ್ತೇವಿ ಅಂತ ಹೊಂಟರ್‍ರಿ. ಅದಕ ಅಂಗ ಬರದಾರ, ಪಾಪ ಮೊದಲಕ್ಕ ತಮ್ಮ ಸುತ್ತಮುತ್ತ ಕಾಣೋ ಸಮಾಜ ಕುರುತು ಬರದ್ರು. ಅದು ಖಾಲಿ ಆತು. ಅನಂತರ ಗಟಾರ ಜೀವನ ಬರಿಬೇಕು ಅಂತ ಹೊಂಟರ್‍ರಿ, ಅನುಭವದ ಸಲುವಾಗಿ ಗಟಾರಕ್ಕೋದ್ರು, ವಳ್ಳಿ ಬರಲಿಲ್ಲವರು. ‘ಏ ಇಲ್ಲಿ ಭಾಳ ಅರಾಮೈತ’ ಅಂತ ಅಲ್ಲೇ ಉಳುದ್ರು. “ಅಲ್ಲಿಂದ ಅಂಗೇ ಹೊಂಟೋದರಲ್ಲ?”

“ಹೌದ್ರಿ, ಇನ್ನ ನವ್ಯದವರಿಗೆ ಅನಾಥ ಪ್ರಜ್ಞೆ ಅಮರಿಕೊಂಡು ಏನು ನೋಡಿದ್ರೂ ಚಂದ ಕಾಣಿರಲಿಲ್ಲ ಅವರಿಗೆ. ಆದ್ರಿಂದ ಒಳಗೋದ್ರು. ವಳ್ಳಿ ಬರಲಿಲ್ಲವರು. ನಾವೊಂದಿಷ್ಟು ಮಂದಿ ಹೊರಬಂದು ಬಂಡಾಯದ ಕಡೆ ಹೊಂಟವಿ”.

“ಅಂಗಾದ್ರೆ ನಿಮ್ಮ ಬಂಡಾಯ ಮಧ್ಯಂತರದ್ದ ಸಾರ್ ?”

“ಇಲ್ರೀ, ಬಂಡಾಯ ನನ್ನ ಮನೋಧರ್ಮ, ನಾ ಪೆನ್ನ ತೊಗಂಡ ಕೂಡಲೇ ಹೊರಬಂದಿದ್ದೇ ಬಂಡಾಯ, ಧಾರವಾಡದಾಗ ಬೇಂದ್ರೆ, ಜೋಶಿ ಮತ್ತವರ ಬಳಗ, ಅನಂತರ ಸಿ.ಪ. ಶೆಟ್ಟಿ, ಗಿರಡ್ಡಿ, ಮಾಕು, ದೇಕು, ಗೋಕಾಕ್ ಇವರ ವಿರುದ್ಧ ನನ್ನ ಬಂಡಾಯ ಎಂದೂ ಇದ್ದದ್ದೆ. ಅದಕ ನೋಡ್ರಿ ಎಮರ್ಜೆನ್ಸಿಲಿ ನಾ ಒಬ್ಬವನೇ ಜೇಲಿಗೆ ಹೋದದ್ದು “.

“ಆಗ ಇಡೀ ಧಾರವಾಡ ಖುಷಿಪಡ್ತಾಂತಲ್ಲಾ ಸಾರ್?”

“ನಾ ಹೊರಬಂದಾಗ ಅಷ್ಟೇ ಬೇಸರಾತು ಅವರಿಗೆ”.

“ಜೈಲಲ್ಲಿ ನೀವು ಆರೆಸೆನ್ಸಿನವರ ಜೊತೆಗಿದ್ರಂತೆ ?”

“ಜೈಲಂದ್ರ ಮುಗಿತಲ್ರೀ ಅದು ಪಬ್ಲಿಕ್ ಪಡಖಾನಿ ಇದ್ದಂಗ, ಅಲ್ಲಿಗೆ ದರವೊಬ್ಬರೂ ಬರತಾರ, ಅಂಗ ಚೆಡ್ಡಿ ಹುಡ್ರು ಬಂದಿದ್ದು, ಕೆಲವುರು ನಾ ಆರೆಸ್ಸೆಸ್ಸಲ್ಲ ಅಂತ ಅಳಾಕತ್ತಿದ್ರು.”

“ಆದ್ರಿವತ್ತು ಯಂಗೆ ನಗ್ತಾರೆ ನೋಡಿ ಸಾರ್”

“ಇಲ್ಲಿ ಯಾರ ನಗೂನೂ ಶಾಶ್ವತ ಅಲ್ಲರೀ. ಒಂದು ಕಾಲಕ್ಕೆ ಕಾಂಗ್ರೆಸ್‌ನವರು ಅಂದ್ರೆ ಮಂದಿ ಹೆದರುತಿದ್ದರು. ಆದ್ರ ಇವತ್ತು ಕಾಂಗ್ರೆಸ್ಸಿನವರು ಅಂದ್ರೆ ಒಂದೀಟು ಡುಬ್ಬು ಕೆರೆದು ಹೋಕ್ಯೇನಾ ಅನ್ನಂಗಾಗೇರೆ. ಅಂಗ ಈ ಚೆಡ್ಡಿಗಳ ನಗು ಎಡೂರಪ್ಪ ಲಗಾಟ ಹೊಡೆದ ನಂತರ ಹಿಂಗೇ ಇರುತ್ತೆ ಅಂತ ಹೇಳಾಕ ಬರೂದಿಲ್ಲ”.

“ಇದೊಂತರ ಹತಾಶೆ ಮುಚ್ಚಿಡೋ ಅಭಿಪ್ರಾಯದಂಗೆ ಇದೆಯಲ್ಲ ಸಾರ್”.

“ಹತಾಶ ಅನ್ನದು ನನ್ನ ಸನೇಕ ಸುಳೆದಿಲ್ಲರಿ. ಹತಾಶ ಏನಾರ ನನಗೆ ಇದ್ದಿದ್ರೆ ನನ್ನ ಅರವತ್ತನೇ ವರ್ಷದ ಅದ್ದೂರಿಯಿಂದೆ ಆಚರಿಸೊ ಏರ್ಪಾಡು ಮಾಡತಿದ್ವೆ. “

“ಹೌದ ಸಾರ್?”

“ಹೌದ್ರಿ, ನನಗೆ ಕೆಲವರ ನೋಡಿದ ಕೂಡ್ಳೆ ಬ್ಯಾಟ್ರಿ ಚಾರ್ಜಾಕ್ಕಿತಿ. ಚಡ್ಡಿಗಳ ನೋಡಿದ್ರೆ, ಪುರೋಹಿತರ ನೋಡಿದ್ರೆ, ಪೊಲೀಸರ ನೋಡಿದ್ರೆ, ಇನ್ನು ಕೆಲವರದಾರ ಅವರನ್ನ ನೋಡಿದ್ರೆ, ಅವರ ಬರದದ್ದನ್ನ ಓದಿದ್ರೆ ನನ್ನ ಬ್ಯಾಟರಿ ಚಾರ್ಜ್ ! ಅದಕ ನೋಡ್ರಿ ನನಗೆ ಎಪ್ಪತ್ತಾದದ್ದು ನನಗೇ ಗುರುತಾಗಲಿಲ್ಲ”.

  • ಬಿ. ಚಂದ್ರೇಗೌಡ

(ಚಂಪಾರವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಬಿ.ಚಂದ್ರೇಗೌಡರು ಬರೆದ ಯಾಹೂ ಲೇಖನ)


ಇದನ್ನೂ ಓದಿ; ಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...