ಮಹಾರಾಷ್ಟ್ರ ಅಧಿಕಾರ ಗದ್ದುಗೆ ಏರಲು ಬಿಜೆಪಿ ಮತ್ತು ಶಿವಸೇನೆಯ ಹಾವು-ಏಣಿ ಆಟ ಮುಂದುವರೆದಿದೆ. ನಾ ಕೊಡೆ, ನೀ ಬಿಡೆ ಕದನದಲ್ಲಿ ರಾಜ್ಯ ಆಡಳಿತ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ಬಿಜೆಪಿ ಮತ್ತು ಶಿವಸೇನೆಯ ಕುರ್ಚಿ ಗುದ್ದಾಟ ಹಾಸ್ಯಾಸ್ಪದಕ್ಕೆ ಗುರಿಯಾಗಿದೆ. ಮೈತ್ರಿ ಪಾಲುದಾರ, ಮಿತ್ರ ಬಿಜೆಪಿಗೆ, ಶಿವಸೇನೆ ಖಡಕ್ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದೆ.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ, ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂದೆ ತೆಗೆಯುವುದಿಲ್ಲ. ಸಿಎಂ ಸ್ಥಾನ ಶಿವಸೇನೆಗೆ ಬೇಕು ಎಂದು ತೀಕ್ಷ್ಣ ಸಂದೇಶ ರವಾನಿಸಿದ್ದಾರೆ. ಮಾತೋಶ್ರೀ ನಿವಾಸದಿಂದ 3 ಕಿ.ಮೀ ದೂರದಲ್ಲಿರುವ ಹೋಟೆಲ್ ನಲ್ಲಿ ಮಾತನಾಡಿದ ಠಾಕ್ರೆ, ಬಿಜೆಪಿ ಶಿವಸೇನೆಯ ಕೆಲ ಶಾಸಕರನ್ನು ಬಂಧಿಸುವುದು ಮತ್ತು ತನ್ನತ್ತ ಸೆಳೆಯಲು ತಂತ್ರ ಹೂಡಿರಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರ ತಂಡವು ಇಂದು ಮತ್ತೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿದೆ. ಆದರೆ ರಾಜ್ಯಪಾಲರನ್ನು ಸರ್ಕಾರ ರಚನೆ ವಿಚಾರಕ್ಕಾಗಿ ಭೇಟಿ ಮಾಡಿಲ್ಲ. ಸರ್ಕಾರಿ ಯೋಜನೆಗಳ ನವೀಕರಣ ಕುರಿತು ಚರ್ಚಿಸಲಾಗಿದೆ ಎಂದು ಬಿಜೆಪಿ ಹೇಳಿದೆ. ಇನ್ನು ಶಿವಸೇನೆ ಮಾತ್ರ ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿದೆ. 15 ದಿನಗಳಿಂದ ನಾವು ಇದಕ್ಕಾಗೇ ಕಾಯುತ್ತಿದ್ದೇವೆ. ಕಾಲಹರಣ ಮಾಡಲು ವೃಥಾ ಮನಸ್ಸಿಲ್ಲ. ಶಿವಸೇನೆಯಿಂದ ಸಿಎಂ ಅಭ್ಯರ್ಥಿ ಆಯ್ಕೆಯಾಗುವ ಬಗ್ಗೆ ಬಿಜೆಪಿ ಲಿಖಿತ ಒಪ್ಪಂದ ಮಾಡಿಕೊಳ್ಳಬೇಕು ಎಂದು ಹೇಳಿದೆ.
ಅಲ್ಲದೇ ಅಮಿತ್ ಶಾ ಅವರೊಂದಿಗೆ ನಡೆದ ಸಭೆಯಲ್ಲೇ ಉದ್ಧವ್ ಠಾಕ್ರೆ ಅವರು ಸಿಎಂ ಹುದ್ದೆಗಾಗಿ ನೇರವಾಗಿಯೇ ಬೇಡಿಕೆಯಟ್ಟಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಈ ನಿರ್ಧಾರಕ್ಕೆ ಶಿವಸೇನೆ ಬದ್ಧವಾಗಿದೆ. ಸಿಎಂ ಹುದ್ದೆ ಬೇಡವಾಗಿದ್ದರೆ ನಾವ್ಯಾಕೆ ಇಷ್ಟು ದಿನಗಳನ್ನು ವ್ಯರ್ಥ ಮಾಡಬೇಕಿತ್ತು ಅಂತಾ ಶಿವಸೇನೆ ಶಾಸಕ ಸಂಜಯ್ ಶಿರ್ಸತ್ ತಿಳಿಸಿದ್ದಾರೆ.


