ಕೆಲ ದಿನಗಳ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ‘ಗೆಜೆಟೆಡ್ ಪ್ರೊಬೆಷನರಿ ಹುದ್ದೆ’ಗಳ ಪರೀಕ್ಷೆಯಲ್ಲಿನ ಪ್ರಶ್ನೆಗಳ ಗೊಂದಲಕಾರಿ ಕನ್ನಡಾನುವಾದದಿಂದ ಸಾಕಷ್ಟು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಆಯೋಗದ ನಿರ್ಲಕ್ಷ್ಯ ಮತ್ತು ಕನ್ನಡ ವಿರೋಧಿ ಧೋರಣೆ ಕುರಿತು ಸಾಕಷ್ಟು ಸಾರ್ವಜನಿಕ ವಿರೋಧವೂ ವ್ಯಕ್ತವಾಗಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮರು ಪರೀಕ್ಷೆಗೆ ಆದೇಶ ನೀಡಿದ್ದಾರೆ. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ” ಎಂದು ಮಾಹಿತಿ ನೀಡಿದ್ದಾರೆ.
“ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಅವರು ಭರವಸೆ ನೀಡಿದ್ದಾರೆ.
“ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ” ಎಂದು ಅವರು ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ; ಮನಿ ಲಾಂಡರಿಂಗ್ ಪ್ರಕರಣ: ಮನೆ ಪರಿಶೀಲನೆ ನಂತರ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧಿಸಿದ ಇಡಿ


