ಹೋದ ವರ್ಷ ಏಪ್ರಿಲ್ 29ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಒಂದು ಪತ್ರ, ಇತ್ತೀಚೆಗೆ ಏಪ್ರಿಲ್ 14ರಂದು ಒಂದು ಪತ್ರ. ಈ ಎರಡರ ನಡುವೆ ಇನ್ನೂ ಎಂಟು ಪತ್ರಗಳು. ಹಲವು ಟ್ವೀಟ್‌ಗಳು, ಏಳು ಪ್ರೆಸ್‌ಮೀಟ್‌ಗಳು, ಒಮ್ಮೆ ಆರೋಗ್ಯ ಸಚಿವ ಡಾ, ಸುಧಾಕರ್ ಸಮ್ಮುಖದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಯಲ್ಲಿ ಮನವಿ ಮತ್ತು ಅಧಿವೇಶನದಲ್ಲಿ ಆಗ್ರಹ…..
ಇಷ್ಟೆಲ್ಲವನ್ನೂ ಗದಗ ಶಾಸಕ ಎಚ್.ಕೆ.ಪಾಟೀಲರು ಕೋವಿಡ್ ನಿಯಂತ್ರಣಕ್ಕಾಗಿ, ಕೋವಿಡ್ ಸಾವು ತಪ್ಪಿಸಲು ಅನುಸರಿಸಬೇಕಾದ ಕ್ರಮಗಳಿಗಾಗಿ ಸರ್ಕಾರವನ್ನು ಆಗ್ರಹಿಸಲು ಮಾಡುತ್ತ ಬಂದರು.
8 ತಿಂಗಳ ಹಿಂದೆಯೇ ಅವರು, ಮುಂದೆ ಸಂಭವಿಸಲಿರುವ ಆಮ್ಲಜನಕ ಕೊರತೆ, ವೆಂಟಿಲೇಟರ್ ಕೊರತೆ ಮತ್ತು ಆಸ್ಪತ್ರೆ ಹಾಸಿಗೆಗಳ ಕುರಿತು ಎಚ್ಚರಿಸುತ್ತ ಬಂದರು. ಮೊದಲ ಪತ್ರದಲ್ಲಿ (ಹೋದ ವರ್ಷ ಏಪ್ರಿಲ್) ಈ ಸಂದರ್ಭ ಬಳಸಿಕೊಂಡು ಮದ್ಯಪಾನ ನಿಷೇಧಕ್ಕೆ ಯತ್ನಿಸಿ ಎಮದು ಸಲಹೆ ಕೊಟ್ಟಿದ್ದರು.
ಉಳಿದ ಪತ್ರಗಳಲ್ಲಿ ಕೈಗಾರಿಕಾ ವಲಯದ ಆಮ್ಜನಕ ಬಳಸಿಕೊಳ್ಳಲು, ಖಾಸಗಿ ಆಸ್ಪತ್ರೆಗಳು ಕನಿಷ್ಠ ಶೇ. 50ರಷ್ಟು ಹಾಸಿಗೆಗಳನ್ನು ಮೀಸಲಿಡಲು ಒತ್ತಾಯ ಹಾಕುತ್ತ ಬಂದರು.
ಆದರೆ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಎಚ್.ಕೆ ಪಾಟೀಲರ ಸಲಹೆಗಳಿಗೆ ಗೋಣು ಆಡಿಸಿದರೇ ವಿನಃ ಕ್ರಮಕ್ಕೆ ಮುಂದಾಗಲಿಲ್ಲ. ಅದರ ಪರಿಣಾಮವನ್ನು ಇವತ್ತು ನೋಡುತ್ತಿದ್ದೇವೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಎಚ್‌ಕೆ. ಪಾಟೀಲ್, ‘ಹತ್ತಾರು ಪತ್ರ ಬರೆದು ಸರ್ಕಾರದ ಜವಾಬ್ದಾರಿ ನೆನಪಿಸಿದೆ, ಸುದ್ದಿಗೋಷ್ಠಿಗಳ ಮೂಲಕ, ಟ್ವೀಟ್‌ಗಳ ಮೂಲಕ ವಿನಂತಿಸಿದೆ. ನೇರವಾಗಿ ಮುಖ್ಯಮಂತ್ರಿಯವರ ಗೃಹ ಕಚೇರಿಗೇ ಹೋಗಿ ಆಮ್ಲಜನಕವನ್ನು ಪಡೆದುಕೊಳ್ಳುವ ಬಗೆಯನ್ನು ವಿವರಿಸಿ ಬಂದೆ. ಅಧಿವೇಶನದಲ್ಲೂ ಆರೋಗ್ಯ ಮೂಲ ಸೌಕರ್ಯಗಳನ್ನು ಬೇಗ ಉನ್ನತಿಕರಿಸಿ ಎಂದು ಒತ್ತಾಯಿಸಿದೆ. ತಜ್ಞರ ಮಾತನ್ನೇ ಆಲಿಸದ ಈ ಸರ್ಕಾರ ವಿರೋಧ ಪಕ್ಷದವರ ಸಲಹೆಯನ್ನು ಕೇಳುತ್ತದೆಯೇ? ಕೈಗಾರಿಕೆಗಳ ಪರ ಇರುವ ಈ ಸರ್ಕಾರ, ಕೇಂದ್ರ ಸರ್ಕಾರದಂತೆ ಉದ್ಯಮಿಗಳ ಪರ ಇದೆಯೇ ಹೊರತು ಜನಸಾಮಾನ್ಯನ ಪರ ಇಲ್ಲ. ಇವತ್ತು ಎರಡನೇ ಕೋವಿಡ್ ಅಲೆ ರಾಜ್ಯದಲ್ಲಿ ತೀವ್ರಗೊಳ್ಳಲು ಈ ಸರ್ಕಾರದ ಸೋಮಾರಿತನ, ಅದಕ್ಷತೆಯೇ ಕಾರಣ’ ಎಂದರು.
‘ಕಳೆದ ಮಂಗಳವಾರ, ಬುಧವಾರ ದೆಹಲಿ ಹೈಕೋರ್ಟ್ ಆಮ್ಲಜನಕ ಕುರಿತಾಗಿ ಏನು ಹೇಳಿತೋ ಅದನ್ನು ನಾನು ಕಳೆದ ವರ್ಷದಿಂದ ಹೇಳುತ್ತ ಬಂದಿದ್ದೇನೆ. ಕೋರ್ಟ್ ಆಕ್ರೋಶದಲ್ಲಿ ಹೇಳಿದ್ದನ್ನು ನಾನು ಸೌಮ್ಯವಾಗಿ ಸಲಹೆ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ತಿಳಿಸುತ್ತ ಬಂದಿದ್ದೇನೆ. ಆದರೆ, ದಪ್ಪ ಚರ್ಮದ ರಾಜ್ಯ ಸರ್ಕಾರಕ್ಕೆ. ಮಂತ್ರಿಮಂಡಲಕ್ಕೆ ಆಪರೇಷನ್ ಕಮಲದಿಂದ ಬಂದವರನ್ನು ಸೇರಿಸಿಕೊಳ್ಳುವುದು, ಉಪ ಚುನಾವಣೆ ಮುಖ್ಯವಾಯಿತೆ ಹೊರತು ಕೋವಿಡ್ ನಿಯಂತ್ರಣದ ಕಾಳಜಿ ಮುಖ್ಯವಾಗಲೇ ಇಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಈಗಲಾದರೂ ಕೈಗಾರಿಕಾ ವಲಯದ ಆಮ್ಲಜನಕವನ್ನು ಪಡೆಯಬೇಕು. ಈ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಅದನ್ನು ವಶಪಡಿಸಿಕೊಳ್ಳಬೇಕು. ಕೈಗಾರಿಕಾ ಉದ್ದೇಶದ ಆಮ್ಲಜನಕ, ವೈದ್ಯಕೀಯ ಆಮ್ಲಜನಕ ವ್ಯತ್ಯಾಸವೇನಿಲ್ಲ. ಒಂದು ದೊಡ್ಡ ಗಾತ್ರದ ಸಿಲಿಂಡರ್‌ನಲ್ಲಿ ಇರುತ್ತದೆ, ಇನ್ನೊಂದು ಸಣ್ಣ ಸೈಜಿನ ಸಿಲಿಂಡರ್‌ನಲ್ಲಿ ಇರುತ್ತದೆ. ಈಗ ಹೇಗೂ ಬಹುಪಾಲು ಆಸ್ಪತ್ರೆಗಳಲ್ಲಿ ಎಲ್ಲ ವಾರ್ಡು, ರೂಮ್‌ಗಳಿಗೆ ಆಕ್ಸಿಜನ್ ಪೈಪಿಂಗ್ ಇದೆ. ಕೈಗಾರಿಕಾ ಸಿಲಿಂಡರ್‌ಗಳನ್ನು ಈ ಪೈಪಿಂಗ್‌ಗೆ ಜೋಡಿಸುವುದಷ್ಟೇ ಕೆಲಸ. ಆದರೆ ಸರ್ಕಾರ ಇನ್ನೂ ಮಾತುಕತೆಯ ಹಂತದಲ್ಲಿದೆ… ಎಷ್ಟೊಂದು ಜೀವಗಳು ಬಲಿಯಾಗಬೇಕು?’ ಎಂದು ಅವರು ಪ್ರಶ್ನೆ ಮಾಡುತ್ತಲೇ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಶಾಸಕರೊಬ್ಬರ ಸಲಹೆಯನ್ನೂ ಪರಿಗಣಿಸದ, ತಜ್ಞರ ಎಚ್ಚರಿಕೆಯನ್ನೂ ಗೌರವಿಸದ ಯಡಿಯೂರಪ್ಪ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳುವುದೇ?
- ಪಿ.ಕೆ. ಮಲ್ಲನಗೌಡರ್
ಇದನ್ನೂ ಓದಿ: ಸರ್ಕಾರದ ಆಡಳಿತ ರಾಜ್ಯ‘ಪಾಲ’ನ್ನು ವರ್ಗಾಯಿಸಬಹುದೇ?


