ಬಿಜಾಪುರ: ಇದೇ ಏ.26ರಂದು ದಾವಣಗೆರೆಯಲ್ಲಿ ಎದ್ದೇಳು ಕರ್ನಾಟಕದ ವತಿಯಿಂದ ನಡೆಯುತ್ತಿರುವ ಸಂವಿಧಾನ ಸಂರಕ್ಷಕರ ಸಮಾವೇಶಕ್ಕೆ ಜಿಲ್ಲೆಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಬೇಕೆಂದು ಎದ್ದೇಳು ಕರ್ನಾಟಕದ ರಾಜ್ಯ ಮುಖ್ಯಸ್ಥರಾದ ಮಲ್ಲಿಗೆ ಸಿರಿಮನೆ ಕರೆ ನೀಡಿದ್ದಾರೆ.
ಬಿಜಾಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಸಂವಿಧಾನವು ಇಂದು ನಮ್ಮ ದೇಶ ಏನಾಗಿದೆಯೋ ಅದಕ್ಕೆ ಪ್ರಬಲವಾದ ಬುನಾದಿಯನ್ನು ನಿರ್ಮಿಸಿಕೊಟ್ಟಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಭಾರತದ ಸಂವಿಧಾನ ಎಲ್ಲಾ ಜಾತಿ, ವರ್ಗಗಳ, ಧರ್ಮಗಳ, ಜನಾಂಗಗಳನ್ನು ಸಮಾನರನ್ನಾಗಿ ಘೋಷಣೆ ಮಾಡಿದೆ. ನಮ್ಮೆಲ್ಲರಿಗೂ ಸಮಾನವಾದಂತಹ ಹಕ್ಕುಗಳನ್ನು ಒದಗಿಸಿಕೊಟ್ಟಿದೆ. ಅಷ್ಟು ಮಾತ್ರವಲ್ಲ ಎಲ್ಲರಿಗೂ ಸಮಾನವಾದಂತಹ ಅಭಿವ್ಯಕ್ತಿಯ ಸ್ವತಂತ್ರವನ್ನು ಒದಗಿಸಿಕೊಟ್ಟಿದೆ ಮತ್ತು ಸರಕಾರದಿಂದ ರಕ್ಷಣೆ ಪಡೆಯುವಂತಹ ಎಲ್ಲಾ ಅವಕಾಶಗಳನ್ನು ಭಾರತದ ಸಂವಿಧಾನ ನಮಗೆ ಒದಗಿಸಿಕೊಟ್ಟಿದೆ. ಇಂದು ನಮ್ಮ ದೇಶ ಇಷ್ಟೊಂದು ಅಭಿವೃದ್ಧಿ ಸಾಧಿಸುವುದಕ್ಕೆ ಮತ್ತು ಪ್ರಪಂಚದಲ್ಲಿ ವಿಶೇಷವಾದ ಸ್ಥಾನಮಾನವನ್ನು ಗಳಿಸುವುದಕ್ಕೆ ಕಾರಣವಾಗಿರುವುದು ನಮ್ಮ ದೇಶದ ಸಂವಿಧಾನ. ಈ ಪ್ರಜಾತಂತ್ರ, ಈ ಸಂವಿಧಾನ ನಮಗೆ ಉಚಿತವಾಗಿ ಬರಲಿಲ್ಲ. ಬದಲಿಗೆ ಇದರ ರಚನೆಗಾಗಿ, ಪ್ರಜಾತಂತ್ರವನ್ನು ರೂಪಿಸುವುದಕ್ಕಾಗಿ ಸಾವಿರಾರು ಜನರು ಸ್ವತಂತ್ರ ಚಳವಳಿಯಲ್ಲಿ ಮತ್ತು ಅನಂತರ ಕೂಡ ತ್ಯಾಗ ಬಲಿದಾನವನ್ನು ಗೈದಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಸಂವಿಧಾನದ ಕನಸನ್ನು ಕಟ್ಟಿ ಮುಂದೆ ಈ ದೇಶ ಏನಾಗಬೇಕೆಂಬುದಕ್ಕೆ ಗಟ್ಟಿಯಾದ ಅಡಿಪಾಯವನ್ನು ನಿರ್ಮಿಸಿಕೊಟ್ಟಿದ್ದಾರೆ. ಅವರಂತೆ ಅನೇಕ ಮಂದಿ ಸಂವಿಧಾನ ರಚನಾ ಸಮಿತಿಯಲ್ಲಿದಂತಹ ಅನೇಕ ಮಹಿಳೆಯರು ಮತ್ತು ಮಹನೀಯರು ಇದಕ್ಕಾಗಿ ಶ್ರಮಿಸಿದ್ದಾರೆ ಎಂದರು.

ಸಂವಿಧಾನ ಈ ದೇಶದ ಎಲ್ಲ ನಾಗರೀಕರ ಮೇಲೆ ಒಂದು ಬಾಧ್ಯತೆಯನ್ನು ಹೊರಿಸಿದೆ. ಪರ್ಯಾಯ ಜವಾಬ್ದಾರಿ ಎಂದು ಇದನ್ನು ಕರೆಯುತ್ತಾರೆ. ನಾವೆಲ್ಲರೂ ಕೂಡ ಸಂವಿಧಾನವನ್ನು ರಕ್ಷಿಸಿಕೊಳ್ಳುವಂತಹ ಬಾಧ್ಯತೆಯನ್ನು ಹೊಂದಿದ್ದೇವೆ ಮತ್ತು ನಮ್ಮ ಕರ್ತವ್ಯವಾಗಿದೆ. ಇವತ್ತಿನ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಜಾತಿ, ಜಾತಿಗಳ ನಡುವೆ, ಧರ್ಮಗಳ ನಡುವೆ, ಸಮುದಾಯಗಳ ನಡುವೆ ಬಿಕ್ಕಟ್ಟುಗಳು ಏರ್ಪಡುತ್ತಿವೆ. ಅಂದರೆ ವಿವಿಧತೆಯಲ್ಲಿರಬೇಕಾದ ಏಕತೆಯಲ್ಲಿ ಬಿರುಕುಗಳು ಕಾಣಿಸಿಕೊಂಡರೆ ಅದನ್ನು ಸರಿಪಡಿಸಬೇಕಾದುದು ನಮ್ಮ ದೇಶದ ಬಹುತ್ವವನ್ನು, ಸಮಗ್ರತೆಯನ್ನು ರಕ್ಷಣೆ ಮಾಡಬೇಕಾದುದು ಈ ದೇಶದ ನಾಗರೀಕರಾದ ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಈ ಪರಿಕಲ್ಪನೆಯನ್ನಿಟ್ಟುಕೊಂಡು ಸಂವಿಧಾನ ಸಂರಕ್ಷಕರಾಗಿ ಎಲ್ಲ ಪ್ರಜ್ಞಾವಂತರು ಕೆಲಸ ಮಾಡಬೇಕೆಂಬ ಗುರಿಯನ್ನಿಟ್ಟುಕೊಂಡು ದೃಢನಿಶ್ಚಯದ ಜೊತೆಗೆ ಸಂವಿಧಾನ ಸಂರಕ್ಷಕರ ಪಡೆಯನ್ನು ಎದ್ದೇಳು ಕರ್ನಾಟಕ ನಿರ್ಮಾಣ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಎದ್ದೇಳು ಕರ್ನಾಟಕ ನಮ್ಮ ರಾಜ್ಯದ 120ಕ್ಕೂ ಹೆಚ್ಚುಸಾಮಾಜಿಕ ಚಳವಳಿಗಳು, ವಿವಿಧ ಜಾತಿ, ಸಮುದಾಯಗಳ ಸಂಘಟನೆಗಳು, ಪ್ರಗತಿಪರ, ಎಲ್ಲ ಚಿಂತನಾಶೀಲ, ಎಲ್ಲ ನಾಗರೀಕರ ಒಂದು ಜಂಟಿ ವೇದಿಕೆಯಾಗಿದೆ. ಎದ್ದೇಳು ಕರ್ನಾಟಕ ಇದೇ ಏಪ್ರಿಲ್ 26ಕ್ಕೆ ದಾವಣಗೆರೆಯಲ್ಲಿ ನಡೆಸುತ್ತಿರುವ ಸಂವಿಧಾನ ಸಂರಕ್ಷಕರ ಮಹಾಸಮಾವೇಶವನ್ನು ಖ್ಯಾತ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಉದ್ಘಾಟಿಸಲಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದ ಹೆಮ್ಮೆಯ ಚಿಂತಕರಾದ ಪುರುಷೋತ್ತಮ ಬಿಳಿಮಲೆ, ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ, ಚಿತ್ರನಟ ಪ್ರಕಾಶ್ ರಾಜ್ ಅಲ್ಲದೆ ವಿವಿಧ ಸಂಘಟನೆಗಳ ಪ್ರಮುಖ ಅಂದು ವೇದಿಕೆಯಲ್ಲಿರುತ್ತಾರೆ. ಅಷ್ಟು ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದ ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ಅನೇಕ ಗಣ್ಯರು ಬರುತ್ತಿದ್ದಾರೆ. ಎಲ್ಲ ಚಳವಳಿಗಳ ಮೇರು ವ್ಯಕ್ತಿತ್ವವಾದ ಮೇದಪಾಟ್ಕರ್, ಖ್ಯಾತ ಚಿಂತಕರಾದ ಪರಕಾಲ ಪ್ರಭಾಕರ್ ಆಗಮಿಸುತ್ತಿದ್ದಾರೆ. ಸರಕಾರದ ಯೋಜನಾ ಆಯೋಗದ ಮುಖ್ಯಸ್ಥರಾದ ಬಿ.ಆರ್.ಪಾಟೀಲ್, ದೇಶದ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಅನೇಕ ಗಣ್ಯ ಮಹನೀಯರು ಆಗಮಿಸಿ ಅಂದು ಈ ಕಾರ್ಯಕ್ರಮದಲ್ಲಿ ಸಂವಿಧಾನ ಸಂರಕ್ಷಕರು ಹೇಗೆ ಈ ರಾಜ್ಯವನ್ನು, ದೇಶವನ್ನು ಕಟ್ಟುವ ಸಂಕಲ್ಪ ಮಾಡುತ್ತಾರೆ ಎಂಬುದನ್ನು ಗಮನಿಸುವುದಕ್ಕಾಗಿ ಆಗಮಿಸುತ್ತಾರೆ. ರಾಜ್ಯದ ವಿವಿಧ ಭಾಗಗಳಿಂದ ಹೊರಡುವುದಕ್ಕೆ ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಹಾಗೆ ಬಿಜಾಪುರದ ಪ್ರಜ್ಞಾವಂತರು, ಈ ಸಮಾಜದ ಕುರಿತು ಕಳಕಳಿಯುಳ್ಳಂತವರು, ಯುವಜನರು, ಮಹಿಳೆಯರು ಪಾಲ್ಗೋಳ್ಳಬೇಕೆಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಎಲ್ಲರಿಗೂ ಸಂವಿಧಾನ ಸಂರಕ್ಷಕರ ಸಮಾವೇಶಕ್ಕೆ ಹಾರ್ದಿಕ ಸ್ವಾಗತವನ್ನು ಕೊರುತ್ತೇವೆ. ದಾವಣಗೆರೆಯ ಕಾರ್ಯಕ್ರಮಕ್ಕೆ ಜಾತಿ, ಧರ್ಮಗಳ ಬೇಧವಿಲ್ಲದೆ ರಾಜ್ಯ ಮತ್ತು ದೇಶದ ಬೇರೆ ಬೇರೆ ಕಡೆಗಳಿಂದ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಸಂವಿಧಾನದ ಕುರಿತು ಚಿಂತನೆಯನ್ನು ಮಾಡಲಿಕ್ಕಿದ್ದಾರೆ. ಸಂವಿಧಾನದ ಕುರಿತು ಅರಿವನ್ನು ಮೂಡಿಸಲಿಕ್ಕಿದ್ದಾರೆ. ಸಂವಿಧಾನ ರಕ್ಷಿಸುವ ಕುರಿತು ವಿಚಾರ ವಿನಿಮಯ ಅಲ್ಲಿ ನಡೆಯುತ್ತದೆ. ಅನೇಕ ಬಾರೀ ನಮಗೆ ಅನಿಸುತ್ತದೆ ನಾವು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇವೆ ಎಂದು. ಸಂವಿಧಾನವನ್ನು ದುರ್ಬಲಗೊಳಿಸುವತ್ತ ಕೆಲವೊಂದು ವಿಚ್ಛಿಧ್ರಕಾರಿ ಶಕ್ತಿಗಳು ನಿರಂತರವಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಸಂವಿಧಾನವನ್ನು ರಕ್ಷಿಸುವಂತಹ ಹೊಣೆ ಜನಸಾಮಾನ್ಯರಾಗಿರುವಂತಹ ನಮ್ಮ ನಿಮ್ಮೆಲ್ಲರ ಮೇಲಿದೆ. ಹಾಗಾಗಿ ವಿಶೇಷವಾದ ನಿರ್ಣಯವನ್ನು ಕೈಗೊಳ್ಳುವುದಕ್ಕೆ ನಾವೆಲ್ಲರೂ ಮುಂದೆ ಬರಬೇಕಾಗಿದೆ. ಸಂವಿಧಾನವನ್ನು ರಕ್ಷಿಸುವತ್ತ ನಾವೆಲ್ಲರೂ ದಾಪುಗಾಲು ಹಾಕಬೇಕಾಗಿದೆ. ಹಾಗಾಗಿ ಈ ಸಮಾವೇಶ ಎಲ್ಲ ಜನರಿಗೆ ನೇರ ಉತ್ತರವನ್ನು ನೀಡುತ್ತಿದೆ. ಸಂವಿಧಾನವನ್ನು ದುರ್ಬಲಗೊಳಿಸುವುದಕ್ಕೆ ಬಿಡುವುದಿಲ್ಲ, ಸಂವಿಧಾನವನ್ನು ಎತ್ತಿಹಿಡಿಯುತ್ತೇವೆ ಎಂಬ ಸಂದೇಶವನ್ನು ಸಮಾಜಕ್ಕೆ ನಾವು ನೀಡಬೇಕಾಗಿದೆ. ಜನರಿಗೂ ಕೂಡ ಸಂವಿಧಾನ ಸಂರಕ್ಷಕರಾಗುವಂತಹ ಅರಿವನ್ನು ಮೂಡಿಸಬೇಕಾಗಿದೆ ಎಂದು ಫಾದರ್ ಟಿಯೋಲಾ ಮಾಚಾಡೋ ಹೇಳಿದರು.
ಇಂತಹ ಸಮಾವೇಶದ ಪ್ರಾಮುಖ್ಯತೆ ಬಹಳಷ್ಟಿದೆ. ಇಂದಿನ ದಿನಮಾನದಲ್ಲಿ ಸಂವಿಧಾನದ ಮೌಲ್ಯಗಳಿಗೆ ಏನೋ ಒಂದು ಪೆಟ್ಟು ಬೀಳುತ್ತಿದೆ ಎನ್ನುವಂತಹದ್ದು ಋಜುವಾತಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಸಂವಿಧಾನವನ್ನು ರಕ್ಷಣೆ ಮಾಡಿದರೆ ಮಾತ್ರ ದೇಶದಲ್ಲಿರುವಂತಹ ಬಹುತ್ವದ ಮೌಲ್ಯಗಳು ಉಳಿಯುತ್ತವೆ. ಆ ಬಹುತ್ವ ಮೌಲ್ಯ ಉಳಿದರೆ ದೇಶ ಉಳಿಯುತ್ತದೆ ಎಂಬ ಅರಿವು, ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವಂತಹದ್ದು ಬಹಳ ಅವಶ್ಯಕವಾಗಿದೆ. ದಾವಣಗೆರೆಯಲ್ಲಿ ನಡೆಯುವಂತಹ ಸಮಾವೇಶ ಭಾರತಕ್ಕೆ ಮಾದರಿಯಾಗುವಂತಹ ಸಮಾವೇಶವಾಗುತ್ತದೆ. ಬಸವನಾಡಿನ ಜನ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಇದು 12 ಶತಮಾನದಿಂದ ಇಂದಿನವರೆಗೂ ಜಾರಿಯಲ್ಲಿದೆ. ಈ ಜಿಲ್ಲೆಯ ಜನ ಹೆಚ್ಚಿನ ಸ್ಫೂರ್ತಿಯನ್ನು ಪಡೆದು ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಜಮಾತೆ ಇಸ್ಲಾಂ ನ ಎಂ.ಡಿ. ಬಳಗನೂರ್ ಅವರು ಕರೆ ನೀಡಿದರು.
ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ, ತಿದ್ದುಪಡಿ ಮಾಡುತ್ತೇವೆ ಎಂಬ ವಿಚಾರವು ಎಲ್ಲಾ ಕಡೆ ಕೇಳಿಬರುತ್ತಿದೆ. ಈ ಸಮಾವೇಶದಲ್ಲಿ ಯುವಜನರು, ಮಹಿಳೆಯರನ್ನು ಗಟ್ಟಿಗೊಳಿಸುವಂತಹ ಕೆಲಸವನ್ನು ಇಟ್ಟುಕೊಂಡಿದ್ದೇವೆ. ಯಾಕೆ ಇದು ಯುವಜನರಿಗೆ, ಮಹಿಳೆಯರಿಗೆ ಮುಖ್ಯವಾಗುತ್ತದೆ ಎಂದರೆ ಎಲ್ಲ ಧರ್ಮಗಳ ಬಹುತ್ವದ ನೆಲೆಯಾಗಿರುವ ಈ ದೇಶದಲ್ಲಿ ಎಲ್ಲ ಧರ್ಮಿಯರು ಅಂದರೆ ಬುದ್ದನ ಅಹಿಂಸೆ ನಿಯಮವನ್ನು ಇಟ್ಟುಕೊಂಡು ಈ ಸಂವಿಧಾನವನ್ನು ಮಾಡಲಾಗಿದೆ. ಅಂಬೇಡ್ಕರ್ ಅವರು ಹೇಳುವಂತೆ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಾನಮಾನದಲ್ಲಿ ಯಾವುದದಾರೂ ಒಂದು ತಪ್ಪಿ ಹೋದರೆ ಅಲ್ಲೋಲ್ಲಕಲ್ಲೋಲವಾಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಈ ರೀತಿಯ ಸ್ಥಿತಿ ಈಗ ನಡೆಯುತ್ತಿದೆ. ಹೀಗಾಗಿ ಎಲ್ಲರೂ ಧ್ವನಿ ಎತ್ತುವ ಅವಶ್ಯಕತೆ ಇದೆ. ನಮಗಾಗಿ ಸಂವಿಧಾನ ಇದ್ದರೆ, ಸಂವಿಧಾನಕ್ಕಾಗಿ ನಾವೆಲ್ಲರೂ ಇರಬೇಕಾಗಿದೆ. ಹಾಗಾಗಿ 26ರ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕೆಂದು ಜಿಲ್ಲಾ ಎದ್ದೇಳು ಕರ್ನಾಟಕದ ಮಹಿಳಾ ಜಿಲ್ಲಾ ಮುಖ್ಯಸ್ಥೆ ಡಾ.ಭುವನೇಶ್ವರಿ ಕಾಂಬ್ಳೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀನಾಥ್ ಪೂಜಾರಿ, ಫಾ.ಕೆವೀನ್, ಅಬ್ದುಲ್ ಕದೀರ್, ಅಕ್ರಮ್ ಮಾಶಾಳ್ ಕರ್ ಇನ್ನು ಮುಂತಾದವರು ಹಾಜರಿದ್ದರು.
ನಾಳೆ ಬೈಕ್ ಜಾಥಾಕ್ಕೆ ತೆರೆ, ಅದ್ದೂರಿ ಸ್ವಾಗತ: ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗೋಣ ಬನ್ನಿ; ತಾರಾ ರಾವ್


