ರಾಜ್ಯ ಬಿಜೆಪಿ ಸರ್ಕಾರದಲ್ಲಿ 40% ಕಮೀಷನ್ ಪಡೆದು ಕಾಮಗಾರಿ ಕೆಲಸ ನೀಡುತ್ತಾರೆ ಎಂದು ಈ ಹಿಂದೆ ಗುತ್ತಿಗೆದಾರರ ಸಂಘ ಆರೋಪ ಮಾಡಿತ್ತು. ಇದೀಗ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಲಂಚ ಪಡೆದಿರುವ ಬಗ್ಗೆ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಅವರು ಆರೋಪ ಮಾಡಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ತಿಪ್ಪಾರೆಡ್ಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, “ನಮ್ಮ ಜಿಲ್ಲೆಯಲ್ಲಿ ಯಾವತ್ತೂ ಲಂಚ, ಕಮೀಷನ್ ಪ್ರಸ್ತಾಪ ಇರಲಿಲ್ಲ. ಆದರೆ ಇದೀಗ ಕಾಮಗಾರಿಗೆ ಅಥವಾ ಸರ್ಕಾರದ ಯಾವುದೇ ಕೆಲಕ್ಕೆ 10% 4%, 2% ಲಂಚ ಪಡೆಯಲಾಗುತ್ತಿದೆ ಎಂದು ಕೆಲವು ದಾಖಲೆಗಲನ್ನು ಬಿಡುಗಡೆ ಮಾಡಿದರು.
ಇದನ್ನೂ ಓದಿ: ಸರ್ಕಾರದ 40% ಕಮಿಷನ್ ಭ್ರಷ್ಟಾಚಾರಕ್ಕೆ ಅಮಿತ್ ಶಾ ಅಧಿಕೃತ ಒಪ್ಪಿಗೆ: ಸಿದ್ದರಾಮಯ್ಯ ಟೀಕೆ
ನಗರದ ಪಿಡಬ್ಲ್ಯೂಡಿ ಕಟ್ಟಡ ಕಟ್ಟಿದ ಬಿಲ್ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ನಿಮಿಷದ ಆಡಿಯೋ ಬಿಡುಗಡೆ ಮಾಡಿದ್ದು, ಈ ಆಡಿಯೋದಲ್ಲಿ “ಆರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಮಗಾರಿ, ನಿನ್ನ ಹತ್ತಿರ ಮಾತಾಡಲ್ಲ, ಹಲವರ ಹತ್ರ ಅಡ್ಜಸ್ಟ್ ಆಗಿದ್ದೇನೆ. ನೀನು ಸಣ್ಣ ಅಥವಾ ದೊಡ್ಡ ಕಾಂಟ್ಯಾಕ್ಟರ್ ಇರಬಹುದು. ನಿಂಗೆ ಕೆಲಸ ನಿಲ್ಲಿಸು ಎಂದಿಲ್ಲ, ಇಂಜನಿಯರ್ ಗೆ ಹೇಳಿದ್ದೇನೆ” ಎನ್ನುವ ಮಾತುಗಳು ಇದರಲ್ಲಿದ್ದು, ಇದು ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
#Karnataka contractors assn release audio of #BJP MLA GH Thippareddy allegedly demanding #bribe from contractor Manjunath. They plan to protest against state govt this Wednesday. Assn alleges many ministers & MLAs (cutting across parties) are demanding bribe & payments r pending pic.twitter.com/pa9xdtwBqW
— Imran Khan (@KeypadGuerilla) January 16, 2023
ಆಡಿಯೊ ಬಿಡುಗಡೆ ಬಳಿಕ ಮಾತನಾಡಿದ ಅವರು, “3 ವರ್ಷದಲ್ಲಿ ತಿಪ್ಪಾರೆಡ್ಡಿ ನನ್ನ ಬಳಿ 90 ಲಕ್ಷ ರೂ. ಹಣ ನಗದು ರೂಪದಲ್ಲಿ ಲಂಚ ಪಡೆದಿದ್ದಾರೆ. 1 ಕೋಟಿಗೆ 10 ಲಕ್ಷ ರೂ. ಲಂಚ ಪಡೆದಿದ್ದಾರೆ. 2019 ರಿಂದ ಇಲ್ಲಿಯವರೆಗೂ ಜಿಡಬ್ಲ್ಯೂಡಿ ಕಟ್ಟಡ ಕಾಮಗಾರಿ ಗೆ 12 ಲಕ್ಷ ರೂ., ಹಾಸ್ಪಿಟಲ್ ರಿಪೇರಿಗೆ 12.5 ಲಕ್ಷ ರೂ. ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಒಟ್ಟು 22 ಲಕ್ಷ ರೂ. ಹಣ ಲಂಚವಾಗಿ ಪಡೆದಿದ್ದಾರೆ. ಲೇಔಟ್‌ನ ಅಪ್ರೂವಲ್‌ಗೆ 18 ಲಕ್ಷ ರೂ., ಮೆಡಿಕಲ್ ಗ್ಯಾಸ್ ಸಂಬಂಧ 4 ಲಕ್ಷ ರೂ. ಲೇಔಟ್ ವಿಚಾರವಾಗಿ 4 ಲಕ್ಷ ರೂ., ಡಿ. 22ರಂದು ಆಸ್ಪತ್ರೆ ಕಾಮಗಾರಿ ಸಂಬಂಧ 20 ಲಕ್ಷ ರೂ. ಕ್ಲಬ್ ಗೆ ಕರೆಸಿಕೊಂಡು 13 ಲಕ್ಷ ಪಡೆದಿದ್ದಾರೆ. ಹೊಸ ಕಾಮಗಾರಿ ಕೆಲಸ ನೀಡಿ ಎಂದು ಅವರ ಮನೆಗೆ ಹೋದಾಗ 30 ಲಕ್ಷ ಹಣ ಅಡ್ವಾನ್ಸ್ ಆಗಿ ಕೇಳಿದ್ದರು ಎಂದು ಆರೋಪ ಮಾಡಿದರು.
“ಈ ಬಾರಿ ಕಾಂಟ್ಯಾಕ್ಟರ್ ಬಳಿ ಹಣ ಪಡೆದು ಚುನಾವಣೆ ಮಾಡುತ್ತೇನೆ ಎಂದು ತಿಪ್ಪಾರೆಡ್ಡಿ ಹೇಳಿದ್ದಾರೆ. ಇದೀಗ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ ಇನ್ನೂ 14-15 ಆಡಿಯೋ ಇವೆ. ಈ ಸಂಬಂಧ ನಾನು ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ. ಕೇವಲ ಇವರೊಬ್ಬರೇ ಅಲ್ಲದೇ ಇನ್ನೂ 13 ಶಾಸಕರು ಹಾಗೂ ನಾಲ್ವರು ಸಚಿವರ ದಾಖಲೆಗಳು ನನ್ನ ಬಳಿ ಇವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತೇನೆ” ಎಂದು ಮಂಜುನಾಥ್ ಹೇಳಿದ್ದಾರೆ.


