ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಕೇಳಿರುವುದಾಗಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭಾನುವಾರ ಹೇಳಿದ್ದಾರೆ. ರಾಜಕಾರಣಕ್ಕೆ ಪ್ರವೇಶಿಸಲು ಇದು ತನ್ನ ಅಂತಿಮ ಪ್ರಯತ್ನ ಎಂದು ಹೇಳಿದ್ದಾರೆ.
“ನಾನು ಬೆಳಗಾವಿಯಿಂದ ಸಂಸದನಾಗಬೇಕೆಂಬ ಆಸೆ ಹೊಂದಿದ್ದೇನೆ. ಹಾಗಾಗಿ ಬಿಜೆಪಿಯಿಂದ ಟಿಕೆಟ್ ಕೋರಿದ್ದೇನೆ” ಎಂದು ಪ್ರಮೋದ್ ಮುತಾಲಿಕ್ ಪಿಟಿಐಗೆ ತಿಳಿಸಿದ್ದಾರೆ.
ಮುತಾಲಿಕ್ ಫೆಬ್ರವರಿಯಲ್ಲಿ ರಾಜ್ಯ ಘಟಕದಿಂದ ಬಿಜೆಪಿ ಟಿಕೆಟ್ ಕೋರಿದ್ದರು. ಈ ನಿಟ್ಟಿನಲ್ಲಿ ಹಿರಿಯ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡರನ್ನು ಭೇಟಿ ಮಾಡಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಚುನಾವಣಾ ರಾಜಕೀಯಕ್ಕೆ ಬರಲು ಇದು ನನಗೆ ಕೊನೆಯ ಅವಕಾಶ. ಏಕೆಂದರೆ ನನಗೆ ಈಗ 66 ವರ್ಷ. ನಾನು ಈ ಅವಕಾಶವನ್ನು ಕಳೆದುಕೊಂಡರೆ, ನನ್ನ ಕನಸು ಅಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ” ಎಂದು ಅವರು ಹೇಳಿದರು.
ಇದನ್ನೂ ಓದಿ: PFI, SDPI ವಿರುದ್ಧದ 175 ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತೇ?: ಇಲ್ಲಿದೆ ವಿವರ
2014 ರ ಜೂನ್‌ನಲ್ಲಿ ಮುತಾಲಿಕ್ ಅವರನ್ನು ಕರ್ನಾಟಕದ ರಾಜ್ಯ ಘಟಕಕ್ಕೆ ಸೇರಿಸಿದ ನಂತರ ಕೆಲವೇ ಗಂಟೆಗಳಲ್ಲಿ ಬಿಜೆಪಿಯಿಂದ ತೆಗೆದುಹಾಕಲಾಗಿತ್ತು.
ಶ್ರೀರಾಮ ಸೇನೆ ಕಾರ್ಯಕರ್ತರು 2009 ರಲ್ಲಿ ಮಂಗಳೂರಿನ ಪಬ್‌ನಲ್ಲಿ ಮಹಿಳೆಯರ ಮೇಲೆ ನೈತಿಕ ಪೋಲಿಸ್‌ಗಿರಿಯ ಹಲ್ಲೆ ನಡೆಸಿದ ನಂತರ ಪ್ರಮೋದ್ ಮುತಾಲಿಕ್ ಮುನ್ನೆಲೆಗೆ ಬಂದಿದ್ದರು.
ಕೊರೊನಾ ಕಾರಣದಿಂದ ಕೆಲವು ತಿಂಗಳ ಹಿಂದೆ ಬಿಜೆಪಿ ಸಂಸದ ಮತ್ತು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ನಿಧನರಾಗಿದ್ದರು. ನಂತರ ಬೆಳಗಾವಿ ಲೋಕಸಭಾ ಕ್ಷೇತ್ರ ಖಾಲಿಯಾಗಿತ್ತು.
ಇದನ್ನೂ ಓದಿ: ಶೃಂಗೇರಿಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗಳಲ್ಲಿ ಬಹುಪಾಲು ಸಂಘಪರಿವಾರದವರು


