ಪಿ.ಎಫ್.ಐ/ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧದ 175 ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತು ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಅವಾಗಾವಾಗ ಆರೋಪಿಸಿದ್ದಾರೆ. ಬಿಜೆಪಿ ನಾಯಕರ ವಿರುದ್ಧದ 62 ಪ್ರಕರಣಗಳನ್ನು ರಾಜ್ಯ ಬಿಜೆಪಿ ಸರ್ಕಾರ ಹಿಂಪಡೆದ ಹಿನ್ನೆಲೆಯಲ್ಲಿ ಈ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಬಿಜೆಪಿ ಸರ್ಕಾರ 62 ಪ್ರಕರಣಗಳನ್ನು ಹಿಂಪಡೆದ ವಿಷಯದ ಮೇಲೆ ನಾನುಗೌರಿ.ಕಾಂ ವಿಶೇಷ ವರದಿಯೊಂದನ್ನು ತಯಾರಿಸುತ್ತಿತ್ತು. ಇದರ ಸಲುವಾಗಿ ರಾಜ್ಯ ಬಿಜೆಪಿ ಕಾರ್ಯದರ್ಶಿ ರವಿಕುಮಾರ್ ಅವರ ಪ್ರತಿಕ್ರಿಯೆಯನ್ನು ಕೇಳಿದಾಗ, “ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಎಸ್.ಡಿ.ಪಿ.ಐ ಅಂತಹ ಸಂಘಟನೆಯ ವಿರುದ್ಧದ ಸುಮಾರು 175 ಪ್ರಕರಣಗಳನ್ನು ಹಿಂಪಡೆದಿತ್ತು” ಎಂದು ಆರೋಪಿಸಿದ್ದರು.
“ವಿವಿಧ ಸಂದರ್ಭಗಳಲ್ಲಿ, ರೈತರ ಪರ, ಸಾರ್ವಜನಿಕರ ಪರ ಹೋರಾಟ ಮಾಡಿರುವ ನಾಯಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕೈಬಿಡುವ ಅಧಿಕಾರ ಸರ್ಕಾರಕ್ಕಿದೆ. ಹಾಗಾಗಿ ಇಂತಹ ಕೆಲವು ಹೋರಾಟಗಳಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನು ನಮ್ಮ ಸರ್ಕಾರ ಹಿಂಪಡೆದಿದೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಎಸ್.ಡಿ.ಪಿ.ಐ ನಂತಹ ಸಂಘಟನೆಯ ವಿರುದ್ಧದ ಸುಮಾರು 175 ಪ್ರಕರಣಗಳನ್ನು ಹಿಂಪಡೆದಿತ್ತು. ನಾವು ಅಂತಹ ಪ್ರಕರಣಗಳನ್ನು ಹಿಂಪಡೆದಿಲ್ಲವಲ್ಲ” ಎಂದು ಅವರು ಹೇಳಿದರು.
ಇದನ್ನೂ ಓದಿ: ಬಿಜೆಪಿ ನಾಯಕರ ವಿರುದ್ಧದ ಗಂಭೀರ ಪ್ರಕರಣಗಳನ್ನು ಹಿಂಪಡೆದ ಸರ್ಕಾರ: ಹಲವರಿಂದ ಖಂಡನೆ
ಈ ಕುರಿತು ಬಿಜೆಪಿ ಮತ್ತು ಎಸ್‌ಡಿಪಿಐ ಎರಡೂ ಸಂಘಟನೆಗಳ ಮುಖಂಡರ ಅಭಿಪ್ರಾಯ ಮತ್ತು ದಾಖಲೆ ಪಡೆದು ಪರಿಶೀಲಿಸಲು ನಾನುಗೌರಿ.ಕಾಂ ಪ್ರಯತ್ನಿಸಿದೆ.
ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರಾದ ಇಲ್ಯಾಸ್ ಮಹಮ್ಮದ್ ತುಂಬೆಯವರನ್ನು ಸಂಪರ್ಕಿಸಿದಾಗ “ಬಿಜೆಪಿಯವರು ತಮ್ಮ ಲೋಪವನ್ನು ಮುಚ್ಚಿಕೊಳ್ಳಲು ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವು ನಮ್ಮ ಸಂಘಟನೆಯ ಕೇವಲ 3 ಪ್ರಕರಣಗಳನ್ನು ಮಾತ್ರ ಹಿಂಪಡೆಯಲಾಗಿತ್ತು. ಆದರೆ ಅದೇ ಸಮಯದಲ್ಲಿ ಶ್ರೀರಾಮಸೇನೆಯಂತಹ ಇತರ ಹಿಂದೂ ಸಂಘಟನೆಗಳ ಹಲವು ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರವೇ ಹಿಂಪಡೆದಿತ್ತು” ಎಂದು ಹೇಳಿದರು.
2013 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2009-10 ನೇ ಸಾಲಿನಲ್ಲಿ, ಮೈಸೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಪಿ.ಎಫ್.ಐ ನ 175 ಕೇಸುಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ ಎಂಬ ಸಂಘಪರಿವಾರದ ಆರೋಪಗಳ ಕುರಿತ ವಾಸ್ತವಾಂಶಗಳನ್ನು ಈ ಕೆಳಗೆ ನೀಡಲಾಗಿದೆ.
ಇದು ಕಾಂಗ್ರೆಸ್ ಸರ್ಕಾರ ಹಿಂಪಡೆದ ಪ್ರಕರಣಗಳ ವಿವರ. ಮೈಸೂರು-40, ಹಾಸನ-21 ಮತ್ತು ಶಿವಮೊಗ್ಗ-114 ಸೇರಿ, ಒಟ್ಟು 175 ಪ್ರಕರಣಗಳನ್ನು ಅಂದಿನ ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತು. ಇದರಲ್ಲಿ 3 ಪ್ರಕರಣಗಳು ಪಿ.ಎಫ್.ಐ ಮೇಲೆ ದಾಖಲಿಸಿದವುಗಳಾಗಿವೆ.
ಎಸ್‌ಡಿಪಿಐ ಮೇಲಿನ ಹಿಂಪಡೆದ ಕೇಸುಗಳಾವುವು?
ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ 2009 ಜುಲೈ 2ರಂದು ಹಲೀಮ್ ಶಾದಿಯ ಮದರಸದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಹಂದಿಯ ರುಂಡವನ್ನು ಹಾಕಿ ಕೋಮುಗಲಭೆಯನ್ನು ಹುಟ್ಟಹಾಕಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ನಿರ್ದೇಶನದಂತೆ, ಸುತ್ತಮುತ್ತಲಿನ ಹಿಂದೂ-ಮುಸ್ಲಿಂ ಮನೆಗಳಿಗೆ ರಾತ್ರೋರಾತ್ರಿ ನುಗ್ಗಿದ ಪೊಲೀಸರು ಅಮಾಯಕರನ್ನು ಬಂಧಿಸಿದ್ದರು. ಮೈಸೂರು ಜಿಲ್ಲೆಯ ಪಿ.ಎಫ್.ಐ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಪೊಲೀಸರ ಈ ನಡವಳಿಕೆಯನ್ನು ಖಂಡಿಸಿದ್ದು, ಉಸ್ತುವಾರಿ ಸಚಿವರು, ಗೃಹ ಸಚಿವರು ಹಾಗೂ ಪೊಲೀಸರ ವಿರುದ್ಧ ನೇರವಾಗಿ ಆಕ್ಷೇಪಿಸಿದ್ದರು. ನಂತರ ಪತ್ರಿಕಾ ಭವನದ ಮುಂಭಾಗದಲ್ಲಿಯೇ ಎಸಿಪಿ ಪೂಜಾರ್ ಅವರ ತಂಡವು ಪಿ.ಎಫ್.ಐ ಪದಾಧಿಕಾರಿಗಳನ್ನು ಬಂಧಿಸಿದ್ದರು. ಇದನ್ನು ವಿರೋಧಿಸಿ ಜುಲೈ 7, 2009 ರಂದು ಪಿ.ಎಫ್.ಐ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟಿದ್ದರು.
ಈ ಬಗ್ಗೆ ವಕೀಲರಾದ ಎ.ಕೆ.ಸುಬ್ಬಯ್ಯನವರ ಮುಖಾಂತರ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದಾಗ ‘ಪಿ.ಎಫ್.ಐ ಕಾರ್ಯಕರ್ತರ ಬಂಧನ ಅಕ್ರಮ ಹಾಗೂ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು, WP ನಂ. 122/2009, 123/2009 ರಲ್ಲಿ ಬಂಧಿಸಲ್ಪಟ್ಟ ಜನರನ್ನು ಬಿಡುಗಡೆಗೊಳಿಸುವಂತೆ’ ಕೋರ್ಟ್ ಆದೇಶಿಸಿತ್ತು. ಅಕ್ರಮ ಬಂಧನಕ್ಕೊಳಪಡಿಸಿದ ಅಧಿಕಾರಿಗಳ ವಿರುದ್ಧ ರಿಟ್ ಸಲ್ಲಿಸಿದಾಗ, ಅಂದಿನ ಉದಯಗಿರಿ ಮತ್ತು ನರಸಿಂಹರಾಜ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ 50,000 ರೂ.ಗಳನ್ನು ದಂಡವನ್ನು ಕೋರ್ಟ್ ವಿಧಿಸಲಾಗಿತ್ತು.
ಕಾಂಗ್ರೆಸ್ ಸರ್ಕಾರ ಹಿಂಪಡೆದ ಮೈಸೂರಿನ 40 ಪ್ರಕರಣಗಳಲ್ಲಿ 3 ಪ್ರಕರಣಗಳು ಪಿ.ಎಫ್.ಐ ಮೇಲೆ ದಾಖಲಿಸಿದ ಕೇಸುಗಳಾಗಿದ್ದು, ಉಳಿದ ಎಲ್ಲಾ 37 ಕೇಸುಗಳೂ ಶ್ರೀರಾಮಸೇನೆ, ಭಜರಂಗದಳ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸ್ಥಳೀಯರ ಮೇಲೆ ದಾಖಲಾದ ಕೇಸುಗಳಾಗಿವೆ.
ಮೈಸೂರಿನಲ್ಲಿ ಪಿ.ಎಫ್.ಐ ವಿರುದ್ಧ ದಾಖಲಾದ ಕೇಸುಗಳನ್ನು ಅಲ್ಲಿನ ಸರ್ಕಾರಿ ಅಭಿಯೋಜಕರು ‘ಇದರಲ್ಲಿ ಯಾವುದೇ ಪ್ರಾಥಮಿಕ ಸಾಕ್ಷಿ ಇಲ್ಲವೆಂದು ಹೇಳಿ ಹಿಂದಕ್ಕೆ ಪಡೆಯಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಅಂದಿನ ಕ್ಯಾತಮಾರನಳ್ಳಿ ಗಲಭೆಗೆ ಶ್ರೀರಾಮಸೇನೆ ನೇರಹೊಣೆ ಎಂದು ಪಿಯುಸಿಎಲ್ ಮತ್ತು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ನಡೆಸಿದ ಸತ್ಯಶೋಧನಾ ವರದಿಯಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಡಿ.ಜೆ ಹಳ್ಳಿಯಲ್ಲಿ ಗಲಭೆಯಾಗುತ್ತಿದ್ದಾಗ ಮುಸ್ಲಿಂ ಮುಖಂಡರು ಏನು ಮಾಡುತ್ತಿದ್ದರು?
ಫೆಬ್ರವರಿ 20, 2010 ರಂದು ಕನ್ನಡ ಪ್ರಭ ದಿನಪತ್ರಿಕೆಯ ಸಾಪ್ತಾಹಿಕ ಪುಟದಲ್ಲಿ, ‘ಬನ್ನೀ ಬುರ್ಖಾ ಬಗ್ಗೆ ಮತ್ತೊಮ್ಮೆ ಚಿಂತಿಸೋಣ’ ಎಂಬ ವಿವಾದಾತ್ಮಕ ಲೇಖನ (ಲೇಖಕಿ ತಸ್ಲೀಮಾ ನಸ್ರಿನ್, ಪ್ರವಾದಿ ಮಹಮ್ಮದ್ ಅವರನ್ನು ಅವಮಾನಿಸಿ ಬರೆದಂತಹ “ಪರ್ದಾ ಹೈ ಪರ್ದಾ”) ಪ್ರಕಟವಾದ ಹಿನ್ನೆಲೆಯಲ್ಲಿ ಪತ್ರಿಕೆಯ ವಿರುದ್ಧ ಶಿವಮೊಗ್ಗ ಮತ್ತು ಹಾಸನದಲ್ಲಿ ನಡೆದ ಪ್ರತಿಭಟನೆ ತೀವ್ರಗೊಂಡಾಗ ಪೊಲೀಸರು ಗೋಲೀಬಾರ್ ನಡೆಸಿದ್ದು, ಇದರಲ್ಲಿ ಪ್ರಾಣಹಾನಿ ಸಂಭವಿಸಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ನಷ್ಟವಾಗಿತ್ತು.
ಈ ಗಲಭೆಗೆ ಸಂಬಂಧಿಸಿದಂತೆ ಹಾಸನದಲ್ಲಿ 21 ಹಾಗೂ ಶಿವಮೊಗ್ಗದಲ್ಲಿ 114 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಪಿ.ಎಫ್.ಐ ಕಾರ್ಯಕರ್ತರ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ.
ಹೀಗೆ ಒಟ್ಟು 175 ಪ್ರಕರಣಗಳಲ್ಲಿ 3 ಪ್ರಕರಣಗಳು (ಒಂದು ಪ್ರಕರಣವನ್ನು ಹಿಂಪಡೆಯುವಂತೆ ಸರ್ಕಾರಿ ಅಭಿಯೋಜಕರೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು) ಮಾತ್ರ ಪಿ.ಎಫ್.ಐ/ಎಸ್.ಡಿ.ಪಿ.ಐ ಮೇಲಿನ ಪ್ರಕರಣಗಳಾಗಿವೆ.
“ಪಿ.ಎಫ್.ಐ/ಎಸ್.ಡಿ.ಪಿ.ಐ ಮೇಲಿನ 175 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಸುಳ್ಳು ಆರೋಪ ಮಾಡಿ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಬಿಜೆಪಿ ಮತ್ತು ಸಂಘ ಪರಿವಾರ ಬಯಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರವು ಈಗ ತಮ್ಮ ಬೆಂಬಲಿಗರು ಮತ್ತು ಪಕ್ಷದ ವರಿಷ್ಟರ ವಿರುದ್ಧದ 62 ಪ್ರಕರಣಗಳನ್ನು ಹಿಂಪಡೆದಿರುವುದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಇಂತಹ ಆರೋಪಗಳನ್ನು ಮಾಡುತ್ತಿದೆ” ಎಂದು ಎಸ್.ಡಿ.ಪಿ.ಐ ಮುಖಂಡ ಇಲ್ಯಾಸ್ ತುಂಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಿಜೆಪಿಯ ಮಾಜಿ ಎಂ.ಎಲ್.ಸಿ.ಯಾಗಿದ್ದ, ಪ್ರಸ್ತುತ ಬಿಜೆಪಿ ಪ್ಲಾನಿಂಗ್ ವಿಭಾಗದ ಉಪ ನಿರ್ದೇಶಕರಾಗಿರುವ ಪುಟ್ಟಸ್ವಾಮಿ.ಬಿ.ಜೆ ಅವರನ್ನು ನಾನುಗೌರಿ.ಕಾಂ ಸಂಪರ್ಕಿಸಿದಾಗ, “ಹೌದು ಕಾಂಗ್ರೆಸ್ ಇಂತಹ ಕ್ರಮ ತೆಗೆದುಕೊಂಡಿರುವುದರ ಪರಿಣಾಮವೇ ಇಂದಿನ ಡಿ.ಜೆ.ಹಳ್ಳಿ ಗಲಭೆಗೆ ಕಾರಣವಾಗಿದೆ. ಕಾಂಗ್ರೆಸ್ ಮೊದಲಿನಿಂದಲೂ ಅವರ ಪರವಾಗಿಯೇ ಕೆಲಸ ಮಾಡಿಕೊಂಡುಬಂದಿದೆ” ಎಂದರು.
“175 ಪ್ರಕರಣಗಳನ್ನು ಹಿಂಪಡೆದಿರುವುದಕ್ಕೆ ನನ್ನ ಬಳಿ ಯಾವುದೇ ದಾಖಲೆಗಳಿಲ್ಲ. ನಿಮಗೆ ಅಗತ್ಯವಿದ್ದರೆ ಗೃಹ ಇಲಾಖೆಯನ್ನು ಸಂಪರ್ಕಿಸಿ ತೆಗೆದುಕೊಳ್ಳಬಹುದು” ಎಂದರು.
ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಬಿಜೆಪಿ ಕಾರ್ಯದರ್ಶಿ ರವಿಕುಮಾರ್ ಮತ್ತು ವಾಮನಾಚಾರ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ್ಯೂ ಸಂಪರ್ಕಕ್ಕೆ ಅವರು ಸಿಗಲಿಲ್ಲ. ಹಾಗಾಗಿ ಅವರು ಸಂಪರ್ಕಕ್ಕೆ ಬಂದ ನಂತರ ಅವರ ಹೇಳಿಕೆಯನ್ನು ಅಥವಾ ಅವರು ನೀಡುವ ದಾಖಲೆಯನ್ನು ಅಪ್ಡೇಟ್ ಮಾಡಲಾಗುವುದು.
ಇದನ್ನೂ ಓದಿ: ಎಸ್‌ಡಿಪಿಐಗೆ ನೇರ ಪ್ರಶ್ನೆಗಳು: ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆಯವರ ಸಂದರ್ಶನ