HomeಮುಖಪುಟExplained: ರಾಜ್ಯಪಾಲ-ಸಿಎಂ ಜಗಳದಲ್ಲಿ ಕೇರಳ ಬಡವಾಯ್ತು

Explained: ರಾಜ್ಯಪಾಲ-ಸಿಎಂ ಜಗಳದಲ್ಲಿ ಕೇರಳ ಬಡವಾಯ್ತು

- Advertisement -
- Advertisement -

ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಡುವಿನ ಜಟಾಪಟಿ ತಾರಕಕ್ಕೇರಿದೆ. ಇದುವರೆಗೆ ಸಿಎಂ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿದ್ದ ಶೀತಲ ಸಮರ ಈಗ ಬೀದಿ ರಂಪವಾಗಿ ಮಾರ್ಪಟ್ಟಿದೆ.

ಹಾಗಾದರೆ, ಕೇರಳದಲ್ಲಿ ನಡೆಯುತ್ತಿರುವುದೇನು? ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಸಮಸ್ಯೆ ಏನು? ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಕೇರಳದ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಕಿತ್ತಾಟ ಇಂದು ನಿನ್ನೆಯದ್ದಲ್ಲ. ಸೆಪ್ಟೆಂಬರ್ 6, 2019ರಂದು ಕೇಂದ್ರ ಸರ್ಕಾರ ಆರಿಫ್ ಮೊಹಮ್ಮದ್ ಖಾನ್ ಅವರನ್ನು ರಾಜ್ಯಪಾಲರಾಗಿ ನೇಮಕಗೊಳಿಸಿದ ಕೆಲ ದಿನಗಳಲ್ಲಿ ಶುರುವಾದ ಜಗಳ ಇದು. ಇವತ್ತಿಗೂ ಮುಂದುವರೆದಿದೆ.

ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಹಲವು ವಿಚಾರಗಳಿಗೆ ಜಟಾಪಟಿ ನಡೆದರೂ, ನಾವಿಲ್ಲಿ ಪ್ರಮುಖ ಮೂರು ವಿಚಾರಗಳ ಬಗ್ಗೆ ಗಮನಹರಿಸಿದ್ದೇವೆ. ಅವುಗಳು ಹೀಗಿವೆ..

1. ಸಿಎಎ ಮತ್ತು ಸುಪ್ರೀಂ ಕೋರ್ಟ್‌

2019 ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಕೇರಳದ ಎಡ ರಂಗ (ಎಲ್‌ಡಿಎಫ್) ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಡುವೆ ಹಗ್ಗಜಗ್ಗಾಟ ನಡೆದಿತ್ತು. ತನಗೆ ತಿಳಿಸದೆ ಕೇರಳ ಸರ್ಕಾರ ಸಿಎಎ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಡಿಸೆಂಬರ್ 11, 2019ರಂದು ಸಿಎಎ ಮಸೂದೆ ಸಂಸತ್‌ನಲ್ಲಿ ಅಂಗೀಕಾರಗೊಂಡಿತ್ತು. ಇದರ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದ ಸರ್ಕಾರ, ಜನವರಿ 13 ರಂದು ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದು ಭಾರತದ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಸರ್ಕಾರ ಆರೋಪಿಸಿತ್ತು.

ರಾಜ್ಯ ಸರ್ಕಾರ ಕೋರ್ಟ್‌ ಮೆಟ್ಟಿಲೇರಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು, “ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅವರು ಈ ವಿಷಯವನ್ನು ಮೊದಲು ನನಗೆ ತಿಳಿಸಬೇಕಿತ್ತು. ಸಾಂವಿಧಾನಿಕ ಮುಖ್ಯಸ್ಥನಾದ ನನಗೆ, ಸರ್ಕಾರ ಕೋರ್ಟ್‌ಗೆ ಹೋದ ವಿಚಾರ ಪತ್ರಿಕೆಗಳ ಮೂಲಕ ಗೊತ್ತಾಗಿದೆ. ನಾನು ಕೇವಲ ರಬ್ಬರ್ ಸ್ಟಾಂಪ್ ಅಲ್ಲ. ಸರ್ಕಾರ ಶಿಷ್ಟಾಚಾರ ಮತ್ತು ಸೌಜನ್ಯ ಉಲ್ಲಂಘಿಸಿದೆ” ಕಿಡಿಕಾರಿದ್ದರು.

ಈ ವಿಚಾರ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಕೆಲ ಸಮಯ ಪರಪಸ್ಪರ ವಾಗ್ವಾದಕ್ಕೆ ಕಾರಣವಾಗಿತ್ತು. ಬಳಿಕ ತಣ್ಣಗಾಗಿತ್ತು. ಇದರಲ್ಲಿ ಜನರಿಗೆ ಆದ ಉಪಕಾರ ಮಾತ್ರ ಶೂನ್ಯ.

2.ಕುಲಪತಿಗಳ ನೇಮಕ ಜಟಾಪಟಿ

ಕೇರಳದ 9 ವಿಶ್ವವಿದ್ಯಾನಿಲಯಗಳ ಉಪ ಕುಲಪತಿಗಳ ನೇಮಕ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಮತ್ತೊಂದು ದೊಡ್ಡ ಜಟಾಪಟಿಯಾಗಿದೆ. 2022ರ ಅಕ್ಟೋಬರ್ 22ರಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಏಕಾಏಕಿ ಕೇರಳದ 9 ವಿವಿಗಳ ಉಪ ಕುಲಪತಿಗಳ ರಾಜೀನಾಮೆ ಕೇಳಿದ್ದರು.

ಅಕ್ಟೋಬರ್ 24, 2022ರ ಬೆಳಿಗ್ಗೆ 11:30ರ ಒಳಗಾಗಿ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಉಪ ಕುಲಪತಿಗಳ ನೇಮಕದ ವೇಳೆ ಯುಜಿಸಿ ನಿಯಮ ಪಾಲನೆಯಾಗಿಲ್ಲ ಎಂದು ಅವರು ಹೇಳಿದ್ದರು. ಶೋಧನಾ ಸಮಿತಿ ವಿಷಯ ಪರಿಣಿತರಲ್ಲದವರನ್ನು ಕುಲಪತಿಗಳಾಗಿ ನೇಮಿಸಲು ಶಿಫಾರಸು ಮಾಡಿದೆ ಎಂದು ರಾಜ್ಯಪಾಲರು ಆರೋಪಿಸಿದ್ದರು. ಎಪಿಜೆ ಅಬ್ದುಲ್‌ ಕಲಾಂ ವಿವಿಯ ಉಪ ಕುಲಪತಿ ನೇಮಕ ರದ್ದು ಮಾಡಿದ್ದ ಸುಪ್ರೀಂ ಕೋರ್ಟ್‌ ಆದೇಶ ಮುಂದಿಟ್ಟುಕೊಂಡು ರಾಜ್ಯಪಾಲರು ಇತರ ವಿವಿಗಳ ಕುಲಪತಿಗಳ ರಾಜೀನಾಮೆ ಕೇಳಿದ್ದರು.

ಕೇರಳ ವಿಶ್ವವಿದ್ಯಾನಿಲಯ, ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯ, ಕೊಚ್ಚಿನ್‌ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾನಿಲಯ, ಕೇರಳ ಮೀನುಗಾರಿಕೆ ಹಾಗೂ ಸಾಗರ ಅಧ್ಯಯನಗಳ ವಿಶ್ವವಿದ್ಯಾನಿಲಯ, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾನಿಲಯ, ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾನಿಲಯ, ಕೋಝಿಕ್ಕೋಡ್ ವಿಶ್ವವಿದ್ಯಾನಿಲಯ, ಕ್ಯಾಲಿಕಟ್ ವಿಶ್ವ ವಿದ್ಯಾನಿಲಯ ಹಾಗೂ ತುಂಜತ್ತ್ ಎಳುತಚ್ಚನ್ ಮಲೆಯಾಳಂ ವಿಶ್ವವಿದ್ಯಾನಿಲಯ ಉಪ ಕುಲಪತಿಗಳ ರಾಜೀನಾಮೆ ಕೇಳಲಾಗಿತ್ತು.

ರಾಜ್ಯಪಾಲರ ದಿಢೀರ್ ನಿರ್ಧಾರಕ್ಕೆ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯಪಾಲರ ಕ್ರಮ ಪ್ರಶ್ನಿಸಿ ಉಪ ಕುಲಪತಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌, ರಾಜ್ಯಪಾಲರ ಅಂತಿಮ ಆದೇಶದವರೆಗೂ ಹುದ್ದೆಯಲ್ಲಿ ಮುಂದುವರಿಯಲು ಉಪ ಕುಲಪತಿಗಳಿಗೆ ಸೂಚನೆ ನೀಡಿತ್ತು.

ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಮತ್ತೊಮ್ಮೆ ಕುಲಪತಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿದ್ದ ರಾಜ್ಯಪಾಲರು, ‘ತಮ್ಮ ಆದೇಶ ಪಾಲಿಸದ ನಿಮ್ಮ ಮೇಲೆ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಕೇಳಿದ್ದರು? ನವೆಂಬರ್‌ 3ರ ಸಂಜೆ 5 ಗಂಟೆಯೊಳಗೆ ರಾಜೀನಾಮೆ ನೀಡದಿದ್ದರೆ ನಿಮ್ಮನ್ನು ವಜಾಗೊಳಿಸಲಾಗುವುದು. ಅಲ್ಲದೆ ನಿಮ್ಮ ನೇಮಕಾತಿಯೂ ಕಾನೂನು ಬಾಹಿರ ಎಂದು ಘೋಷಣೆ ಮಾಡಬೇಕಾಗುತ್ತದೆ’ ಎಂದು ನೋಟಿಸ್‌ನಲ್ಲಿ ಎಚ್ಚರಿಸಿದ್ದರು.

ಆದರೆ, ಯಾವುದೇ ಉಪ ಕುಲಪತಿಗಳು ರಾಜ್ಯಪಾಲರು ಹೇಳಿದ ಸಮಯಕ್ಕೆ ರಾಜೀನಾಮೆ ನೀಡಿರಲಿಲ್ಲ. ಸರ್ಕಾರ ಉಪ ಕುಲಪತಿಗಳ ಬೆನ್ನಿಗೆ ನಿಂತಿತ್ತು. ಕಾನೂನು ಸಮರದ ಧೈರ್ಯ ತುಂಬಿತ್ತು. ಈ ನಡುವೆ ಸರ್ಕಾರ ಉಪ ಕುಲಪತಿಗಳನ್ನು ನೇಮಿಸುವ ಅಧಿಕಾರದಿಂದ ರಾಜ್ಯಪಾಲರನ್ನೇ ಕೆಳಗಿಳಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿತ್ತು. ಆದರೆ, ಈ ಮಸೂದೆಗೆ ಅಂಗೀಕಾರಕ್ಕೆ ರಾಜ್ಯಪಾಲರು ಸಹಿ ಹಾಕುವುದಿಲ್ಲ ಎಂದು ತಿಳಿದು ಸುಗ್ರಿವಾಜ್ಞೆ ಹೊರಡಿಸಿತ್ತು.

ಬಳಿಕ ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಡಾ.ಗೋಪಿನಾಥ್ ರವೀಂದ್ರನ್ ಅವರನ್ನು ರಾಜ್ಯ ಸರ್ಕಾರ ಮರುನೇಮಕ ಮಾಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ವಿಚಾರದಲ್ಲಿ ಕೇರಳದ ಪಿಣರಾಯಿ ವಿಜಯನ್ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ರಾಜ್ಯ ಸರ್ಕಾರದ ಗೋಪಿನಾಥ್ ರವೀಂದ್ರನ್ ನೇಮಕದ ವಿಚಾರದಲ್ಲಿ ನನ್ನ ಮೇಲೆ ಒತ್ತಡ ಹಾಕಿತ್ತು ಎಂದು ರಾಜ್ಯಪಾಲರು ಹೇಳಿದ್ದರು.

3. ಮಸೂದೆಗಳ ಅಂಗೀಕಾರ ವಿಳಂಬ

ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಗಳನ್ನು ಇತ್ಯರ್ಥಪಡಿಸುವಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿಳಂಬ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ವಿಲೇವಾರಿ ಮಾಡಲು ನಿರ್ದೇಶನ ನೀಡುವಂತೆ ಕೋರಿ ಕೇರಳ ಸರ್ಕಾರ ನವೆಂಬರ್ 2,2023ರಂದು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಸುಮಾರು 8 ಮಸೂದೆಗಳು ವಿಲೇವಾರಿಗೆ ಬಾಕಿಯಿದೆ. ಈ ಪೈಕಿ ಮೂರು ಮಸೂದೆಗಳನ್ನು ಎರಡು ವರ್ಷಗಳಿಂದ ಅಂಗೀಕಾರ ಮತ್ತು ತಿರಸ್ಕಾರ ಯಾವುದೂ ಮಾಡದೆ ರಾಜ್ಯಪಾಲರು ಮೌನವಾಗಿದ್ದಾರೆ. ಹಾಗಾಗಿ, ಬಾಕಿ ಇರುವ ಮಸೂದೆಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಲು ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲ, ಮನೋಜ್ ಮಿಶ್ರಾ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠ, ರಾಜ್ಯಪಾಲರಿಗೆ ಎಚ್ಚರಿಕೆ ನೀಡಿತ್ತು. ರಾಜ್ಯಪಾಲರು ತಾವು ಚುನಾಯಿತ ಪ್ರತಿನಿಧಿ ಅಲ್ಲ ಎಂಬುವುದನ್ನು ಮರೆಯಬಾರದು ಎಂದು ಹೇಳಿತ್ತು. ಈ ಕುರಿತು ವರದಿ ನೀಡುವಂತೆ ಅಟಾರ್ನಿ ಜನರಲ್‌ಗೆ ಸೂಚಿಸಿತ್ತು.

ರಾಜ್ಯಪಾಲರ ಕಚೇರಿಯ ಪರವಾಗಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಸಲ್ಲಿಸಿದ ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು ಗಮನಿಸಿತು. ರಾಜ್ಯಪಾಲರು ಎಂಟು ಮಸೂದೆಗಳ ಪೈಕಿ ಏಳು ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿದ್ದು, ಒಂದನ್ನು ಅಂಗೀಕರಿಸಿದ್ದರು.

ಹಾಗಾಗಿ, ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಮಾಡಲು ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಮನವಿಯನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಸಂಬಂಧಿತ ಸಚಿವರೊಂದಿಗೆ ಮಸೂದೆಗೆ ಕುರಿತು ಚರ್ಚಿಸಲಿದ್ದಾರೆ ಎಂದು ಪೀಠ ತಿಳಿಸಿತ್ತು.

ರಾಜ್ಯಪಾಲರ ಕಾರಿಗೆ ಮುತ್ತಿಗೆ

ಮಸೂದೆ ಜಟಾಪಟಿಯ ಬಳಿಕ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಗುದ್ದಾಟ ಕೊಂಚ ತಣ್ಣಗಾಗಿತ್ತು. ಈ ನಡುವೆ ಡಿಸೆಂಬರ್ 11ರಂದು ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಕಾರಿಗೆ ಮುತ್ತಿಗೆ ಹಾಕಿದ್ದರು.

ರಾಜ್ಯಪಾಲರು ದೆಹಲಿಗೆ ಪ್ರಯಾಣಿಸಲು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತೆರಳುವ ದಾರಿ ಮಧ್ಯೆ ಈ ಘಟನೆ ನಡೆದಿತ್ತು. ತಕ್ಷಣ ಕಾರಿನಿಂದ ಕೆಳಗಿಳಿದಿದ್ದ ರಾಜ್ಯಪಾಲರು, ಸಿಎಂ ಕಳಿಸಿದ ಗೂಂಡಾಗಳು ನನ್ನ ಮೇಲೆ ದಾಳಿಗೆ ಯತ್ನಿಸಿದ್ದಾರೆ. ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಉದ್ದೇಶ ಅವರಿಗಿತ್ತು ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು.

ರಾಜ್ಯಪಾಲರು V/s ಎಸ್ಎಫ್‌ಐ

ಇದೀಗ ಕಳೆದ ಎರಡು ದಿನಗಳಿಂದ ರಾಜ್ಯಪಾಲರು ಕ್ಯಾಲಿಕಟ್ ವಿಶ್ವ ವಿದ್ಯಾನಿಯಲದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದು, ವಿವಿಯ ಹೊರಗಡೆ ಎಸ್ಎಫ್ಐ ಕಾರ್ಯಕರ್ತರು ಕಪ್ಪು ಬಟ್ಟೆಗಳನ್ನು ಕಟ್ಟಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲರು, ಅವರು ಸಿಎಂ ಕಡೆಯ ಕ್ರಿಮಿನಲ್‌ಗಳು, ಗೂಂಡಾಗಳು ಎಂದಿದ್ದರು. ರಾಜ್ಯಪಾಲರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಪಿಣರಾಯಿ ವಿಜಯನ್ ರಾಜ್ಯಪಾಲರು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಇದು ಮುಂದೆ ಎಲ್ಲಿಗೆ ಹೋಗಿ ತಲುಪಲಿದೆ ಎಂದು ಗೊತ್ತಿಲ್ಲ. ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ, ರಾಜ್ಯಪಾಲ-ಸಿಎಂ ಜಗಳಲ್ಲಿ ಕೇರಳ ಬಡವಾಗಿರುವುದಂತು ನಿಜ.

ಇದನ್ನೂ ಓದಿ: ಕೇರಳದಲ್ಲಿ ಶಾಂತಿ ಕದಡಲು ರಾಜ್ಯಪಾಲರಿಂದ ಯತ್ನ: ಸಿಎಂ ಪಿಣರಾಯಿ ವಿಜಯನ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....