Homeಮುಖಪುಟಕಾಂಗ್ರೆಸ್ಸು ತನ್ನ ಭಿನ್ನ ರಾಷ್ಟ್ರೀಯತೆಯನ್ನು ಮುಂದಿಡದೇ ಮೃಗದೆದುರು ಸೆಣಸಲಾಗುವುದಿಲ್ಲ

ಕಾಂಗ್ರೆಸ್ಸು ತನ್ನ ಭಿನ್ನ ರಾಷ್ಟ್ರೀಯತೆಯನ್ನು ಮುಂದಿಡದೇ ಮೃಗದೆದುರು ಸೆಣಸಲಾಗುವುದಿಲ್ಲ

ನಮ್ಮೆದುರಿನ ಕ್ರೂರ ಮೃಗದ ಗಾತ್ರವನ್ನು ಸರಿಯಾಗಿ ತಿಳಿಯದಿದ್ದರೆ ಅದರ ವಿರುದ್ಧ ಹೋರಾಡಲು ಹೇಗೆ ಸಾಧ್ಯ?

- Advertisement -
- Advertisement -

|ಕನ್ನಡಕ್ಕೆ: ಸಿರಿಮನೆ ನಾಗರಾಜ್ |

ಕಾಂಗ್ರೆಸ್ಸಿಗೆ ABCDMSಗಳ ಅಂದರೆ ಶೇ. 80 ಜನರ ಓಟಿನಲ್ಲಿ ಪಾಲು ಬೇಕಿದ್ದಲ್ಲಿ ಅದು ಅವರಿಗಾಗಿ ಕನಸು ಕಾಣಲು ಮತ್ತು ಫಲ ದೊರಕಿಸಲು ಹಿಂಜರಿಯಬಾರದು. ಅಂದಾಗ ಅದು 1920ರ ದಶಕದ ‘ಹಿಂದು-ಮುಸ್ಲಿಂ ಐಕ್ಯತೆ’ಯಂಥ ಘೋಷಣೆಗಳಿಗೆ ಹಿಂಜರಿಯಬಾರದು, ಅದು 1984ಕ್ಕಾಗಿ ಕ್ಷಮೆ ಕೇಳಬೇಕು, ಅದು ಕಂಧಮಾಲ್ ಮತ್ತು ಮುಜಾಫರ್‍ಪುರಗಳ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಹೋರಾಡಬೇಕು.

ನನ್ನ ರಾಜ್ಯ ಕೇರಳವು ದ್ವೇಷದ ರಾಜಕೀಯ ಸಿದ್ಧಾಂತಕ್ಕೆ ‘ಖಾತೆ ತೆರೆಯಲು’ ಅವಕಾಶ ನೀಡದಿರುವ ತನ್ನ ದಾಖಲೆಯನ್ನು ಈ ಚುನಾವಣೆಯಲ್ಲಿ ಸಹ ಮುಂದುವರಿಸಿದೆ; ಇದು ಒಬ್ಬ ಮಲೆಯಾಳಿಯಾಗಿ ನನಗೆ ಸಂತೋಷ ತಂದಿದೆ. ಬಿಜೆಪಿ – 0. ಮಲೆಯಾಳಿಗಳೆ, ನಿಮಗೆ ಮಂಗಳವಾಗಲಿ!

ಆದರೆ ಒಬ್ಬ ಭಾರತೀಯನಾಗಿ, ಭಾರತವು ಸತತ ಎರಡನೇ ಬಾರಿ ಮೋದಿಗೆ ವಶವಾಗಿರುವ ಬಗ್ಗೆ ದುಃಖವೂ ಆಗಿದೆ. ಮತ್ತೊಂದು ರೀತಿಯಲ್ಲಿ, ಭಾರತವೆಂಬ ಐಡಿಯವನ್ನು ಜೀವಂತವಾಗಿ ಕಾಪಿಡುವ ಹೋರಾಟ ಸುದೀರ್ಘವಾದುದು ಎಂಬ ವಿಚಾರ ಮತ್ತೊಮ್ಮೆ ಸಾಬೀತಾಗಿರುವ ಬಗ್ಗೆ ಖುಷಿಯೂ ಆಗಿದೆ. ದೇಶದ ವ್ಯವಸ್ಥೆಯು ಹಲವು ಸ್ತರಗಳಲ್ಲಿ ಮುರಿದುಬಿದ್ದಿದೆ, ಅದನ್ನು ಎಲ್ಲಾ ಸ್ತರಗಳಲ್ಲೂ ದುರಸ್ತಿ ಮಾಡಬೇಕಿದೆ. ಕಾಂಗ್ರೆಸ್ ಪಕ್ಷವೇಕೆ ದ್ವೇಷ ಸಿದ್ಧಾಂತದ ವಿರುದ್ಧ ಗೆಲ್ಲಲಿಲ್ಲ ಎಂದು ನನ್ನ ಅನೇಕ ಮಂದಿ ದಕ್ಷಿಣ ಭಾರತದ ಮಿತ್ರರು ಕೇಳುತ್ತಾರೆ. ಆದರೆ ರಾಷ್ಟ್ರೀಯ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಪುನಃ ಅಧಿಕಾರ ಗಳಿಸುವುದೆನ್ನುವುದು ಒಂದು ಬೃಹತ್ ಸವಾಲು. ಉತ್ತರ ಭಾರತದಲ್ಲಿ ಕಾಂಗ್ರೆಸ್ಸು ಮತ್ತೊಮ್ಮೆ ಹೀನಾಯವಾಗಿ ಸೋತಿದ್ದೇಕೆ?

ಮುರಿದುಬಿದ್ದಿರುವ ಭಾರತವನ್ನು ದುರಸ್ತಿ ಮಾಡುವಲ್ಲಿ ಕಾಂಗ್ರೆಸ್ಸಿಗೆ ಏನಾದರೂ ಪಾತ್ರ ಇದೆಯಾ ಎಂದು ಯೋಚಿಸುವುದು ಸಹ ಹಲವು ಸಂಗತಿಗಳಲ್ಲಿ ಒಂದು.

ಪಾಯಿಂಟ್ 1

ನಮ್ಮೆದುರಿನ ಕ್ರೂರ ಮೃಗದ ಗಾತ್ರವನ್ನು ಸರಿಯಾಗಿ ತಿಳಿಯದಿದ್ದರೆ ಅದರ ವಿರುದ್ಧ ಹೋರಾಡಲು ಹೇಗೆ ಸಾಧ್ಯ? ಅನೇಕ ಮಂದಿ ಕಾಂಗ್ರೆಸ್ ನಾಯಕರು ಅಂತಹ ಕ್ರೂರ ಮೃಗದ (ಬಿಜೆಪಿಯ) ನೆರಳಿನ ಜೊತೆ ಸೆಣೆಸುತ್ತಿದ್ದಾರೆ ಹೊರತು ಮೃಗದ (ಆರೆಸ್ಸೆಸ್) ವಿರುದ್ಧವೇ ಅಲ್ಲ. ಪಕ್ಷದ ದಿಕ್ಕನ್ನು ನಿರ್ದೇಶಿಸಬಲ್ಲಷ್ಟು ಬಲಾಢ್ಯರಾಗಿರುವ ಬಹುತೇಕ ನಾಯಕರು ಮೇಲು ಜಾತಿಗಳಿಗೆ ಸೇರಿದ್ದಾರೆ; ಭಾರತದ ಜನಸಂಖ್ಯೆಯಲ್ಲಿ ಈ ಮೇಲುಜಾತಿಗಳು ಶೇ. 15ಕ್ಕಿಂತ ಕಮ್ಮಿಯಿದ್ದಾರೆ. ಕಾಂಗ್ರೆಸ್ಸಿನ ಈ ನಾಯಕರು ಅನೇಕ ವೇಳೆ ಆರೆಸ್ಸೆಸ್ ಬಗ್ಗೆ ಅತ್ಯಂತ ಗೌರವ ಹೊಂದಿರುತ್ತಾರೆ. ಅವರು ಚರಿತ್ರೆಯನ್ನೂ ಮರೆಯುತ್ತಾರೆ. ಆರೆಸ್ಸೆಸ್ಸು ಬಹುಸಂಖ್ಯಾತ ರಾಷ್ಟ್ರೀಯತೆಯಲ್ಲಿ ನಂಬಿಕೆ ಹೊಂದಿದೆಯಾದರೆ ನೆಹರೂ ಯುಗದ ಕಾಂಗ್ರೆಸ್ಸು ಒಪ್ಪಂದದ ರಾಷ್ಟ್ರೀಯತೆ* (Contractual Nationalism)ಯಲ್ಲಿ ನಂಬಿಕೆ ಇಟ್ಟಿತ್ತು. ಆದರೆ, ಒಬ್ಬ ರಾಹುಲ್ ಗಾಂಧಿಯ ಹೊರತಾಗಿ ಬಹುತೇಕ ಕಾಂಗ್ರೆಸ್ ನಾಯಕರು ಆರೆಸ್ಸೆಸ್ಸನ್ನು ತಾವು ಎದುರಿಸಿ ಹೋರಾಡಬೇಕಿರುವ ಒಂದು ಶಕ್ತಿಯೆಂದು ಪರಿಗಣಿಸುವ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಾರೆ. ರಾಹುಲ್ ಗಾಂಧಿ ಒಬ್ಬ ನಾಯಕನಾಗಿ ಪಕ್ಷವನ್ನು ತನ್ನ ಆದೇಶಕ್ಕೆ ತಕ್ಕಂತೆ ಅಣಿನೆರೆಸುವಲ್ಲಿ ವಿಫಲರಾಗಿದ್ದಾರೆ. ಪರಿಣಾಮವಾಗಿ ಪಕ್ಷವು ನಿಜವಾದ ಮೃಗಕ್ಕೆ ತನ್ನ ಗಾತ್ರವನ್ನು ಬೇಕಾದಂತೆ ಬೆಳೆಸಿಕೊಳ್ಳಲು ಅವಕಾಶ ಕೊಟ್ಟು ನೆರಳಿನ ಜೊತೆ ಸೆಣಸಾಡುತ್ತಿದೆ. ಭಾರತವೆಂಬ ಐಡಿಯದಲ್ಲಿರುವ ಬಹುಸಂಖ್ಯಾತ ರಾಷ್ಟ್ರೀಯತೆ ಹಾಗೂ ಕಂಟ್ರಾಕ್ಚುವಲ್ ರಾಷ್ಟ್ರೀಯತೆ ಎಂಬ ಈ ಎರಡು ಸ್ಪಷ್ಟವಾದ ಲಕ್ಷಣಗಳನ್ನು ನಿಖರವಾಗಿ ಎತ್ತಿತೋರಿಸಿ ಜನತೆಯ ಮುಂದಿಡದಿದ್ದಲ್ಲಿ ಮತದಾರರಿಗೆ ಅವರ ಮುಂದಿರುವ ಆಯ್ಕೆ ಏನೆಂಬುದು ಸ್ಪಷ್ಟವಾಗುವುದಾದರೂ ಹೇಗೆ? ಭಾಷೆ, ಧರ್ಮ, ಆಹಾರ, ಚರ್ಮದ ಬಣ್ಣ, ಜಾತಿ – ಹೀಗೆ ಜನರನ್ನು ಧ್ರುವೀಕರಿಸುವ ಪ್ರತಿಯೊಂದು ಪ್ರಶ್ನೆಯ ಕೇಂದ್ರದಲ್ಲಿರುವುದು ಈ ವಾಗ್ವಾದವೇ ಆಗಿದೆ.

ಪಾಯಿಂಟ್ 2

ಆರೆಸ್ಸೆಸ್ ವಿರುದ್ಧ ಹೋರಾಟ ಮಾಡಬೇಕೆನ್ನುವವರು ಅದರ ಯಾವ ಅಂಗದ ವಿರುದ್ಧ ತಾವು ಹೋರಾಟ ಮಾಡುತ್ತಿದ್ದೇವೆಂಬುದನ್ನು ಸಹ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆರೆಸ್ಸೆಸ್ಸಿನ ಅಸ್ತಿತ್ವಕ್ಕೆ ಎರಡು ಆಯಾಮಗಳಿವೆ; ಅವೆರಡಕ್ಕೂ ಕಾಂಗ್ರೆಸ್ ಬಳಿ ಉತ್ತರವಾಗಲಿ ಪ್ರತ್ಯಸ್ತ್ರವಾಗಲಿ ಇಲ್ಲ. ಆ ಎರಡು ಆಯಾಮಗಳೆಂದರೆ –

ಮೊದಲನೆಯದು: ಆರೆಸ್ಸೆಸ್ ಒಂದು ಥಿಂಕ್ ಟ್ಯಾಂಕ್. ಅದು ಚಿಂತನ-ಮಂಥನ ನಡೆಸಿ ಅಜೆಂಡಾ ರೂಪಿಸಿ ಅದನ್ನು ಜನರಿಗೆ ತಲುಪಿಸುವ ತಳಮಟ್ಟದ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ. ಇದಕ್ಕೆ ಪ್ರತಿಯಾದುದು ಕಾಂಗ್ರೆಸ್‍ನಲ್ಲಿ ಇಲ್ಲ ಮಾತ್ರವಲ್ಲ, ಅದರ ಸಿದ್ಧಾಂತವನ್ನು ಹರಿತಗೊಳಿಸಿ ಕೊಡಬಲ್ಲ ಬುದ್ಧಿಜೀವಿಗಳು/ತತ್ವಜ್ಞಾನಿಗಳು ಕೂಡ ಅದರ ಬಳಿ ಇಲ್ಲ. ಕಾಂಗ್ರೆಸ್ಸು ಪಿ.ಎನ್.ಹಕ್ಸರ್ ನಂತರ ಒಂದು ಬುದ್ಧಿಜೀವಿ-ವಿರೋಧಿ ಸಂಸ್ಕೃತಿಯನ್ನು ಬೆಳೆಸಿಕೊಂಡಿದೆ. ಅದು ಇಷ್ಟಪಡುವ ಬುದ್ಧಿಜೀವಿಗಳೆಂದರೆ ‘ಅರ್ಥಶಾಸ್ತ್ರಜ್ಞರು’ ಮಾತ್ರ; ದುರದೃಷ್ಟವಶಾತ್ ಆರೆಸ್ಸೆಸ್ಸಿನಂತಹ ಒಂದು ಅರೆ-ಫ್ಯಾಸಿಸ್ಟ್ ಸಂಘಟನೆ ವಿರುದ್ಧ ಸಮೂಹ ಚಳವಳಿ ಕಟ್ಟುವಲ್ಲಿ ಅರ್ಥಶಾಸ್ತ್ರಜ್ಞರ ಪಾತ್ರ ಬಹಳ ಸೀಮಿತವಾದುದು.

ಎರಡನೆಯದು: ಆರೆಸ್ಸೆಸ್ ಒಂದು ಮಾನವ ಸಂಪನ್ಮೂಲ ಪ್ರಾಜೆಕ್ಟ್. ಅದು ಕೆಲವು ತಲೆಮಾರುಗಳ ಕಾಲ ಸತತವಾಗಿ ಕೆಲಸ ಮಾಡಿ ಸಾಕಷ್ಟು ಪ್ರಮಾಣದ ಕುಶಲಿಗಳನ್ನು ಸೃಷ್ಟಿಸಿದೆ. ಅವರು ಸಂಪಾದಕ/ನ್ಯಾಯಾಧೀಶ/ಅಧಿಕಾರಿ … ಹೀಗೆ ಯಾವುದೇ ಸ್ಥಾನವನ್ನು ಬೇಕಾದರೂ ತುಂಬಬಲ್ಲವರು; ಅವರಲ್ಲಿ ಅದಕ್ಕೆ ಬೇಕಾದ ಕೌಶಲ ಇರಲಿ ಬಿಡಲಿ, ಇಂದು ಅವರು ಆ ಸ್ಥಾನಗಳಲ್ಲಿದ್ದಾರೆ, ಎಲ್ಲಾ ಕಡೆಯೂ ಅವರಿದ್ದಾರೆ. ಆರೆಸ್ಸೆಸ್ಸು ಭಾರತೀಯ ಸಂಸ್ಥೆಗಳನ್ನು ಒಳಗಿನಿಂದ ಆಕ್ರಮಿಸಿಕೊಂಡಿದೆ ಹಾಗೂ ಅವುಗಳನ್ನು ಆರೆಸ್ಸೆಸ್ಸಿನ ವಿಶ್ವದೃಷ್ಟಿಯನ್ನು ಅನುಸರಿಸುವ ಸಾರ್ವಜನಿಕ ಏಜೆನ್ಸಿಗಳನ್ನಾಗಿ ಪರಿವರ್ತಿಸಿದೆ. ಹೀಗಾಗಿ ಮೀಸಲಾತಿ ವಿರುದ್ಧ ತೀರ್ಪುಗಳು ಬರುತ್ತವೆ; ಮಾನವ ಹಕ್ಕು ಕಾರ್ಯಕರ್ತರ ಹೆಸರನ್ನು ‘ನಗರ ನಕ್ಸಲ್’ಗಳೆಂದು ಬಹಳ ಸಲೀಸಾಗಿ ಬದಲಾಯಿಸುವಂಥ ಪ್ರೈಮ್ ಟೈಮ್ ಆ್ಯಂಕರುಗಳನ್ನು ನೋಡುತ್ತಿದ್ದೇವೆ; ದಶಕಗಳ ಕಾಲದ ನಿರಂತರ ಹೋರಾಟಗಳ ಫಲವಾಗಿ ಗಳಿಸಿಕೊಂಡಂತಹ ಹಕ್ಕುಗಳು ಮತ್ತು ಸ್ಥಾನಗಳನ್ನು ಕೇವಲ ಒಬ್ಬಿಬ್ಬರು ವ್ಯಕ್ತಿಗಳು ಅತ್ಯಂತ ಸುಲಭವಾಗಿ ಹಾಳುಗೆಡವುತ್ತಿದ್ದಾರೆ.

ಆರೆಸ್ಸೆಸ್ಸಿನ ಈ ಎರಡೂ ಆಯಾಮಗಳಿಗೆ ಪ್ರತಿಯಾದುದನ್ನು ಕಾಂಗ್ರೆಸ್ಸು ಅಭಿವೃದ್ಧಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಅದು ಯಾವುದೇ ಪರಿಣಾಮವಿಲ್ಲದ್ದಾಗಿರುತ್ತದೆ.

ಪಾಯಿಂಟ್ 3

ಕಾಂಗ್ರೆಸ್ಸು/ಯುಪಿಎ ಈ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ರಾಜ್ಯಗಳಾದ ಕೇರಳ, ತಮಿಳ್ನಾಡು ಹಾಗೂ ಪಂಜಾಬಿನಲ್ಲಿ ಆರೆಸ್ಸೆಸ್/ಆರ್ಯತ್ವ/ಬ್ರಾಹ್ಮಣತ್ವ/ಮನುಸ್ಮೃತಿ ಇವುಗಳಿಗೆ ವಿರುದ್ಧವಾಗಿ ಪ್ರಬಲವಾದ ಸಾಮಾಜಿಕ ಪರಂಪರೆ ಇದೆ, ಕಾಂಗ್ರೆಸ್ಸು ಅದರ ಫಲವನ್ನಷ್ಟೇ ಸವಿದಿದೆ. ಕಾಂಗ್ರೆಸ್ ಒಂದು ಪರ್ಯಾಯವಾಗಬೇಕಿದ್ದಲ್ಲಿ ಅದು ದಲಿತರ, ಆದಿವಾಸಿಗಳ, ಬಿ.ಸಿ.ಗಳ, ಮುಸ್ಲಿಮರ, ಸಿಖ್ಖರ ಹಾಗೂ ಕ್ರೈಸ್ತರ ಪಕ್ಷವಾಗಲು ಹಿಂಜರಿಯಬಾರದು (ಇದು ABCDMS ಎಂದು ಕರೆಯಬಹುದಾದ ಒಂದು ಸ್ಪಷ್ಟವಾದ ಮತಕ್ಷೇತ್ರ – constituency – ಆಗಿದೆ). ರಾಹುಲ್ ಗಾಂಧಿಯ ಜನಿವಾರ ಪ್ರದರ್ಶನವು ಸಮಾಜದ ಮೇಲ್ಪದರದ 12-15% ಜನರನ್ನು ಖುಷಿಪಡಿಸುವ ಪ್ರಯತ್ನವಾಗಿತ್ತು; ಅವರಾದರೋ ಈ 21ನೇ ಶತಮಾನದಲ್ಲಿ ಹೇಗಿದ್ದರೂ ಕಾಗ್ರೆಸ್ಸಿಗೆ ಬದಲು ಮೋದಿ/ಆರೆಸ್ಸೆಸ್ಸನ್ನೇ ಆರಿಸುವವರು. ಅದೇ ವೇಳೆ ಅವರ ಈ ಚರ್ಯೆಯು ABCDMSಗೆ, ಅಂದರೆ ಶೇ. 80ಕ್ಕಿಂತ ಹೆಚ್ಚಿನ ಜನತೆಗೆ ಬೇರೆಯೇ ಅರ್ಥ ಕೊಡುವುದಾಗಿದ್ದು, ಅವರ ಪಾಲಿಗೆ ಅದು ಬಹಳ ಆಘಾತಕಾರಿಯಾಗಿತ್ತು ಎನ್ನುವುದು ರಾಹುಲ್‍ಗಾಗಲಿ ಅವರ ಸಹೋದ್ಯೋಗಿಗಳಿಗಾಗಲಿ ಅರ್ಥವಾಗಿದೆಯಾ?

ಕಾಂಗ್ರೆಸ್ಸು ABCDMSಗಳ ಪಕ್ಷವಾಗಿ ಪುನರುತ್ಥಾನ ಹೊಂದಲು ವಿಫಲವಾದಲ್ಲಿ (ಆರೆಸ್ಸೆಸ್ಸಿಗೆ ಹಾಗೂ ಕಾಂಗ್ರೆಸ್ಸಿನೊಳಗಿರುವ ಜಾತಿ ನಾಯಕರಿಗೆ ಇದು ಬೇಡವಾದುದು) ಅದು ಮೋದಿಗೆ ಸವಾಲಾಗುವುದು ಸಾಧ್ಯವಿಲ್ಲ. ಅಂಕಿಸಂಖ್ಯೆಗಳ ಪ್ರಕಾರ ಈ ಸಮುದಾಯಗಳೆಂದರೆ ಭಾರತದ ಶೇ. 80 ಭಾಗ. ಆದರೆ ಕಾಂಗ್ರೆಸ್ಸಿನ ಚಿಂತನೆಯು ಯಾರು ABCDMSಗಳ ಇಶ್ಯೂಗಳು ಹಾಗೂ ಅವರಿಗೆ ಸಲ್ಲಬೇಕಿರುವ ಸವಲತ್ತುಗಳ ಪರವಾಗಿ ಫೀಲ್ ಮಾಡಲಾರರೋ ಅಂತಹ ಮೇಲುಜಾತಿ ಮಧ್ಯಮಾರ್ಗಿಗಳಿಂದ ನಿರೂಪಿತವಾಗುತ್ತದೆ.

ಕಾಂಗ್ರೆಸ್ಸಿಗೆ ABCDMSಗಳ ಅಂದರೆ ಶೇ. 80 ಜನರ ಓಟಿನಲ್ಲಿ ಪಾಲು ಬೇಕಿದ್ದಲ್ಲಿ ಅದು ಅವರಿಗಾಗಿ ಕನಸು ಕಾಣಲು ಮತ್ತು ಫಲ ದೊರಕಿಸಲು ಹಿಂಜರಿಯಬಾರದು. ಅಂದಾಗ ಅದು 1920ರ ದಶಕದ ‘ಹಿಂದು-ಮುಸ್ಲಿಂ ಐಕ್ಯತೆ’ಯಂಥ ಘೋಷಣೆಗಳಿಗೆ ಹಿಂಜರಿಯಬಾರದು, ಅದು 1984ಕ್ಕಾಗಿ ಕ್ಷಮೆ ಕೇಳಬೇಕು, ಅದು ಕಂಧಮಾಲ್ ಮತ್ತು ಮುಜಾಫರ್‍ಪುರಗಳ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಹೋರಾಡಬೇಕು. ಅದು ಖಾಸಗಿ ವಲಯದಲ್ಲಿ ಆದಿವಾಸಿ ಮತ್ತು ದಲಿತರಿಗೆ ಮೀಸಲಾತಿಗಾಗಿ ನಿರ್ಭಿಡೆಯಿಂದ ಹೋರಾಟ ಮಾಡಬೇಕು. ನೆನಪಿಡಿ: ಸಂಸತ್ತಿನಲ್ಲಿ 1990ರಲ್ಲಿ ರಾಜೀವ್ ಗಾಂಧಿ ಮಾಡಿದ ಭಾಷಣವೇ ಇಂದಿಗೂ ಬಿಸಿಗಳ ಮನಸ್ಸಿನಲ್ಲಿ ಹಸಿರಾಗಿ ಉಳಿದಿರುವ ಮಂಡಲ್ ವಿರುದ್ಧದ ಅತಿ ದೀರ್ಘ ಭಾಷಣ. ಅಷ್ಟಾಗಿಯೂ ದೀರ್ಘ ಕಾಲ ಬಿ.ಸಿ.ಗಳು ಕಾಂಗ್ರೆಸ್ಸಿಗೆ ಓಟು ಮಾಡಿದರು. ಆದರೆ ಇಂದು ಆರೆಸ್ಸೆಸ್ಸು ಬಿ.ಸಿ.ಗಳಿಗೆ ಹಿಂದುತ್ವ, ಹಿಂದು ರಾಷ್ಟ್ರೀಯತೆ ಮುಂತಾದವುಗಳಲ್ಲಿ ನಂಬಿಕೆ ಹುಟ್ಟಿಸಿ ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದರೆ ಕಾಂಗ್ರೆಸ್ಸು ಅವರಿಗೆ ನೀಡಬಹುದಾದ್ದು ಏನೂ ಇಲ್ಲ. ABCDMSನೊಳಗಿರುವ ಪ್ರತಿಯೊಂದು ಸಮುದಾಯದ ಮನಸ್ಸಿನಲ್ಲೂ ಕಾಂಗ್ರೆಸ್ಸು ತಮಗೆ ಮಾಡಿರುವ ಅನ್ಯಾಯದ ಬಗ್ಗೆ ಎದ್ದುಕಾಣುವಂಥ ಕ್ಷಣಗಳಿವೆ. ಕಾಂಗ್ರೆಸ್ಸು ಅವುಗಳನ್ನು ಪುನರ್ವಿಮರ್ಶಿಸಿ ಅವುಗಳಿಗೊಂದು ಮುಕ್ತಾಯ ಹಾಡಲು ಸಿದ್ಧವಿದ್ದಲ್ಲಿ ಅವರಲ್ಲಿನ ಬಹುದೊಡ್ಡ ಸಂಖ್ಯೆ ಪುನಃ ಅದರ ತೆಕ್ಕೆಗೆ ಬರುತ್ತಾರೆ.

ಭಾರತವೆಂಬ ಐಡಿಯವನ್ನು ಕಂಟ್ರಾಕ್ಚುವಲ್ ರಾಷ್ಟ್ರೀಯತೆಯಾಗಿ ಗುರುತಿಸುವ ಪಕ್ಷವಾಗಿ ಕಾಂಗ್ರೆಸ್ಸು ತನ್ನನ್ನು ಪುನರುತ್ಥಾನಗೊಳಿಸಿಕೊಳ್ಳದಿದ್ದಲ್ಲಿ ಅದು ಬಹುಸಂಖ್ಯಾತ ರಾಷ್ಟ್ರೀಯತೆಗೆ ಸಲೀಸಾಗಿ ದಾರಿ ಬಿಟ್ಟುಕೊಡುತ್ತದೆ (ವಾಕ್ ಓವರ್ ಕೊಡುತ್ತದೆ). ಆದ್ದರಿಂದ ಇಂದು ಕಾಂಗ್ರೆಸ್ಸಿನ ಮುಂದಿರುವ ಸವಾಲು ಇಂದಿರಾ/ರಾಜೀವ್ ಮುಂದಿದ್ದ ಸವಾಲಿನಂತಿರದೆ 1920ರ ದಶಕದಲ್ಲಿ ಗಾಂಧಿ/ನೆಹರೂ ಅವರ ಮುಂದಿದ್ದಂಥದಾಗಿದೆ; ಅಂದರೆ ರಾಯ್ ಮತ್ತು ಮದನಮೋಹನ ಮಾಳವೀಯ ಅವರುಗಳನ್ನು ನಿಯಂತ್ರಿಸಿದಂಥದ್ದಾಗಿದೆ. 1920ರ ದಶಕದಲ್ಲಿ ಗಾಂಧಿ/ನೆಹರೂ ಜೋಡಿಯು ರಾಯ್ ಮತ್ತು ಮಾಳವೀಯರನ್ನು ಕಾಂಗ್ರೆಸ್ಸಿನಿಂದ ಹೊರಗಿಟ್ಟಿತು; ಹಿಂದೂ ಮಹಾಸಭಾ ಸಂಸ್ಥಾಪಕರಲ್ಲಿ ಅವರಿಬ್ಬರೂ ಇದ್ದಾರೆಂಬುದು ನೆನಪಿದೆಯಷ್ಟೆ? ಅದು ಬಹುಸಂಖ್ಯಾತ ರಾಷ್ಟ್ರೀಯತೆಯ ವಿರುದ್ಧದ ಮೊತ್ತಮೊದಲ ಜಯವಾಗಿತ್ತು. ಇಂದು ಕಾಂಗ್ರೆಸ್ಸು ತಾನೊಂದು ರಾಜಕೀಯ ಪರ್ಯಾಯದ ಪಾತ್ರ ನಿರ್ವಹಿಸಬೇಕಿರುವುದು ಎಷ್ಟು ದೊಡ್ಡ ಸವಾಲು ಎಂಬುದನ್ನು ಮನಗಂಡಿರುವ ಯಾರೊಬ್ಬ ಕಾಂಗ್ರೆಸ್ ನಾಯಕನೂ ನನಗೆ ಕಾಣುತ್ತಿಲ್ಲ. ಅವರು ಇದರಲ್ಲಿ ವಿಫಲರಾದಲ್ಲಿ ಅದೊಂದು ನಿರ್ವಾತವನ್ನು ಹುಟ್ಟುಹಾಕುತ್ತದೆ; ಅದನ್ನು ಭರ್ತಿ ಮಾಡಲು ಯಾರಾದರೊಬ್ಬ ಬೆಳೆದುಬರಬಹುದು/ಬರುತ್ತಾರೆ. ಗಾಂಧಿ-ನೆಹರು-ಅಂಬೇಡ್ಕರ್ ಮುಂತಾದವರು ಭಾರತವು (ಇಟಲಿ ಮತ್ತು ಜರ್ಮನ್ ಮಾದರಿಯ) ಬಹುಸಂಖ್ಯಾತ ರಾಷ್ಟ್ರೀಯತೆಯನ್ನು ಅಪ್ಪಿಕೊಳ್ಳುವ ಅಪಾಯದ ವಿರುದ್ಧ ಮಾತಾಡಿ ಜಯಿಸಿ, (ಇಂಗ್ಲೆಂಡ್, ಫ್ರಾನ್ಸ್ ಮಾದರಿಯ) ಕಂಟ್ರಾಕ್ಚುವಲ್ ರಾಷ್ಟ್ರೀಯತೆಯ ಸುತ್ತ ಭಾರತವೆಂಬ ಐಡಿಯವನ್ನು ಸದೃಢೀಕರಿಸುವಲ್ಲಿ ಯಶಸ್ವಿಯಾಗುತ್ತಾರೆಂದರೆ, ಅದನ್ನು ಈ 21ನೇ ಶತಮಾನದಲ್ಲಿ ಜನತೆಗೆ ಮತ್ತೊಮ್ಮೆ ನೆನಪಿಸಲು ಇದು ಸಕಾಲವಾಗಿದೆ. ಭಾರತದಂಥ ವೈವಿಧ್ಯಮಯವಾದ ದೇಶಕ್ಕೆ ಇದನ್ನು ಸಾಧಿಸಬಲ್ಲ ನಾಯಕರ ಅಗತ್ಯವಿದೆ. ಭಾರತವು ತನ್ನ ಮುಂದಿರುವ ಹೋರಾಟಕ್ಕೆ ಬೇಕಾದಂಥ ಸ್ಪಷ್ಟತೆ ಮತ್ತು ದಿಟ್ಟತನವನ್ನು ಹೊಂದಿರುವ (ರಾಜಕೀಯ, ಸಾಮಾಜಿಕ, ಬೌದ್ಧಿಕ) ನಾಯಕರನ್ನು ರೂಪಿಸಬಲ್ಲದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...