ಕಳೆದ ಮೂರ್ನಾಲ್ಕು ದಿನಗಳಿಂದ ಮುಂಬೈನಲ್ಲಿ ಧಾರಕಾರವಾಗಿ ಮಳೆ ಸುರಿದ ಪರಿಣಾಮ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಆಗ ನೀವೆಲ್ಲಿದ್ದೀರಿ? ಒಂದು ಪಕ್ಷವಾಗಿ ನಾವೆಲ್ಲಾ ಬೀದಿಗಿಳಿದು ಜನರಿಗೆ ಅಗತ್ಯ ಸಹಾಯ ಮಾಡಬೇಕು. ಹೀಗೆ ತಾನೇ ಪಕ್ಷ ಬೆಳೆಯುವುದು ಎಂದು ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಬುದ್ದಿಮಾತು ಹೇಳಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಆರ್.ಎಸ್.ಎಸ್ ಪಾತ್ರವಿದೆ ಎಂದು ಹೇಳಿಕೆ ಕೊಟ್ಟಿದ್ದರು. ಆ ಕಾರಣಕ್ಕಾಗಿ ಆರ್.ಎಸ್.ಎಸ್ ಕಾರ್ಯಕರ್ತನಿಂದ ಮಾನನಷ್ಟ ದೂರು ದಾಖಲಾಗಿದ್ದ ಪ್ರಕರಣವನ್ನು ಎದುರಿಸಲು ಅವರು ಮುಂಬೈನ ಸ್ಥಳೀಯ ನ್ಯಾಯಾಲಯಕ್ಕೆ ಆಗಮಿಸಿದ್ದರು ಮತ್ತು ಕೋರ್ಟ ಅವರಿಗೆ ಜಾಮೀನು ನೀಡಿದೆ.
ತನ್ನ ರಾಜಿನಾಮೆ ನೀಡಿದ ನಂತರ ಮುಂಬೈಗೆ ರಾಹುಲ್ ಗಾಂಧಿ ಆಗಮಿಸಿದ್ದಾಗ ಹಲವಾರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅವರು ತಮ್ಮ ರಾಜಿನಾಮೆ ಹಿಂತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದರು. ಜೊತೆಗೆ ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರಕಾಶ್ ಅಂಬೇಡ್ಕರ್ ಮತ್ತು ರಾಜ್ ಠಾಕ್ರೆಯವರೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ವಿಚಾರ ಬಂದಾಗ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಮುಂದುವರಿದು ಚುನಾವಣಾ ಮೈತ್ರಿಗಿಂತ ಪಕ್ಷವನ್ನು ಬಲಪಡಿಸುವುದು ಮುಖ್ಯವಾದುದು. ನಮ್ಮ ಪಕ್ಷದ ಬುನಾದಿಯನ್ನು ಗಟ್ಟಿಗೊಳಿಸಿಕೊಳ್ಳಲು ನಾವೇನು ಮಾಡಬೇಕು ಎಂಬುದರ ಬಗ್ಗೆ ನೀವೇಕೆ ಹೇಳುತ್ತಿಲ್ಲ ಎಂದು ಪದೇ ಪದೇ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಬಿಸಿ ಮುಟ್ಟಿಸಿದ್ದಾರೆ.
ಕಾಂಗ್ರೆಸ್ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಖರ್ಗೆಯವರು ಪಕ್ಷ ಸಂಘಟಿಸುವುದರ ಕುರಿತು ಸಭೆ ಕರೆಯಬೇಕೆಂದು ಹೇಳಿದ ರಾಹುಲ್ ಮುಂಬೈ ಜನರಿಗೆ ಕಷ್ಟದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ಸಹಾಯ ಮಾಡದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


