ಜೆಡಿಎಸ್ ಮುಗಿಸಬೇಕು ಎಂಬುದೇ ಕಾಂಗ್ರೆಸ್ ಲೀಡರ್‌ಗಳ ಅಜೆಂಡಾ ಆಗಿದೆ. ಅದು ಆಕ್ರೋಶವೋ, ಭಯವೋ ಗೊತ್ತಿಲ್ಲ. ಬಿಜೆಪಿಗಿಂತ ಜೆಡಿಎಸ್ ಮೇಲೆಯೇ ಅವರಿಗೆ ಹೆಚ್ಚು ಸಿಟ್ಟಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಲಗ್ಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಬಿಜೆಪಿ ಹಾಗೂ ಬಿಜೆಪಿ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್‌ಕಾರ್ನರ್ ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ, ಅದೆಲ್ಲಾ ಸುಳ್ಳು ಜನರ ಹಣ ಲೂಟಿ ಹೊಡೆಯೋರನ್ನು ಟೀಕಿಸದೇ ಬಿಡುವುದಿಲ್ಲ” ಎಂದಿದ್ದಾರೆ.
250 ಕೋಟಿ ರೂ. ಕಳ್ಳ ಬಿಲ್ ಮಾಡಿ ಹಣ ಗುಳುಂ ಮಾಡಿದ್ದಾರೆ. ಬೆವರು ಸುರಿಸಿ ದುಡಿದ ಹಣದಲ್ಲಿ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ಕೊರೊನಾ ಸಮಯದಲ್ಲಿ ಜನಕ್ಕೆ ಸಹಾಯ ಮಾಡಿದ್ದಾರೆ. ಆದರೆ, ಜನರ ಪಾಪದ ಹಣದಲ್ಲಿ ಬಿಜೆಪಿ ಅಭ್ಯರ್ಥಿ ಫುಡ್‌ಕಿಟ್ ನೀಡಿದ್ದಾರೆ ಎಂದು ಮುನಿರತ್ನ ವಿರುದ್ಧ ಸಹ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ನಮ್ಮ ಮುಖ್ಯಮಂತ್ರಿ ಜೊತೆ ಮಾತನಾಡಲು ಸಮಯ ನೀಡುತ್ತಿಲ್ಲ. ಈ ರೀತಿ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅವಮಾನ ಮಾಡುತ್ತಿವೆ. ಕನ್ನಡಿಗರ ಸ್ವಾಭಿಮಾನ, ಗೌರವ ಉಳಿಸಲು ಈ ಚುನಾವಣೆ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಉತ್ತರ ನೀಡಿ ಎಂದು ಮತದಾರದಲ್ಲಿ ಮನವಿ ಮಾಡಿದರು.
ಆರು ವರ್ಷದಲ್ಲಿ ಪ್ರಧಾನಿ ಮೋದಿ ಅವರಿಂದ ದೇಶ ಚೀನಾ ವಿರುದ್ಧ ಸ್ಪರ್ಧೆ ಮಾಡುವುದು ಇರಲಿ, ಬಾಂಗ್ಲಾದೇಶದ ಜೊತೆ ಸ್ಪರ್ಧೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ದಿನಕ್ಕೆ ಮೂರು ನಾಲ್ಕು ಡ್ರೆಸ್ ಹಾಕಿಕೊಂಡು ಚೆನ್ನಾಗಿ ಕಾಣುವುದೇ ಮೋದಿ ಅವರ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಇಲ್ಲಿ ಕೃಷ್ಣಮೂರ್ತಿ ಅಭ್ಯರ್ಥಿಯಲ್ಲ, ಕಾರ್ಯಕರ್ತರೇ ಅಭ್ಯರ್ಥಿಗಳು. ಅವರನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಸಮಾಧಿ ಮಾಡುತ್ತೇವೆ ಎಂದವರಿಗೆ ಉತ್ತರ ನೀಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಪರಿಷತ್ ಸದಸ್ಯ ಟಿ.ಎ.ಶರವಣ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ಅಲ್ಲ, ‘ಮನಿ’ರತ್ನ ಆಗಿದ್ದಾರೆ. ಸಿದ್ದರಾಮಯ್ಯ ಅವರು ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸುತ್ತಾರೆ. ಜೆಡಿಎಸ್ ಎಲ್ಲಿದೆ ಎಂದು ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತೋರಿಸಿದ್ದೇವೆ. ಎಷ್ಟು ಬಾರಿ ನಿಮಗೆ ಜೆಡಿಎಸ್ ಎಲ್ಲಿದೆ ಎಂದು ತೋರಿಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಮಾತನಾಡಿ, ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಮುನಿರತ್ನ ಅವರು ಬಿಜೆಪಿಗೆ ಹೋಗಿದ್ದಾರೆ. ಹನುಮಂತರಾಯಪ್ಪನವರಿಗೆ ಜೆಡಿಎಸ್ ಎದುರು ನಿಲ್ಲಲು ಧೈರ್ಯ ಇಲ್ಲ. ನಮ್ಮ ಪಕ್ಷದ ನಾಯಕರನ್ನು ಸೆಳೆಯುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ನಿಮ್ಮ ಮತಗಳನ್ನ ಗಿರವಿ ಅಂಗಡಿಯಲ್ಲಿ ಅಡ ಇಡುವ ಕೆಲಸ ಮಾಡುತ್ತಿವೆ ಎಂದು ದೂರಿದರು.
ಇದನ್ನೂ ಓದಿ: ಶಿರಾ ಉಪಚುನಾವಣೆ: ಮೂಲ VS ವಲಸೆ ಬಿಜೆಪಿಗರ ನಡುವೆ ಬಿರುಕು! ಯಾರ ಕೈಹಿಡಿಯಲಿದ್ದಾನೆ ಮತದಾರ



ಅಭ್ಯರ್ಥಿ (ಸಂಸ್ಕ್ರುತ)>ಹುರಿಯಾಳು(ಕನ್ನಡ)