ರಾಹುಲ್ ಗಾಂಧಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಭಾಷಣವನ್ನು ಬೆಂಬಲಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪ್ರತಿಪಕ್ಷಗಳು ಹಕ್ಕುಚ್ಯುತಿ ದೂರು ನೀಡಿದೆ.
ಜಲಂಧರ್ ಸಂಸದ ಹಾಗೂ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.
“ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿ ವಿರುದ್ಧ ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳನ್ನು ಲೋಕಸಭೆಯ ಕಡತದಿಂದ ತೆಗೆಯಲಾಗಿದೆ. ಆದರೆ, ಪ್ರಧಾನಿಯವರ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ಷೇಪಾರ್ಹ ಅಂಶಗಳಿರುವ ಸಂಪೂರ್ಣ ಭಾಷಣದ ವಿಡಿಯೋ ಹಂಚಿಕೊಂಡಿದ್ದಾರೆ. ಕೌಲ್ ಮತ್ತು ಶಕ್ಧರ್ ಅವರೂ ಕೂಡ ಆಕ್ಷೇಪಾರ್ಹ ಅಂಶಗಳಿರುವ ವಿಡಿಯೋ ಶೇರ್ ಮಾಡಿದ್ದಾರೆ” ಎಂದು ಚರಂಜಿತ್ ಸಿಂಗ್ ಚನ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಕಡತದಿಂದ ತೆಗೆದು ಹಾಕಿರುವ ಅಂಶಗಳಿಲ್ಲದ ಭಾಷಣವನ್ನು ಆನ್‌ಲೈನ್ ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮನವಿ ಮಾಡಿದರೂ, ಸಂಸದ್ ಟಿವಿಯು ಎಡಿಟ್ ಮಾಡದಿರುವ ಭಾಷಣವನ್ನೇ ಅಪ್ಲೋಡ್ ಮಾಡಿದೆ. “ಇದು ಭಾರತೀಯ ಸಂಸದೀಯ ಇತಿಹಾಸದಲ್ಲಿ ನಾಚಿಕೆಗೇಡಿನ ಕೆಳಮಟ್ಟವಾಗಿದೆ. ಇದು ಬಿಜೆಪಿ-ಆರೆಸ್ಸೆಸ್ ಹಾಗೂ ಮೋದಿಯವರಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತೀಯತೆಯನ್ನು ಪ್ರತಿಫಲಿಸುತ್ತದೆ” ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.
ಪ್ರಧಾನಿಯ ಈ ನಡೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, “ತೀವ್ರ ಅವಹೇಳನಕಾರಿ ಹಾಗೂ ಅಸಾಂವಿಧಾನಿಕ ಮನಸ್ಥಿತಿಯ ಭಾಷಣವನ್ನು ಹಂಚಿಕೊಳ್ಳುವ ಮೂಲಕ, ಪ್ರಧಾನಿಯು ಗಂಭೀರ ಸಂಸದೀಯ ಹಕ್ಕುಚ್ಯುತಿಯನ್ನು ಪ್ರೋತ್ಸಾಹಿಸಿದ್ದಾರೆ” ಎಂದಿದೆ.
ಬಿಜೆಪಿ ಸಂಸದ ಅನುರಾಗ್ ಠಾಕೂರ್ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜಾತಿಯ ಕುರಿತು ಹೇಳಿಕೆ ನೀಡಿದ್ದು, ಲೋಕಸಭೆಯು ಮಂಗಳವಾರ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ನಾಯಕರ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು.
ಜಾತಿಗಣತಿ ಕುರಿತ ಕಾಂಗ್ರೆಸ್ ನಿಲುವನ್ನು ಪ್ರಶ್ನಿಸುವ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಹಮೀರ್‌ಪುರದ ಸಂಸದ ಅನುರಾಗ್ ಠಾಕೂರ್ ‘ ತಮ್ಮ ಜಾತಿ ಗೊತ್ತಿಲ್ಲದವರು ಜಾತಿ ಜನಗಣತಿಗಾಗಿ ವಕಾಲತ್ತು ವಹಿಸುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ : ಸಂಸತ್ ಬಜೆಟ್ ಅಧಿವೇಶನ: ಸದನದಲ್ಲಿ ಪ್ರತಿಧ್ವನಿಸಿದ ಜಾತಿ ಗಣತಿ, ವೈಯಕ್ತಿಕ ಟೀಕೆಗಿಳಿದ ಬಿಜೆಪಿ ಸಂಸದ ಠಾಕೂರ್


