ಭಾರತ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕಾಂಗ್ರೆಸ್ ಮುಖಂಡರಾದ ವಿ.ಸುದರ್ಶನ್ ಮತ್ತು ಟಿ.ಬಿ.ಜಯಚಂದ್ರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ತುಮಕೂರಿನಲ್ಲಿ ಮಾತನಾಡಿದ ಉಭಯ ಮುಖಂಡರು ಕೇಂದ್ರದ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದರು. “ರೈತ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸಂಕಷ್ಟಗಳ ನಡುವೆ ಜೀವನ ನಡೆಸುತ್ತಿದೆ. ಇಂತಹ ಸಂದರ್ಭ ಉಪಯೋಗಿಸಿಕೊಂಡು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿರುವುದು ಖಂಡನೀಯ” ಎಂದರು.
ಇದನ್ನೂ ಓದಿ: ತುಮಕೂರು: ಬೌದ್ಧ ಧರ್ಮ ಸ್ವೀಕಾರ ಮಾಡಿದ 250 ದಲಿತರು
“ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಕೃಷಿ ಭೂಮಿಯನ್ನು ಬಂಡವಾಳಗಾರರಿಗೆ ಕೊಡಲು ತುದಿಗಾಲಲ್ಲಿ ನಿಂತಿದೆ. ಇದನ್ನು ನೋಡಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತ ಕಾಯುವುದಕ್ಕಿಂತ ಮಾರುಕಟ್ಟೆಯ ಹಿತ ಕಾಯಲು ಮುಂದಾಗಿದೆ. ಕೃಷಿ ಕಾಯ್ದೆಗಳ ಕುರಿತು ಚರ್ಚೆ ನಡೆಸಿದ್ದರೆ ಈ ಸಮಸ್ಯೆ ತಲೆದೋರುತ್ತಿರಲಿಲ್ಲ. ಅರ್ಧ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಕೇಂದ್ರ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ” ಎಂದು ಟೀಕಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಜನವರಿ 20ರಂದು ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ನಡೆಸಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ. ಇದಕ್ಕೂ ಬಗ್ಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಗಮನ ಸೆಳೆದ ಹೋರಾಟಗಾರರು
ಕಾಂಗ್ರೆಸ್ ವಕ್ತಾರ ಟಿ.ಬಿ.ಜಯಚಂದ್ರ ಮಾತನಾಡಿ, “ಸಿಡಿ ವಿಷಯ ಸಾಕಷ್ಟು ಚರ್ಚೆಯಾಗುತ್ತಿದೆ. ಸಿಡಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸಿಡಿ ವಿಷಯದ ಸದ್ದು ಜೋರಾಗಿಯೇ ಇದೆ. ವಿಶ್ವನಾಥ್ ಬಳಿಯೂ ಸಿಡಿ ಇರಬಹುದು. ಅದನ್ನು ಬಿಡುಗಡೆಗೊಳಿಸಲಿ” ಎಂದು ಒತ್ತಾಯಿಸಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹ:
“ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಚಾಲನೆ ನೀಡಲಾಯಿತು. ತಾಂತ್ರಿಕ ಪರಿಣತರು, ನೀರಾವರಿ ತಜ್ಞರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ಸಲಹೆ ಪಡೆದು 9 ಸಾವಿರ ಕೋಟಿ ಅಂದಾಜು ಯೋಜನೆಯ ಪ್ರಸ್ತಾವನೆಯನ್ನು ಕಳಿಸಿಕೊಟ್ಟೆವು. ನಂತರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪರಿಷ್ಕರಿಸಿ 20 ಸಾವಿರ ಕೋಟಿ ರೂ ಅಂದಾಜು ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಿಕೊಟ್ಟರು. ಅದರ ಬಗ್ಗೆ ರಾಜ್ಯ ಸರ್ಕಾರ ಚಕಾರ ಎತ್ತಿಲ್ಲ” ಎಂದು ದೂರಿದರು.
ಇದನ್ನೂ ಓದಿ: ತುಮಕೂರು: ವಕೀಲರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ -ಸಬ್‌ಇನ್ಸ್‌ಪೆಕ್ಟರ್ ವಿರುದ್ದ ಕ್ರಮಕ್ಕೆ ವಕೀಲರ ಆಗ್ರಹ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರಬೇಕು. ಮೇಕದಾಟು ಅಣೆಕಟ್ಟು ಕಟ್ಟಬೇಕು. ಇದರಿಂದ ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ಸುಮಾರು 80 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು. ಈ ನೀರನ್ನು ಬಳಕೆ ಮಾಡಿಕೊಂಡರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಹಾಗಾಗಿ ಈ ಬಗ್ಗೆ ಯಡಿಯೂರಪ್ಪ ಕೂಡಲೇ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ತುಮಕೂರು ಜಿಲ್ಲೆ ಸದಾ ಬರಗಾಲಕ್ಕೆ ತುತ್ತಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಹತ್ತೂ ತಾಲೂಕುಗಳಲ್ಲಿ ಇದೆ. ನೀರಿಗೆ ಹಾಹಾಕಾರವಿದ್ದು ಹೇವಮಾತಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಹೇಮಾವತಿ ಜಲಾಶಯದಿಂದ ನೀರನ್ನು ಮೆಟ್ಟೂರು ಡ್ಯಾಂಗೆ ಹರಿಸಲಾಗುತ್ತಿದೆ. ಹೇಮಾವತಿ ಜಲಾಶಯದ ನೀರು ತಮಿಳು ನಾಡಿಗೆ ಮೀಸಲು ಎಂಬಂತೆ ಪರಿಗಣಿಸುತ್ತಿರುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ತುಮಕೂರು: ಕೌಟುಂಬಿಕ ಕಲಹದಲ್ಲಿ ಪತ್ನಿ ಕೊಂದ ಪತಿಯ ಬಂಧನ
ಮುಂಗಾರು ಸಮಯದಲ್ಲಿ ವ್ಯಾಪಕ ಮಳೆ ಸುರಿದರೆ ಜಲಾಶಯಗಳು ತುಂಬಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತದೆ. ಇದನ್ನು ತಪ್ಪಿಸಿ ವ್ಯರ್ಥವಾಗಿ ಹರಿಯುವ ನೀರನ್ನು ಬಳಸಿಕೊಳ್ಳಬೇಕು. ಅದಕ್ಕಾಗಿ ಮೇಕೆದಾಟು ಅಣೆ ನಿರ್ಮಾಣವಾಗಬೇಕು. ಆಗ ಹೇಮಾವತಿ ನೀರು ತಮಿಳುನಾಡಿಗೆ ಹರಿಸುವುದನ್ನು ತಡೆಯಬಹುದು. ಹೇಮಾವತಿ ಜಲಾಶಯ ಆಶ್ರಿತ ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದು. ಇದೇ ಕಾರಣಕ್ಕೆ ಯಡಿಯೂರಪ್ಪ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಒಪ್ಪಿಗೆ ಪಡೆಯಬೇಕು ಎಂದು ಆಗ್ರಹಿಸಿದರು.
ಉಪಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶಿರಾ ಜನರಿಗೆ ಮಾತುಕೊಟ್ಟರು. ನೀರು ಹರಿಸುವ ಭರವಸೆ ನೀಡಿದರು. ಹೇಮಾವತಿ ನೀರು ಕೆಲವೇ ದಿನ ಹರಿಯಿತು. ಇದರಿಂದ ಮದಲೂರು ಕೆರೆಗೆ ನೀರು ಹರಿಯಲೇ ಇಲ್ಲ. ಮುಖ್ಯಮಂತ್ರಿಗಳು ಕೊಟ್ಟ ಮಾತು ಉಳಿಸಿಕೊಂಡಿದ್ದಾರೋ ಇಲ್ಲವೇ ವಚನ ಭ್ರಷ್ಟರಾಗಿದ್ದಾರೋ ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗಗೊಳ್ಳಲಿದೆ ಎಂದು ಛೇಡಿಸದರು.
ಇದನ್ನೂ ಓದಿ: ತುಮಕೂರು ಜಿ.ಪಂ ಅಧ್ಯಕ್ಷ ಸ್ಥಾನ: ಇದ್ದಕ್ಕಿದ್ದಂತೆ ಗೊಲ್ಲರ ಮೇಲೆ ಪ್ರೀತಿ ಉಕ್ಕಿದ್ದೇಕೆ?


