Homeಕರ್ನಾಟಕತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಗಮನ ಸೆಳೆದ ಹೋರಾಟಗಾರರು

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಗಮನ ಸೆಳೆದ ಹೋರಾಟಗಾರರು

- Advertisement -
- Advertisement -

ತುಮಕೂರು ಜಿಲ್ಲೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚಳವಳಿಯೊಂದಿಗೆ ಗುರುತಿಸಿಕೊಂಡಿರುವ ಪ್ರಮುಖರು ಆಯ್ಕೆಯಾಗಿರುವುದು ವಿಶೇಷ. ಸಾಮಾಜಿಕ ಮತ್ತು ದಲಿತಪರ ಹೋರಾಟಗಳಲ್ಲಿ ಗುರುತಿಸಿಕೊಂಡು ದಶಕದಿಂದ ದುಡಿಯುತ್ತ ಬಂದಿರುವ ಕೆಲವು ಮುಖಗಳು ಆಯ್ಕೆಯಾಗಿದ್ದು ಗ್ರಾಮ ಸ್ವರಾಜ್ಯದ ಕನಸ್ಸಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ. ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವವರಿಗೆ ಗ್ರಾಮಗಳ ನಿಜವಾದ ಅರಿವು ಇರುತ್ತದೆ. ಜೊತೆಗೆ ಯಾವ ಅಂಶಗಳನ್ನು ಗ್ರಾಮ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಜ್ಞಾನವಿರುವುದರಿಂದ ಜನರಿಗೆ ಸಾಕಷ್ಟು ಅನುಕೂಲಗಳು ದೊರೆಯಲಿದೆ.

ಇದಕ್ಕೆ ನಿದರ್ಶನವೆಂಬಂತೆ ಜಿಲ್ಲೆಯಲ್ಲಿ ಇಬ್ಬರು ಪ್ರಮುಖರು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಮನ ಸೆಳೆದಿದ್ದಾರೆ. ಅವರಲ್ಲಿ ಗುಬ್ಬಿ ತಾಲೂಕು ಕಾಡಶೆಟ್ಟಿಹಳ್ಳಿ ಸತೀಶ್ ಕೂಡ ಒಬ್ಬರು. ಮಹಾತ್ಮ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಆಶಯವನ್ನು ಸತೀಶ್ ಸ್ವಲ್ಪಮಟ್ಟಿಗಾದರೂ ಆಚರಣೆಗೆ ತಂದಿರುವುದನ್ನು ಗ್ರಾಮದಲ್ಲಿ ನೋಡಬಹುದು. ಸತೀಶ್ ಇದು ಮೂರನೇ ಬಾರಿಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆಗಿದ್ದು ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ ಸೆಳೆದಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಪಾಕಿಸ್ತಾನದ ಪ್ರಜೆ!- ತನಿಖೆಗೆ ಆದೇಶ

ಕಾಡಶೆಟ್ಟಿಹಳ್ಳಿಯ ಶಾಲೆ ತುಮಕೂರು ಜಿಲ್ಲೆಯಲ್ಲೇ ಹೆಸರು ಮಾಡಿದೆ. ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಪೋಷಕರು ಪೈಪೋಟಿ ನಡೆಸುವುದು ಇಲ್ಲಿ ಸಾಮಾನ್ಯವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆತರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡವರು ಕಾಡಶೆಟ್ಟಿಹಳ್ಳಿ ಸತೀಶ್. ಅದೇ ಕಾರಣಕ್ಕಾಗಿಯೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಣ ಖರ್ಚು ಮಾಡದೆ ಗೆದ್ದು ಬರಲು ಸಾಧ್ಯವಾಗಿದೆ.

ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿಕೊಂಡಿರುವ ಕಾಡಶೆಟ್ಟಿಹಳ್ಳಿ ಸತೀಶ್, ಶಾಲೆಯ ಅಭಿವೃದ್ಧಿ ಮತ್ತು ಗ್ರಾಮ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸ್ಥಳೀಯರಿಗೆ ಇನ್ನಿಲ್ಲದ ಒಲವು ಉಂಟಾಗಲು ಕಾರಣವಾಗಿದೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿ ಕರ್ನಾಟಕ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ಸತೀಶ್, ಗ್ರಾಮ ಪಂಚಾಯತ್‌ರಾಜ್ ವ್ಯವಸ್ಥೆಯ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿದ್ದಾರೆ. ಜನರಲ್ಲಿ ಗ್ರಾಮ ಪಂಚಾಯ್ತಿಗಳ ಬಗ್ಗೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 4 ಜನ ಆಯ್ಕೆ

ಶಾಲೆ ಮತ್ತು ಗ್ರಾಮದ ಅಭಿವೃದ್ಧಿ ಕಾರಣದಿಂದ ಕಾಡಶೆಟ್ಟಿಹಳ್ಳಿ ಗ್ರಾಮ ರಾಜ್ಯದ ಗಮನ ಸೆಳೆಯುವಂತೆ ಆಗಿದೆ. ಒಂದು ಗ್ರಾಮವನ್ನು ಹೀಗೂ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಕಾಡಶೆಟ್ಟಿಹಳ್ಳಿ ಮಾದರಿ ಆಗಿದೆ.

ಇನ್ನೊಂದು ಕಡೆ ದಲಿತ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಮುರಳಿ ಕುಂದೂರು ಕೂಡ ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಆಯ್ಕೆಯಾಗಿರುವುದು ಗಮನ ಸೆಳೆದಿದೆ. ದಲಿತ ಸಂಘರ್ಷ ಸಮಿತಿಯ ಜಿಲ್ಲಾ  (ಪ್ರೊ.ಬಿ.ಕೃಷ್ಣಪ್ಪ ಬಣ) ಸಂಚಾಲಕ ಕುಂದೂರು ತಿಮ್ಮಯ್ಯ ಪುತ್ರ ಮುರಳಿ ಆಯ್ಕೆಯಾಗಿರುವುದು ಹಲವರ ಶ್ಲಾಘನೆಗೆ ಕಾರಣವಾಗಿದೆ. ವಿದ್ಯಾರ್ಥಿ ಹೋರಾಟಗಳು, ದಲಿತಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ದಲಿತರಿಗೆ ನ್ಯಾಯ ಕೊಡಿಸಿಕೊಡುವಲ್ಲಿ ಪಾತ್ರ ವಹಿಸಿದ್ದಾರೆ ಸದಾ ಜನಪರವಾಗಿ ಚಿಂತಿಸುವ ಮುರಳಿಗೆ ಎಲ್ಲಿಲ್ಲದ ಬೆಂಬಲ ವ್ಯಕ್ತವಾಗಿದೆ.

ಇದನ್ನೂ ಓದಿ: ಪಕ್ಷಗಳಿಲ್ಲದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ‘ಈ ಪಕ್ಷಗಳ ಬೆಂಬಲಿತರ’ ಸಾಧನೆ ಎಷ್ಟು?

ಮುರುಳಿ ಕುಂದೂರು ತಂದೆಯ ಹಾದಿಯಲ್ಲೇ ನಡೆಯುತ್ತಿದ್ದು ಇದೀಗ ಗ್ರಾಮದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಗ್ರಾಮ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿಗೆ ಆದ್ಯತೆ ನೀಡುವ ಕನಸು ಮುರಳಿಯದ್ದು. ಕುಡಿಯುವ ನೀರು ಪೂರೈಕೆ, ಚರಂಡಿ ನಿರ್ಮಾಣ, ಸಿ.ಸಿ.ರಸ್ತೆಗಳ ನಿರ್ಮಾಣ, ಬೀದಿದೀಪಗಳ ಅಳವಡಿಕೆ ಮತ್ತು ಗ್ರಾಮಸ್ಥರು ಓದಲು ಅನುಕೂಲವಾಗುವಂತೆ ಗ್ರಂಥಾಲಯವನ್ನು ಸಜ್ಜುಗೊಳಿಸುವುದು ಸೇರಿದಂತೆ ಇತರೆ ಕೆಲಸಗಳಿಗೆ ಆದ್ಯತೆ ನೀಡುವುದಾಗಿ ನಾನುಗೌರಿ.ಕಾಂ ಗೆ ತಿಳಿಸಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರು ಹೋಬಳಿ ಕಲ್ಕೆರೆ ಗ್ರಾಮ ಪಂಚಾಯ್ತಿಯಲ್ಲಿ ವಿಶಿಷ್ಟ ಕರಪತ್ರದ ಮೂಲಕ ರಾಜ್ಯದ ಗಮನ ಸೆಳೆದು, ಸಾಮಾಜಿಕ ಜಾಲತಾಣದಲ್ಲಿ ಕರಪತ್ರ ವೈರಲ್ ಆಗಿದ್ದ ಗಂಗಮ್ಮ ಕೇವಲ 6 ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ. ಸ್ಪರ್ಧಿಸಿದ್ದ ಎರಡೂ ಕಡೆ ಮತದಾರ ಗಂಗಮ್ಮರ ಮನವಿಗೆ ಓಗೊಟ್ಟಿಲ್ಲ.


ಇದನ್ನೂ ಓದಿ: 24 ದಲಿತ ಕುಟುಂಬಗಳಿಗೆ ಬಹಿಷ್ಕಾರ – ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರ ವಿರುದ್ಧ ಪ್ರಕರಣ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...