ಪಂಜಾಬ್‌ನ ಲೂಧಿಯಾನಾದ ಜಂಗಪುರ್ ಹಳ್ಳಿಯ ಕಾಂಗ್ರೆಸ್ ಕಾರ್ಯಕರ್ತ ಗುರುವಾರ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೂ ಮುನ್ನ ಹೊಸದಾಗಿ ನೇಮಕಗೊಂಡಿರವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಉದ್ದೇಶಿಸಿ ಆಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಆಡಿಯೋದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದ್ದು, ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮೃತ ದಲ್ಜಿತ್ ಸಿಂಗ್ ಹ್ಯಾಪಿ (42) ಪ್ರೀತಮ್ ಸಿಂಗ್ ಎಂಬುವರ ಜೊತೆ ಆಸ್ತಿ ವಿವಾದದಲ್ಲಿ ಸಿಲುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯದ ಕುರಿತು ಲೂಧಿಯಾನ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದರು.
ತನಿಖೆ ಪ್ರಗತಿಯಲ್ಲಿರುವಾಗಲೇ, ಗುರುವಾರ ಮೃತ ದಲ್ಜಿತ್ ಸಿಂಗ್ ಮನೆಯಿಂದ ಹೊರ ಹೋಗಿ, ಆಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ ತಮ್ಮ ಪರಿಸ್ಥಿತಿಗೆ ಕೆಲವು ಜನರನ್ನು ದೋಷಿಸಿದ್ದಾರೆ. ಜೊತೆಗೆ ನ್ಯಾಯಕ್ಕಾಗಿ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದ ಸಾವುಗಳ ಬಗ್ಗೆ ಮಾಹಿತಿ ಇಲ್ಲ ಎಂದ ಕೇಂದ್ರ: ಪಂಜಾಬ್ ಅಂಕಿ-ಅಂಶ ತಿಳಿಸಿದ್ದೇ ಬೇರೆ!
ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಕೇಳಿದ ಮೃತರ ಸಹೋದರ, ಆತನನ್ನು ಹುಡುಕಾಡಿದ್ದಾರೆ. ಬುಡೆಲ್ ಗ್ರಾಮದಲ್ಲಿ (ರಾಯ್ಕೋಟ್ ರಸ್ತೆಯಲ್ಲಿ) ಪ್ರಜ್ಞಾಹೀನ ಸ್ಥಿತಿಯಲ್ಲಿ ದಲ್ಜಿತ್ ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದಲ್ಜಿತ್ ಸಿಂಗ್ ಹ್ಯಾಪಿ ತನ್ನ ಅಣ್ಣನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅವರಿಗೆ ಇನ್ನು ಮದುವೆಯಾಗಿರಲಿಲ್ಲ. ಆಸ್ತಿ ವಿವಾದದಲ್ಲಿ ನೊಂದಿದ್ದ ಅವರು ವಿಷಪೂರಿತ ಆಹಾರ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮುಲ್ಲಂಪುರ ದಖಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಕುಮ್ಮಕ್ಕು) ಅಡಿಯಲ್ಲಿ ಪ್ರೀತಂ ಸಿಂಗ್, ಮಹಿಂದರ್ ಸಿಂಗ್ ಮತ್ತು ಬಲ್ಜಿಂದರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಡಿಎಸ್ಪಿ ಬೈನ್ಸ್ ತಿಳಿಸಿದ್ದಾರೆ. ಮಹಿಂದರ್ ಮತ್ತು ಬಲ್ಜಿಂದರ್ ಅವರನ್ನು ಬಂಧಿಸಲಾಗಿದೆ.
ನವಜೋತ್ ಸಿಂಗ್ ಸಿಧು ಮತ್ತು ಕ್ಯಾಬಿನೆಟ್ ಸಚಿವ ಭರತ್ ಭೂಷಣ್ ಅಶು ಅವರು ಮೃತರ ಕುಟುಂಬವನ್ನು ಭೇಟಿ ಮಾಡಿ, ಕುಟುಂಬಕ್ಕೆ ಪಂಜಾಬ್ ಕಾಂಗ್ರೆಸ್ ಪರವಾಗಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಟ್ವೀಟ್ ಮಾಡಿ “ಲೂಧಿಯಾನ ಜಿಲ್ಲೆಯ ನಮ್ಮ ಪಕ್ಷದ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ದುಃಖಕರವಾಗಿದೆ. ಪ್ರಕರಣದ ಕುರಿತು ತಕ್ಷಣ ತನಿಖೆ ನಡೆಸುವಂತೆ ಮತ್ತು ಅಪರಾಧಿಗಳನ್ನು ಕಂಡುಹಿಡಿಯುವಂತೆ ಪಂಜಾಬ್ ಡಿಜಿಪಿಗೆ ಸೂಚಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದ ಯಾರನ್ನೂ ಬಿಡುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಪಂಜಾಬ್ ಬಳಿಕ ರಾಜಸ್ಥಾನದ ಸಮಸ್ಯೆ ಬಗೆ ಹರಿಸಲು ಮುಂದಾದ ಕಾಂಗ್ರೆಸ್


