ರಾಷ್ಟ್ರಕವಿ, ನಾಡಗೀತೆಯ ರಚನೆಗಾರ, ವಿಶ್ವಮಾನವ ಸಂದೇಶ ಸಾರಿದ ಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಒಂದು ದಿನ ಮೊದಲೇ ಇಂದು ಭದ್ರಾವತಿಯಲ್ಲಿ ನೂರಾರು ಜನ ಸೇರಿ ಸಂವಿಧಾನದ ಮುನ್ನಡಿಯ ಓದು ಮತ್ತು ಸಹಭೋಜನದ ಸಹಬಾಳ್ವೆಯ ಕಾರ್ಯಕ್ರಮ ನಡೆಸಿದರು.
ವಿವಿಧ ಸಮುದಾಯಗಳ ನೂರಾರು ಜನರು ಭದ್ರಾವತಿಯ ಒಂದೆಡೆ ಸೇರಿ ಸಾಮರಸ್ಯದ ಸಂಕೇತವಾಗಿ ಸಹಭೋಜನ ನಡೆಸಿದ್ದರಲ್ಲದೇ ಸಂವಿಧಾನದ ಮುನ್ನುಡಿಯನ್ನು ಸಾಮೂಹಿಕವಾಗಿ ಓದುವ ಮೂಲಕ ಭಾರತ ಸರ್ವಧರ್ಮಗಳ ದೇಶ ಎಂಬುದನ್ನು ಸಾರಿದರು.
ವಿಡಿಯೋ ನೋಡಿ
ಸಿಎಎ, ಎನ್‌ಆರ್‌ಸಿ ಸೇರಿದಂತೆ ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಹಲವು ವಿದ್ಯಾಮಾನಗಳು ನಮ್ಮಲ್ಲಿ ಆತಂಕ ಹುಟ್ಟಿಸಿವೆ. ಇಷ್ಟು ದಿನ ಅನ್ಯೋನವಾಗಿದ್ದ ನಮ್ಮಲ್ಲಿ ಬಿರುಕು ಮೂಡಿಸಲು ಮುಂದಾಗಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮಾಡಬಹುದಾದ ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದೇವೆ. ನಮ್ಮ ಕುವೆಂಪುರವರ ಜನ್ಮದಿನದ ನೆಪದಲ್ಲಿ ಇದನ್ನು ಆರಂಭಿಸುತ್ತಿರುವುದು ನಮ್ಮ ಹೆಮ್ಮೆ ಎಂದು ಆಯೋಜಕರು ತಿಳಿಸಿದ್ದಾರೆ.
ಭದ್ರಾವತಿಯ ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಐಕ್ಯತೆ ಮೆರೆದಿದ್ದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಡಿ.ಸಿ ಮಾಯಣ್ಣ, ಚಿಂತಕರಾದ ಪ್ರೊ. ಎಂ ಚಂದ್ರಶೇಖರಯ್ಯ, ಛಲವಾದಿ ಮಹಾಸಭಾದ ಪೇಪರ್ ಸುರೇಶ್, ಸಂವಿಧಾನ ಉಳಿವಿಗಾಗಿ ಕರ್ನಾಟಕದ ರಾಜು.ಜಿ, ಮುಸ್ಲಿಂ ಸಮುದಾಯದ ಮುಖಂಡರಾದ ಮಾಜಿ ಉಪ ಮೇಯರ್ ಮಹಮ್ಮದ್ ಸನಾವುಲ್ಲಾ, ಮುರ್ತುಜ ಖಾನ್, ಖಾದರ್, ಜಾವಿದ್, ಜೆ.ಬಿ.ಟಿ ಬಾಬು, ಸಿ.ಕೆ ಅಸ್ಮತ್ ಪಾಷ, ಪೀರ್ ಷರೀಫ್, ಆಮ್ ಆದ್ಮಿ ಪಾರ್ಟಿಯ ರವಿಕುಮಾರ್, ಪರಮೇಶ್ವರಚಾರ್, ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾದ ಅಬೂಲ್ ಖೈರ್, ಕ್ರೈಸ್ತ ಮುಖಂಡ ರಾದ ಸೆಲ್ವರಾಜ್, ಬಾಸ್ಕರ್, ಮಾಜಿ ನಗರಸಭಾ ಸದಸ್ಯರಾದ ಚನ್ನಪ್ಪ, ಟಿಪ್ಪು ಸುಲ್ತಾನ್, ಫ್ರಾನ್ಸಿಸ್, ವಕೀಲರಾದ ಶಿವಕುಮಾರ್, ಟಿಪ್ಪು ಸಮಿತಿಯ ಮೆಹಬೂಬ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಹಸ್ರ ಕಡೆ ಸಹಭೋಜನ ಹೆಸರಿನಲ್ಲಿ ಹಲವು ಪ್ರಜ್ಞಾವಂತರು ನೀಡಿದ್ದ ಕರೆಗೆ ಓಗೊಟ್ಟು ಕಾರ್ಯಕ್ರಮ ನಡೆದಿದೆ. ಸರ್ವಜನಾಂಗದ ಶಾಂತಿಯ ತೋಟ ನಮ್ಮ ದೇಶ. ಇದನ್ನು ಧರ್ಮದ ಆಧಾರಲ್ಲಿ ವಿಭಜಿಸಲು ಬಿಡುವುದಿಲ್ಲ ಎಂದು ಹಲವು ಜನರು ಡಿಸೆಂಬರ್ 29ರಂದು ರಾಜ್ಯದ ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಸಹಸ್ರ ಸಹಭೋಜನ ಕಾರ್ಯಕ್ರಮ ನಡೆಸಲಿದ್ದಾರೆ. ಭದ್ರಾವತಿಯಲ್ಲಿಯೂ ಸಹ ನಾಳೆ ಭಾನುವಾರ ಹತ್ತಕ್ಕೂ ಹೆಚ್ಚು ಕಡೆ ಕಾರ್ಯಕ್ರಮಗಳು ನಡೆಯಲಿವೆ.


