Homeಚಳವಳಿಮೀಸಲಾತಿ ವಿರೋಧಿ ಹುಡುಗರೊಂದಿಗೆ: ಮೀಸಲಾತಿ ಕುರಿತು ಕನ್ನಡದ ಮಹತ್ವದ ಲೇಖಕ ಪಿ.ಲಂಕೇಶ್‌ ಬರಹ...

ಮೀಸಲಾತಿ ವಿರೋಧಿ ಹುಡುಗರೊಂದಿಗೆ: ಮೀಸಲಾತಿ ಕುರಿತು ಕನ್ನಡದ ಮಹತ್ವದ ಲೇಖಕ ಪಿ.ಲಂಕೇಶ್‌ ಬರಹ…

ವಿದ್ಯೆಯ, ಸಂಪತ್ತಿನ ಲಾಭ ಪಡೆದ ಜನಾಂಗದಿಂದ ಬಂದವ ತೊಂಭತೈದು ಅಂಕ ತೆಗೆಯುವುದು ಎಷ್ಟು ಅದ್ಭುತವೋ ಯಾವುದೇ ಅಕ್ಷರ, ಆಸ್ತಿ ಹಿನ್ನೆಲೆಯಿಲ್ಲದವ ಐವತೈದು ಅಂಕ ತೆಗೆಯುವುದು ಅದಕ್ಕಿಂತ ಅದ್ಭುತ..

- Advertisement -
- Advertisement -

ಮೀಸಲಾತಿ ಕುರಿತು ಕನ್ನಡ ಲೇಖಕರು

ಮೀಸಲಾತಿ: ಕಣ್ಣಗಾಯಕ್ಕೊಂದು ಕನ್ನಡಿ

ಸರಣಿ ಸಂಪಾದಕರು: ವಿಕಾಸ್ ಆರ್‌ ಮೌರ್ಯ

ಮೀಸಲಾತಿಯ ಮೂಲದ ಕುರಿತು ಮತ್ತು ವಿವಿಧ ಸಮುದಾಯಗಳ ನೆಲೆಯಿಂದ ಅದನ್ನು ಹೇಗೆ ನೋಡಬಹುದೆಂಬುದರ ಕುರಿತು ಇದುವರೆಗೆ ಈ ಸರಣಿಯಲ್ಲಿ ವಿವಿಧ ಲೇಖಕರು ಬರೆದಿರುವುದನ್ನು ನೋಡಿದ್ದೀರಿ. ಈಗ ಕನ್ನಡದ ಮಹತ್ವದ ಲೇಖಕರು/ಚಿಂತಕರು ಮೀಸಲಾತಿಯ ಕುರಿತು ಏನು ಹೇಳಿದ್ದಾರೆಂಬುದನ್ನು ನೋಡೋಣ. ಒಂದಿಡೀ ತಲೆಮಾರನ್ನು ಪ್ರಭಾವಿಸಿದ ಕನ್ನಡದ ಲೇಖಕ ಪಿ.ಲಂಕೇಶ್‌ರು ಬರೆದ ಒಂದು ಟಿಪ್ಪಣಿಯ ಆಯ್ದ ಭಾಗಗಳನ್ನು ಈ ಸಾರಿ ನೀಡಲಾಗಿದೆ. ಆಶ್ಚರ್ಯವೆಂದರೆ ಇದನ್ನು ಅವರು ಮಂಡಲ್ ವಿರೋಧಿ ಚಳವಳಿ ನಡೆಯುವುದಕ್ಕೆ ಸಾಕಷ್ಟು ಮುಂಚೆ (2 ಜೂನ್ 1985) ಬರೆದಿದ್ದಾರೆ. ‘ಗುಜರಾತ್ ಚಳವಳಿಗಾರರಿಂದ ಯಾವುದೇ ಚಿತಾವಣೆಯ ಸಂದೇಶ……’ ಎಂದು ದಾಖಲಿಸುತ್ತಾರೆ. ಸಂಪೂರ್ಣ ಟಿಪ್ಪಣಿಯ ಓದಿಗಾಗಿ ‘ಟೀಕೆ-ಟಿಪ್ಪಣಿ’ ಪುಸ್ತಕವನ್ನು ಓದಬೇಕು – ಸಂ

ಕಳೆದ ಒಂದು ತಿಂಗಳಿಂದ ನಮ್ಮ ಆಫೀಸಿನ ಹತ್ತಿರ ಆಗಾಗ ಅರ್ಧ ಹಿಂಜರಿಕೆ, ಅರ್ಧ ಗೊಂದಲದಿಂದ ಹಲವಾರು ಹುಡುಗರು ಸುಳಿದಾಡುತ್ತಿದ್ದರು, ನಾನವರನ್ನು ಗಮನಿಸಿದ್ದರೂ ಗಮನಿಸದೆ ಇರುವವನಂತೆ ಇದ್ದೆ. ಕೊನೆಗೆ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ, ತುಮಕೂರು ಕಾಲೇಜೊಂದರ ಹುಡುಗರು ‘ಸಂಪಾದಕರ ಹತ್ತಿರ ಮಾತಾಡಬೇಕು’ ಎಂದು ಬಂದರು. ನಾನು ಊಹಿಸಿದ್ದಂತೆಯೇ, ‘ಮೀಸಲಾತಿಯ ವಿರುದ್ಧ ಅನೇಕಾನೇಕ ಅನಿಸಿಕೆಗಳನ್ನುಳ್ಳ ಹುಡುಗರು ಅವರು; ಅವರಿಗೆ ಗುಜರಾತ್ ಚಳವಳಿಗಾರರಿಂದ ಯಾವುದೇ ಚಿತಾವಣೆಯ ಸಂದೇಶ ಬಂದಿದೆಯೆಂದು ನನಗೆ ಅನ್ನಿಸದಿದ್ದರೂ ಅವರಲ್ಲಿ ಮೀಸಲಾತಿಯ ಬಗ್ಗೆ ಕಟುವಾದ, ಆಳವಾದ ಅನ್ನಿಸಿಕೆಗಳಿದ್ದವು; ಇಡೀ ಕರ್ನಾಟಕದಲ್ಲಿ ಕಾಲೇಜುಗಳಲ್ಲಿ ಸೀಟು ಸಿಗದೆ, ಮಾಡಲು ಉದ್ಯೋಗ ಸಿಗದೆ ಇರುವ ಅನೇಕಾನೇಕ ಘಟನೆಗಳು ಅವರ ಕಡತದಲ್ಲಿದ್ದವು. ಅಲ್ಲದೆ ಅನೇಕ ಕ್ಲೀಷೆಗಳು, ಹಳಸಲು ಅಭಿಪ್ರಾಯಗಳ ಸರಕುಗಳೇ ಅವರಲ್ಲಿದ್ದಂತಿತ್ತು. ಒಂದು ಗುಂಪಿನ ಜೊತೆಗೆ ಮಾತಾಡುವಾಗ ನಾನು ಕೆಲಸದ ಒತ್ತಡದಲ್ಲಿದ್ದುದರಿಂದ ನಿಂತುಕೊಂಡೇ ಅವರ ಮಾತು ಕೇಳಿ, ಉತ್ತರಿಸಿದೆ; ಇನ್ನೆರಡು ಗುಂಪುಗಳನ್ನು ಕೂರಿಸಿಕೊಂಡು ಸಾವಧಾನವಾಗಿ ಅವರ ಮಾತು ಕೇಳಿದೆ.

ನಾನು ಕೇಳುತ್ತಾ ಹೋದಂತೆ ಬೇರೆಬೇರೆ ಹುಡುಗರು ಈ ರೀತಿಯಲ್ಲಿ ಹೇಳಿದರು ಮತ್ತು ಈ ರೀತಿ ನಾನು ಉತ್ತರಿಸಿದೆ-

ಒಬ್ಬ: ನಮ್ಮದು ಜಾತ್ಯತೀತ ಸಮಾಜ, ಸೆಕ್ಯುಲರಿಸಂ ಅನ್ನು ಉಳಿಸಿ ಬೆಳೆಸುವುದು ನಮ್ಮ ಯಾವುದೇ ಸರ್ಕಾರದ ಉದ್ದೇಶ ಮತ್ತು ಕರ್ತವ್ಯವಾಗಿರಬೇಕು. ಹೀಗಿರುವಾಗ ಎಳೆಯ ವಿದ್ಯಾರ್ಥಿಗಳ ಮೇಲೆ, ಉದ್ಯೋಗ ಬಯಸುವ ಯುವ ಅಭ್ಯರ್ಥಿಗಳ ಮೇಲೆ ಜಾತಿಯ ಕಡಿವಾಣ ಹಾಕುವುದು, ಜಾತಿಯ ಆಧಾರದ ಮೇಲೆ ಅವರನ್ನು ಹಿಂದೆ ತಳ್ಳುವುದು ಸರಿಯೇ? ಬುದ್ಧಿಜೀವಿಗಳಾದ ನಿಮ್ಮಂಥವರು ಮಾತೆತ್ತಿದರೆ ಸಾವಿರಾರು ವರ್ಷಗಳಿಂದ ಮೇಲ್ಜಾತಿಯವರು ಕೆಳಜಾತಿಯವರನ್ನು ತುಳಿದ ಚರಿತ್ರೆಯನ್ನೇ ನೀಡುತ್ತೀರಿ. ಹಾಗೆ ಎಂದೋ ಆದ ಅನ್ಯಾಯ, ಶೋಷಣೆಯ ಆಧಾರದ ಮೇಲೆ ಈಗಿನ ಜನಾಂಗವನ್ನು ಏಕೆ ನಾಶ ಮಾಡಬೇಕು? ಒಮ್ಮೆ ಇಂಗ್ಲಿಷ್ ಕ್ರಿಶ್ಚಿಯನ್ನರು, ಅದಕ್ಕಿಂತ ಹಿಂದೆ ಮುಸ್ಲಿಮರು ನಮ್ಮ ದೇಶವನ್ನು ಆಳಿದರು. ಅನೇಕ ಬಗೆಯಲ್ಲಿ ಶೋಷಿಸಿದರು. ಅದಕ್ಕೆ ಪ್ರತಿಯಾಗಿ ಈಗ ಮುಸ್ಲಿಮರನ್ನು ಕ್ರಿಶ್ಚಿಯನ್ನರನ್ನು ಅನ್ಯಾಯಕ್ಕೀಡುಮಾಡಲು ಸಾಧ್ಯವೆ? ಸರಿಯೆ?”

“ನೀವು ಹೇಳುವುದು ಸರಿ” ಎಂದು ಆತನ ಪ್ರಶ್ನೆಗೆ ಉತ್ತರ ಹೇಳತೊಡಗಿದೆ. “ಜಾತಿಯ ಆಧಾರದ ಮೇಲೆ ಯಾವುದೂ ನಡೆಯಕೂಡದು. ಆದರೆ ಏನಾಗಿದೆ ಅಂದರೆ, ಒಂದೂರಲ್ಲಿ ಹರಿಜನ ಕೇರಿ, ಅಗಸರ ಕೇರಿ, ಬ್ಯಾಡರ ಕೇರಿಯಿಂದ ಹಿಡಿದು ನಿಮ್ಮ ಹಿರಿಯರು ನಿಮ್ಮನ್ನು ನಿಮ್ಮ ಜಾತಿಯ ಉಚಿತ ಅಥವಾ ಅನುಚಿತ ಹಾಸ್ಟೆಲಿಗೆ ಸೇರಿಸುವುದನ್ನೊಳಗೊಂಡು ನಿಮ್ಮ ಮದುವೆ, ಮುಂಜಿ, ಸತ್ಯನಾರಾಯಣ ಪೂಜೆ, ಬಸವಜಯಂತಿಯವರೆಗೆ ಜಾತೀಯತೆ ಹಬ್ಬಿದೆ. ಇವತ್ತಿಗೂ ಈ ದೇಶದಲ್ಲಿ ಶೇಕಡಾ ತೊಂಭತ್ತೊಂಭತ್ತು ಭಾಗ ಸ್ವಜಾತಿಯಲ್ಲೇ ಮದುವೆ, ಸ್ವಂತ ಜಾತಿಯವರ ಜೊತೆಗೇ ಇವರ ಒಡನಾಟ. ಈ ಸಂಬಂಧ ಮತ್ತು ಒಡನಾಟಗಳು ಎಲ್ಲಿಯವರೆಗೆ ಹಬ್ಬಿವೆ ಎಂಬುದನ್ನು ಯೋಚಿಸಿ. ಇದು ಆರ್ಥಿಕರಂಗ, ಸಾಂಸ್ಕೃತಿಕ ರಂಗ, ವಿದ್ಯಾರಂಗವನ್ನು ಆವರಿಸಿದೆ. ಬ್ರಾಹ್ಮಣರ ಖಾಸಗಿ ಕಾಲೇಜಿನಲ್ಲಿ ಎಷ್ಟು ಜನ ಹರಿಜನ ವಿದ್ಯಾರ್ಥಿಗಳು, ಅಧ್ಯಾಪಕರಿದ್ದಾರೆ ಎಂಬುದನ್ನು ನೋಡಿ. ಇದೆಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಬ್ರಾಹ್ಮಣರ ಹುಡುಗ, ಒಬ್ಬ ಲಿಂಗಾಯತರ, ಜೈನರ, ವೈಶ್ಯರ ಹುಡುಗ ವಿದ್ಯಾವಂತನಾಗಲು ಸಮಾಜ ಎಷ್ಟು ಹಣ ಹೂಡಿತು? ಬ್ರಾಹ್ಮಣರಲ್ಲಿ ಶೇಕಡಾ ಎಂಭತ್ತು ಭಾಗ, ಲಿಂಗಾಯತರಲ್ಲಿ ಶೇಕಡ ಐವತ್ತು ಭಾಗ ಜನರು ವಿದ್ಯಾವಂತರಾಗಿದ್ದಾರೆ ಅಂದರೆ ಅವರನ್ನು ವಿದ್ಯಾವಂತರನ್ನಾಗಿಸಲು ಸಮಾಜ ಅಪಾರ ಸಂಪತ್ತನ್ನು ವ್ಯಯ ಮಾಡಿದೆ.

ಹರಿಜನರಲ್ಲಿ ಕೇವಲ ಒಂದು ಭಾಗ, ಬೇಡರಲ್ಲಿ ಒಂದೂವರೆ ಭಾಗ ವಿದ್ಯಾವಂತರಿದ್ದರೆ- ಅಷ್ಟೇ ಕಡಿಮೆ ಸಂಪತ್ತನ್ನು ಸಮಾಜ ಅವರಲ್ಲಿ ಹೂಡಿದೆ ಎಂದಂತಾಯಿತು. ಇದು ಕೇವಲ ಇತಿಹಾಸವನ್ನು ನೋಡಿ ಹೇಳುತ್ತಿರುವ ಮಾತಲ್ಲ, ನಮ್ಮ ಸುತ್ತಣ ವಿದ್ಯಾವಂತ, ಅವಿದ್ಯಾವಂತ ಜನರನ್ನು ನೋಡಿ ಹೇಳುತ್ತಿರುವ ಮಾತು…”

“ಅದಕ್ಕಲ್ಲ ಸರ್, ಪ್ರತಿಭೆಗೆ ಮಾನ್ಯತೆಯೂ ಇಲ್ಲವೆ? ಶೇಕಡ ತೊಂಭತೈದು ಅಂಕ ತೆಗೆದ ಒಬ್ಬನನ್ನು ಹಿಂದುಳಿದ, ಪರಿಶಿಷ್ಟ ವರ್ಗದ ಐವತ್ತೈದು ಅಂಕದ ಹುಡುಗ ಹಿಂದಕ್ಕೆ ತಳ್ಳುವಂತಾದರೆ ಹೇಗೆ? ಇಂಥ ಅನೇಕ ಉದಾಹರಣೆಗಳನ್ನು ನಾವು ಕೊಡಬಲ್ಲೆವು. ಅಲ್ಲದೆ ಸಮಾಜದಲ್ಲಿ ಗಾಢ ಪ್ರತಿಭೆ ಅಗತ್ಯವಿರುವ ಹುದ್ದೆಗಳಿಗೆ ಕಡಿಮೆ ಅಂಕ ತೆಗೆದು ತೇರ್ಗಡೆಯಾದವರನ್ನು ನೇಮಿಸುವುದು ಸರಿಯೆ? ಸೇತುವೆ, ಅಣೆಕಟ್ಟು ಕಟ್ಟಲು ದಡ್ಡನಾದ ಇಂಜಿನಿಯರ್‌ಗಳನ್ನು ನೇಮಿಸುವುದು, ಸಂಕೀರ್ಣವಾದ ಶಸ್ತ್ರಚಿಕಿತ್ಸೆ ಮಾಡಲು ಅರ್ಹನಲ್ಲದವನನ್ನು ನೇಮಿಸುವುದು ಅಪಾಯಕಾರಿಯಲ್ಲವೆ?”

ಇದೇ ಮಾತನ್ನು ಮೂವತ್ತು ವರ್ಷಗಳ ಕೆಳಗೆ ಎಲ್ಲ ಬ್ರಾಹ್ಮಣರು ಲಿಂಗಾಯತರನ್ನೊಳಗೊಂಡು ಎಲ್ಲ ಅಬ್ರಾಹ್ಮಣರ ಬಗ್ಗೆ ಹೇಳುತ್ತಿದ್ದರು; ಈಗ ನೀವೆಲ್ಲ ಹಿಂದುಳಿದ, ಪರಿಶಿಷ್ಟ ವರ್ಗಗಳ ಬಗ್ಗೆ ಹೇಳುತ್ತಿದ್ದೀರಿ. ಇದು ನಿಜವೆಂಬುದಕ್ಕಿಂತ ಹೆಚ್ಚಾಗಿ ನಿಮ್ಮ ಮಾನಸಿಕ ಸ್ಥಿತಿಯನ್ನು, ಆತಂಕಗಳನ್ನು ತೋರುತ್ತದೆ. ಶಸ್ತ್ರಚಿಕಿತ್ಸೆ ಮಾಡಬೇಕಾದವರು ಮಾಂಸವನ್ನು ಕೊಯ್ದು ಅನುಭವವುಳ್ಳ ಜನ ಮಾತ್ರ ಅಂದರೆ, ಸೇತುವೆ, ಅಣೆಕಟ್ಟು ಕಟ್ಟಬೇಕಾದವರು ಮಣ್ಣು, ಕಲ್ಲು, ಸಿಮೆಂಟನ್ನು ಮುಟ್ಟಿ ಹೊತ್ತ ಜನಾಂಗದಿಂದ ಬಂದವರು ಮಾತ್ರ ಅಂದರೆ ನೀವೇನು ಹೇಳುತ್ತೀರಿ? ಇಂಥ ಜಾಣತನದ ವಾದಗಳಿಗೆ ಇಳಿಯುವುದು ಬೇಡ, ಇರುವ ಸ್ಥಿತಿ ಏನೆಂದರೆ, ವಿದ್ಯೆಯ, ಸಂಪತ್ತಿನ ಲಾಭ ಪಡೆದ ಜನಾಂಗದಿಂದ ಬಂದವ ತೊಂಭತೈದು ಅಂಕ ತೆಗೆಯುವುದು ಎಷ್ಟು ಅದ್ಭುತವೋ ಯಾವುದೇ ಅಕ್ಷರ, ಆಸ್ತಿ ಹಿನ್ನೆಲೆಯಿಲ್ಲದವ ಐವತೈದು ಅಂಕ ತೆಗೆಯುವುದು ಅದಕ್ಕಿಂತ ಅದ್ಭುತ. ಅದಕ್ಕಿಂತ ಹೆಚ್ಚಾಗಿ, ತೊಂಭತೈದು ಅಂಕ ತೆಗೆದವನಿಗೆ ಆತನ ಹಿನ್ನೆಲೆಯಿಂದಾಗಿ ಅವನ ಗುಂಪಿನ ಪರಿಚಿತರು, ವಿದೇಶದಲ್ಲಿರುವವರು, ಉನ್ನತ ಸ್ಥಾನದಲ್ಲಿರುವವರು ನೆರವಾಗಿ ಒಂದು ನೆಲೆ ನೀಡುವ ಸಾಧ್ಯತೆ – ಕೇವಲ ಸಾಧ್ಯತೆ – ಎಂಬುದಾದರೂ ಇರುತ್ತದೆ. ಈ ನಾಡಿನಲ್ಲಿರುವ ಕೋಟ್ಯಂತರ ಹರಿಜನರು, ಹಿಂದುಳಿದವರಿಗೆ ಹಿಂದುಗಡೆಯೂ ಕತ್ತಲು, ಮುಂದುಗಡೆಯೂ ಕತ್ತಲು. ನಿಮ್ಮ ಮೊದಲ ಅಂಶವಾದ ರಾಚಯ್ಯ, ಬಸವಲಿಂಗಪ್ಪ ಇತ್ಯಾದಿಗಳ ಸಂಬಂಧಿಕರ ಬಗ್ಗೆ ಯೋಚಿಸಿ. ಇಡೀ ಹಿಂದುಳಿದ ಜನಾಂಗದ ವಿದ್ಯೆಯೇ ಕೇವಲ ಶೇಕಡಾ ಮೂರು, ನಾಲ್ಕು ಭಾಗವಾಗಿದ್ದಾಗ ಅವರಲ್ಲಿರುವ ಶ್ರೀಮಂತರು, ಸವಲತ್ತುಳ್ಳವರು ಎಷ್ಟು ಜನ? ನಿಮಗೇನಾದರೂ ಕೇವಲ ಹರಿಜನರ ಆಸ್ತಿಪಾಸ್ತಿ, ವಿದ್ಯೆಯ ಖಚಿತ ಕಲ್ಪನೆಯಾದರೂ ಇದೆಯೆ? ಅವರ ದುರಂತದ ಪರಿವೆ ಇದೆಯೆ?”

“ಹಾಗಾದರೆ ನಾವೀಗ ಏನು ಮಾಡಬೇಕು ಹೇಳಿ” ಅಂದರು ಹುಡುಗರು.

“ನನ್ನ ದುಃಖವೇನೆಂದರೆ, ನಿಮ್ಮಂಥ ಹುಡುಗರನ್ನು ವಿದ್ಯೆ, ಉದ್ಯೋಗದ ಬರ ಕಾಡುವಂಥ ಕಾಲ ಬಂದಿರುವುದು; ನೀವೆಲ್ಲ ಹೀಗೆ ಅನಗತ್ಯ ವಿಚಾರಗಳ ಬಗ್ಗೆ ಕೋಪಗೊಳ್ಳುವಂಥ ದುರಂತ ಈ ನಾಡಲ್ಲಿ ಏರ್ಪಾಟಾಗಿರುವುದು. ಎಲ್ಲೋ ಸಾವಿರ ಜನ ಹರಿಜನ, ಗಿರಿಜನ, ಹಿಂದುಳಿದವರು ಸರ್ಕಾರಿ ಆಫೀಸು, ಕಾಲೇಜುಗಳಲ್ಲಿದ್ದಾರೆ; ಲಕ್ಷಾಂತರ ಇತರರು ಇತರ ಆಫೀಸುಗಳು, ಕಾಲೇಜುಗಳಲ್ಲಿದ್ದಾರೆ: ನಿಮ್ಮಂಥ ಆರೋಗ್ಯವಂತ ಹುಡುಗರು ಸತ್ಯವನ್ನು ಕಾಣಲಾರದೆ ಕೇವಲ ವಾದದ ಮೂಲಕ ಅನಾರೋಗ್ಯಕರ ಮನಸ್ಥಿತಿಗೆ, ಬದುಕಿಗೆ ಅಣಿಯಾಗುತ್ತಿದ್ದೀರಿ. ಇವತ್ತಿಗೂ ಈ ನಾಡು ಹೆಚ್ಚು ಹೆಚ್ಚು ಜಾತೀಯತೆ, ಸಣ್ಣತನದಿಂದ ಪತನದ ಹಾದಿಯನ್ನೇ ತುಳಿಯುತ್ತಿದೆ. ಹರೆಯದ ಹುಡುಗರಾದ ನಿಮ್ಮಲ್ಲಿ ಒಬ್ಬರಿಗೂ ಇವತ್ತಿಗೂ ನಿಮ್ಮೂರಲ್ಲಿ ಏಕೆ ಹರಿಜನರಿಗೆ, ಮೇಲ್ಜಾತಿಯವರಿಗೆ ಪ್ರತ್ಯೇಕ ಬಾವಿಗಳಿವೆ ಎಂಬುದು ದಿಗ್ಭ್ರಮೆಗೊಳಿಸುವುದಿಲ್ಲ; ನಮ್ಮ ನಾಡಿನ ಸಾವಿರಾರು ಹಳ್ಳಿಗಳ ಹರಿಜನ, ಗಿರಿಜನರ ಕುಟುಂಬಗಳಿಗೆ ವಿದ್ಯೆ ಉದ್ಯೋಗದ ಕಲ್ಪನೆಯಾಗಲಿ, ಅವರಿಗೆ ಇರುವ ಸವಲತ್ತುಗಳಾಗಲಿ ಗೊತ್ತಿಲ್ಲ. ಶಾಲೆಗಳನ್ನು ಪ್ರವೇಶಿಸಲು ಕೂಡ ಹರಿಜನರ ಹುಡುಗರು ಹಿಂಜರಿವ ಪರಿಸ್ಥಿತಿ ಇದೆ. ಈ ವಾತಾವರಣ ಬದಲಾಗುವುದಕ್ಕಾಗಿ ಚಳವಳಿ ನಡೆಯಬೇಕು.

“ಸಾಕಷ್ಟು ಅನುಕೂಲಸ್ಥರಾದ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು, ಜೈನರು, ಅರಸುಗಳು ಮುಂತಾದವರು ಕುಗ್ರಾಮದ ಹರಿಜನ ಮಗುವೊಂದನ್ನು ಕೇವಲ ಆರು ತಿಂಗಳು ಇಟ್ಟುಕೊಂಡು ಅದಕ್ಕಿರುವ ಬದುಕಿನ ಸಾಧ್ಯತೆಗಳತ್ತ ಮಾರ್ಗದರ್ಶನ ಮಾಡಬೇಕು, ಸವಲತ್ತುಗಳನ್ನು ಕೂಡಿಸಿಕೊಡಬೇಕು. ಉಸ್ತುವಾರಿ ನೋಡಿಕೊಳ್ಳಬೇಕು. ಇದಕ್ಕಾಗಿ ಪ್ರಯತ್ನಿಸಬಲ್ಲ ಯುವಜನಾಂಗ ಮೀಸಲಾತಿಯನ್ನು ಬೇಗ ಕೊನೆಗೊಳಿಸಲು ಬೇಕಾದ ಆದರ್ಶವನ್ನು ಹೊಂದಿರುತ್ತದೆ; ಮಾನಸಿಕ ಆರೋಗ್ಯವನ್ನು ಹೊಂದಿರುತ್ತದೆ; ಆತ್ಮವನ್ನು ಹೊಂದಿರುತ್ತದೆ… ಜಾತಿಗಳನ್ನು ಚಾಪೆ ಕೆಳಗೆ ತೂರಿಸಿ ವಾದ ಮಾಡಲೆತ್ನಿಸುವವ ಇಡೀ ಜೀವನವನ್ನು ಸುಳ್ಳಿನ ಮೇಲೆ ರೂಪಿಸಿಕೊಳ್ಳುತ್ತಾನೆ.”

“ನೀವು ಅಂಥ ಹುಡುಗರಾಗಿರಲಿ ಎಂಬುದು ನನ್ನ ಆಶೆ; ತಕ್ಷಣ ಕೋಪ, ನಿರಾಶೆಯಿಂದ ಯಾವನೂ ಯಾವುದೇ ತೀರ್ಮಾನ ತೆಗೆದುಕೊಳ್ಳಕೂಡದು. ನನ್ನ ಮಾತಿನಿಂದ ನಾನು ನಿಮಗೆ, ನನ್ನ ಜಾತಿಯ ಬಗ್ಗೆ ದ್ರೋಹ ಬಗೆದಂತೆ ಅನ್ನಿಸಬಹುದು. ಅದು ಸುಳ್ಳು. ನಮ್ಮ ಜನಕ್ಕೆ-ಪೂರ್ತಿ ಜನಸಮೂಹಕ್ಕೆ ಸಣ್ಣತನದಿಂದ, ನೀಚಕೆಲಸದಿಂದ ಬರುವ ಸಣ್ಣಪುಟ್ಟ ಲಾಭಕ್ಕಿಂತ ಅವರ ಮಾನವೀಯ, ಆತ್ಮ ಪರಿಶುದ್ಧಿಯ ಕ್ರಮದಿಂದ ಬರುವ ಜೀವನ ವಿಧಾನವೇ ಒಳ್ಳೆಯದು. ಇದು ಬಸವಣ್ಣ ಬದುಕಿದ ನಾಡು ಎಂಬುದನ್ನು ಮರೆಯದಿರೋಣ.”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...