ಫೆಬ್ರವರಿ 4ರಂದು ನಾವೆಲ್ಲ ಒಂದು ಆಘಾತಕಾರಿ ಘಟನೆಗೆ ಸಾಕ್ಷಿಯಾದೆವು. ಕುಂದಾಪುರದ ಸರಕಾರಿ ಕಾಲೇಜಿನ ಅಧ್ಯಾಪಕರು ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ತಲೆಯ ಮೇಲೆ ಹಿಜಾಬ್ ಧರಿಸಿ ಕಾಲೇಜಿನೊಳಗೆ ಬರುವುದನ್ನು ತಡೆಯಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಈ ಘಟನೆಯ ನಂತರ ಇದೇ ರೀತಿಯಲ್ಲಿ ವಿವೇಚನಾರಹಿತವಾಗಿ ಉಡುಪಿಯ ಸರಕಾರಿ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶಿಸದಂತೆ ತಡೆಯಲಾಯಿತು. ಈ ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸದ ವಿವಾದ ಉಡುಪಿಯ ಸರಕಾರಿ ಕಾಲೇಜಿನಿಂದಲೇ ಪ್ರಾರಂಭವಾಗಿತ್ತು.
ಸದಾ ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳನ್ನು ಯಾವುದೇ ಮುನ್ಸೂಚನೆ ನೀಡದೆ, ಅಚಾನಕ್ಕಾಗಿ ಒಂದು ದಿನ ಪ್ರವೇಶ ನಿರಾಕರಿಸಲಾಯಿತು. ಆಗ ವಿದ್ಯಾರ್ಥಿಗಳು ಹೇಳಿದ್ದು ಹೀಗೆ ವರದಿಯಾಗಿದೆ: “ನಾವು ವಿದ್ಯಾರ್ಥಿಗಳು, ನಾವು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದೇವೆ. ಆದರೆ ಈಗ ಮಾತ್ರ ಅದನ್ನು ಸಮಸ್ಯೆಯನ್ನಾಗಿಸಲಾಗಿದೆ”. ಹಿಜಾಬ್ ಎಂಬುದು ಇದ್ದಕ್ಕಿದ್ದಂತೆಯೇ ಒಂದು ಸಮಸ್ಯೆಯಾಗಿದ್ದು ಈಗ ಅತ್ಯಂತ ಆಳದ ಮಹತ್ವ ಪಡೆದುಕೊಂಡಿದೆ. ಇದು ಸರಕಾರ ತೆಗೆದುಕೊಂಡ ಕ್ರಮದ ಬೇಕಾಬಿಟ್ಟಿಯಾದ ವಿವೇಚನಾರಹಿತವಾದ ಸ್ವರೂಪವನ್ನು ಎತ್ತಿತೋರಿಸುತ್ತದೆ. ಸರಕಾರದ ಈ ವಿವೇಚನಾರಹಿತ ಕ್ರಮ ಪ್ರಮುಖ ಪ್ರಶ್ನೆಯಾಗಬೇಕೇ ಹೊರತು ಹಿಜಾಬ್ ಎಂಬುದು ಇಸ್ಲಾಂಗೆ ಅತ್ಯಗತ್ಯವೋ ಇಲ್ಲವೋ ಎಂಬುದಲ್ಲ. ಏಕೆಂದರೆ, ವಿದ್ಯಾರ್ಥಿಗಳಿಗೆ ಶಿಕ್ಷಣದ ಹಕ್ಕಿದೆ ಹಾಗೂ ಪರೀಕ್ಷೆಗೆ ಎರಡು ತಿಂಗಳ ಮುನ್ನ ತರಗತಿಗೆ ಹಾಜರಾಗದಂತೆ ಇದ್ದಕ್ಕಿದ್ದಂತೆ ಅರ್ಥರಹಿತವಾಗಿ ತಡೆಯಲು ಸಾಧ್ಯವಿಲ್ಲ.
ಕರ್ನಾಟಕ ಸರಕಾರವು ಶಿಕ್ಷಣದ ಹಕ್ಕು ಮತ್ತು ತಾರತಮ್ಯರಹಿತ ಜೀವನದ ಹಕ್ಕು (ಇವುಗಳ ರಕ್ಷಣೆಗಾಗಿ ಸಂವಿಧಾನಾತ್ಮಕ ಹೊಣೆ ಹೊಂದಿದೆ), ಇವೆರಡರ ಉಲ್ಲಂಘನೆ ಆಗಿರುವುದನ್ನು ಉಪೇಕ್ಷಿಸಿದೆ. ಹಾಗೂ ಅದರ ಬದಲಿಗೆ ಒಂದು ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದ ಕಿತಾಪತಿಯ ಆದೇಶವನ್ನು ಹೊರಡಿಸಿತು. ಅದರಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ಹಿಂದಿನ ಆದೇಶಗಳು ’ತಲೆಯ ಮೇಲೆ ಹೊದ್ದುಕೊಳ್ಳುವ ಸ್ಕಾರ್ಫ್ ಅಥವಾ ಬಟ್ಟೆಯನ್ನು ನಿಷೇಧಿಸುವುದು ಸಂವಿಧಾನದ ಆರ್ಟಿಕಲ್ 25ರ ಉಲ್ಲಂಘನೆ ಆಗುವುದಿಲ್ಲ’ ಎಂದು ತಪ್ಪಾಗಿ ಉಲ್ಲೇಖಿಸಿದೆ. ಇದು ಹಿಂದೆ ಬಂದ ಆದೇಶಗಳ ತಪ್ಪು ಗ್ರಹಿಕೆಯಾಗಿದೆ. ಆ ಆದೇಶಗಳು ವಾಸ್ತವದಲ್ಲಿ ಹಿಜಾಬ್ ಧರಿಸುವ ಹಕ್ಕು ವರ್ಸಸ್ ಪರೀಕ್ಷೆಗಳಲ್ಲಿ ನಕಲು ಮಾಡುವುದನ್ನು ತಡೆಯಲು ಕಾಲೇಜುಗಳಿಗೆ ಇರುವ ಹಕ್ಕುಗಳ ಬಗ್ಗೆ ಹಾಗೂ ಅಲ್ಪಸಂಖ್ಯಾತರ ಸಂಸ್ಥೆಗಳು ಸಮವಸ್ತ್ರವನ್ನು ನಿಗದಿಪಡಿಸುವ ಹಕ್ಕುಗಳು ವರ್ಸಸ್ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸಲು ಇರುವ ಹಕ್ಕುಗಳನ್ನು ಬ್ಯಾಲೆನ್ಸ್ ಮಾಡುವ ಪ್ರಕರಣಗಳಲ್ಲಿ ಬಂದಿದ್ದ ಆದೇಶಗಳಾಗಿವೆ.
ಈ ಅಧಿಸೂಚನೆಯಲ್ಲಿ ’ತಲೆಯನ್ನು ಮರೆಮಾಚುವ ಬಟ್ಟೆ ಅಥವಾ ಹೆಡ್‌ಸ್ಕಾರ್ಫ್‌ಅನ್ನು ನಿಷೇಧಿಸುವುದು ಸಂವಿಧಾನದ ಆರ್ಟಿಕಲ್ 25ರ ಉಲ್ಲಂಘನೆ ಆಗುವುದಿಲ್ಲ’ ಎಂದು ತೀರ್ಮಾನಿಸುತ್ತದೆ. ಹಾಗೂ ಸರಕಾರಿ ಕಾಲೇಜುಗಳಲ್ಲಿ ಯಾವುದೇ ಸಮವಸ್ತ್ರ ನಿಗದಿಪಡಿಸದೇ ಇದ್ದಲ್ಲಿ, ಧರಿಸುವ ಬಟ್ಟೆಗಳು ’ಏಕತೆ, ಸಮಾನತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ’ಯ ಹಿತಾಸಕ್ತಿಗಳ ಮೇರೆಗೆ ಇರಬೇಕು ಎಂದು ಹೇಳುತ್ತದೆ. ಇದು ಕಾಲೇಜಿನ ಅಭಿವೃದ್ಧಿ ಸಮಿತಿಗಳಿಗೆ ಯಾವ ಸಮವಸ್ತ್ರ ಇರಬೇಕು ಎಂದು ನಿರ್ಣಯಿಸಲು ಅಧಿಕಾರ ನೀಡುತ್ತದೆ.
ಈ ಅಪಾಯಕಾರಿ ಅಧಿಸೂಚನೆಯೊಂದಿಗೆ ಕರ್ನಾಟಕ ಸರಕಾರವು ತಾನು ನೇರವಾಗಿ ಮಾಡಲು ಹಿಂಜರಿದ ಕೆಲಸವನ್ನು ಸುತ್ತುಬಳಸಿ ಮಾಡುತ್ತಿರುವುದು ತಿಳಿಯುತ್ತದೆ. ಸಮಾಜದಲ್ಲಿ ಜನರು ಅದನ್ನು ಮಾಡಬಾರದು, ಇದನ್ನು ಮಾಡಬಾರದು ಎಂದು ಹೇಳುವ ವಿಜಿಲಾಂಟೆ ಶಕ್ತಿಗಳಿಗೆ (ಸ್ವಘೋಷಿತ ನೈತಿಕ ಪೊಲೀಸರ) ಮತ್ತು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ರಹಸ್ಯವಾದ ಸಂದೇಶ ನೀಡಿದಂತೆ ಕಾಣುವ ಸರಕಾರವು ಅವರಿಗೆ ಹೇಳುತ್ತಿರುವುದೇನೆಂದರೆ, ಹಿಜಾಬ್ ಧರಿಸುವುದನ್ನು ಸಂವಿಧಾನ 25ನೇ ವಿಧಿಯಲ್ಲಿ ರಕ್ಷಣೆ ನೀಡಲಾಗಿಲ್ಲ ಹಾಗೂ ಈ ಶಕ್ತಿಗಳು ತಮಗಿಷ್ಟ ಬಂದಂತೆ ಮುಂದುವರೆದು ಹಿಜಾಬ್‌ಅನ್ನು ನಿಷೇಧಿಸಿ ಎಂದಿದೆ. ಈಗ ಈ ವಿಜಿಲಾಂಟೆ ಶಕ್ತಿಗಳಿಗೆ ಸಂದೇಶ ತಲುಪಿದೆ ಹಾಗೂ ಅವರುಗಳು ಸರಕಾರದ ನಿಜವಾದ ಆದರೆ ಗುಪ್ತವಾದ ಉದ್ದೇಶವನ್ನು ನೆರವೇರಿಸಲು ಹೊರಟಿದ್ದಾರೆ. ಫೆಬ್ರವರಿ 8ರಂದು, ಕೇಸರಿ ಶಾಲನ್ನು ಹೊದ್ದ ಕಿಡಿಗೇಡಿಗಳು ಜೈ ಶ್ರೀರಾಮ ಘೋಷಣೆ ಕೂಗುತ್ತ, ಕಾಲೇಜಿಗೆ ಹೋಗುತ್ತಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ಹೆದರಿಸಿ, ಕಿರುಕುಳ ನೀಡಿದರು. ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮುಸ್ಲಿಂ ಯುವತಿಯರು ತಮ್ಮ ಶಿಕ್ಷಣದ ಹಕ್ಕನ್ನು ಪಡೆಯುವುದನ್ನು ತಡೆಯಲಾಯಿತು. ಇಷ್ಟೆಲ್ಲ ಆದರೂ ಕರ್ನಾಟಕ ಸರಕಾರ ಮೂಕ ಪ್ರೇಕ್ಷಕನಾಗಿಯೇ ಇತ್ತು.
ಈ ಅಧಿಸೂಚನೆಯ ಮೂಲಕ ಕರ್ನಾಟಕ ಸರಕಾರ ಹೇಳುತ್ತಿರುವುದೇನೆಂದರೆ, ಮುಸ್ಲಿಂ ಬಾಲಕಿಯರ ಶಿಕ್ಷಣದ ಹಕ್ಕನ್ನು ರಕ್ಷಿಸುವ ಯಾವ ಜವಾಬ್ದಾರಿಯೂ ತಮಗಿಲ್ಲ ಎಂದು ಹಾಗೂ ಹಿಜಾಬ್ ಧರಿಸುವ ಮುಸ್ಲಿಂ ಬಾಲಕಿಯರನ್ನು ನಿಷೇಧಿಸುವ, ಅವಮಾನಿಸುವ, ಅವರನ್ನು ಹೊರಗಿಡುವುದು ಮುಂತಾದೆಲ್ಲವುಗಳಿಗೆ ಅನುವು ಮಾಡಿಕೊಡಲಾಗಿದೆ ಎಂದು. ಇದು ಒಂದು ಸಂವಿಧಾನಾತ್ಮಕವಾಗಿ ಚುನಾಯಿತ ಸರಕಾರಕ್ಕೆ ಸಂಬಂಧಪಟ್ಟಂತೆ, ತನ್ನ ಜವಾಬ್ದಾರಿಯನ್ನು ಕಳಚಿಕೊಳ್ಳುವ ಅತ್ಯಂತ ಆಘಾತಕಾರಿಯಾದ ನಡೆಯಾಗಿದೆ.
ಯಾವಾಗ ಒಂದು ಸರಕಾರ ತನ್ನ ಸಂವಿಧಾನಾತ್ಮಕ ಜವಾಬ್ದಾರಿಯನ್ನು ನಿಭಾಯಿಸಲು ವಿಫಲವಾಗುತ್ತದೆಯೋ, ಆಗ ಆ ಜವಾಬ್ದಾರಿ ಅದರ ನಾಗರಿಕರ ಮೇಲೆ ಬೀಳುತ್ತದೆ. ಬಿ.ಕಾಂ ಓದುತ್ತಿರುವ ಒಬ್ಬ ಮುಸ್ಲಿಂ ಯುವತಿ ಮುಸ್ಕಾನ್ ಕಾಲೇಜಿನ ಕ್ಯಾಂಪಸ್ಸಿನಲ್ಲಿ ತನ್ನ ವಾಹನದಲ್ಲಿ ಬಂದು, ಕೇಸರಿ ಶಾಲನ್ನು ಹೊದ್ದು ಪೀಡಿಸುತ್ತಿದ್ದ ಹೇಡಿಗಳನ್ನು ಧೈರ್ಯದಿಂದ ಎದುರಿಸಿದ್ದನ್ನು ಇಡೀ ಜಗತ್ತೇ ನೋಡಿತು. ಅವಳ ಧೈರ್ಯ, ಅವಳ ಆತ್ಮಸ್ಥೈರ್ಯ ಹಾಗೂ ತನ್ನ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು, ಶಿಕ್ಷಣದ ಹಕ್ಕು ಮತ್ತು ತಾರತಮ್ಯಕ್ಕೆ ಒಳಗಾಗದೇ ಇರುವ ಹಕ್ಕನ್ನು ಅವಳು ನಿರ್ಭೀತಿಯಿಂದ ಮತ್ತು ಘನತೆಯಿಂದ ಪ್ರತಿಪಾದಿಸಿದ್ದು, ಸಂವಿಧಾನದ ತತ್ವಗಳಾದ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವದ ನಿಜ ಅರ್ಥದ ಪ್ರದರ್ಶನವಾಗಿತ್ತು.
ಯಾವಾಗ ಎಲ್ಲಾ ಸಂಸ್ಥೆಗಳ ಹೊಣೆಗಾರಿಕೆ ವಿಫಲವಾಗುತ್ತದೋ, ಆಗ ಹೊಣೆಗಾರಿಕೆಯನ್ನು
ಖಾತ್ರಿಪಡಿಸುವ ಜವಾಬ್ದಾರಿ ಅಂತಿಮವಾಗಿ ನ್ಯಾಯಾಂಗದ ಮೇಲೆ ಬೀಳುತ್ತದೆ. ದುರದೃಷ್ಟವಶಾತ್, ಕರ್ನಾಟಕ ಉಚ್ಚ ನ್ಯಾಯಾಲಯ ಏಕ ಸದಸ್ಯ ಪೀಠವು ಮುಸ್ಲಿಂ ಯುವತಿಯರಿಗೆ ತಾತ್ಕಾಲಿಕ/ಮಧ್ಯಂತರ ಪರಿಹಾರ ನೀಡಬೇಕು ಹಾಗೂ ಎರಡು ತಿಂಗಳ ನಂತರ ನಡೆಯಲಿರುವ ಪರೀಕ್ಷೆಯ ತನಕ, ಅವರಿಗೆ ತಾವು ಮುಂಚೆ ಧರಿಸಿದಂತೆ ಬಟ್ಟೆ ಧರಿಸಿ ಬರಲು ಅವಕಾಶ ಮಾಡಿಕೊಡಬೇಕು ಎಂಬ ಅರ್ಜಿದಾರರ ಮನವಿಗೆ ಕದಲಲಿಲ್ಲ. ಹಿಜಾಬ್ ಧರಿಸಿ ಪರೀಕ್ಷೆಗಳಲ್ಲಿ ಹಾಜರಾಗಲು ಅನುಮತಿ ನೀಡಲು, ಮಧ್ಯಂತರ ಪರಿಹಾರಕ್ಕಾಗಿ ಸಲ್ಲಿಸಿದ ಮನವಿಯನ್ನು ವಿರೋಧಿಸಿ ಕರ್ನಾಟಕ ಸರಕಾರವು ತನ್ನ ಕ್ರೌರ್ಯವನ್ನು ಮೆರೆಯಿತು. ವಿಷಯವು ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣ ಪೀಠಕ್ಕೆ ತಲುಪಿದಾಗ, ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಚಾರಣೆಯ ಮುಂದಿನ ದಿನಾಂಕದ ತನಕ ಕಾಲೇಜಿನ ಅಭಿವೃದ್ಧಿ ಸಮಿತಿಗಳು ಆದೇಶಿಸಿದಲ್ಲಿ ಹಿಜಾಬ್‌ಗಳನ್ನು ಧರಿಸುವ ಹಕ್ಕನ್ನು ನಿರಾಕರಿಸುವುದನ್ನು ಕಾನೂನುಬದ್ಧಗೊಳಿಸಿತು. ಅಂದರೆ ಉಚ್ಚ ನ್ಯಾಯಾಲಯ ಮಾಡಿದ್ದೇನೆಂದರೆ, ಸರಕಾರದ ಬೇಜವಾಬ್ದಾರಿತನ ಹಾಗೂ ಕಾನೂನಿನ ವಿರುದ್ಧದ ಕ್ರಮಗಳಿಗೆ ಒಂದು ರೀತಿಯ ಲೈಸನ್ಸ್ ಕೊಟ್ಟಿದ್ದು. ಉಚ್ಚ ನ್ಯಾಯಾಲಯವು ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಅಂಶವೇ ಎಂಬ ಪ್ರಶ್ನೆಗೆ ಗಮನ ಹರಿಸುವುದರೊಂದಿಗೆ, ಅದಕ್ಕೂ ಮುಖ್ಯವಾದ ವಿಷಯವನ್ನು ನಿರ್ಲಕ್ಷಿಸಿದೆ; ಅದೇನೆಂದರೆ ಕೇವಲ ಹಿಜಾಬ್ ಧರಿಸಿದ್ದರೆಂದು ಮುಸ್ಲಿಂ ಯುವತಿಯರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸುವುದರ ಪ್ರಶ್ನೆ. ಇಂದಿನಿಂದ ಮುಸ್ಲಿಂ ಯುವತಿಯರು ಹಿಜಾಬ್ ಧರಿಸಿದ ಕಾರಣಕ್ಕೆ ಅವರಿಗೆ ಕಾಲೇಜಿನಲ್ಲಿ ಮತ್ತು ಶಾಲೆಗಳಲ್ಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ನಿಜ ಆತ್ಮಸಾಕ್ಷಿಯೊಂದಿಗೆ ಅಂದರೆ ಸಕಾರಣಗಳೊಂದಿಗೆ ಹೇಳಬಲ್ಲದೇ? ಇದೇ ಪ್ರಶ್ನೆಯನ್ನು ನ್ಯಾಯಾಲಯ ಪರಿಗಣಿಸಬೇಕಿತ್ತು ಆದರೆ ದುರದೃಷ್ಟವಷಾತ್ ಹಾಗಾಗಲಿಲ್ಲ.

ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ವೈಫಲ್ಯದ ಸಮಯದಲ್ಲಿ ನಾಗರಿಕ ಸಮಾಜದ ಧ್ವನಿ ಮತ್ತು ಮಾಧ್ಯಮಗಳು ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕಿದೆ. ಎಲ್ಲಿಯವರೆಗೆ ಸಂವಿಧಾನಿಕ ಅಂತಸ್ಸಾಕ್ಷಿ ಎಚ್ಚರಗೊಳ್ಳುವುದಿಲ್ಲವೋ ಹಾಗೂ ಕರ್ನಾಟಕ ಸರಕಾರ ಸಂವಿಧಾನದ ಅನುಗುಣವಾಗಿ ಕೆಲಸ ಮಾಡುವುದಿಲ್ಲವೋ, ಅಲ್ಲಿಯವರೆಗೆ ಮಾಧ್ಯಮ ಮತ್ತು ನಾಗರಿಕ ಸಮಾಜ ಈ ಜವಾಬ್ದಾರಿಯನ್ನು ಹೊರಬೇಕಿದೆ.
(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ನ ರಾಜ್ಯಾಧ್ಯಕ್ಷರು
ಇದನ್ನೂ ಓದಿ: ಹಿಜಾಬ್-ಕೇಸರಿ ಶಾಲು ವಿವಾದ: ಸಾಮರಸ್ಯಕ್ಕೆ ಧರ್ಮಗುರುಗಳ ಕರೆ


