ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೊಳಗಾಗಿದ್ದ ಪ್ರೊ.ಜಿ.ಎನ್ ಸಾಯಿಬಾಬಾ ಸೇರಿ ಆರು ಜನರನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ದೋಷಮುಕ್ತಗೊಳಿಸಿದೆ. ಭಯೋತ್ಪಾದನಾ ವಿರೋಧಿ ಯುಎಪಿಎ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದ ಅವರನ್ನು ನಿರಪರಾಧಿಗಳು ಎಂದು ಘೋಷಿಸಿ ಕೂಡಲೇ ಬಿಡುಗಡೆಗೆ ಆಗ್ರಹಿಸಿದೆ.
2017ರ ಗಡ್‌ಚಿರೋಲಿ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಜಿ.ಎನ್ ಸಾಯಿಬಾಬಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ರೋಹಿತ್ ಡಿಯೋ ಮತ್ತು ಅನಿಲ್ ಪನ್ಸಾರೆ ಅವರಿದ್ದ ವಿಭಾಗೀಯ ಪೀಠವು ಪುರಸ್ಕರಿಸಿ ಆದೇಶ ನೀಡಿದೆ.
ಪ್ರೊ.ಜಿ.ಎನ್ ಸಾಯಿಬಾಬಾ ಅವರೊಂದಿತೆ ಇತರ ಆರೋಪಿಗಳಾದ ಮಹೇಶ್ ಟಿರ್ಕಿ, ಹೇಮ್ ಕೇಶ್ವದತ್ತ ಮಿಶ್ರಾ, ಪ್ರಶಾಂತ್ ರಾಹಿ ಮತ್ತು ವಿಜಯ್ ನಾನ್ ಟಿರ್ಕಿರವರ ಮೇಲೆ ಇತರ ಪ್ರಕರಣಗಳಿಲ್ಲದಿದ್ದರೆ ಕೂಡಲೇ ಬಿಡುಗಡೆ ಮಾಡಬೇಕೆಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವಾಗಲೇ ಪಾಂಡು ಪೊರ ನರತೆ ಎಂಬುವವರು ಕಳೆದ ಆಗಸ್ಟ್‌ನಲ್ಲಿ ಕೊನೆಯುಸಿರೆಳೆದಿದ್ದರು.
ರೆವಲ್ಯೂಷನರಿ ಡೆಮೊಕ್ರಟಿಕ್ ಫ್ರಂಟ್ ಎಂಬ ಮಾವೋವಾದಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ ಆರೋಪದ ಮೇಲೆ ಅವರನ್ನು 2014ರಲ್ಲಿ ಬಂಧಿಸಲಾಗಿತ್ತು. ಯುಎಪಿಎಯ ಸೆಕ್ಷನ್ 13, 18, 20, 38 ಮತ್ತು 39 ರ ಅಡಿ ಮತ್ತು ಐಪಿಸಿಯ 120ಬಿ ಸೆಕ್ಷನ್ ಅಡಿಯಲ್ಲಿ ಮಾರ್ಚ್ 2017 ರಲ್ಲಿ ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆರೋಪಿಗಳ ಪರವಾಗಿ ನಾಗ್ಪುರ ಕೋರ್ಟ್‌ನಲ್ಲಿ ವಕೀಲರಾದ ನಿಹಾಲ್ ಸಿಂಗ್ ರಾಥೋಡ್ ಮತ್ತು ಬರುನ್ ಕುಮಾರ್ ವಕಾಲತ್ತು ವಹಿಸಿದ್ದರು. ಪ್ರಾಸಿಕ್ಯೂಷನ್ ಅನ್ನು ಎಸ್‌ಪಿಪಿ ಸಿದ್ಧಾರ್ಥ್ ದವೆ ಪ್ರತಿನಿಧಿಸಿದ್ದರು.
ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಜಿ.ಎನ್ ಸಾಯಿಬಾಬರವರು ಪೊಲೀಯೊ ಪೀಡಿತರಾದ ಕಾರಣ ವೀಲ್‌ಚೇರ್ ಅನ್ನು ಆಶ್ರಯಿಸಿದ್ದಾರೆ. ಅಲ್ಲದೆ ಕಿಡ್ನಿ ಸಮಸ್ಯೆ ಸೇರಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೆಡಿಕಲ್ ಸ್ಥಿತಿಗತಿಯ ಆಧಾರದಲ್ಲಿ ತಮ್ಮ ಮೇಲಿನ ಶಿಕ್ಷೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಆದರೆ ಅದಕ್ಕೆ ಹೈಕೋರ್ಟ್ ಸಮ್ಮತಿ ಸೂಚಿಸಿರಲಿಲ್ಲ.
ಕಮಿಟಿ ಫಾರ್ ಡಿಫೆಂಡ್ ಅಂಡ್ ರಿಲೀಸ್ ಜಿ. ಎನ್. ಸಾಯಿಬಾಬಾ ಎಂಬ ಸಂಘಟನೆ ಅವರ ಬಿಡುಗಡೆಗಾಗಿ ನಿರಂತರ ಹೋರಾಟ ನಡೆಸಿತ್ತು. ನಾಗ್ಪುರ ಎಡಿಜಿಗೆ ಪತ್ರ ಬರೆದಿದ್ದು, “ಅವರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುತ್ತಿಲ್ಲ. ಕೋವಿಡ್ -19ರ ಸಮಯದಲ್ಲಿಯೂ ಸಹ ಇಕ್ಕಾಟಾದ ಜೈಲುಗಳಲ್ಲಿ ಅವರನ್ನು ಕೂಡಿಹಾಕಿರುವುದು ಅವರ ಜೀವಕ್ಕೆ ಅಪಾಯಕಾರಿ” ಎಂದು ದೂರಿತ್ತು.
ಹಲವು ಗಂಭೀರ ರೋಗಗಳಿಗೆ ತುತ್ತಾಗಿರುವ ಸಾಯಿಬಾಬಾ ದಿನನಿತ್ಯ ಔಷಧಿ ಸೇವಿಸಬೇಕಾಗಿದೆ. ಅವುಗಳನ್ನು ವಕೀಲರು ಜೈಲಿನ ಅಧಿಕಾರಿಗಳಿಗೆ ನೀಡಿದ್ದರೂ ಸಹ ಅವುಗಳನ್ನು ಸಾಯಿಬಾಬಾ ಅವರಿಗೆ ನೀಡುತ್ತಿಲ್ಲ.
ಸಾಯಿಬಾಬರವರಿಗೆ ಕುಟುಂಬ ಸದಸ್ಯರು ಬರೆಯುವ ಪತ್ರಗಳನ್ನು ಜೈಲಿನ ಅಧಿಕಾರಿಗಳು ಕೊಡುತ್ತಿಲ್ಲ. ಅವರಿಗೆ ಪತ್ರಿಕೆಗಳನ್ನು ಸಹ ಒದಗಿಸುತ್ತಿಲ್ಲ. ಜೈಲಿನ ಅಧಿಕಾರಿಗಳು ತಿಂಗಳಿಗೆ ಕೇವಲ ಒಂದೆರೆಡು ಫೋನ್ ಕಾಲ್‌ಗಳಿಗೆ ಮಾತ್ರ ಅವಕಾಶ ಕೊಡುತ್ತಿದ್ದಾರೆ. ಕೊರಾನಾ ಸಾಂಕ್ರಾಮಿಕ ಕಾಲದಲ್ಲಿ ಭೇಟಿಗೆ ಅವಕಾಶವಿಲ್ಲದಿರುವಾಗ, ವಕೀಲರು ಮತ್ತು ಕುಟುಂಬ ಸದಸ್ಯರಿಗೆ ಫೋನ್ ನಲ್ಲಿ ಮಾತನಾಡಲು ಸಹ ಅವಕಾಶ ನೀಡುತ್ತಿಲ್ಲ.
ಬ್ಯಾನ್ ಆಗದ, ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಪುಸ್ತಕಗಳನ್ನು ಕಳಿಸಿದರೂ ಸಹ ಜೈಲಿನ ಅಧಿಕಾರಿಗಳು ಅದನ್ನು ಸಾಯಿಬಾಬಾರವರಿಗೆ ಕೊಡುತ್ತಿಲ್ಲ. ಇದು ಜೈಲಿನ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸಾಯಿಬಾಬಾ ಅವರ ಪತ್ನಿ ಆರೋಪಿಸಿದ್ದರು.
ಸಮರ್ಪಕ ಔಷಧಿ, ಪುಸ್ತಕ ಮತ್ತು ಪತ್ರಗಳನ್ನು ನೀಡುವ ಅವರ ಹಕ್ಕುಗಳಿಗೆ ನಿರ್ಬಂಧ ಹೇರಲಾಗಿದ್ದನ್ನು ಖಂಡಿಸಿ ಅವರು ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ಕಳೆದ ವರ್ಷ ಅಕ್ಟೋಬರ್ 21 ರಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದರು. ನಂತರ ಜೈಲಿನ ಅಧಿಕಾರಿಗಳನ್ನು ಅವರ ಹಕ್ಕೊತ್ತಾಯಗಳನ್ನು ಈಡೇರಿಸಿದ್ದರು.
ಇದನ್ನೂ ಓದಿ: ಕ್ರಾಂತಿಕಾರಿ ರಾಜಕೀಯವನ್ನು ಜೀವನದ ಭಾಗವಾಗಿಸಿಕೊಂಡ ಡಾ.ಜಿ.ಎನ್. ಸಾಯಿಬಾಬಾ


