ಕೊರೊನಾ ವೈರಸ್ ಹೆಚ್ಚು ದಾಖಲಾಗುತ್ತಿರುವ ಪಂಜಾಬ್‌ನ ಒಂಬತ್ತು ಜಿಲ್ಲೆಗಳಲ್ಲಿ ಕರ್ಫ್ಯೂವನ್ನು ಎರಡು ಗಂಟೆಗಳ ಕಾಲ ವಿಸ್ತರಿಸಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗುರುವಾರ ಹೇಳಿದ್ದಾರೆ.
ಪ್ರತಿದಿನ 100 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಲುಧಿಯಾನ, ಜಲಂಧರ್, ಪಟಿಯಾಲ, ಮೊಹಾಲಿ, ಅಮೃತಸರ, ಗುರುದಾಸ್‌ಪುರ, ಹೋಶಿಯಾರ್‌ಪುರ, ಕಪುರ್ಥಾಲಾ ಮತ್ತು ರೋಪರ್ ಜಿಲ್ಲೆಗಳಲ್ಲಿ ಮಾರ್ಚ್ 18 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಪಂಜಾಬ್‌ನಲ್ಲಿ ದೈನಂದಿನವಾಗಿ ವರದಿಯಾಗುತ್ತಿರುವ ಪ್ರಕರಣಗಳು 2039 ರವರೆಗೆ ಏರಿಕೆಯಾಗಿದ್ದು, ಸೋಂಕಿನಿಂದಾಗಿ ಬುಧವಾರ 35 ಸಾವುಗಳು ಸಂಭವಿಸಿವೆ.
ಇದನ್ನೂ ಓದಿ: ’ಮಸೀದಿ ಅಜಾನ್‌ನಿಂದ ನಿದ್ರಾಭಂಗ, ತಲೆನೋವು’: ಅಲಹಾಬಾದ್ ವಿವಿ ಉಪಕುಲಪತಿ ದೂರು!
ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, “ರಾಜ್ಯದಲ್ಲಿ ಕೊರೊನಾ ಬಹಳ ಅಪಾಯಕಾರಿಯಾಗಿ ಹರಡುತ್ತಿದ್ದು, ಇಂದು ಸುಮಾರು 2000 ಪ್ರಕರಣಗಳು ವರದಿಯಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹಲವಾರು ಕಠಿಣ ಕ್ರಮಗಳು ಮತ್ತು ನಿರ್ಬಂಧಗಳನ್ನು ಹೇರಲಾಗುವುದು” ಎಂದು ಎಚ್ಚರಿಸಿದ್ದಾರೆ.
“ಕೊರೊನಾ ವೈರಸ್ ಅನ್ನು ನಿಭಾಯಿಸಲು ಬೇಕಾಗಿ ತುಂಬಾ ಕಠಿಣವಾಗಲಿದ್ದೇನೆ. ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಇಂದಿನಿಂದ 11 ಗಂಟೆಯ ಬದಲು ರಾತ್ರಿ 9 ಗಂಟೆಯಿಂದ ಕರ್ಫ್ಯೂ ಪ್ರಾರಂಭವಾಗಲಿದೆ” ಅವರು ಹೇಳಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ರಾಜ್ಯ ಸರ್ಕಾರವು ತಜ್ಞರ ತಂಡದೊಂದಿಗೆ ಚರ್ಚಿಸಿದ ನಂತರ ಸಭೆಗಳ ಮೇಲಿನ ನಿರ್ಬಂಧಗಳು ಸೇರಿದಂತೆ ಹಲವಾರು ಕಠಿಣ ಕ್ರಮಗಳನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.
“ಈ ನಿರ್ಬಂಧಗಳು ರಾಜಕೀಯ ಕೂಟಗಳ ಮೇಲೆ ಕೂಡಾ ಹೇರಲಾಗುತ್ತಿದೆಯೆ ಎಂಬುದು ವೈದ್ಯಕೀಯ ತಜ್ಞರ ತಂಡದ ಸಲಹೆಯಂತೆ ನಿರ್ಧರಿಸಲ್ಪಡುತ್ತದೆ” ಎಂದು ಅವರು ಹೇಳಿದ್ದಾರೆ. ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಆರೈಕೆ ಪಡೆಯಬೇಕೆಂದು ಅವರು ಪಂಜಾಬ್ ಜನರಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಾ. 26ಕ್ಕೆ ಭಾರತ್ ಬಂದ್: ಹೋಳಿ ದಿನದಂದು ಕೃಷಿ ಕಾನೂನುಗಳ ಪ್ರತಿ ದಹನ


