ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದಿರುವುದರಿಂದ ತುಮಕೂರಿನ ಪಿ.ಎಚ್.ಕಾಲೋನಿಯನ್ನು ಸಂಫೂರ್ಣ ಸೀಲ್ ಡೌನ್ ಮಾಡಲಾಗಿದೆ.
ರಾತ್ರಿಯೇ ಸುಮಾರು 400ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ಪಿ.ಎಚ್.ಕಾಲೋನಿಯ ಪ್ರತಿಯೊಂದು ರಸ್ತೆಯಲ್ಲೂ ಬ್ಯಾರಿಕೇಡ್ ಗಳನ್ನು ಹಾಕಿ ಸೀಲ್ ಡೌನ್ ಮಾಡಿದ್ದಾರೆ.
ಕೊರೊನಾ ಸೋಂಕು ಇರುವ ವ್ಯಕ್ತಿಯನ್ನು ಕರೆದುಕೊಂಡು ಹೋಗಲಾಗಿದೆ. ನಿನ್ನೆ ರಾತ್ರಿ ಸುಮಾರು 8.30ರ ಸುಮಾರಿನಲ್ಲಿ ಪಿ.ಎಚ್.ಕಾಲೋನಿಗೆ ತೆರಳಿದ ಅಂಬುಲೆನ್ಸ್ ಗಳು ಸೋಂಕಿತ ವ್ಯಕ್ತಿಯನ್ನು ವಾಹನದಲ್ಲಿ ಕರೆದುಕೊಂಡು ಹೋಗಿದ್ದು ಅವರನ್ನು ಎಲ್ಲಿಡಲಾಗಿದೆ ಎಂಬುದು ತಿಳಿದುಬಂದಿಲ್ಲ.
ಸೋಂಕಿತ ವ್ಯಕ್ತಿಯು ಪ್ರಾರ್ಥನಾ ಮಂದಿರದಲ್ಲೇ ಇದ್ದರೆನ್ನಲಾಗಿದ್ದು, ಅವರ ಜೊತೆ ಯಾರ್ಯಾರು ಸಂಪರ್ಕ ಹೊಂದಿದ್ದರು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಲಾಕ್ ಡೌನ್ ಆದ ನಂತರ ಇದೇ ಮೊದಲ ಬಾರಿಗೆ ತುಮಕೂರು ನಗರದ ಪಿ.ಎಚ್.ಕಾಲೋನಿ ಸೀಲ್ ಡೌನ್ ಗೆ ಒಳಗಾಗಿದೆ.
ಪಿ.ಎಚ್.ಕಾಲೋನಿಗೆ ಯಾರನ್ನು ಒಳಗೆ ಬಿಡುತ್ತಿಲ್ಲ. ಹೊರಗಿನವರನ್ನು ಒಳಗೆ ಹೋಗಲು ಅವಕಾಶ ನೀಡುತ್ತಿಲ್ಲ. ಬಿ.ಜಿ. ಪಾಳ್ಯ ವೃತ್ತ, ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಕಡೆಯಿಂದ ಪ್ರವೇಶಿಸಲು ಇರುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
ಈ ಹಿಂದೆ ತುಮಕೂರಿನ ಶಿರಾದಲ್ಲಿ ವೃದ್ಧರೊಬ್ಬರು ಕೊರೊನಾಗೆ ಬಲಿಯಾಗಿದ್ದರು. ಇನ್ನೊಬ್ಬ ಯುವಕನಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಅವರನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ನಲ್ಲಿಟ್ಟ ಬಳಿಕ ಗುಣಮುಖನಾಗಿದ್ದರು.
ನಗರಕ್ಕೆ ವಿದೇಶದಿಂದ ಬಂದವರ ಮೇಲೆ ನಿಗಾ ಇಡಲಾಗಿತ್ತು. ಕೆಲವರನ್ನು ಹೋಂ ಕ್ವಾರಂಟೈನ್ ನಲ್ಲಿ ಮತ್ತೆ ಕೆಲವರನ್ನು ಐಸೋಲೇಷನ್ ವಾರ್ಡ್ ನಲ್ಲಿ ಇಡಲಾಗಿತ್ತು. ಲಾಕ್ ಡೌನ್ ಎರಡನೇ ಹಂತದಲ್ಲಿ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು ಸೋಂಕು ತಡೆಗೆ ಜಿಲ್ಲಾಡಳಿತ ತೀವ್ರ ನಿಗಾ ಇಟ್ಟಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಮುಸ್ಲಿಮರಿಗೆ ಬೆದರಿಕೆ: ಕೊರೊನಾ ಸಮಯದಲ್ಲಿ ಒಂದಾಗಬೇಕಿದ್ದ ನಮ್ಮ ಸಮಾಜ ಎತ್ತ ಸಾಗುತ್ತಿದೆ?
ವಿಡಿಯೊ ನೊಡಿ:ಕೊರೊನಾಗೆ ಚಿಕಿತ್ಸೆ ಏನು? ವ್ಯಾಕ್ಸೀನ್ ತಯಾರಿ ಎಲ್ಲಿಯವರೆಗೆ ಬಂದಿದೆ? ಅಂತಿಮ ಪರಿಹಾರ ಏನು?


