Homeಕರೋನಾ ತಲ್ಲಣಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? - ಡಾ.ವಾಸು ಎಚ್‌.ವಿ

ಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? – ಡಾ.ವಾಸು ಎಚ್‌.ವಿ

ಸದ್ಯಕ್ಕಂತೂ ಒಮ್ಮೆಯೂ ಕೊರೊನಾ ಬಾರದವರಿಗಿಂತ, ಕೊರೊನಾ ಬಂದು ಹೋದವರು ಸಾಪೇಕ್ಷವಾಗಿ ಕಡಿಮೆ ರಿಸ್ಕ್ ಹೊಂದಿರುತ್ತಾರೆಂದು ಖಚಿತವಾಗಿ ಹೇಳಬಹುದು. ಅದರಲ್ಲೂ ರೋಗಲಕ್ಷಣಗಳುಳ್ಳ ಕೊರೊನಾ ರೋಗ ಬಂದವರಿಗೆ ಸ್ವಲ್ಪ ಹೆಚ್ಚು ಕಾಲವೇ ಈ ರೋಗನಿರೋಧಕತೆ ಉಳಿದುಕೊಂಡಿರುತ್ತದೆ.

- Advertisement -
- Advertisement -

ಕೊರೊನಾ ಸೋಂಕು ಬಂದು ಗುಣವಾಗಿರುವ ನನಗೆ ಈ ಪ್ರಶ್ನೆ ಏಕೆ ಮುಖ್ಯ? ಒಂದು, ನಾಳೆಯಿಂದ ನಾನು ಎಲ್ಲಿ ಬೇಕಾದರೂ ಮತ್ತೆ ಕೊರೊನಾ ಬರುವ ಭಯ ಇಲ್ಲದೇ ಓಡಾಡಬಹುದಾ? ಇಲ್ಲವಾ ಎಂಬ ಕಾರಣಕ್ಕೆ. ಎರಡು, ಒಂದು ವೇಳೆ ನನಗೆ ಕೊರೊನಾ ಬಾರದೇ ಇರಬಹುದಾದರೂ ಬೇರೆಯವರಿಗೆ ಹರಡುವ ಸಾಧ್ಯತೆ ಇದೆಯೇ? ಇವೆರಡೂ ಸರಿಯಾಗಿ ಗೊತ್ತಾಗದಿದ್ದರೆ ಮುಂದಿನ ದಿನಗಳಲ್ಲಿ ವಿಪರೀತ ಮುನ್ನೆಚ್ಚರಿಕೆ ತೆಗೆದುಕೊಂಡೇ ಓಡಾಡಬೇಕಾಗುವ ಆತಂಕ ಇದ್ದೇ ಇರುತ್ತದೆ. ಹಾಗಾಗಿ ನನ್ನ ಕ್ವಾರಂಟೈನ್ ಓದಿನ ಮೊಟ್ಟ ಮೊದಲ ಅಂಶ ಇದಾಗಿತ್ತು. ವಿಜ್ಞಾನಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿರುವುದಕ್ಕೆ ಕಾರಣಗಳಿವೆ. ಈ ಸದ್ಯ ಸಂಶೋಧನೆಯ ಹಂತದಲ್ಲಿರುವ ವ್ಯಾಕ್ಸೀನ್ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿರಬಲ್ಲದು? ಒಂದು ವೇಳೆ ಅಂತಹ ವ್ಯಾಕ್ಸೀನ್ ಹೊರಬಂದರೂ ಒಂದೇ ಡೋಸ್ ಸಾಕಾಗುತ್ತಾ ಎಂಬ ಅಂಶಗಳನ್ನೂ, ಮಂದೆ ರೋಗನಿರೋಧಕತೆ (Herd immunity) ಸಾಧ್ಯವಾ? ಇವೆಲ್ಲಕ್ಕೆ ಉತ್ತರ ಸಿಗಬೇಕೆಂದರೆ ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಎಷ್ಟು ದಿನ ಬರುವುದಿಲ್ಲ? ಎಂಬುದರ ಬಗ್ಗೆ ತೀರ್ಮಾನಕ್ಕೆ ಬರಬೇಕು.

ಯಾವುದೇ ವ್ಯಕ್ತಿಗೆ ಸೋಂಕು ರೋಗವೊಂದರ ವಿರುದ್ಧ ರೋಗನಿರೋಧಕತೆ ಬರುವುದು ಎರಡು ರೀತಿಯಲ್ಲಿ. ಒಂದು, ಸಹಜವಾಗಿ ಸೋಂಕು ಬಂದಾಗ ದೇಹವು ಅದನ್ನು ಎದುರಿಸಲು ಆಂಟಿಬಾಡಿ (ಪ್ರತಿಕಾಯ)ಗಳನ್ನು ಉತ್ಪಾದಿಸಿ, ಸೋಂಕುಕಾರಕವನ್ನು ದೇಹದಿಂದ ಹೊರಹಾಕುತ್ತದೆ; ನಂತರ ನೇರವಾಗಿ ಟಿ ಜೀವಕೋಶಗಳ ಮುಖಾಂತರವೂ ಎದುರಿಸುತ್ತದೆ. ತಕ್ಷಣದಲ್ಲೇ ಎದುರಿಸುವ ಪ್ರತಿಕಾಯ ಮತ್ತು ಜೀವಕೋಶಗಳಲ್ಲದೇ ನೆನಪಿನ ಜೀವಕೋಶಗಳ (Memory cells) ಮುಖಾಂತರ ದೀರ್ಘಕಾಲಿಕ ರೋಗನಿರೋಧಕತೆಯನ್ನೂ ದೇಹವು ಬೆಳೆಸಿಕೊಳ್ಳುತ್ತದೆ. ಅಂದರೆ ಮುಂದೆಂದಾದರೂ ಆ ಸೋಂಕುಕಾರಕ ದೇಹವನ್ನು ಪ್ರವೇಶಿಸಿದರೆ ಅದನ್ನು ಕೂಡಲೇ ಎದುರಿಸಲು ದೇಹವು ಸನ್ನದ್ಧವಾಗಿರುತ್ತದೆ. ಆದರೆ, ಒಮ್ಮೆ ಸೋಂಕುಕಾರಕ ದೇಹದೊಳಗೆ ಬಂದರೆ ಜೀವನವಿಡೀ ಅದನ್ನು ಎದುರಿಸಲು ಬೇಕಾದ ಶಕ್ತಿ ಎಲ್ಲಾ ರೋಗಗಳಿಗೂ ಒದಗಿಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಎರಡನೆಯದಾಗಿ, ಲಸಿಕೆ (ವ್ಯಾಕ್ಸೀನ್) ತೆಗೆದುಕೊಳ್ಳುವುದರಿಂದಲೂ ರೋಗನಿರೋಧಕ ಶಕ್ತಿ ಬರುತ್ತದೆ. ಕೆಲವು ರೋಗಗಳು ಒಮ್ಮೆ ಬಂದರೆ ಹೇಗೆ ಜೀವನವಿಡೀ ಮತ್ತೆ ಬರುವುದಿಲ್ಲವೋ, ಹಾಗೆ ಕೆಲವು ವ್ಯಾಕ್ಸೀನ್‌ಗಳನ್ನು ಒಮ್ಮೆ ತೆಗೆದುಕೊಂಡರೆ ಸಾಕು. ಸಿಡುಬು ರೋಗವನ್ನು ಪ್ರಪಂಚದಿಂದಲೇ ನಿರ್ಮೂಲನ ಮಾಡಿದ್ದು ಹಾಗೆ. ಒಮ್ಮೆ ಮಾತ್ರ ಕೊಡುವ ವ್ಯಾಕ್ಸೀನ್‌ನಿಂದ. ಆದರೆ, ಕೆಲವಕ್ಕೆ ಒಂದಕ್ಕಿಂತ ಹೆಚ್ಚು ಸಾರಿ ವ್ಯಾಕ್ಸೀನ್ ಬೇಕಾಗುತ್ತದೆ. ದಡಾರ, ಟೆಟನಸ್ ಇತ್ಯಾದಿ ರೋಗಗಳನ್ನು ಎದುರಿಸುತ್ತಿರುವುದೂ ಹಾಗೆ.

ಇನ್ನು ಈಗಿನ ಕೋವಿಡ್-19 ರೋಗದ ವಿಚಾರಕ್ಕೆ ಬರೋಣ. ಈ ಕೊರೊನಾ ಸೋಂಕು ತಗುಲಿದ ನಂತರವೂ ಪ್ರತಿಕಾಯಗಳು (ಆಂಟಿಬಾಡಿಗಳು) ವೃದ್ಧಿಯಾಗುತ್ತವೆ ಎಂಬ ಬಗ್ಗೆ ಸಂದೇಹವೇ ಇಲ್ಲ. ಆದರೆ, ಅದು ಎಷ್ಟು ಕಾಲ ಇರುತ್ತದೆ, ಇದ್ದರೂ ಮತ್ತೆ ಸೋಂಕು ಬರದ ಹಾಗೆ ತಡೆಯುತ್ತದೆಯಾ, ಒಮ್ಮೆ ಕೊರೊನಾ ಸೋಂಕು ತಗುಲಿ ಗುಣವಾದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇದು ಒಂದೇ ರೀತಿ ಇರುತ್ತದೆಯಾ ಎಂಬ ಬಗ್ಗೆ ಮಾತ್ರ ಇದುವರೆಗೆ ಆಗಿರುವ ಸಂಶೋಧನೆಗಳು ಭಿನ್ನ ಭಿನ್ನ ತೀರ್ಮಾನಗಳನ್ನು ಮುಂದಿಟ್ಟಿವೆ. 40 ದಿನಗಳಿಂದ 4 ತಿಂಗಳವರೆಗೆ ಈ ಪ್ರತಿಕಾಯಗಳು ಮತ್ತೆ ಕೊರೊನಾ ಸೋಂಕು ಬಾರದಂತೆ ತಡೆಯುತ್ತವೆ ಎಂದು ಬೇರೆ ಬೇರೆ ಸಂಶೋಧನೆಗಳು ತಿಳಿಸಿವೆ. ಕೋತಿಗಳ ಮೇಲೆ ಮತ್ತು ಪ್ರಯೋಗಾಲಯಗಳಲ್ಲಿ ನಡೆದ ಹಲವು ಸಂಶೋಧನೆಗಳೂ ಇದನ್ನು ಖಚಿತಪಡಿಸಿವೆ. ತೀವ್ರ ಗುಣಲಕ್ಷಣಗಳನ್ನು ಹೊಂದಿದ್ದವರಲ್ಲಿ ಹೆಚ್ಚಿನ ರೋಗನಿರೋಧಕತೆಯ ಅಂಶ ಕಂಡುಬಂದಿದೆ ಎಂದು ಕೆಲವು ಸಂಶೋಧನೆಗಳು ಹೇಳಿವೆ. ಆದರೆ ಆಂಟಿಬಾಡಿಗಳು ಹೆಚ್ಚಿದ್ದರೆ ಹೆಚ್ಚು ರೋಗನಿರೋಧಕತೆಯೆಂದೂ, ಕಡಿಮೆ ಇದ್ದರೆ ಮತ್ತೆ ಸೋಂಕು ಬರುವ ಸಾಧ್ಯತೆ ಹೆಚ್ಚು ಎಂದೇನೂ ಅಲ್ಲ. ಜೊತೆಗೆ ರೋಗನಿರೋಧಕತೆ ಪ್ರತಿಕಾಯಗಳ ಮುಖಾಂತರ ಮಾತ್ರವಲ್ಲದೇ ಟಿ ಜೀವಕೋಶಗಳಿಂದಲೂ ಉಂಟಾಗುತ್ತದೆ ಎಂಬುದನ್ನು ಈಗಾಗಲೇ ಮೇಲೆ ಹೇಳಲಾಗಿದೆ. ಹಾಗೆಯೇ ಕೊರೊನಾ ವಿರುದ್ಧ ಉತ್ಪತ್ತಿಯಾಗುವ ಎಲ್ಲಾ ಪ್ರತಿಕಾಯಗಳೂ ಕೊರೊನಾ ವಿರುದ್ಧ ರೋಗನಿರೋಧಕತೆಯನ್ನು ಖಾತರಿಗೊಳಿಸುವುದಿಲ್ಲ. ನಿರ್ದಿಷ್ಟವಾಗಿ ಕೊರೊನಾ ವೈರಸ್‌ಅನ್ನು ಕೊಲ್ಲುವ neutralising antibodies ಇವೆಯಾ ಎನ್ನುವುದು ಮುಖ್ಯ.

ಈ neutralising antibodies ಸಾರ್ಸ್ ರೋಗ ಬಂದವರ ದೇಹಗಳಲ್ಲಿ (ಈ ಕೋವಿಡ್-19 ಎಂಬುದು ಸಾರ್ಸ್-2) ಸುಮಾರು 2ರಿಂದ 3 ವರ್ಷಗಳ ಕಾಲ ಇರುತ್ತಿತ್ತು. ಇನ್ನೊಂದು ಕೊರೊನಾ ವೈರಸ್ ಆದ ಮೆರ್ಸ್ (MERS-CoV, the virus that caused Middle East respiratory syndrome)ನಲ್ಲಿ ಸುಮಾರು ಮೂರು ವರ್ಷಗಳ ಕಾಲ ಇರುತ್ತಿತ್ತು. ಸಾರ್ಸ್ 2004ರ ನಂತರ ಮತ್ತೆ ಬಂದಿಲ್ಲ ಮತ್ತು ಮೆರ್ಸ್ ರೋಗವು ಎಲ್ಲೋ ಒಂದೊಂದು ಕಡೆ ಕಾಣುತ್ತಿದೆ ಎಂಬುದನ್ನು ಗಮನಿಸಬೇಕು.

ಒಮ್ಮೆ ಕೊರೊನಾ (ಕೊರೊನಾ ಎಂದು ಹೇಳಿದಾಗಲೆಲ್ಲಾ ಈಗ ಚರ್ಚೆಯಲ್ಲಿರುವ ಕೊರೊನಾ-2 ಎಂದು ಭಾವಿಸಬೇಕು, ಇನ್ನೂ ಬೇರೆ ಬೇರೆ ಕೊರೊನಾ ವೈರಸ್‌ಗಳೂ ಇವೆ) ಬಂದವರಲ್ಲಿ ಮತ್ತೆ ಇನ್ನೊಮ್ಮೆ ಸೋಂಕು ಕಾಣಿಸಿಕೊಂಡ ಎಷ್ಟು ಪ್ರಕರಣಗಳು ಇದುವರೆಗೆ ಪತ್ತೆಯಾಗಿವೆ? ಖಚಿತವಾಗಿ ಹೇಳಬಹುದಾದ ಒಂದೂ ಪ್ರಕರಣ ಇಲ್ಲ. ಅದರ ಅರ್ಥ ಕೊರೊನಾ ಪಾಸಿಟಿವ್ ಆಗಿದ್ದವರು ಗುಣವಾಗಿ ನೆಗೆಟಿವ್ ರಿಪೋರ್ಟ್ ಬಂದ ಮೇಲೆ ಮತ್ತೆ ಪಾಸಿಟಿವ್ ಬಂದಿಲ್ಲ ಎಂದಲ್ಲ. ಆದರೆ ಅಂತಹ ಪ್ರಕರಣಗಳಲ್ಲಿ ಪರೀಕ್ಷೆಗಳ ಕುರಿತೇ ಸಂದೇಹಗಳು ವ್ಯಕ್ತವಾಗಿವೆ ಮತ್ತು ಸುಪ್ತವಾದ ಅತೀ ಸಣ್ಣ ಪ್ರಮಾಣದ ಸೋಂಕು ಅವರಲ್ಲಿ ಇದ್ದೇ ಇದ್ದು, ಅದೇ ಮತ್ತೆ ಪಾಸಿಟಿವ್ ರಿಪೋರ್ಟ್‌ಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಮತ್ತೆ ಬಂತಂತೆ, ಇಲ್ಲಿ ಬಂತಂತೆ ಎಂಬ ಸುದ್ದಿಗಳ ಹೊರತಾಗಿ, ಖಚಿತವಾಗಿ ದಾಖಲಿಸಲಾದ ಕೊರೊನಾ ಮರುಸೋಂಕಿನ ಉದಾಹರಣೆಗಳು ಇಲ್ಲವೆಂದೇ ಸದ್ಯಕ್ಕೆ ಅಂದುಕೊಳ್ಳಬೇಕು. ನೆಗೆಟಿವ್ ಆದವರಲ್ಲಿ ನಂತರ ಪಾಸಿಟಿವ್ ಬಂತು ಎಂದಾಕ್ಷಣ ಅವರಿಗೆ ಕೊರೊನಾ ರೋಗ ಬಂದಿದೆ ಎಂದರ್ಥವಲ್ಲ. ಅವರ ದೇಹದಲ್ಲಿ ವೈರಸ್‌ನ ಕೆಲವು ಅಂಶ ಇನ್ನೂ ಉಳಿದುಕೊಂಡಿತ್ತು ಎಂದು ಮಾತ್ರ ಅರ್ಥ.

ಆದರೆ, ವಿಶ್ವ ಆರೋಗ್ಯ ಸಂಸ್ಥೆಯು ಒಮ್ಮೆ ಕೊರೊನಾ ಬಂದು ಹೋದವರ ದೇಹದಲ್ಲಿ ಪ್ರತಿಕಾಯಗಳು ಇದ್ದ ಮಾತ್ರಕ್ಕೆ ಅದನ್ನು ರೋಗನಿರೋಧಕತೆಯ ಸರ್ಟಿಫಿಕೇಟ್/ಪಾಸ್‌ಪೋರ್ಟ್ ಎಂದೇನೂ ತಿಳಿಯಬೇಕಿಲ್ಲ ಎಂದೇ (ಏಪ್ರಿಲ್ 24ರಂದು ಅಪ್‌ಲೋಡ್ ಮಾಡಲಾದ ಪೇಜ್) ಹೇಳುತ್ತಿದೆ. ಹಾಗಾದರೆ ಇದರ ಅರ್ಥವೇನು? ಇದುವರೆಗೆ ಪತ್ತೆಯಾದ ಮರುಸೋಂಕಿನ ಪ್ರಕರಣಗಳು ಸಂದೇಹಾಸ್ಪದ ಎಂದು ಹೇಳುತ್ತಿರುವ ವಿಜ್ಞಾನ ಲೋಕ ಹೀಗೇಕೆ ಹೇಳುತ್ತಿದೆ? ಇವೆರಡೂ ಬೇರೆ ಬೇರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಂಟಿಬಾಡಿ ಇದ್ದ ಮಾತ್ರಕ್ಕೆ ರೋಗನಿರೋಧಕತೆ ಇದೆ, ಅವರು ಎಲ್ಲಿಗೆ ಬೇಕಾದರೂ ಹೇಗೆ ಬೇಕಾದರೂ ಓಡಾಡಬಹುದು ಎಂದು ಹೇಳಲಾಗದು ಎಂಬುದು ಬೇರೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಪಾಸಿಟಿವ್ ಆದವರಲ್ಲಿ ಮತ್ತೆ ಕೊರೊನಾ ಸೋಂಕು ಬಂದ ಖಚಿತ ಉದಾಹರಣೆ ಇಲ್ಲ ಎಂಬುದು ಬೇರೆ ಅಷ್ಟೇ.

ಈ ಕೊರೊನಾ-2 ವೈರಸ್‌ನ ಸೋಂಕಿನ ಕುರಿತು ಆದಷ್ಟು ಸಂಶೋಧನೆ ಇನ್ನಾವುದರ ಮೇಲೂ ಆಗಿಲ್ಲ ಎಂದು ಕೆಲವರು ಅಂದಾಜಿಸಿದ್ದಾರೆ. ಹಾಗಿದ್ದೂ, ಅಂತಿಮ ತೀರ್ಮಾನಗಳಿಗೆ ಇನ್ನೂ ಬರಲಾಗಿಲ್ಲ. ಬಹುಶಃ ಕೆಲವು ವಿಚಾರಗಳಲ್ಲಿ ಖಚಿತ ತೀರ್ಮಾನಕ್ಕೆ ಬರಲು ಒಂದು ವರ್ಷವೂ ಬೇಕಾಗಬಹುದೇನೋ.

ಆದರೆ ಮಾಧ್ಯಮಗಳಲ್ಲಿ ಬರುವ ಸುದ್ದಿಗಳು ಗಾಬರಿಗೊಳಿಸುತ್ತವೆ. ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸುವ ನಿಯತಕಾಲಿಕಗಳಲ್ಲೇ ಗೊಂದಲಕಾರಿ ಸಂಗತಿಗಳು ಪ್ರಕಟಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ಸೆನ್ಸೇಷನಲಿಸಂಗಾಗಿ ಸುಳ್ಳನ್ನು ಬಿತ್ತರಿಸಲು ಹಿಂಜರಿಯದ ಮಾಧ್ಯಮಗಳನ್ನು ಕೇಳಬೇಕೇ? ಒಂದು ಉದಾಹರಣೆ ಕೊಡುವುದಾದರೆ ವಾಷಿಂಗ್ಟನ್ ಪೋಸ್ಟ್ Can you get coronavirus twice? Doctors are unsure, even as anecdotal reports mount ಎಂಬ ಶೀರ್ಷಿಕೆಯಡಿ ವರದಿಯೊಂದನ್ನು ಪ್ರಕಟಿಸಿತು. ಅದನ್ನೇ ಆಧರಿಸಿ ಭಾರತದ ಲೈವ್‌ಮಿಂಟ್ COVID-19 reinfection cases increase, doctors clueless ಎಂಬ ಶೀರ್ಷಿಕೆಯ ವರದಿ ಪ್ರಕಟಿಸಿತು. ಮರುಸೋಂಕಿನ ಕೇಸುಗಳ ಬಗ್ಗೆ ವೈದ್ಯರುಗಳಿಗೆ ಖಾತರಿಯಿಲ್ಲ ಎಂಬುದಕ್ಕೂ, ವೈದ್ಯರುಗಳಿಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂಬುದಕ್ಕೂ ದೊಡ್ಡ ವ್ಯತ್ಯಾಸವುಂಟಾಗುತ್ತದೆ. ವರದಿಯನ್ನು ತೆರೆದು ನೋಡಿದರೆ ಅದರಲ್ಲಿ ಈ ಮರುಸೋಂಕಿನ ಪ್ರಕರಣವು ದಾಖಲೀಕೃತ ಪ್ರಕರಣವಲ್ಲವೆಂದೂ, ವೈದ್ಯರುಗಳು ಅದನ್ನು ಒಪ್ಪಿಲ್ಲವೆಂದೂ ಬರೆಯಲಾಗಿದೆ. ಆದರೆ, ಎರಡನೆಯ ಬಾರಿ ಬರುವುದೇ ಇಲ್ಲ ಎಂದು ಅಂತಿಮ ಷರಾವನ್ನೇನೂ ತಜ್ಞರು ಇದುವರೆಗೆ ಬರೆದಿಲ್ಲ.

ಅಂತಿಮವಾಗಿ: ಒಮ್ಮೆ ಕೊರೊನಾ ಸೋಂಕು ತಗುಲಿದವರಲ್ಲಿ ರೋಗ ನಿರೋಧಕತೆ ಬೆಳೆಯುತ್ತದೆ. ಅದರ ಪ್ರಮಾಣ, ಅವಧಿಯ ಕುರಿತು ಇನ್ನೂ ಖಚಿತ ತೀರ್ಮಾನಗಳಿಗೆ ಬರುವುದು ಕಷ್ಟ. ಸಾಮಾನ್ಯ ಎಚ್ಚರಿಕೆಗಳನ್ನು ಮುಂದುವರೆಸುವುದೇ ಸೂಕ್ತ. ಆದರೆ ಸದ್ಯಕ್ಕಂತೂ ಒಮ್ಮೆಯೂ ಕೊರೊನಾ ಬಾರದವರಿಗಿಂತ, ಕೊರೊನಾ ಬಂದು ಹೋದವರು ಸಾಪೇಕ್ಷವಾಗಿ ಕಡಿಮೆ ರಿಸ್ಕ್ ಹೊಂದಿರುತ್ತಾರೆಂದು ಖಚಿತವಾಗಿ ಹೇಳಬಹುದು. ಅದರಲ್ಲೂ ರೋಗಲಕ್ಷಣಗಳುಳ್ಳ ಕೊರೊನಾ ರೋಗ ಬಂದವರಿಗೆ ಸ್ವಲ್ಪ ಹೆಚ್ಚು ಕಾಲವೇ ಈ ರೋಗನಿರೋಧಕತೆ ಉಳಿದುಕೊಂಡಿರುತ್ತದೆ. ಅಂತಹವರಿಗೆ ಈ ಸೀಸನ್ನಿನಲ್ಲಂತೂ ಇನ್ನೊಮ್ಮೆ ಕೊರೊನಾ ಬರುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಒಂದು ವೇಳೆ ವೈರಸ್‌ನಲ್ಲೇ ದೊಡ್ಡ ಬದಲಾವಣೆ (ಮ್ಯುಟೇಷನ್) ಆಗಿ, ಈಗ ಬಂದಿರುವ ರೋಗನಿರೋಧಕತೆಯೇ ಅಪ್ರಯೋಜಕವಾಗದ ಹೊರತು.

  • ಡಾ.ವಾಸು ಎಚ್. ವಿ, ವೈದ್ಯರು, ಸಂಪಾದಕರು ನ್ಯಾಯಪಥ ಪತ್ರಿಕೆ.

References:

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19


ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ರಾಜಕಾರಣಿಗಳು: ಆರೋಗ್ಯ ವ್ಯವಸ್ಥೆಯ ರಾಷ್ಟ್ರೀಕರಣಕ್ಕೆ ಸೂಕ್ತ ಸಮಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...