Homeಮುಖಪುಟಈ ಮುಂಗಾರಿಗೆ ಯಾವ ರೀತಿಯ ವೈವಿಧ್ಯ ಆಹಾರ ಉತ್ತಮ?: ಕೆ.ಸಿ ರಘು

ಈ ಮುಂಗಾರಿಗೆ ಯಾವ ರೀತಿಯ ವೈವಿಧ್ಯ ಆಹಾರ ಉತ್ತಮ?: ಕೆ.ಸಿ ರಘು

ಈಗಲೂ ಸಹ ಆಹಾರದ ಬಗ್ಗೆ ಕೊಂಚ ಆಸಕ್ತಿಯುಳ್ಳವರು ಹಿರಿಯರ ಅನುಭವವನ್ನು ಬಳಸಿಕೊಂಡು ಆಧುನಿಕ ವಿಜ್ಞಾನದ ಕೊಡುಗೆಯನ್ನು ಬೆಸೆದರೆ ಉತ್ತಮ ಆಹಾರ, ರಸ ಮತ್ತು ರುಚಿಯೂ ಮುಂಗಾರು ಮಳೆಯ ನಾದಕ್ಕೆ ಜುಗಲ್‍ಬಂದಿ ಆಗಬಹುದು.

- Advertisement -
- Advertisement -

ನಮ್ಮ ನಿತ್ಯ ಆಹಾರ ಹೊರ ಜಗತ್ತನ್ನು ಒಳಜಗತ್ತನ್ನಾಗಿ ಪರಿವರ್ತಿಸುವ ನಿರಂತರ ಪ್ರಕ್ರಿಯೆ. ಹೊರ ಜಗತ್ತು ಎಷ್ಟು ವೈವಿಧ್ಯಮಯವೋ, ಒಳಜಗತ್ತು ಸಹ ವೈವಿಧ್ಯತೆಯ ಆಗರವೇ. ನಾವೆಂಬ ನಾವು ಕೇವಲ ನಾವೇ ಅಲ್ಲ. ನಮ್ಮ ದೇಹವೂ ಲಕ್ಷಾಂತರ ಸೂಕ್ಷ್ಮ ಜೀವಿಗಳಿಗೆ ಸೂರು ಹೌದು. ಇತ್ತೀಚಿನ ವಿಜ್ಞಾನ ಹೇಳುವಂತೆ ನಮ್ಮ ದೇಹದಲ್ಲಿ ನಾವೇ ಅತಿಥಿಗಳು. ಅಲನಾ ಕೋಲನ್ ಅವರು ಈ ಬಗೆಗೆ ಬರೆದಿರುವ ಪುಸ್ತಕದ ಹೆಸರೇ “10 ಪರ್ಸೆಂಟ್ ಹ್ಯೂಮನ್”.

ಸೂಕ್ಷ್ಮ ಜೀವಿಗಳ ಜಗತ್ತು ನಮ್ಮ ಇರುವಿಕೆಯ ಜೊತೆಗೇ ಹೆಣೆದುಕೊಂಡಿದೆ. ಬಳ್ಳಿಯಿಂದ ಮರ ನಿಂತಿದೆಯೋ ಅಥವಾ ಮರದಿಂದ ಬಳ್ಳಿ ನಿಂತಿದೆಯೋ ಹೇಳಲಾಗದು. ನಮ್ಮ 23 ಸಾವಿರ ಗುಣಾಣುಗಳಲ್ಲಿ ಸುಮಾರು 10ಸಾವಿರ ಗುಣಾಣುಗಳು ವೈರಸ್‍ಗಳಿಂದ ಮಾಡಲ್ಪಟ್ಟವು ಎನ್ನುತ್ತಾರೆ. ಹಾಗಾಗಿ ನಮ್ಮ ಆಹಾರ ನಮಗಾಗಿ ಎನ್ನುವಂತಿಲ್ಲ. ಅತಿಥಿ ಅತಿಥೇಯರ ಸರ್ವಾಂಗೀಣ ಒಳಿತಿಗಾಗಿ ನಾವು ಆಹಾರವನ್ನು ಸೇವಿಸಬೇಕು. ಇದು ಕೇವಲ ನಾಲಿಗೆಯ ರುಚಿಗೆ ಜೋತು ಬೀಳುವ ಕ್ಷುಲ್ಲಕ ವಿಷಯವಲ್ಲ. ಯಾವುದೋ ಕೆಟ್ಟ ಆಹಾರವನ್ನು ಒಗ್ಗಿಸಿಕೊಂಡುಬಿಟ್ಟರೆ ಮಾದಕ ವಸ್ತುವಿಗೆ ನಮ್ಮನ್ನೇ ನಾವು ಮಾರಿಕೊಂಡಂತೆ. ಹೀಗಾಗದೆ ವೈವಿಧ್ಯಮಯ ಆಹಾರ ಪದ್ಧತಿಯನ್ನು ಅಷ್ಟೇ ವೈವಿಧ್ಯಮಯವಾದ ನಮ್ಮ ದೇಹವೆನ್ನುವ ಜೀವರಾಶಿಗೆ ಒದಗಿಸತಕ್ಕದ್ದು. ಈ ರೀತಿಯಲ್ಲಿ ನಮ್ಮ ದೇಹವೆನ್ನುವುದು ಒಂದು ಪೃಕೃತಿ ಪಂಜರವೇ ಸರಿ.

ಪ್ರತಿ ಋತುವಿಗೆ ತಕ್ಕಂತೆ ಆಹಾರದ ಬದಲಾವಣೆ ಆಗತಕ್ಕದ್ದು ವಾಡಿಕೆ ಎಂಬಂತಿದೆ. ನಮ್ಮ ಹಿಂದಿನವರು ಋತು ಬುಕ್, ಹಿತ ಬುಕ್ ಮತ್ತು ಮಿತ ಬುಕ್ ಎಂದು ಹೇಳುತ್ತಿದ್ದರು. ಅಂದರೆ ಕಾಲಕ್ಕೆ ತಕ್ಕಂತೆ ಹಿತಮಿತವಾದ ಆಹಾರವನ್ನು ಬಳಸುವುದರ ಅಗತ್ಯದ ಬಗೆಗಿನ ಮಾತು ಅದು. ಅಧ್ಯಯನದ ಪ್ರಕಾರ ಕಾಡಿನಲ್ಲೇ ವಾಸಿಸುವ ಅನೇಕ ಬುಡಕಟ್ಟು ಜನಾಂಗದವರ ದೇಹ ಪೃಕೃತಿಯನ್ನು ಅಧ್ಯಯನ ಮಾಡಿದಾಗ ಕಂಡು ಬರುವುದೇನೆಂದರೆ ಪ್ರತಿ ಋತುವಿಗೂ ಅವರ ದೇಹದ ಸೂಕ್ಷ್ಮ ಜೀವ ಜಗತ್ತು ಸಂಪೂರ್ಣವಾಗಿ ಬದಲಾಗುತ್ತದೆ. ಅಂದರೆ ಬ್ಯಾಕ್ಟೀರಿಯಾ, ಪ್ರೊಟೊಜೋವಾ ಮತ್ತು ವೈರಸ್‍ಗಳ ಜಗತ್ತು ಋತುವಿಂದ ಋತುವಿಗೆ ಕಾಲಕ್ಕೆ ತಕ್ಕಂತೆ ಆಹಾರ ಪದ್ಧತಿ ಬದಲಾಗುವುದರಿಂದ ಬದಲಾಗುತ್ತವೆ. ತನ್ನ ದೇಹದಲ್ಲಿರುವ ಜೀವ ಜಗತ್ತು ನಿಂತ ನೀರಾಗದೇ, ನಿರಂತರವಾಗಿ ಪೃಕೃತಿ ಜೊತೆಗೆ ಹೆಣೆದು ಬೆಸೆದುಕೊಂಡು ಬದಲಾಗುತ್ತಾ ಇರುತ್ತದೆ. ಆರೋಗ್ಯವೆಂದರೆ ಹೀಗೂ ವ್ಯಾಖ್ಯಾನಿಸುವುದುಂಟು” “ನಿರಂತರವಾಗಿ ಬದಲಾಗುವ ಹೊರ ಜಗತ್ತಿನೊಂದಿಗೆ ಸದಾ ಹೊಂದಿಕೊಳ್ಳುವ ಪೃಕ್ರಿಯೆ” ಎಂದು. ಈ ರೀತಿ ನಮ್ಮ ದೇಹ ಪೃಕೃತಿಯೂ ಸಹ ನಮ್ಮ ಆಹಾರ ಪದ್ಧತಿಯ ಮೂಲಕ ನಿರಂತರವಾಗಿ ಹೊಂದಿಕೊಳ್ಳುತ್ತ ಸಾಗಿದಾಗ ದೇಹ ಮತ್ತು ಪರಿಸರದ ಮಧ್ಯೆ ಒಂದು ಸಾವಯವ ಸಂಬಂಧ ಏರ್ಪಡುತ್ತದೆ. ಉಪನಿಷತ್ತಿನಲ್ಲಿ ನೀವು ಬಳಸುವ ಆಹಾರ ನಿಮ್ಮನ್ನು ಬಳಸುತ್ತದೆ ಎನ್ನುವ ಮಾತಿದೆ. ಇತ್ತೀಚಿನ ಜಾಗತೀಕರಣದ ಆಹಾರ ಸಂಸ್ಕೃತಿಯನ್ನು ಮ್ಯಾಕ್‍ಡೊನಾಲ್ಡ್‍ಡೈಸೇಶನ್ ಅಥವಾ ಕೊಕಾಕೊಲೊನೈಸೇಶನ್ ಎನ್ನುತ್ತಾರೆ. ಅಂದರೆ ಇಡೀ ಜಗತ್ತಿನ ಆಹಾರ ಸಂಸ್ಕೃತಿಯನ್ನು ಬಹು ಸಂಸ್ಕೃತಿಯಿಂದ ಅತ್ಯಂತ ಇಕ್ಕಟ್ಟಾದ ಏಕಸಂಸ್ಕೃತಿತಿಗೆ ತಂದು ನಿಲ್ಲಿಸಿರುವುದು. ಈ ಮ್ಯಾಕ್ಡೊನಾಲ್ಡ್‍ಡೈಸೇಶನ್ ಎನ್ನುವುದು ಸಮಾಜ ಶಾಸ್ತ್ರದಲ್ಲಿ ಒಂದು ವಿಶೇಷ ಅಧ್ಯಾಯನ ಆಗಿದೆ. ಇದು ಕೇವಲ ಆಹಾರದಲ್ಲಿ ಮಾತ್ರವಲ್ಲ ಎಲ್ಲ ರೀತಿಯ ವೈವಿಧ್ಯಮಯ ಸಂಸ್ಕೃತಿಯನ್ನು ಮಾರಣಹೋಮ ಮಾಡಿ ಏಕಮಯ ಸಂಸ್ಕೃತಿಗೆ ತಂದು ನಿಲ್ಲಿಸುವಂತದ್ದಾಗಿದೆ.

ಸ್ಥಳೀಯವಾಗಿ ಬೆಳೆದ ಮತ್ತು ಸಾಂಸ್ಕೃತಿಕವಾಗಿ ಬೆಳೆದು ಬಂದು ಬಳಸುವ ನಮ್ಮ ಆಹಾರ ಪದ್ಧತಿ ಸಾಮಾನ್ಯವಾಗಿ ಹೀಗೆ ಇದ್ದದ್ದಾಗಿತ್ತು. ಮಳೆಗಾಲ ಬಂತೆಂದರೆ ಮಲೆನಾಡಿನಲ್ಲಿ ಕಾಡು ಬಳುವಳಿಯಾಗಿ ನೀಡುವ ಅಣಬೆ, ಕಳಲಿ, ಗೆಡ್ಡೆ-ಗೆಣಸುಗಳು, ತರತರದ ಬೇಲಿ ಸೊಪ್ಪುಗಳು, ಹಳ್ಳ-ಕೊಳ್ಳದಿಂದ ಸಿಗುವ ಏಡಿ ಮೀನುಗಳು ಕಾಲಕ್ಕೆ ತಕ್ಕಂತೆ ಲಭ್ಯವಾಗುತ್ತಿದ್ದವು. ಈ ರೀತಿಯ ಆಹಾರ ಬಳಕೆಯಿಂದ, ಎಷ್ಟೋ ಜನ ವಿಜ್ಞಾನದ ಮಾಹಿತಿ ತಿಳಿಯದೇ ವೈಜ್ಞಾನಿಕವಾದ ಆಧಾರದಲ್ಲಿಯೇ ಬದುಕು ಕಟ್ಟಿಕೊಳ್ಳುವುದ್ದಾಗಿದೆ. ಇಂದು ಆಹಾರ ಭದ್ರತೆ ಹಿಂದಿಗಿಂತ ಅತ್ಯಂತ ಉನ್ನತ ಸ್ಥಿತಿಯಲ್ಲಿರುವುದು ಸತ್ಯ. ಆದರೆ ಜಗತ್ತಿನ ಶೇಕಡ 80ರಷ್ಟು ಆಹಾರ ಧಾನ್ಯ ಕೇವಲ 5 ಧಾನ್ಯಗಳಾಗಿವೆ. ಅಕ್ಕಿ, ಗೋಧಿ, ಮೆಕ್ಕೆಜೋಳ, ಸೋಯಾಬೀನ್, ಆಲೂಗಡ್ಡೆ ಎನ್ನಬಹುದು. ಇದರಲ್ಲಿ ಮೆಕ್ಕೆಜೋಳ ಮತ್ತು ಸೋಯಾಬೀನ್‍ಗಳನ್ನು ಪ್ರಾಣಿಗಳಿಗೆ ತಿನ್ನಲು ಕೊಟ್ಟರೆ ನಮಗೆ ಉಳಿಯುವ ಆಹಾರ ವೈವಿಧ್ಯತೆ ಮೂರು ಅಥವಾ ನಾಲ್ಕು ಮಾತ್ರವಾಗಿವೆ. ಅದರಲ್ಲಿಯೂ ಸಹ ಭತ್ತ ಮತ್ತು ಗೋಧಿಯ ವೈವಿಧ್ಯಮಯ ತಳಿಗಳು ಇಂದು ಲಭ್ಯವಿಲ್ಲ. ಉದಾಹರಣೆಗೆ ರಕ್ತಶಾಲಿ ಎನ್ನುವ ಅಕ್ಕಿ ಗರ್ಭಿಣಿಯರಿಗೆ ಉತ್ತಮವಾದ ಅಕ್ಕಿ ಎನ್ನುತ್ತದೆ ಆಯುರ್ವೇದ. ಕೇರಳದ ನವರಾ ಅಕ್ಕಿ ಔಷಧಿಗೆ ಬಹಳ ಹಿಂದಿನಿಂದಿಲೂ ಬಳಸಿಕೊಂಡು ಬಂದ ಅಕ್ಕಿಯಾಗಿದೆ. ಮೂಳೆ ಸವೆತಕ್ಕೆ ಲೇಪಿಸುವ ಆಯುರ್ವೇದ ಚಿಕಿತ್ಸೆಯಲ್ಲಿ ಇದನ್ನು ಬಳಸುತ್ತಾರೆ. ಮೆಕ್ಕೆಜೋಳ ಕಾಮನ ಬಿಲ್ಲಿನ ಎಲ್ಲ ಬಣ್ಣಗಳನ್ನು ಒಳಗೊಂಡ ಏಕದಳ ಧಾನ್ಯ. ಆದರೆ ಇಂದು ನಮಗೆ ಅವು ಕಾಣಸಿಗುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ಸುಮಾರು 100 ರೀತಿಯ ಭತ್ತದ ತಳಿಗಳನ್ನು ಬೆರಳೆಣಿಕಿಯಷ್ಟು ರೈತರು ಬಳಸುತ್ತಿದ್ದಾರೆ.

ಮುಂಗಾರಿಗೆ ತಕ್ಕಂತೆ ಅನೇಕ ವೈವಿದ್ಯಮಯ ಆಹಾರ ಪದ್ಧತಿ ನಮ್ಮಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರಿಗೂ ಮುನ್ನ ನೂರಾರು ರೀತಿಯ ಕಾಡು ಎಲೆಯ ಕುಡಿಗಳನ್ನು ತಂದು ಗಸಿ ಮಾಡಿ ಆರು ತಿಂಗಳಿಗೆ ಬಳಸುತ್ತಾರೆ. ಅವು ಬಹು ಪೋಷಕಾಂಶಗಳ ಮತ್ತು ಖನಿಜಗಳ ಸಂಪತ್ತೆ ಸರಿ. ಹಾಗೆಯೇ ತರತರದ ಹಪ್ಪಳ ಸಂಡಿಗೆ, ಚಟ್ನಿ ಪುಡಿಗಳು, ಉಪ್ಪಿನಕಾಯಿಗಳು, ಹಲಸಿನ ಹಲವು ಬಗೆಯ ಪದಾರ್ಥಗಳು, ಕೆಸು ಎಲೆ, ತಜಂಕ್ ಸೊಪ್ಪಿನ ಪತ್ರೊಡೆ ನಮಗೆ ತಿಳಿದೆ ಇದೆ. ಚಟ್ನಿ ಪುಡಿಗಳ ಜಗತ್ತೆ ಅತ್ಯಂತ ವಿಸ್ತಾರವಾದುದು. ಏಕದಳ ಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳು, ಸಾಂಬಾರ ಪದಾರ್ಥಗಳು ಹೀಗೆ ಆಧುನಿಕ ಪೌಷ್ಟಿಕಾಂಶ ತಜ್ಞರ ಸಂಶೋಧನೆಗ ಕನ್ನಡಿ ಹಿಡಿಯುವ ಹಾಗಿವೆ. ಈ ಪುಡಿಗಳು ಅನ್ನಕ್ಕೂ ಸೈ ರೊಟ್ಟಿಗೂ ಕೈ ಜೋಡಿಸುತ್ತವೆ. ಎಲ್ಲ ಕಾಲಕ್ಕೂ ಎಲ್ಲ ಪದಾರ್ಥಗಳಿಗೂ ಮಿಲನವಾಗುವ ಮಿಕ್ಷರ್‍ಗಳು ಇವು.

ಕಾಫಿಯಲ್ಲಿ ಮಾನ್ಸೂನ್ ಮಲಬಾರ್ ಎಂಬ ಕಾಫಿ ಇದೆ. ವಿದೇಶದಲ್ಲೂ ಇದಕ್ಕೆ ಅಪಾರವಾದ ಬೇಡಿಕೆ ಇದೆ. ಇದರ ಹುಟ್ಟೇ ಆಕಸ್ಮಿಕ. ರಪ್ತು ಮಾಡಲು ಗೋದಾಮಿನಲ್ಲಿ ತಂದಿಟ್ಟ ಕಾಫಿ ಮಂಗಳೂರಿನಲ್ಲಿ ಸಮಯಕ್ಕೆ ಸರಿಯಾಗಿ ರಫ್ತಾಗದೇ ಮುಂಗಾರಿನಲ್ಲಿ ಗೋದಾಮಿನಲ್ಲಿ ಉಳಿಯಬೇಕಾಯಿತು. ಹೀಗೆ 6 ತಿಂಗಳು ಶೇಖರಿಸಿಟ್ಟಿದ್ದರಿಂದ ಅದಕ್ಕೆ ಬೂಸ್ಟ್ ಬಂದು ಕೆಟ್ಟು ಹೋಗಿತ್ತು. ಆದರೂ ಇದನ್ನೇ ಧೈರ್ಯ ಮಾಡಿ ರಫ್ತು ಮಾಡಿದ ವ್ಯಾಪಾರಿಗೆ ಆಶ್ಚರ್ಯಕರವಾಗಿ ವಿದೇಶದಿಂದ ಇನ್ನು ಮುಂದೆ ನಮಗೆ ಇಂಥದ್ದೇ “ಒಳ್ಳೆಯ” ಕಾಫಿ ಕಳಿಸಿ ಎಂದು ಬೇಡಿಕೆ ಹೆಚ್ಚಾಯಿತು. ಇದು ಮಾನ್ಸೂನ್ ಮಾಡಿದ ಚಮತ್ಕಾರ. ಬೂಸ್ಟ್ ಬಂದ ಕಾಫಿಯಲ್ಲಿ ಯಾವುದೋ ಜೈವಿಕ ಪ್ರಕ್ರಿಯೆಯಾಗಿ ಹೊಸ ರುಚಿಯನ್ನು ತಂದುಕೊಟ್ಟಿತು.

ಈಗಲೂ ಸಹ ಆಹಾರದ ಬಗ್ಗೆ ಕೊಂಚ ಆಸಕ್ತಿಯುಳ್ಳವರು ಹಿರಿಯರ ಅನುಭವವನ್ನು ಬಳಸಿಕೊಂಡು ಆಧುನಿಕ ವಿಜ್ಞಾನದ ಕೊಡುಗೆಯನ್ನು ಬೆಸೆದರೆ ಉತ್ತಮ ಆಹಾರ, ರಸ ಮತ್ತು ರುಚಿಯೂ ಮುಂಗಾರು ಮಳೆಯ ನಾದಕ್ಕೆ ಜುಗಲ್‍ಬಂದಿ ಆಗಬಹುದು.


ಇದನ್ನು ಓದಿ: ಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...