ಚುನಾವಣಾ ಆಯೋಗದ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಲಕ್ನೋ ಜಿಲ್ಲೆಯ ನ್ಯಾಯಾಲಯವು ಎಎನ್‌ಐ ಸುದ್ದಿ ಸಂಸ್ಥೆಯ ಸಂಪಾದಕಿ ಸ್ಮಿತಾ ಪ್ರಕಾಶ್ ವಿರುದ್ಧ ದೂರು ಪ್ರಕರಣ ದಾಖಲಿಸಿಕೊಂಡಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಮಾಜಿ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರು ನೀಡಿದ ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯ ದೂರು ಪ್ರಕರಣ ದಾಖಲಿಸಿಕೊಂಡಿದೆ ಎಂದು ವರದಿ ಹೇಳಿದೆ.
ದೂರು ಪ್ರಕರಣ ಎಂದರೆ ಒಂದು ಅಪರಾಧ ನಡೆದಿದೆ ಎಂದು ನ್ಯಾಯಾಲದ ಮುಂದೆ ಔಪಚಾರಿಕವಾಗಿ ಮಾಡಲಾಗುವ ಆರೋಪವಾಗಿದೆ.
ಅಮಿತಾಬ್ ಠಾಕೂರ್ ಅವರ ದೂರು ಪರಿಶೀಲಿಸಿದ ನ್ಯಾಯಾಲವು “ಈ ಹಂತದಲ್ಲಿ ಪ್ರಾದೇಶಿಕ ನ್ಯಾಯವ್ಯಾಪ್ತಿಯ ಅರ್ಹತೆಗಳು ಅಥವಾ ಸಾಕಷ್ಟು ಆಧಾರಗಳ ಹೊರತಾಗಿಯೂ, ಈ ದೂರು ಕಾರ್ಯವಿಧಾನವಾಗಿ ಕ್ರಮಬದ್ಧವಾಗಿದೆ ಎಂದು ಕಂಡುಬಂದಿದೆ. ಅಧ್ಯಾಯ XV BNSSನ ನಿಬಂಧನೆಗಳ ಅಡಿಯಲ್ಲಿ, ಈ ದೂರು ದೂರು ಪ್ರಕರಣವಾಗಿ ನೋಂದಾಯಿಸಲು ಅರ್ಹವಾಗಿದೆ” ಎಂದು ಸೆಪ್ಟೆಂಬರ್ 11, 2025ರಂದು ಹೊರಡಿಸಿದ ಆದೇಶದಲ್ಲಿ ಲಕ್ನೋದ ನ್ಯಾಯಾಂಗ ಮ್ಯಾಜಿಸ್ಟ್ರೇಟ್-III ಹೇಳಿದ್ದಾರೆ.
“ಈ ಪ್ರಕರಣವನ್ನು ದೂರು ಪ್ರಕರಣವಾಗಿ ದಾಖಲಿಸಲಿ. ದೂರುದಾರರು ಹೇಳಿಕೆಯನ್ನು ದಾಖಲಿಸಲು ದಿನಾಂಕ 26 ಸೆಪ್ಟೆಂಬರ್ 2025 ರಂದು ಹಾಜರಾಗಲಿ” ಎಂದು ನ್ಯಾಯಾಲಯ ತಿಳಿಸಿದೆ.
ದೂರಿನಲ್ಲಿರುವ ಆರೋಪಗಳು
ಬಿಎನ್‌ಎಸ್‌ಎಸ್‌ನ ಸೆಕ್ಷನ್ 210ರ ಅಡಿಯಲ್ಲಿ ನೀಡಿದ ವಿವರವಾದ ದೂರಿನಲ್ಲಿ, “ಚುನಾವಣಾ ಆಯೋಗ ತನ್ನ ವೆಬ್‌ಸೈಟ್ ಅಥವಾ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪ್ರಕಟಿಸಿರದ ವಿಷಯಗಳನ್ನು, ಚುನಾವಣಾ ಆಯೋಗ ಹೇಳಿದೆ ಎಂದು ಸ್ಮಿತಾ ಪ್ರಕಾಶ್ ನೇತೃತ್ವದ ಎಎನ್‌ಐ ಪದೇ ಪದೇ ವರದಿ ಮಾಡುತ್ತಿದೆ. ಈ ಮೂಲಕ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅಮಿತಾಬ್ ಠಾಕೂರ್ ಆರೋಪಿಸಿದ್ದಾರೆ.
ದೂರಿನಲ್ಲಿ ಆಗಸ್ಟ್ 2025ರ ಹಲವಾರು ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸುವ ಮೊದಲು ಅಥವಾ ಪ್ರಕಟಿಸಿರದ ವಿಷಯಗಳನ್ನು ಎಎನ್‌ಐ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ ಎಂದು ಹೇಳಿದ್ದಾರೆ.
“ಆಗಸ್ಟ್ 1, 2025ರಂದು ಮಧ್ಯಾಹ್ನ 15:08ಕ್ಕೆ (3.08) ರಾಹುಲ್ ಗಾಂಧಿಯ ‘ಮತಗಳ್ಳತನ’ ಆರೋಪಗಳನ್ನು ಆಕ್ಷೇಪಿಸಿ ಚುನಾವಣಾ ಆಯೋಗ ಹೇಳಿಕೆ ನೀಡಿದೆ ಎಂದು ಎಎನ್‌ಐ ಎಕ್ಸ್‌ನಲ್ಲಿ ಪೋಸ್ಟ್ ಹಾಕಿತ್ತು. ಆದರೆ, ಚುನಾವಣಾ ಆಯೋಗ ತನ್ನ ಅಧಿಕೃತ ಹೇಳಿಕೆಯನ್ನು ಹಿಂದಿಯಲ್ಲಿ ಸಂಜೆ 17:59ಕ್ಕೆ (5.59) ಇಂಗ್ಲಿಷ್‌ನಲ್ಲಿ ಸಂಜೆ 19:55ಕ್ಕೆ (9.55) ಪ್ರಕಟಿಸಿದೆ. ಅದರಲ್ಲಿ ರಾಹುಲ್ ಗಾಂಧಿಯ ಹೇಳಿಕೆಯು ‘ದಾರಿತಪ್ಪಿಸುವ, ಆಧಾರರಹಿತ ಮತ್ತು ಬೆದರಿಕೆ’ಎಂದಿದೆ. ಇಲ್ಲಿ ಚುನಾವಣಾ ಆಯೋಗ ಹೇಳಿಕೆ ನೀಡುವ ಮೊದಲೇ ಅದರ ಹೆಸರಿನಲ್ಲಿ ಎಎನ್‌ಐ ಪೋಸ್ಟ್ ಮಾಡಿತ್ತು” ಎಂದು ಠಾಕೂರ್ ವಿವರಿಸಿದ್ದಾರೆ.
ಹೀಗೆ, ಚುನಾವಣಾ ಆಯೋಗ ತನ್ನ ವೆಬ್‌ಸೈಟ್, ಸುದ್ದಿಗೋಷ್ಠಿ ಸೇರಿದಂತೆ ಎಲ್ಲೂ ಹೇಳಿರದ ಅನೇಕ ಸುದ್ದಿಗಳನ್ನು ಎಎನ್‌ಐ ಚುನಾವಣಾ ಆಯೋಗದ ಹೆಸರಿನಲ್ಲಿ ಪ್ರಕಟಿಸಿದೆ ಎಂದು ಹೇಳಿದ್ದಾರೆ.
ಈ ಆಧಾರಗಳ ಮೇಲೆ, ಎಎನ್‌ಐ ಕೃತ್ಯಗಳು ಪ್ರಾಥಮಿಕವಾಗಿ ಕಾನೂನುಬಾಹಿರ ಮತ್ತು ಕ್ರಿಮಿನಲ್ ಕೃತ್ಯಗಳಾಗಿವೆ. ವಿಶೇಷವಾಗಿ ಸೆಕ್ಷನ್ 318(2) ಬಿಎನ್ಎಸ್ ಅಡಿಯಲ್ಲಿ ಎಂದು ಅಮಿತಾಬ್ ಠಾಕೂರ್ ತಿಳಿಸಿದ್ದಾರೆ.
ಪೊಲೀಸರ ಮೂಲಕ ಎಫ್‌ಐಆರ್ ದಾಖಲಿಸಲು ಕೋರಬಹುದಿತ್ತು. ಆದರೆ, ಪೊಲೀಸರು ವಿವಿಧ ಕಾರಣಗಳಿಂದ ಪ್ರತಿವಾದಿಗಳ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದ್ದು, ಆದ್ದರಿಂದ ನ್ಯಾಯಾಲಯದ ಮುಂದೆ ನೇರ ದೂರು ಪ್ರಕರಣ ದಾಖಲಿಸುವುದು ಹೆಚ್ಚು ಸೂಕ್ತ ಎಂಬುವುದಾಗಿ ತೀರ್ಮಾನಿಸಿದೆ ಎಂದು ಠಾಕೂರ್ ಹೇಳಿದ್ದಾರೆ.
‘ಭಾರತ ದುರ್ಬಲ ಪ್ರಧಾನಿಯನ್ನು ಹೊಂದಿದೆ..’; ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ


