’ಯಾರೋ ನಮ್ಮನ್ನು ಪ್ರತಿ ನಿಮಿಷ ಗಮನಿಸ್ತಾ ಇದಾರೆ ಅನಿಸ್ತಾ ಇದೆ. ಬಯಲಲ್ಲಿ ನಿಂತಿದೀನಿ. ಎಲ್ಲೆಲ್ಲೋ ಅಡಗಿ ಕೂತ ನೂರಾರು ಸಿಸಿಟಿವಿ ಕ್ಯಾಮೆರಾಗಳು ನಮ್ಮನ್ನೇ ದಿಟ್ಟಿಸಿ ನೋಡ್ತಾ ಇವೆ… ಹೀಗೆ ಏನೇನೋ!’ ಎನ್ನುತ್ತಾ ನನಗೆ ಬೀಳುತ್ತಿದ್ದ ಕನಸನ್ನು ಗೆಳೆಯ ಪಾಷಾನಿಗೆ ವಿವರಿಸಲು ಹೋದರೆ ಅವನು ’ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗ್ಬೇಕು ಅನಿಸಿದ್ರೆ ಹೀಗ್ಯಾಕೆ ಸುತ್ತಿ ಬಳಸಿ ಹೇಳ್ತಿ ಮಾರಾಯ್ತಿ?’ ಎನ್ನುತ್ತಾ ಎಂದಿನ ಅವನ ಉಡಾಫೆಯ ದನಿಯಲ್ಲಿ ಹೇಳಿದ್ದ. ಅಮ್ಮ ಕೂಡ ಈಗೀಗ ’ಅದೇನೇ ಮಾಡ್ತಾ ಇರ್ತೀಯ ಬಚ್ಚಲಲ್ಲಿ? ಹೋದೊಳೋದೋಳು ಎರಡೆರಡು ತಾಸು ಆಚೆನೆ ಬರಲ್ಲ. ಏನು ಹುಡುಗಿನೋ ಏನೋ?’ ಎಂದಾಗಲೇ ನನ್ನ ಹೊಸ ಅಭ್ಯಾಸದ ಬಗ್ಗೆ ನಾನು ಯೋಚಿಸತೊಡಗಿದೆ. ನನಗೆ ಬೀಳತೊಡಗಿದ ಕನಸನ್ನು ಅದಕ್ಕೆ ಜೋಡಿಸಲು ತೊಡಗಿದ್ದು ಆಮೇಲೆಯೇ ಇರಬಹುದು. ಅದೊಂದು ಮಧ್ಯಾಹ್ನ ತಿರುಗುತ್ತಿರುವ ಫ್ಯಾನನ್ನೇ ದಿಟ್ಟಿಸುತ್ತಾ ಹಾಸಿಗೆಯ ಮೇಲೆ ಅಸಾಡಳವಾಗಿ ಬಿದ್ದಿರುವಾಗ ನನ್ನ ವಾಟ್ಸಪ್ಪಿಗೆ ಮದುವೆಯ ಆಮಂತ್ರಣ ಪತ್ರಿಕೆಯೊಂದು ಬಂದು ಬಿದ್ದಿತ್ತು. ಮರುಕ್ಷಣದಲ್ಲೇ ನಮ್ಮ ’ಶಾಲಾ ಗೆಳತಿಯರು’ ಗುಂಪಲ್ಲೂ ಪ್ರತ್ಯಕ್ಷವಾಯಿತು. ಮೆಸೇಜನ್ನು ಸಲ್ಮಾ ಕಳಿಸಿದ್ದಳು. ಅರೆ! ಎಂದುಕೊಂಡು ಕಾರ್ಡನ್ನ ನೋಡಿದರೆ ’ಸಲ್ಮಾ ವೆಡ್ಸ್ ಸುಲೇಮಾನ್’ ಎಂದಿತ್ತು.
ಮರುಕ್ಷಣವೇ ಅವಳ ಇನ್ಸ್ಟಾ ಪ್ರೊಫೈಲನ್ನು ತೆರೆದರೆ ಅಲ್ಲಿ ಹೆಚ್ಚೇನೂ ಅದರ ಬಗ್ಗೆ ಗುರುತಾಗಲಿಲ್ಲ. ಸಲ್ಮಾ ಶ್ರೀಮಂತರ ಮನೆಯ ಹುಡುಗಿ. ಶಾಲೆಯಲ್ಲಿ ಓದುವಾಗ ಪ್ರತಿದಿನ ಅವರ ತಂದೆ ಕಾರಿನಲ್ಲಿ ಕರೆತಂದು ಬಿಟ್ಟು ಹೋಗುತ್ತಿದ್ದರು. ಸಂಜೆ ನಾಲ್ಕೂವರೆ ಹೊತ್ತಿಗೆ ಮತ್ತೆ ಕಾರು ಶಾಲೆಯ ಮುಂದೆ ಹಾಜರಾಗುತ್ತಿತ್ತು. ಸೈಕಲ್ಲೆ ಲಕ್ಷುರಿಯಾಗಿದ್ದ ನಮಗೆ ಕಾರಿನಲ್ಲಿ ಯಾರೋ ವಿದ್ಯೆ ಕಲಿಯೋದಕ್ಕೆ ಬರುತ್ತಾರೆ ಎನ್ನುವುದೇ ಆಶ್ಚರ್ಯದ ವಿಷಯವಾಗಿತ್ತು. ಶಾಲೆಯ ಯುನಿಫಾರ್ಮಿನ ಮೇಲೆ ಹಿಜಾಬ್ ಧರಿಸಿ ಬರುತ್ತಿದ್ದಳು. ಓದಿನಲ್ಲಿ ಟಾಪರೂ ಅಲ್ಲದ ಹಿಂದೆಯೂ ಬೀಳದವಳಾಗಿದ್ದಳು. ಶಾಲೆಯಲ್ಲಿ ಮೇಷ್ಟ್ರಿಂದ ಹಿಡಿದು ಎಲ್ಲರೂ ಅವಳನ್ನು ಸುಂದರಿ ಎಂದೇ ಕರೆಯುತ್ತಿದ್ದರು. ಅದು ಆಗಾಗ ’ಏನೇ ಸುಂದ್ರಿ! ಅಷ್ಟೂ ಓದಿಕೊಂಡು ಬರಕ್ಕಾಗಲ್ವಾ?’ ಎಂದು ಬೈಯುವುದಕ್ಕೂ ಬಳಕೆಯಾಗಿಬಿಡುತ್ತಿತ್ತು. ಸಲ್ಮಾ ನಿಜಕ್ಕೂ ಸುಂದರಿಯಾಗಿದ್ದಳು. ಮಾತು ಮುತ್ತು ಉದುರಿಸಿದ ಹಾಗೆ. ನಕ್ಕಾಗ ದೇವತೆಯೇ ನಕ್ಕಂತೆನಿಸುತ್ತಿತ್ತು. ನನಗಂತೂ ಸಲ್ಮಾಳ ಬಗ್ಗೆ ಒಂದು ಸಣ್ಣ ಈರ್ಷೆ ಇತ್ತು. ಒಂದು ಅವಳು ಶ್ರೀಮಂತೆ ಅನ್ನುವ ಕಾರಣಕ್ಕೆ ಮತ್ತೊಂದು ಅವಳು ಸುಂದರಿ ಅನ್ನುವ ಕಾರಣಕ್ಕೆ! ನನ್ನ ಹೊಟ್ಟೆಕಿಚ್ಚಿನಿಂದ
ನಾನು ಆಮೇಲೆ ಹೊರಬಂದೆ. ಕ್ಷಮಿಸಿ. ಹೊರಬರಲು ಪ್ರಯತ್ನಿಸುತ್ತಿರುವೆ ಅನ್ನೋದೇ ಹೆಚ್ಚು ಪ್ರಾಮಾಣಿಕ.
ಅದಕ್ಕೊಂದು ಕಾರಣವಿದೆ. ನನ್ನ ಪ್ರೇಮಿ ಪಾಷಾ ಈ ತಲೆಮಾರಿನ ಭರವಸೆಯ ಯುವಕವಿ ಎಂದೇ ಹೆಸರು ಮಾಡಿದ್ದಾನೆ. ಅವನನ್ನು ಕೆಲವು ವಿಮರ್ಶಕರು ರಾಜಕೀಯ ಪ್ರೇಮಕವಿ ಎಂದು ಹೊಗಳಿದ್ದಾರೆ. ನಾನವನನ್ನ ಪ್ರೀತಿಸಲು ಶುರುಮಾಡಿದಾಗ ಕ್ರಾಂತಿಯೇ ತಾನಾಗಿ ಪ್ರಜ್ವಲಿಸುತ್ತಿದ್ದ. ನಾನಾಗ ಏನನ್ನೂ ಬರೆಯುತ್ತಿರಲಿಲ್ಲ. ಬರೆದು ಸುಮ್ಮನೆ ಯಾರಿಗೂ ತೋರಿಸದೆ ಇಟ್ಟುಕೊಳ್ಳುತ್ತಿದ್ದೆ. ಇತ್ತೀಚಿಗೆ ಮತ್ತೊಬ್ಬ ಸ್ನೇಹಿತ ಕೃಷ್ಣನ ಬ್ಲಾಗಿಗೆ ’ಸಾಗರಿಕಾಲಂ’ ಅನ್ನೋ ಹೆಸರಿನಲ್ಲಿ ಅಂಕಣ ಬರೆಯತೊಡಗಿದೆ. ಕೆಳಗೆ ’ಸಾಗರಿಕಾ ಮಾಧವ್’ ಎಂದು ಹೆಸರು ಕೊಟ್ಟಿದ್ದೆ. ಪಾಷಾಪ್ರೇಮಿ ’ಏನಮ್ಮಾ? ಯಾರದು ಮಾಧವ್?’ ಎಂದು ಅಂಜುತ್ತಾ, ಆದರೆ ಆ ಅಂಜಿಕೆಯನ್ನು ತೋರಗೊಡದ ಹಾಗೆ ಪೆದ್ದುಪೆದ್ದಾಗಿ ನಗುತ್ತಾ ಕೇಳಿದಾಗ ’ಏನಿಲ್ಲ ರಾಜ್ಕುಮಾರ. ಅಕ್ಕಮಹಾದೇವಿಗೆ ಹೇಗೆ ಮಲ್ಲಿಕಾರ್ಜುನನೋ ನನಗೆ ಹಾಗೆ ಮಾಧವ! ಮಾಧವ. ಆತ್ಮಸಖ’ ಎಂದು ಕಾವ್ಯಾತ್ಮಕವಾಗಿ ಹೇಳಿದ್ದೆ. ಅದಕ್ಕವನ ಪ್ರತಿಕ್ರಿಯೆ ಇವಳ್ಯಾವಳೋ ಹುಚ್ಚಿ ಅನ್ನೋದಕ್ಕಿಂತ ಅಬ್ಬಾ ನಾನವನನ್ನ ತೊರೆಯಲಿಲ್ಲ ಎಂಬ ಸಮಾಧಾನವೇ ಎದ್ದು ಕಾಣಿಸುತ್ತಿತ್ತು. ಆಗ ನನಗವನು ಹೆಚ್ಚು ಮನುಷ್ಯನಾಗಿ ಕಾಣಿಸಿದ್ದ. ಪ್ರೇಮಿ ಪಾಷಾ ಆಗಿ ಕಾಣಿಸಿದ್ದ.
ಮತ್ತೆ ಮುಖ್ಯಕಥೆಗೆ ಬರೋಣ. ಎಲ್ಲಿಗೆ ನಿಲ್ಲಿಸಿದ್ದೆ? ಹಾ. ಆ ಆಮಂತ್ರಣ ಪತ್ರಿಕೆ ಶಾಲಾ ಗುಂಪಿನಲ್ಲಿ ನೋಡಿದ ಮೇಲೆ ನಾನ್ಯಾಕೆ ಇನ್ನೂ ಆ ಶಾಲಾ ಗುಂಪಿನಿಂದ ಹೊರಬರಲಿಲ್ಲ ಎಂತಲೇ ಅನಿಸುತ್ತಿತ್ತು. ಎಲ್ಲರೂ ಬೇರೆಬೇರೆ ಕಾರಣಗಳಿಂದ ಹೊರಗಡೆ ಹೋಗಿ ಉಳಿದಿದ್ದು ಮೂವರೇ ಜನ. ಅಷ್ಟು ಹೊತ್ತಿಗೆ ಸಲ್ಮಾ ಕರೆಮಾಡಿ ಖುದ್ದಾಗಿ ಬಂದು ಕರೆಯಲು ಆಗುತ್ತಿಲ್ಲವೆಂದಾಗಿಯೂ, ಏನೂ ಅಂದುಕೊಳ್ಳದೆ ಬರಲೇಬೇಕು ಎಂದದ್ದಲ್ಲದೆ, ಕೊನೆಗೆ ದಿವ್ಯಾ ಕೂಡ ಬರುತ್ತಾಳೆ ಎನ್ನುವ ಸಾಲನ್ನು ಸೇರಿಸುವುದನ್ನ ಮರೆಯಲಿಲ್ಲ. ಆ ಶಾಲಾ ವಾಟ್ಸಾಪ್ ಗುಂಪಿನಲ್ಲಿ ಉಳಿದಿದ್ದು ನಾನು, ದಿವ್ಯಾ ಮತ್ತು ಸಲ್ಮಾ. ದಿವ್ಯಾ ವಾಟ್ಸಾಪ್ ಗುಂಪಿನಲ್ಲೇ ತಾನು ಮದುವೆಗೆ ಬರ್ತೀನಿ ಅಂತ ಹೇಳಬಹುದಿತ್ತು. ನಾವೇಕೆ ನಾವು ಆಡಬೇಕಾದ ಮಾತುಗಳನ್ನು ನಮ್ಮಲ್ಲಿಯೇ ಉಳಿಸಿಕೊಂಡುಬಿಡುತ್ತೇವೆ? ದಿವ್ಯಾ ಇದ್ದದ್ದೇ ಹಾಗೆ, ಎಷ್ಟೇ ದುಃಖವಿದ್ದರೂ ತನ್ನ ಹೂನಗೆಯ ಮುಖವಾಡದಿಂದ ಬಚ್ಚಿಟ್ಟುಕೊಂಡುಬಿಡುತ್ತಿದ್ದವಳು!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದಿವ್ಯಾ ರಾಜಸ್ತಾನದವಳು. ಅವರ ತಂದೆ ಕೂಡ ಉಳಿದೆಲ್ಲಾ ಮಾರ್ವಾಡಿಗಳಂತೆ ’ಒಂದು ಅಂಗಡಿಯಿಂದ ಶುರುಮಾಡಿ…’ ಎನ್ನುವ ಸಾಲಿನಿಂದ ಪ್ರೇರಿತರಾಗಿ ಬೆಂಗಳೂರಿಗೆ ಹೊರಟುಬಂದು ಅಂಗಡಿ ತೆರೆದಿದ್ದರು. ಆದರೆ
ವ್ಯಾಪಾರ ಅಷ್ಟಕ್ಕಷ್ಟೇ ಎನ್ನುವಂತೆ ಇದ್ದದ್ದರಿಂದ ಅವರು ನಂಬಿದ್ದ ಸಾಲನ್ನು ಪೂರ್ತಿ ಮಾಡಲಾಗದೆ ಒದ್ದಾಡುತ್ತಿದ್ದರು. ದಿವ್ಯಾ ಮೂಗುತಿ ಸುಂದರಿ. ಅವಳು ನೃತ್ಯ ಮಾಡುತ್ತಿದ್ದರೆ ಇಡೀ ಶಾಲೆಗೆ ಶಾಲೆಯೇ ನಿಬ್ಬೆರಗಾಗಿ ನೋಡುತ್ತಿತ್ತು. ಅವಳು ಯಾವುದೇ ನೃತ್ಯಶಾಲೆಗೆ ಹೋಗಿ ಕಲಿತವಳಲ್ಲ. ಏಕಲವ್ಯ ವಿದ್ಯಾ ವಿಧಾನದಂತೆ ಟಿವಿ ನೋಡಿ ಕುಣಿಯುತ್ತಿದ್ದಳು. ಶಾಲಾ ವಾರ್ಷಿಕೋತ್ಸವ ಅಂದರೆ ನಮ್ಮಿಬ್ಬರ ಡ್ಯಾನ್ಸ್ ಇದ್ದೆ ಇರುತ್ತಿತ್ತು. ಅದೆಷ್ಟು ಹಾಡುಗಳಿಗೆ ಕುಣಿದೆವು. ರಿಹರ್ಸಲ್ಸಿಗೆ ಅಂತ ಸಂಜೆ ಅವರ ಮನೆಗೆ ಹೋದಾಗಲೆಲ್ಲ ಅವರಮ್ಮ ಮಧ್ಯೆಮಧ್ಯೆ ತಿಂಡಿ ಕಾಫಿ ಅಂತ ಅದೇನೆಲ್ಲ ಆತಿಥ್ಯ ಮಾಡುತ್ತಿದ್ದರು. ಆದರೆ ನನ್ನಮ್ಮ ಮಾತ್ರ ’ನಮ್ಮ ಕಾಲದಲ್ಲಿ ಕೋಲಾಟ ಏನು, ಜನಪದ ಗೀತೆ ಏನು, ಅದೆಲ್ಲಾ ಸಾಯ್ಲಿ. ಹೀರೋಯಿನ್ ಎಂಟ್ರಿಗೆ ಅಂತಾನೆ ಸಾಂಗ್ ಇರ್ತಾ ಇತ್ತು. ಈಗೇನೋಪಾ ನಿಮ್ಮ ಡಾನ್ಸ್ ನೋಡಕೆ ಚೆನ್ನಾಗಿರತ್ತೆ. ಆದ್ರೂ ಯಾಕೋ ಸಮಾಧಾನ ಆಗಲ್ಲ’ ಅಂತ ಮೂಗುಮುರಿದಿದ್ದರು. ಅಪ್ಪ ಎಂದಿನಂತೆ ಮೌನ ತಾಳುತ್ತಿದ್ದರು. ಗೆಲ್ಲುವ ಪಕ್ಷದ ಜೊತೆಗೆ ಗುರುತಿಸಿಕೊಳ್ಳುವ ಜಾಣ ಮನುಷ್ಯರ ವರ್ಗಕ್ಕೆ ಅಪ್ಪ ಸೇರುತ್ತಾರಾದ್ದರಿಂದ ಅವರ ಮೌನವನ್ನು ಅಮ್ಮ ನಿರ್ಲಕ್ಷಿಸುವುದನ್ನು ನಿಧಾನವಾಗಿ ಕಾರ್ಯರೂಪಕ್ಕೆ ತರುತ್ತಿದ್ದಳೆಂದು ನನಗೀಗ ಅನಿಸುತ್ತದೆ. ಅಮ್ಮ ಯಾಕೆ ಎಲ್ಲವನ್ನು ನುಂಗಿಕೊಂಡಳು? ’ಒಂದಾದ್ರೂ ಮಾತಾಡಿ ಸಾಯಿ. ಈ ಜಾಣಮೌನ ಎಲ್ಲಾ ಸಮಯದಲ್ಲೂ ಉಪಯೋಗಕ್ಕೆ ಬರಲ್ಲ. ಒಮ್ಮೊಮ್ಮೆ ಒಂದು ಕಡೆ ನಿಂತುಬಿಡಬೇಕು. ನನ್ನ ಕರ್ಮ!’ ಎಂದು ಅವಳದೇ ಬೈಯುವ ಶೈಲಿಯಲ್ಲಿ ಯಾಕೆ ಹೇಳಲಿಲ್ಲ?
ಸ್ಲಾಮ್ ಬುಕ್ಕಿನಲ್ಲಿ ಡ್ರೀಮ್ ಕಾಲಮ್ಮಿನ ಮುಂದೆ ದಿವ್ಯಾ ಡ್ಯಾನ್ಸರ್ ಎಂದು ಬರೆದಿದ್ದಳು, ಸಲ್ಮಾ ಎಂಜಿನೀರ್ ಅಂತ ಬರೆದಿದ್ದಳು. ನನಗೆ ಏನಾಗಬೇಕೆಂದೇ ಗೊತ್ತಿರಲಿಲ್ಲ. ಸುಮ್ಮನೆ ಖಾಲಿ ಬಿಡಬಾರದೆಂದು ಲೆಕ್ಚರರ್ ಎಂದು ಬರೆದಿದ್ದೆ. ಆಮೇಲೆ ಸಮಯ ಹೇಗೆ ಹೋಯಿತೋ ತಿಳಿಯಲೇ ಇಲ್ಲ. ಆಗಾಗ ದಿವ್ಯಾಳ ಟಿಕ್‌ಟಾಕ್ ವಿಡಿಯೋಗಳನ್ನು ನೋಡೋದರ ಜೊತೆಗೆ ಅವಳ ಇನ್ಸ್ಟಾ ರೀಲುಗಳನ್ನು ಗಮನಿಸುತ್ತಿದ್ದೆ. ಆದರೆ
ಸಲ್ಮಾಳ ಸುದ್ದಿಯೇ ಇಲ್ಲ. ಅವಳ ಇನ್ಸ್ಟಾ ಒಂದು ಹಂತಕ್ಕೆ ಬಂದ್ ಆಗಿಬಿಟ್ಟಿತ್ತು. ಹಾಗೆ ನೋಡಿದರೆ ನಾನು ದಿವ್ಯಾ ಸಲ್ಮಾ ಜೀವದ ಗೆಳತಿಯರೇನೂ ಅಲ್ಲ. ಹಾಗಿದ್ದರೂ ನಾವು ಒಟ್ಟಿಗೆ ಗುಡಿಸೆದ್ದು ಹೋಗಲಿಲ್ಲ. ನಮ್ಮನ್ನು ಒಬ್ಬರ ಜೀವನದ ಬಗ್ಗೆ ಮತ್ತೊಬ್ಬರು ಕುತೂಹಲಿಗಳನ್ನಾಗಿ ಮಾಡಿದ್ದು ಯಾವುದು? ಹೇಳದೆ ಉಳಿಸಿಕೊಂಡ ಮಾತುಗಳೇ?!
ದಿವ್ಯಾ ಶಾಲೆಯ ನಂತರ ಓದು ಬಿಟ್ಟುಬಿಟ್ಟಳು. ಕ್ಷಮಿಸಿ, ಬಿಡಿಸಿಬಿಟ್ಟರು. ಅದಕ್ಕೆ ಮುಖ್ಯ ಕಾರಣ ಅವಳು ಶಾಲೆಯಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದದ್ದು! ನಾನು ಬಲೆ ಎಂದೆನೆ? ಪ್ರೀತಿಯನ್ನು ಬಲೆ ಎಂದವರಾರು? ಅವಳ ಅಣ್ಣ ಸಿನಿಮಾದಲ್ಲಿ ತೋರಿಸುವ ಥೇಟ್ ಅಣ್ಣ. ಪ್ರೀತಿ ಮತ್ತು ಕುಟುಂಬದ ಘನತೆಯ ಹೆಸರು ಹೇಳಿಕೊಂಡು ಕಾಲೇಜು ಬಿಡಿಸಿದರೆ? ನನಗೆ ನಾನು ತರಗತಿಯಲ್ಲಿ ಪಾಠ ಕೇಳುವಾಗ ದಿವ್ಯಾ ಅಚಾನಕ್ಕಾಗಿ ನೆನಪಾಗಿ ಬಿಡುತ್ತಿದ್ದಳು. ’ದಿವ್ಯಾ ಈಗೇನು ಮಾಡುತ್ತಿರಬಹುದು?’ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ಬಂಡೆ ಒರೆಸುತ್ತಿರಬಹುದು. ಬೆಳಿಗ್ಗೆಯ ತಿಂಡಿಯ ನಂತರದ ಪಾತ್ರೆಗಳನ್ನು ತೊಳೆಯುತ್ತಿರಬಹುದು. ಅರೆ! ನಾನೇಕೆ ಬರಿ ಕಷ್ಟದ್ದನ್ನೇ ಊಹಿಸುತ್ತಿರುವೆ? ನಮ್ಮ ದಿವ್ಯಾ ಜಾಣೆ. ಆಗಾಗ ಕೆಲಸ ಕದ್ದು ಅವಳಿಷ್ಟದ ಧಾರವಾಹಿ ನೋಡುತ್ತಾಳೆ. ಅವರಮ್ಮ ಅದೆಷ್ಟೇ ಬೈದರೂ ಡೋಂಟ್ ಕೇರ್ ಮಾಡದೆ ಮಧ್ಯಾಹ್ನ ಗಡದ್ದಾಗಿ ನಿದ್ರೆ ತೆಗೆಯುತ್ತಾಳೆ. ಅವರಮ್ಮ ನಿದ್ರೆಯಿಂದ ಎಬ್ಬಿಸದಿದ್ದರೂ ಬೈಯುವುದನ್ನೂ ಬಿಡಲಾರರು. ಅದೆಷ್ಟು ದಿನಗಳು ಉರುಳಿದರೂ ದಿವ್ಯಾಳ ಬಗೆಗಿನ ನನ್ನ ಕಲ್ಪನೆ ಎಲ್ಲಿಯೂ ಚಲಿಸದ ಬಂಡೆಗಲ್ಲಿನಂತೆ ಅಲ್ಲಿಯೇ ನಿಂತಿತ್ತು.
***
ಸಲ್ಮಾ ನೆನಪು ಮಾಡಿಕೊಂಡು ಫೋನ್ ಮಾಡಿದ್ದು ನನಗೆ ಖುಷಿಯಾಯ್ತು. ನಾನು ನನ್ನ ವಾರಗೆಯವರ ಒಂದೂ ಮದುವೆಗೆ ಹೋದವಳಲ್ಲ. ಹಾಗಾಗಿ ಕೆಲವರು ನನ್ನನ್ನು ಅವರ ಮದುವೆಗೆ ಕರೆಯುವುದನ್ನೇ ಬಿಟ್ಟಿದ್ದರು. ನನಗೂ ಇತ್ತೀಚಿನ ಕೆಲವು ದಿನಗಳಿಂದ ಬೀಳುತ್ತಿದ್ದ ಕನಸಿನ ಕಾಟದಿಂದ ಪಾರಾಗಬೇಕಿತ್ತು. ದಿವ್ಯಾ ಕೂಡ ಬರುತ್ತಿದ್ದಳಲ್ಲ! ಹೊರಟೆ.
***
ನಾನು ಹೋಗುವಷ್ಟರಲ್ಲಿ ದಿವ್ಯಾ ಅಲ್ಲಿದ್ದಳು. ನೋಡಿದೊಡನೆಯೇ ಎಂದಿನ ಉತ್ಸಾಹದಲ್ಲಿ ಕುಣಿದು ಓಡಿ ಬಂದು ತಬ್ಬಿಕೊಂಡಳು. ಸಲ್ಮಾ ಎಂದಿನಂತೆ ಘನ ಗಾಂಭೀರ್ಯದಿಂದ ಬಂದು ಅಪ್ಪಿಕೊಂಡು ಥ್ಯಾಂಕ್ಸ್ ಕಣೆ ಎಂದಿದ್ದಳು. ’ಏನೇ ಎಲ್ಲರನ್ನು ಕರೆದಿರ್ತಿ ಅಂದ್ರೆ ಯಾರೂ ಇಲ್ವಲ್ಲೇ?’ ಎಂದು ಕೇಳಿದ್ದಕ್ಕೆ ’ಅಯ್ಯೋ ನಮ್ಮ ಮದುವೆಗೆಲ್ಲಾ ಯಾರೇ ಬರ್ತಾರೆ?’ ಅಂದಿದ್ದಳು. ಮೆಹಂದಿ ಹಾಕಲಿಕ್ಕೆಂದೇ ಮಿನಾಜ್ ಮತ್ತು ಸುರಯ್ಯಾ ಎನ್ನುವ ಇಬ್ಬರು ಪುಟ್ಟ ಹೈಸ್ಕೂಲು ಓದುವ ಹುಡುಗಿಯರನ್ನು ಬರಹೇಳಿದ್ದಳು. ಅಂಗೈಯಲ್ಲಿ ಮೇಲೆ ಹಸಿರು ಬಣ್ಣದ ಚಿತ್ತಾರ ಮೂಡತೊಡಗಿತು. ಮನೆಯ ಮುಂದೆ ರಂಗೋಲಿ ಹಾಕಲೂ ಒದ್ದಾಡುವ ನನಗೆ ಈ ಇಬ್ಬರು ಪುಟ್ಟ ದೇವತೆಯರು ಕೈಯಲ್ಲಿ ಚಿತ್ತಾರ ಬಿಡಿಸುತ್ತಿದ್ದಾರೆ. ಮರುದಿನ ಅಂಗೈ ಮೇಲೆ ಕೆಂಪು ಕೆಂಪು ಚಿತ್ತಾರ ಮೂಡಲಿದೆ. ’ಮೆಹಂದಿಯನ್ನೆಲ್ಲ ಯಾವಾಗ್ ಕಲಿತೆರೆ ಹುಡ್ಗೀರಾ?’ ಎಂದು ನಾನು ಆಶ್ಚರ್ಯದಿಂದ ಕೇಳಿದಾಗ ಮಿನಾಜ್ ’ನನ್ನಣ್ಣ ನನಗಿಂತ ತುಂಬಾ ಚೆನ್ನಾಗಿ ಬಿಡಿಸ್ತಾನೆ ಅಪಾ. ಮಲ್ಲೇಶ್ವರಂಲ್ಲಿ ಮೆಹಂದಿ ಹಾಕ್ತಾ’ ಎಂದಳು. ಮೊದ್ಲೇ ಹೇಳಿದ್ರೆ ಅವನನ್ನೇ ಕರೆಸ್ತೀದ್ವಲ್ಲೆ ಮಾರಾಯ್ತಿ ಎಂದೆ. ಸಲ್ಮಾ ಶುಶು ಎನ್ನುತ್ತಾ ಸುಮ್ಮನಿರುವಂತೆ ಸನ್ನೆ ಮಾಡಿದಳು. ’ದಿವ್ಯಾ ನಿಂಗೆ ಬರತ್ತಾ ಮೆಹಂದಿ ಹಾಕಕೆ?’ ಎಂದು ಕಿಚಾಯಿಸುವ ಧಾಟಿಯಲ್ಲಿ ಕೇಳಿದೆನಾದರೂ ಮನೆಯಲ್ಲಿಯೇ ಇರುತ್ತೀಯಲ್ಲ, ಅದನ್ನೂ ಕಲಿತಿಲ್ಲವಾ? ಎನ್ನುವ ಭಾವ ಒಳಗಿದ್ದದ್ದು ಅವಳಿಗೆ ಗೊತ್ತಾಗಿಬಿಟ್ಟಿತೇ ಅಂದುಕೊಳ್ಳುವ ಹೊತ್ತಿಗೆ ’ಅಯ್ಯೋ, ಈ ಅಡುಗೆ ಕೆಲಸ, ಮನೆ ಕೆಲಸ ಬೋರು. ಇದನ್ನೆಲ್ಲಾ ಯಾವಳ್ ಕಲಿತಾಳೆ’ ಎಂದೆನ್ನುವುದನ್ನು ದಾಟಿಸುವ ಹಾಗೆ ಕೈಯನ್ನು ಗೊತ್ತಿಲ್ಲ ಎಂದು ಮುದ್ರೆ ಮಾಡಿ ತೋರಿಸಿದಳು. ಅದೇ ಹೊತ್ತಿಗೆ ಹಾಲಿನಲ್ಲಿದ್ದ ಟಿವಿಯಲ್ಲಿ ಹಿಜಾಬು ಹಾಕಿದ ಹೆಣ್ಣು ಮಕ್ಕಳಿಗೆ ಶಾಲೆಯ ಗೇಟಿನ
ಆಚೆಯೇ ತಡೆದ ಘಟನೆ ಬಿತ್ತನೆಯಾಗುತ್ತಿತ್ತು. ಸಲ್ಮಾಳ ಅಬ್ಬು ಬಂದು ಥಟ್ಟನೆ ಟಿವಿ ಆಫ್ ಮಾಡಿದರು. ಟಿವಿ ಆಫ್ ಮಾಡಿದ ಮೇಲೆ ಒಂದುಕ್ಷಣ ಸಂತಾಪ ಸಭೆಯ ಮೌನವಿತ್ತು ಮನೆಯಲ್ಲಿ. ಮಿನಾಜ್ ಮತ್ತು ಸುರಯ್ಯಾ ತಮ್ಮ ಪಾಡಿಗೆ ತಾವು ಚಿತ್ತಾರ ಬಿಡಿಸುತ್ತಿದ್ದರು.
ಮೆಹಂದಿಯ ಕೈ ಒಣಗಿದ ಮೇಲೆ ಬಾಲ್ಕನಿಯಲ್ಲಿ ಮೂವರು ಹೆಣ್ಣುಮಕ್ಕಳು ಗಾಳಿಸೇವನೆಗೆ ನಿಂತಿದ್ದೆವು. ಆಕಾಶದಲ್ಲಿ ಚಂದಿರ ಇದ್ದ. ತುಂಬು ಬೆಳದಿಂಗಳು ಭೂಮಿ ಮೇಲೆ ಚೆಲ್ಲಿತ್ತು. ಸಲ್ಮಾಳ ಮನೆಯ ಆಂಗಣದಲ್ಲಿದ್ದ ತೆಂಗಿನಗರಿಗಳು ಮಿಸುಕಾಡುತ್ತಿದ್ದವು. ಕಾಫಿ ಮಗ್ಗುಗಳನ್ನು ಹಿಡಿದು ಮೂವರು ಬೀಸುತ್ತಿದ್ದ ತಂಗಾಳಿಗೆ ಮುಖವೊಡ್ಡಿ ನಿಂತಿದ್ದೆವು. ಸಲ್ಮಾಳ ಕೂದಲು ತಂಗಾಳಿಯ ಸ್ಪರ್ಶಕ್ಕೆ ಹಾತೊರೆಯುವ ಪ್ರೇಮಿಯಂತೆ ಪ್ರತಿಸ್ಪಂದಿಸುತ್ತಿತ್ತು. ಕೊನೆಗೂ ನಮ್ಮೆಲ್ಲರಿಗೆ ಚಂದಿರ ಅಲ್ಲೇ ದೂರಾನೇ ಉಳಿದುಕೊಂಡುಬಿಟ್ಟ ಅಲ್ವಾ? ಸಲ್ಮಾ ಮತ್ತು ದಿವ್ಯಾ ಮಾತಾಡಲಿಲ್ಲ. ಅವರಿಬ್ಬರೂ ಬಾಲ್ಕನಿಯಿಂದ ಕಾಣಿಸುತ್ತಿದ್ದ ಅವಳ ಮನೆಯ ಗೇಟನ್ನೇ ದಿಟ್ಟಿಸುತ್ತಿದ್ದರು. ನಾನೂ ಆಕಡೆಗೊಮ್ಮೆ ನೋಡಿದೆ. ಯಾರೋ ನಮ್ಮನ್ನು ಉಸಿರು ಬಿಗಿಹಿಡಿಯುವಷ್ಟು ಕತ್ತು ಹಿಸುಕುತ್ತಿದ್ದಾರೆ. ನಮ್ಮ ಪಾಲಿನ ಎಲ್ಲಾ ಬಾಗಿಲುಗಳನ್ನು ಮುಚ್ಚಿದ ಹಾಗೆ ಮಾಡುತ್ತಿದ್ದಾರೆ. ಮತ್ಯಾರೋ ನಮ್ಮನ್ನು ಪ್ರತಿಕ್ಷಣ ಗಮನಿಸುತ್ತಿದ್ದಾರೆ. ನಾವು ಎಲ್ಲಿ ಹೇಗೆ ಯಾಕೆ ನಿಂತುಕೊಳ್ಳಬೇಕು? ಏನು ತೊಟ್ಟುಕೊಳ್ಳಬೇಕು ಎಂದು ಅವರೇ ನಿರ್ಧಾರ ಮಾಡುತ್ತಿದ್ದಾರೆ ಎಂದು ಮತ್ತೆಮತ್ತೆ ಅನಿಸಲು ಶುರುವಾಯಿತು. ದಿವ್ಯಾಳ ಬದುಕಲ್ಲಿ ಮಾಡಿದ ಆ ಪ್ರೀತಿ ಅವಳನ್ನು ಮುಂದಕ್ಕೆ ಕರೆದೊಯ್ಯಲಿಲ್ಲ. ನಾನೂ ಬರೆಯಬಲ್ಲೆ ಎಂಬ ಕಾರಣವೇ ನನ್ನ ಮತ್ತು ಪಾಷಾನ ನಡುವೆ ಏನೋ ಒಂದು ಸಣ್ಣ ಬಿರುಕು ತಂದಿದೆ. ಯಾಕವನಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಸಲ್ಮಾಳಿಗೆ ಮದುವೆಯಾದ ಮೇಲೆ ಗೃಹಿಣಿಯಾಗಿದ್ದರೆ ಸಾಕು ಅಂತ ಹೇಳಿದ್ದಾರಂತೆ. ಅವಳು ಮದುವೆಯಾದ ಮೇಲೆ ಬೆಹರೈನ್ನಿಗೆ ವಿಮಾನದಲ್ಲಿ ಹಾರುತ್ತಾಳೆ. ಮೂವರಿಗೂ ಯಾವುದೋ ಹೇಳಿಕೊಳ್ಳಲಾಗದ ಹೇಳಿಕೊಂಡರೆ ಅದೆಲ್ಲಿ ಒಡೆದುಹೋಗಿಬಿಡುತ್ತದೋ, ಅಳ್ಳಕವಾಗಿಬಿಡುತ್ತದೋ ಎಂಬ ಆಳದಲ್ಲಿರುವ ಭಯ, ಮಾತುಗಳು ಬಾಯಿಗೆ ಬರದೇ ಕಣ್ಣಂಚಲ್ಲಿ ನೀರಾಗಿ ನಿಲ್ಲುತ್ತವೆ.
ಸಲ್ಮಾ ತಂಗಾಳಿಯಲ್ಲಿ ತೇಲುವ ವಿಷಾದದ ಪ್ರಮಾಣವನ್ನು ತಿಳಿಗೊಳಿಸಲು ಅವಳ ಫೋನಿಂದ ಹಾಡುಹಚ್ಚಿಟ್ಟಳು. ’ಕೋಯಿ ಶಾಮ್ ಬುಲಾಯೆ, ಕೋಯಿ ದಾಮ್ ಲಗಾಯೇ, ಮೈ ಭೀ ಉಪರ್ ಸೆ ಹಸ್ತಿ, ಪರ್ ಅಂದರ್ ಸೆ ಹಯ್ಯ್, ಕ್ಯೂ ದರ್ದ್ ಚುಪಾಕೆ ಬೈಠಿ ಹೈ, ಕ್ಯೂ ತೂ ಮುಜಸೇ ಕೆಹ್ತಿ ಹೈ’ ಎಂದು ಹಾಡು ಹಾಡುವಾಗ ನಮ್ಮ ಕಣ್ಣುಗಳು ತುಂಬಿದ್ದವು. ವಿಷಾದದಲ್ಲಿ ವಿಷಾದದ ಧ್ವನಿಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ನಾವೆಲ್ಲರೂ ನಮ್ಮದೇ ಲೋಕದಲ್ಲಿ ಮುಳುಗಿಹೋಗಿರುವಾಗ ದಿವ್ಯಾ ಹೆಪ್ಪುಗಟ್ಟಿದ ದುಗುಡವನ್ನು ತಿಳಿಗೊಳಿಸಿಕೊಳ್ಳುವುದಕ್ಕಾಗಿ ’ಏ ಆವೆ ಆವೆ. ಡಾನ್ಸ್ ಕರಾವೇ. ಇನ್ಸ್ಟಾ ರೀಲ್ ಬನಾವೆ!’ ಎಂದು ಅವಳ ಫೋನನ್ನು ತೆರೆದಳು. ಸಲ್ಮಾಳಿಗೆ ಇದ್ದಕ್ಕಿದ್ದಂತೆ ಅವಳು ಹಿಜಾಬ್ ಮರೆತುಬಿಟ್ಟಿದ್ದಾಳೆ ಎಂಬುದು ಹೊಳೆದು ತಕ್ಷಣ ಕೋಣೆಗೆ ಓಡಿ ವೇಲನ್ನು ತಲೆಯ ಮೇಲೆ ಹಾಕಿಕೊಂಡು ಬಂದಳು. ಮೂವರೂ ಸೇರಿ ’ಪರಮ ಸುಂದರಿ’ ಹಾಡಿಗೆ ನಾಲ್ಕು ಹೆಜ್ಜೆ ಹಾಕಿದೆವು. ಒಂದು ಕ್ಷಣಕ್ಕೆ ಹಗುರಾದೆವು. ಅದೇ ಹೊತ್ತಿಗೆ ಸಲ್ಮಾಳ ಅಮ್ಮ ರಜಿಯಾ ಬೇಗಂ ಬಂದು ಬರ್ರೆ ಸುಂದ್ರಿಯರಾ. ರಾತ್ರಿ ಎಷ್ಟೊತ್ತಾಯ್ತು? ಮಲಗಲ್ವಾ ಎಂದು ಬಾಗಿಲು ತೆರೆದು ನಿಂತಳು. ನಗು ಇನ್ನೂ ಮಾಸಿರಲಿಲ್ಲ. ಆಡುವ ಮಾತು ಎದೆಯೊಳಗೇ ಉಳಿದಿತ್ತು. ಒಮ್ಮೆ ಹಿಂದಿರುಗಿ ನೋಡಿದೆ. ಮನೆಯ ದೊಡ್ಡ ಗೇಟಿನ ಬಳಿ ಯಾವುದೋ ಆಕೃತಿ ನಿಂತಂತೆ ಭಾಸವಾಯಿತು.

ದಾದಾಪೀರ್ ಜೈಮನ್
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರಾದ ದಾದಾಪೀರ್ ಜೈಮನ್ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಕತೆ ಮತ್ತು ಕಾವ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಹೊಸ ತಲೆಮಾರಿನ ಲೇಖಕರು. ಇತ್ತೀಚಿನ ಹಲವು ಕಥಾ ಸ್ಪರ್ಧೆಗಳಲ್ಲಿ ಇವರ ಕತೆಗಳು ಗಮನಸೆಳೆದಿವೆ. ನೀಲಕುರಿಂಜಿ ಇವರ ಚೊಚ್ಚಲ ಕಥಾಸಂಕಲನ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಹೂಲಿಯೋ ಕೋರ್ಟಾಜ್ಹಾರ್‌ನ ನಾಲ್ಕು ಅತಿ ಸಣ್ಣ ಕಥೆಗಳು


