Homeಅಂಕಣಗಳುಮಾತು ಮರೆತ ಭಾರತ-27; ಲಾಕ್‌ಡೌನ್ ಫೈಲ್ಸ್: ನೀರು ಕೇಳಿದ ದಲಿತ ಯುವಕನ ಉಸಿರು ನಿಲ್ಲಿಸಿದರು

ಮಾತು ಮರೆತ ಭಾರತ-27; ಲಾಕ್‌ಡೌನ್ ಫೈಲ್ಸ್: ನೀರು ಕೇಳಿದ ದಲಿತ ಯುವಕನ ಉಸಿರು ನಿಲ್ಲಿಸಿದರು

- Advertisement -
- Advertisement -

ಕೋವಿಡ್ ಇಡೀ ಜಗತ್ತನ್ನೇ ಅಲುಗಾಡಿಸಿಬಿಟ್ಟಿತು. ಅದರಲ್ಲೂ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದ ಬಡವರನ್ನು ಪಾತಾಳಕ್ಕೆ ತಳ್ಳಿಬಿಟ್ಟಿತು. (ಇದೇ ಸಮಯದಲ್ಲಿ ಅಂಬಾನಿ ಅದಾನಿಗಳು ತಮ್ಮ ಸಂಪತ್ತನ್ನು ನೂರ್ಪಟ್ಟು ಹೆಚ್ಚಿಸಿಕೊಂಡಿದ್ದಾರೆ). 2020-21ರ ಎರಡು ಕೋವಿಡ್ ಅಲೆಗಳೂ ಸಹ ಅತಿಕೆಟ್ಟ ಸ್ವಪ್ನವಾಗಿ ಪರಿಣಮಿಸಿದವು. ಹೆಚ್ಚುವರಿ ಸಂಪಾದನೆ ಮಾಡಿಟ್ಟುಕೊಂಡಿದ್ದ ಶ್ರೀಮಂತರು ಮತ್ತು ಮೇಲ್‌ಮಧ್ಯಮ ವರ್ಗದವರು Stay Home Stay Safe ಎಂದು ಬಿಟ್ಟಿ ಉಪದೇಶ ನೀಡುತ್ತಿದ್ದರು. ದಿನಗೂಲಿ ನೌಕರರು ಮತ್ತು ಬಡವರು ಮನೆಯಲ್ಲಿ ಕುಳಿತುಕೊಂಡರೆ ಒಪ್ಪತ್ತು ಊಟವನ್ನಾದರೂ ತಿನ್ನುವುದು ಹೇಗೆ ಎಂದು ಯೋಚಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಭಾರತದ ಸರ್ಕಾರ ಮಾರ್ಚ್ 25ರಂದು ದೇಶಾದ್ಯಂತ ಲಾಕ್‌ಡೌನ್ ಮಾಡಿಯೇಬಿಟ್ಟಿತು. ಯಥಾಪ್ರಕಾರ ಮೇಲ್ಜಾತಿ-ಮೇಲ್ವರ್ಗಗಳು ’ಸಾಮಾಜಿಕ ಅಂತರ’ ಎಂದು ಬೊಬ್ಬೆ ಹೊಡೆದರು. ಅದು ಅವರ ಡಿಎನ್‌ಎ ಸ್ವಭಾವವಾಗಿತ್ತು. ಆದರೆ ನಿಜದಲ್ಲಿ ಕೋವಿಡ್ ಸಮಯದಲ್ಲಿ ’ದೈಹಿಕ ಅಂತರ’ವನ್ನು ಮಾತ್ರ ಕಾಪಾಡಬೇಕಿತ್ತು. ’ಸಾಮಾಜಿಕ ಅಂತರ’ವು ಮಾನಸಿಕ ಅಂತರವನ್ನೂ ಒಳಗೊಂಡುಬಿಡುತ್ತದೆ. ಆದರೆ ಭಾರತದ ಮೇಲ್ಜಾತಿಜಾತಿವಾದಿ ಮನಸ್ಸುಗಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಇತರೆ ಜಾತಿಯವರೊಂದಿಗೆ ಅಂತರ ಕಾಯ್ದುಕೊಳ್ಳುವುದು ವಿಕೃತ ಆನಂದ ನೀಡುವುದರಿಂದ ಎಲ್ಲರೂ ’ಸಾಮಾಜಿಕ ಅಂತರ’ ಎಂಬ ಪದವನ್ನೇ ಬಳಸಿದರು ಹಾಗೂ ಪ್ರಚಾರ ಮಾಡಿದರು. ಈ ಲಾಕ್‌ಡೌನ್ ಸಮಯದಲ್ಲಿ ಮನುಷ್ಯರ ನಡುವಿನ ದೈಹಿಕ ಸಂಪರ್ಕ ಕಡಿಮೆಯಾಗುವುದರಿಂದ ಅಸ್ಪೃಶ್ಯತೆ ಆಚರಣೆಯ ಮೇಲೆ ಆಧಾರವಾಗಿರುವ ದೌರ್ಜನ್ಯಗಳೂ ಕಡಿಮೆ ಆಗುತ್ತವೆ ಎಂದು ಭಾವಿಸಲಾಗಿತ್ತು. ಆದರೆ ಭಾರತದ ಜಾತಿವಾದಿಗಳ ವಿಕೃತ ಮನಸ್ಸು ಉಮೇಶ್‌ರೆಡ್ಡಿಯನ್ನೂ ನಾಚಿಸುವಂತಹದ್ದಾಗಿದೆ. ಇದಕ್ಕೆ ಸಾಕ್ಷಿ ಲಾಕ್‌ಡೌನ್ ಸಮಯದಲ್ಲಿಯೂ ದಲಿತರ ಮೇಲೆ ಹಿಂದೂ ಮೇಲ್ಜಾತಿಗಳು ನಡೆಸಿರುವ ದೌರ್ಜನ್ಯಗಳಾಗಿವೆ.

ಭಾರತದ Dalit Human Rights Defenders Network ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ನೈಜ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ಭಾರತದ ಏಳು ರಾಜ್ಯಗಳಲ್ಲಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನಡೆದ 60 ದೌರ್ಜನ್ಯಗಳನ್ನು ಪಟ್ಟಿ ಮಾಡಿದೆ. ಒಂದೊಂದೂ ಭೀಕರ ಮತ್ತು ಹಿಂದೂ ಮೇಲ್ಜಾತಿಗಳ ಅಸಹ್ಯ ಕೃತ್ಯಗಳನ್ನು ಬಯಲುಗೊಳಿಸುತ್ತದೆ. ಆ ದಲಿತರ ಮೇಲಿನ 10 ದೌರ್ಜನ್ಯ ಘಟನೆಗಳನ್ನು ಮುಂದಿನ ಸಂಚಿಕೆಯ ಲಾಕ್‌ಡೌನ್ ಫೈಲ್ಸ್‌ನಲ್ಲಿ ವರದಿ ಮಾಡಲಾಗುತ್ತದೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿಗಳ ಮನ ಪರಿವರ್ತಿಸುವುದಲ್ಲ. ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.

ಅಂದು 2020 ಜುಲೈ 16. ಅದಾಗಲೇ ರಾತ್ರಿಯಾಗಿತ್ತು. 27 ವರ್ಷದ ಪಿಂಟುಗಲ್ಚಾರ್‌ನನ್ನು ಆರು ಜನರಿದ್ದ ಬ್ರಾಹ್ಮಣರ ಗುಂಪು ಅವನ ಮನೆಯಿಂದ ಎಳೆದೊಯ್ದಿತು. ಅವನು ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಆತನ ಕುಟುಂಬ ಅಸಹಾಯಕತೆಯಿಂದ ಅವನ ಚೀರಾಟವನ್ನು ಕಣ್ಬಿಟ್ಟು ನೋಡುತ್ತಲೇ ಇತ್ತು. ಆ ಆರು ವ್ಯಕ್ತಿಗಳು ಪಿಂಟುವಿನ ಮೇಲೆ ಕಳ್ಳತನದ ಆರೋಪ ಹೊರಿಸಿದ್ದರು.

ಪಿಂಟು ಹತಾಶೆಯಿಂದಲೇ ಆರೋಪವನ್ನು ನಿರಾಕರಿಸಿದನು. ನಿಜ ಅಪರಾಧಿಗಳನ್ನು ಪತ್ತೆಹಚ್ಚಲು ಮತ್ತು ಅವನ ತಪ್ಪಿಲ್ಲವೆಂದು ಸಾಬೀತುಪಡಿಸಲು ಗ್ರಾಮದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಜನಸಮೂಹವನ್ನು ಬೇಡಿಕೊಂಡನು. ಅವನು ಬಲಶಾಲಿಯಾಗಿದ್ದನಾದರೂ ಬ್ರಾಹ್ಮಣಯುವಕರು ಮಹಿಂದ್ರಾ ಬೊಲೆರೊಗೆ ಕಟ್ಟಿಹಾಕಿ ವೇಗವಾಗಿ ಓಡಿಸುತ್ತಾ ಆತನನ್ನು ನಿತ್ರಾಣಗೊಳಿಸಿದರು. ಆ ರಾತ್ರಿಯಿಡೀ ಸುತ್ತಮುತ್ತಲಿನ ಜನರು ಪಿಂಟುವಿನ ಚೀರಾಟವನ್ನು ಕೇಳುತ್ತಲೇ ಇದ್ದರು. ಆದರೆ ಯಾರೂ ಅವನ ರಕ್ಷಣೆಗೆ ಧಾವಿಸಲಿಲ್ಲ. ಭಯ ಅವರೆಲ್ಲರನ್ನೂ ದೂರವಿರಿಸಿತ್ತು. ಪಿಂಟು ತಾಯಿಯನ್ನು ಕಳೆದುಕೊಂಡಿದ್ದನು. ಅವನ ವಯಸ್ಸಾದ ತಂದೆ ಮತ್ತು ಕುಟುಂಬ ಆ ಭಯಾನಕ ರಾತ್ರಿಯಲ್ಲಿ ಉಸಿರು ಬಿಗಿಹಿಡಿದು ಪ್ರಾರ್ಥಿಸುತ್ತಿತ್ತು. ಆ ಬ್ರಾಹ್ಮಣ ಯುವಕರು ತಮ್ಮ ಪ್ರತೀಕಾರವನ್ನು ತೀರಿಸಿಕೊಂಡ ನಂತರ ತಮ್ಮ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಮನೆಗೆ ಮರಳುತ್ತಾನೆಂದು ಆಶಿಸುತ್ತಿದ್ದರು.

ಇದನ್ನೂ ಓದಿ: ಮಾತು ಮರೆತ ಭಾರತ-26; ಪಾಯಲ್ ತಡ್ವಿ ಫೈಲ್: ವೈದ್ಯಳಾಗುವ ಕನಸು ಹೊತ್ತವಳನ್ನ ಸ್ಮಶಾನಕ್ಕೆ ಕಳಿಸಿದರು

ಜುಲೈ 17ರಂದು ಬೆಳಿಗ್ಗೆ ಎಂದಿನಂತೆ ಪಿಂಟುವಿನ ತಂಗಿ ಸೀಮಾ ನೀರುತರಲು ಹೊರಟಾಗ ಬಸ್ ನಿಲ್ದಾಣದ ಬಳಿ ಭಾರೀ ಜನಸಮೂಹ ನೆರೆದಿರುವುದನ್ನು ಗಮನಿಸಿದಳು. ಅವಳ ಎದೆಬಡಿತ ಹೆಚ್ಚಾಯಿತು. ಓಡಿ ಜನಸಂದಣಿಯ ನಡುವೆ ತೂರಿ ನೋಡಿದಳು. ರಕ್ತಸಿಕ್ತವಾದ ಗಾಯಗಳೊಂದಿಗೆ ಬೆತ್ತಲಾಗಿ ಅವಳ ಅಣ್ಣ ಹೆಣವಾಗಿ ಬಿದ್ದಿದ್ದ.

ಸ್ವಲ್ಪವೂ ತಡಮಾಡದೆ ಮನೆಗೆ ಓಡಿಬಂದಳು. ತಂದೆ ಕಂಗಾಲಾದರು. ಆ ಕುಟುಂಬ ಕೇವಲ ಒಬ್ಬ ಧೈರ್ಯಶಾಲಿ ಮಗನನ್ನು ಕಳೆದುಕೊಂಡಿರಲಿಲ್ಲ. ಇದ್ದ ಏಕೈಕ ಅನ್ನದಾತನನ್ನು ಸಹ ಕಳೆದುಕೊಂಡಿತ್ತು. COVID-19 ಸಾಂಕ್ರಾಮಿಕ ರೋಗದಿಂದಾಗಿ ಕಾರ್ಖಾನೆಗಳು, ಕೆಲಸಗಳು ಸ್ಥಗಿತಗೊಂಡು ವಿವಿಧ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಅವನ ಅಣ್ಣಂದಿರು ಊರಿಗೆ ಮರಳಿದ್ದರು. ಹಾಗಾಗಿ ಆ ಮನೆಗೆ ಪಿಂಟು, ಇದ್ದ ಏಕೈಕ ದಿಕ್ಕಾಗಿದ್ದನು.

ಪಿಂಟು ಒಬ್ಬ ಧೈರ್ಯಶಾಲಿ. ತನ್ನ ಹಳ್ಳಿ ರಾವಿಯಲ್ಲಿ ಸದಾ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಹೆಮ್ಮೆಯ ದಲಿತ ಯುವಕ. ಈ ಹಳ್ಳಿ ಗುಜರಾತಿನ ಬಯಲು ಸೀಮೆಯ ಗಡಿಭಾಗದ ಬಾಣಸ್ಕಂಟ ಜಿಲ್ಲೆಯ ಧನೇರಾ ತಾಲೂಕಿನಲ್ಲಿದೆ. ಇದು ಗುಜರಾತಿನ ಪರಿಧಿಯ ಒಳಗಿದ್ದು ರಾಜಸ್ಥಾನದ ಗಡಿಯಿಂದ ಹತ್ತು ಕಿಲೋಮೀಟರ್ ದೂರದಲ್ಲಿದೆ. ಈ ಪ್ರದೇಶವು ದೇಶದ ಇತರ ದೂರದ ಗ್ರಾಮೀಣ ಭಾಗಗಳಂತೆ ದಲಿತರ ವಿರುದ್ಧದ ಭೀಕರ ಹಿಂಸಾಚಾರ ಪ್ರಕರಣಗಳಿಗೆ ಕುಖ್ಯಾತಿಯಾಗಿದೆ.

ರಾವಿ ಹಳ್ಳಿಯಲ್ಲಿ ಸುಮಾರು ನಾಲ್ಕುನೂರ ಐವತ್ಮೂರು ಕುಟುಂಬಗಳಿವೆ. ಸಾಮಾಜಿಕ ಶ್ರೇಣಿಯಲ್ಲಿ ಬ್ರಾಹ್ಮಣ ಜಾತಿ ಪ್ರಾಬಲ್ಯ ಹೊಂದಿದೆ. ಬ್ರಾಹ್ಮಣರು, ದಲಿತರು, ರಾಬರಿ (ಕುರುಬ) ಮತ್ತು ಕೋಲಿ (OBC) ಎಂಬ ನಾಲ್ಕು ಜಾತಿಗಳಲ್ಲಿ ಬ್ರಾಹ್ಮಣರು ಜನಸಂಖ್ಯೆಯಲ್ಲಿಯೂ ಹೆಚ್ಚಿದ್ದಾರೆ ಹಾಗೂ ಬಲಾಢ್ಯರಾಗಿದ್ದಾರೆ.

ಬ್ರಾಹ್ಮಣರು ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿದ್ದು, ದಲಿತ ಕುಟುಂಬಗಳು ಕೃಷಿ ಮತ್ತು ದಿನಗೂಲಿ ಕೆಲಸಕ್ಕೆ ಅವರ ಮೇಲೆ ಅತಿಯಾಗಿ ಅವಲಂಬಿತವಾಗಿವೆ. ಕಳೆದ ನಾಲ್ಕು ದಶಕಗಳಿಂದಲೂ ರಾವಿ ಗ್ರಾಮ ಪಂಚಾಯ್ತಿ ಕೇವಲ ಬ್ರಾಹ್ಮಣ ಅಧ್ಯಕ್ಷರನ್ನೇ ಹೊಂದಿದೆ. ಪ್ರಸ್ತುತ ಅಧ್ಯಕ್ಷೆ ಮಾಯಾಬೆನ್ ಆಗಿದ್ದರೂ ಭಾರತದ ಸಹಜ ಪ್ರಕ್ರಿಯೆಯಂತೆ ಆಕೆಯ ಗಂಡ ಹಂಸರಾಜ್ ಪುರೋಹಿತನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ. ಈ ಪುರೋಹಿತನೇ ಪಿಂಟು ಕೊಲೆ ಪ್ರಕರಣದ ಪ್ರಮುಖ ಆರೋಪಿ.

ಹತ್ಯೆಯಾದ ಪಿಂಟುಗಲ್ಚಾರ್‌

ಗುಜರಾತಿನ ಉಳಿದ ಭಾಗಗಳಿಗೆ ಹೋಲಿಸಿದರೆ ಈ ಗಡಿಗ್ರಾಮದಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆ ಇದೆ. ಗುಜರಾತಿನ ಸಾಕ್ಷರತಾ ಪ್ರಮಾಣ ಶೇ.78ಕ್ಕೆ ಹೋಲಿಸಿದರೆ ದಲಿತರದ್ದು ಕೇವಲ ಶೇ.57. ಆದರೂ, ಕೆಲವು ದಲಿತ ಕುಟುಂಬಗಳು ಶಾಲೆಗೆ ಕಾಲಿಟ್ಟಿರುವುದು ಮೇಲ್ಜಾತಿಗಳ ಅಸಹನೆಗೆ ಕಾರಣಗಳಲ್ಲೊಂದು. ಗ್ರಾಮದಲ್ಲಿರುವ ದಲಿತರಲ್ಲಿ ಸುಮಾರು 70 ಕುಟುಂಬಗಳು ಚಮ್ಮಾರರದ್ದು. ತಲಾ ಹತ್ತು ಕುಟುಂಬಗಳು ತುರಿ ಬಾರೋಟ್ ಹಾಗೂ ಗರೋಡಾಗಳದ್ದಾಗಿದೆ (ಇವರು ಪರಿಶಿಷ್ಟ ಪಂಗಡಕ್ಕೆ ಸೇರುತ್ತಾರೆ). ಪಿಂಟುವಿನ ಕುಟುಂಬ ಚಮ್ಮಾರ್ ಜಾತಿಗೆ ಸೇರಿದ್ದಾಗಿದೆ. ಉಳಿದ ದಲಿತರಿಗೆ ಹೋಲಿಸಿಕೊಂಡರೆ ಚಮ್ಮಾರ್ ಜಾತಿ ಅತ್ಯಂತ ದುರ್ಬಲವಾಗಿದೆ ಮತ್ತು ಸದಾ ನಿಂದನೆಯನ್ನು ಸಹಿಸಿಕೊಳ್ಳಬೇಕಾಗಿರುತ್ತದೆ.

’ಪಿಂಟು’ ಈ ಬ್ರಾಹ್ಮಣ ಜಾತಿಯ ಪ್ರಾಬಲ್ಯವಿರುವ ಗ್ರಾಮದ ಆಡಳಿತವನ್ನು ಹಲವಾರು ಬಾರಿ ಹಲವು ವಿಷಯಗಳಲ್ಲಿ ಪ್ರಶ್ನಿಸಿದ್ದನು. ಗ್ರಾಮದ ಕೆರೆಯ ಒಂದು ಬದಿಯಲ್ಲಿ ಕಟ್ಟೆ ನಿರ್ಮಿಸಿದ್ದರಿಂದ ಇನ್ನೊಂದು ಬದಿಯಲ್ಲಿ ವಾಸಿಸುತ್ತಿದ್ದ ದಲಿತ ಕುಟುಂಬಗಳ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇತ್ತು. ಇದರ ವಿರುದ್ಧ ಅವನು ವರ್ಷಗಳಿಂದ ಹೋರಾಡುತ್ತಿದ್ದನು. ಪ್ರತಿ ವರ್ಷದ ಮಳೆಗಾಲದಲ್ಲಿ ದಲಿತರು ಪ್ರವಾಹದ ಭೀತಿಯಿಂದ ಬದುಕುವಂತಾಗಿತ್ತು. ಗ್ರಾಮ ಪಂಚಾಯಿತಿಗೆ ಪದೇಪದೇ ಮನವಿ ಮಾಡಿಕೊಂಡಿದ್ದರು ಸಹ ಕಟ್ಟೆಯನ್ನು ಕಿಂಚಿತ್ತೂ ಅಲುಗಾಡಿಸಲಿಲ್ಲ. ಅದೆಷ್ಟೇ ಬೆದರಿಕೆ ಒಡ್ಡಿದರೂ ಪಿಂಟು ಬ್ರಾಹ್ಮಣರಿಗೆ ತಲೆಬಾಗಲಿಲ್ಲ. ಈ ವಿಚಾರದಲ್ಲಿ ಅವರ ವಿರುದ್ಧ ಸವಾಲು ಹಾಕುವುದನ್ನು ನಿಲ್ಲಿಸಲಿಲ್ಲ. ಅವನು ಕೈಗೆತ್ತಿಕೊಂಡ ವಿಚಾರ ಇದೊಂದೇ ಆಗಿರಲಿಲ್ಲ. ದಲಿತರಿಗೆ ಕುಡಿಯುವ ನೀರಿನ ಸೌಲಭ್ಯವೂ ಇರಲಿಲ್ಲ. ಹಲವು ವರ್ಷಗಳಿಂದ ಸಮಸ್ಯೆ ಮುಂದುವರಿದೇ ಇತ್ತು. ಗ್ರಾಮದಲ್ಲಿ ದಲಿತರಿಗೆ ಪ್ರತ್ಯೇಕ ನೀರಿನ ತೊಟ್ಟಿ ನಿರ್ಮಿಸಿಕೊಟ್ಟರೂ ಬ್ರಾಹ್ಮಣನಾದ ವಾಟರ್‌ಮ್ಯಾನ್ ಸಂಪೂರ್ಣವಾಗಿ ಟ್ಯಾಂಕ್ ತುಂಬಿಸುತ್ತಿರಲಿಲ್ಲ. ಈ ವಿಷಯ ಪ್ರಸ್ತಾಪಿಸಿ ನ್ಯಾಯಕ್ಕಾಗಿ ಪಿಂಟು ಗ್ರಾಮ ಪಂಚಾಯಿತಿಯ ಮೊರೆ ಹೋಗಿದ್ದನು.

ಪಿಂಟುವಿನ ಪ್ರತಿಭಟನೆಯನ್ನು ನಿಲ್ಲಿಸಲು ಸಾಧ್ಯವಾಗದ ಕಾರಣ ಬ್ರಾಹ್ಮಣರು ಹಂಸರಾಜ್ ಪುರೋಹಿತನ ನೇತೃತ್ವದಲ್ಲಿ ಸುಳ್ಳು ಪ್ರಕರಣವೊಂದನ್ನು ಪಿಂಟುವಿನ ಮೇಲೆ ಆರೋಪಿಸುವ ಸಂಚು ರೂಪಿಸಿದರು.

ಇದನ್ನೂ ಓದಿ: ಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ’

ಪರಿಣಾಮವಾಗಿ 16ರ ರಾತ್ರಿ ಅವನ ಮೇಲೆ 15 ದಿನಗಳ ಹಿಂದೆ ಗ್ರಾಮದ ಅಂಗಡಿಯೊಂದರಲ್ಲಿ ನಡೆದಿದ್ದ ಕಳ್ಳತನವನ್ನು ಆರೋಪಿಸಿ ಅದರ ಬಗ್ಗೆ ತನಿಖೆ ಮಾಡುವುದಾಗಿ ಹೇಳಿ ಮನೆಯಿಂದ ಎಳೆದೊಯ್ದಿದ್ದರು. ರಾತ್ರಿಯಿಡೀ ಚಿತ್ರಹಿಂಸೆ ನೀಡಿ, ಕೊಂದು ಮರುದಿನ ಬೆಳಗ್ಗೆ ಸ್ಥಳೀಯ ಬಸ್ ನಿಲ್ದಾಣದಲ್ಲಿ ಆತನ ದೇಹವನ್ನು ಎಸೆದುಹೋಗಿದ್ದರು.

ಹತ್ಯೆಯ ಸುದ್ದಿ ಸಾರ್ವಜನಿಕರ ಗಮನಕ್ಕೆ ಬಂದ ತಕ್ಷಣ ಸಾಮಾಜಿಕ ಹೋರಾಟಗಾರರು ಎಚ್ಚೆತ್ತುಕೊಂಡರು. ಹೆಚ್‌ಡಿಆರ್‌ಸಿ ಮತ್ತು ದಲಿತ ಸಂಘಟನೆಯ ತಂಡವು ಪಿಂಟುವಿನ ಕುಟುಂಬವನ್ನು ಭೇಟಿ ಮಾಡಲು ತೆರಳಿತು. ಈ ಭೇಟಿಯು ಕುಟುಂಬದ ವಿಶ್ವಾಸವನ್ನು ಹೆಚ್ಚಿಸಿತು ಮತ್ತು ಪೊಲೀಸ್ ದೂರು ನೀಡುವಂತಾಯಿತು. ನಂತರ ಎಫ್‌ಐಆರ್‌ಅನ್ನು ಧನೇರಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲು ಕಾರಣವಾಯಿತು.

ಎಫ್‌ಐಆರ್ ದಾಖಲಿಸಿದ ಬಳಿಕ ಹಂಸರಾಜ್ ಪುರೋಹಿತ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಯಿತು. ಆದಾಗ್ಯೂ, ನ್ಯಾಯಕ್ಕಾಗಿನ ಹೋರಾಟ ಮತ್ತು ಅಂತಿಮವಾಗಿ ಆರೋಪಿಗಳ ಅಪರಾಧ ನಿರ್ಣಯವು ದೀರ್ಘಾವಧಿಯ ಪ್ರಕ್ರಿಯೆಯಾಗಿದ್ದು, ಇದು ನಿರಂತರ ಪ್ರಯತ್ನ ಮತ್ತು ಪ್ರಕರಣದ ನಿರಂತರ ಮೇಲ್ವಿಚಾರಣೆಯ ಅಗತ್ಯವಿರುತ್ತದೆ.

ಒಂದೆಡೆ ಪಿಂಟುವಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ನಡೆಯಬೇಕಿದೆ. ಮತ್ತೊಂದೆಡೆ ಪಿಂಟು ದಲಿತ ಸಮುದಾಯಗಳ ಯಾವ ಸಮಸ್ಯೆಗಳ ವಿರುದ್ಧ ಹೋರಾಡಿದನೋ ಆ ಸಮಸ್ಯೆಗಳೆಲ್ಲವೂ ಮೇಲ್ಜಾತಿಗಳೆಸಗಿದ ಈ ಕೊಲೆಯಿಂದ ಮುಚ್ಚಿ ಹೋಗದಂತೆಯೂ ನೋಡಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...