‘ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ’ (ತುಮುಲ್) ಒಕ್ಕೂಟದ ಹಣಕಾಸು ವಿಭಾಗದ ಆಡಳಿತಾಧೀಕ್ಷಕರಾದ (Administrator) ವಿನಯ್ ಆರ್.ಎಸ್ (35) ಎಂಬುವವರ ಮೇಲೆ ಅಲ್ಲಿನ ಪ್ರಬಲ ಜಾತಿ ಸಮುದಾಯಕ್ಕೆ ಸೇರಿದ ಉಮೇಶ್ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಂಜುನಾಥ್ ನಾಯಕ್ ಎಂಬುವವರು ವೃತ್ತಿ ವೈಶಮ್ಯ ಸಾಧಿಸುತ್ತಿದ್ದು, ವಿನಯ್ ಅವರು ದಲಿತ (ಛಲವಾದಿ) ಎಂಬ ಕಾರಣಕ್ಕೆ ಕಿರುಕುಳ ನೀಡುತ್ತಿರುವು ಬೆಳಕಿಗೆ ಬಂದಿದೆ. ದಲಿತ ಸಮುದಾಯಕ್ಕೆ ಸೇರಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲೇ ಇತ್ತೀಚೆಗೆ ಪರಿಶಿಷ್ಟರ ಮೇಲೆ ಸರಣಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿರುವುದು ಆಘಾತಕಾರಿಯಾಗಿದೆ.
ಸಂತ್ರಸ್ತ ಅಧಿಕಾರಿ ಮೇಲೆ ಕಳೆದ ಏಳೆಂಟು ತಿಂಗಳಿನಿಂದ ಕಿರುಕುಳ ಹೆಚ್ಚಾಗಿದ್ದು, ಅವರಿಗೆ ಮೀಸಲಿಟ್ಟಿದ್ದ ಕಚೇರಿಯನ್ನೂ ಸಹ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ. ಅವರಿಗೆ ಕೆಲಸ ಮಾಡುವುದಕ್ಕೆ ಜಾಗವನ್ನೂ ನೀಡದೆ ಮಾನಸಿಕವಾಗಿ ದೌರ್ಜನ್ಯ ಎಸಗಲಾಗುತ್ತಿದೆ. ಈ ಅಧಿಕಾರಿಯು ಹಲವು ದಿನಗಳಿಂದ ನೆಲದ ಮೇಲೆ ಕೂತು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಅವರು ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ಸ್ಥಳೀಯ ಪೊಲೀಸ್ ಠಾಣೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳವರೆಗೆ ದೂರು ನೀಡಿದರೂ ಕಳೆದ ಏಳೆಂಟು ತಿಂಗಳಿಂದ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಬದಲಿಗೆ, ಅವರ ಮೇಲೆ ದಿನದಿಂದ ದಿನಕ್ಕೆ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ. ಇದರಿಂದ ಬೇಸತ್ತು, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ವಿನಯ್ ಅವರು ಎಂ.ಕಾಂ., ಎಂಬಿಎ., ಪಿಜಿಡಿಹೆಚ್‌ಆರ್‌ಎಂ., ಪಿಜಿಡಿಬಿಎ., ಡಿಸಿಎ ಪದವಿ ಪಡೆದಿದ್ದು, ತುಮುಲ್‌ನಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
“ಪರಿಶಿಷ್ಟ ಜಾತಿಗೆ (ಛಲವಾದಿ) ಸೇರಿದ ನನ್ನನ್ನು ದೈಹಿಕ ಅ೦ಗವಿಕಲನನ್ನಾಗಿ ಮಾಡುವ ದುರುದ್ದೇಶದಿ೦ದ, ಮು೦ಬಡ್ತಿ ಸಿಗಬಾರದೆ೦ದು ಸ೦ಚು ರೂಪಿಸಲಾಗಿದೆ. ನನ್ನ ಮೇಲೆ ಜಾತಿ-ದೈಹಿಕ ದೌರ್ಜನ್ಯ ನಡೆಸಿ, ಮಾನಸಿಕವಾಗಿಯೂ ಕಿರುಕುಳ ನೀಡುತ್ತಿರುವ ಸವರ್ಣೀಯ ಜನಾಂಗಕ್ಕೆ ಸೇರಿದ ಅಧಿಕಾರಿ ಉಮೇಶ್ ಎಸ್. ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪ೦ಗಡಗಳ ದೌರ್ಜನ್ಯ ತಡೆ ಕಾಯ್ದೆ-1989 ತಿದ್ದುಪಡಿ ಕಾಯಿದೆ-1995 ರ೦ತೆ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ಮನವಿ ಮಾಡಿದ್ದಾರೆ. “ಮತ್ತೋರ್ವ ಅಧಿಕಾರಿ, ಪರಿಶಿಷ್ಟ ಜಾತಿಗೆ ಸೇರಿದ ಮಂಜುನಾಥ್ ನಾಯಕ್ ಅವರು ನನ್ನ ಮೇಲೆ ಹಲ್ಲೆ ನಡೆಸುವಂತೆ ಉಮೇಶ್ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ” ಎಂದು ಅವರು ಆರೋಪ ಮಾಡಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಅವರು, “ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ (ಎಂಡಿ) ಸೂಚನೆ ಮೇರೆಗೆ, ಇಷ್ಟು ದಿನ ನಾನು ನೆಲದ ಮೇಲೆ ಕುಳಿತುಕೊಳ್ಳಲು ಬಳಸುತ್ತಿದ್ದ ಪ್ಲಾಸ್ಟಿಕ್ ಚೀಲವನ್ನೂ ಕಸಿದುಕೊಂಡಿದ್ದಾರೆ. ಈಗ ಬರೀ ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದೇನೆ. ಉಮೇಶ್ ಎಸ್ ಮತ್ತು ಮಂಜುನಾಥ್ ನಾಯಕ್ ಎಂಬುವವರು ಸೇರಿಕೊಂಡು, ವೃತ್ತಿ ವೈಶಮ್ಯದಿಂದ ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಅವರ ಕಿರುಕುಳದ ಬಗ್ಗೆ ಗೊತ್ತಿದ್ದರೂ ವ್ಯವಸ್ಥಾಪಕ ನಿರ್ದೇಕರಾದ (ಎಂಡಿ) ಶ್ರೀನಿವಾಸನ್ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ದೂರಿನಲ್ಲಿ ಏನಿದೆ?
“ತುಮಕೂರು ಹಾಲು ಒಕ್ಕೂಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ನಾನು ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯ ಅವರೇಮಾಳ ರಾ೦ಪುರ ಗ್ರಾಮದವನು. ತುಮಕೂರು ಹಾಲು ಒಕ್ಕೂಟದಲ್ಲಿ ಕಳೆದ 8 ವರ್ಷಗಳಿಂದ ಆಡಳಿತಾಧೀಕ್ಷಕನಾಗಿ ಕರ್ತವ್ಯ ವಿರ್ವಹಿಸುತ್ತಿದ್ದೆನೆ. ತುಮಕೂರು ಹಾಲು ಒಕ್ಕೂಟದಲ್ಲಿ ಡೈರಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ, ಲಿ೦ಗಾಯುತ ಸಮುದಾಯಕ್ಕೆ ಸೇರಿದ ಉಮೇಶ್ ಎಸ್ ಎಂಬುವವರು ಕಳೆದ 17 ವರ್ಷಗಳಿ೦ದ ತುಮುಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಕ್ಕೂಟದಲ್ಲಿ ಸಾಕಷ್ಟು ರಾಜಕೀಯ ಪ್ರಭಾವ ಹೊ೦ದಿರುವ ಇವರು, ಜಾತಿ ಕಾರಣಕ್ಕೆ ನನ್ನನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
“ಉಮೇಶ್ ಅವರು 14-02-2025 ರಂದು ಮಧ್ಯಾಹ್ನ 03:37 ಫ೦ಟೆಯಿ೦ದ, ಸತತವಾಗಿ 01 ಫ೦ಟೆಗಳ ಕಾಲ ಏಕ ವಚನದಲ್ಲಿ ಅವಾಚ್ಯ ಶಬ್ದಗಳಿ೦ದ ಸಾರ್ವಜನಿಕವಾಗಿ ನನ್ನನ್ನು ನಿಂದಿಸಿ ಅವಮಾನಿಸಿದ್ದಾರೆ. ಅವಮಾನ ಮಾಡುವ ಏಕೈಕ ದುರುದ್ದೇಶದಿ೦ದ ನನ್ನ ಮೇಲೆ ಜಾತಿ ನಿಂದನೆ ಮಾಡಿದ್ದಾರೆ. ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಸಹ ಮುಂದಾಗಿದ್ದರು, ನಾನು ತುಮುಲ್ ಗೆ ಕರ್ತವ್ಯಕ್ಕೆ ಹಾಜರಾದ ದಿನದಿ೦ದಲೂ ನನ್ನ ಜಾತಿ ಹಿನ್ನಲೆ ತಿಳಿದುಕೂ೦ಡು ಕಿರುಕುಳ ನೀಡಲು ಪ್ರಾರಂಭಿಸಿದರು” ಎಂದು ಅವರು ವಿವರಿಸಿದ್ದಾರೆ.
“ನನ್ನನ್ನು ವೈಯಕ್ತಿಕವಾಗಿ ಟೀಕಿಸುವ ಮೂಲಕ, ಸಿಬ್ಬ೦ದಿ ಮುಂದೆ ನನ್ನ ಆತ್ಮಗೌರವಕ್ಕೆ ಧಕ್ಕೆ ತಂದಿದ್ದಾರೆ. ‘ಯಾವ ಕಾರಣಕ್ಕಾಗಿ ನನ್ನ ಮೇಲೆ ಗಲಾಟೆ ನಡೆಸುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಕ್ಕೆ, “ಹೊಲೆಯರು ಸೂ… ನನ್ನ ಮಕ್ಕಳು, ನೀನು ಎಲ್ಲಿಂದಲೋ ಬ೦ದಿರುವವವನು, ನೀನು ನನ್ನ ಹತ್ತಿರ ಏನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ, ನಿನಗಿನ್ನೂ ನನ್ನ ರಾಜಕೀಯ ಪ್ರಭಾವ ಗೊತ್ತಿಲ್ಲ. ನಾನು ಇದೆ ಪಕ್ಕದ ಗುಬ್ಬಿ ತಾಲ್ಲೂಕಿನವನು, ನಿನ್ನಂತಹ ಎಷ್ಟೋ ಜನ ಹೊಲೆ-ಮಾದಿಗ ಸೂ.. ನನ್ನ ಮಕ್ಕಳನ್ನ ಕೂಲೆ ಮಾಡಿಸಿ, ಅದು ಕೇಸ್ ಆಗದ೦ತೆ ನೋಡಿಕೊಂಡಿದ್ದೇನೆ. ನೀನು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟರೂ ಅವರು ಕೇಸು ದಾಖಲಿಸುವುದಿಲ್ಲ. ತಾಕತ್ತಿದ್ದರೆ ನನ್ನ ವಿರುದ್ದ ದೂರು ಕೊಟ್ಟು ನೋಡು, ಸೂ.. ನನ್ನ ಮಗನೆ, ಬೋ.. ಮಗನೆ, ನಿನ್ನ ಅ…ನ್, ಸೇರಿದಂತೆ ಅಶ್ಲೀಲ ಪದಗಳಿಂದ ನನ್ನನ್ನು ನಿಂದಿಸಿದ್ದಲ್ಲದೆ, ನನ್ನ ತಾಕತ್ ನಿನಗೆ ತೋರಿಸುತ್ತೇನೆ ಎ೦ದು ಕೂಲೆ ಬೆದರಿಕೆ ಹಾಕಿದ್ದಾರೆ” ಎಂದು ದೂರಿದ್ದಾರೆ.
“ಈ ಬಗ್ಗೆ ತುಮಕೂರು ಗ್ರಾಮಾ೦ತರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೋಹನ್ ಅವರಿಗೆ ಅದೇ ದಿನ ದೂರು ನೀಡಿದರು ಸಹ ಗಂಭೀರವಾಗಿ ಪರಿಗಣಿಸಿಲ್ಲ. ದೂರು ದಾಖಲಿಸದೆ ಅವರು ಕರ್ತವ್ಯ ಲೋಪ ಎಸಗಿರುತ್ತಾರೆ. ಪೊಲೀಸ್ ಅಧಿಕಾರಿ ಸತತವಾಗಿ 05 ದಿನಗಳ ಕಾಲ ನನ್ನನ್ನು ಠಾಣೆಗೆ ಅಲೆದಾಡಿಸಿದ್ದರು. ಈ ಬಗ್ಗೆ, ಡಿ.ವೈ.ಎಸ್.ಪಿ ಅವರಿಗೆ ದೂರು ನೀಡಿದ ಬಳಿಕ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಿದ್ದರೂ, ಅವರು ಕ್ರಮ ತೆಗೆದುಕೊಂಡಿಲ್ಲ” ಎಂದು ಗಂಭೀರ ಆರೋಪ ಮಾಡಿದ್ದಾರೆ.
“ದಿನಾ೦ಕ 18-02-2025 ರಂದು ಈ ಪ್ರಕರಣಕ್ಕೆ ಸ೦ಬಂ೦ಧಿಸಿದ೦ತೆ ತುಮಕೂರು ಗ್ರಾಮಾ೦ತರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಫ್ಸ್‌ಪೆಕ್ಟರ್ ಮೋಹನ್ ಮತ್ತು ತುಮಕೂರು ನಗರದ ಡಿವೈಎಸ್‌ಪಿ ಚ೦ದ್ರಶೇಖರ್ ಸೇರಿದಂತೆ ಇಬ್ಬರಿಗೂ ಸಹ ದೂರಿನ ಪ್ರತಿಯನ್ನು ರಿಜಿಸ್ಟರ್ ಪೋಸ್ಟ್ ಮುಖಾ೦ತರ ಕಳುಹಿಸಿದ್ದೇನೆ. ಆದರೂ ಸಹ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಲ್ಲ. ಬದಲಿಗೆ, ಅವರು ನನ್ನನ್ನು ಅತ್ಯ೦ತ ಕೀಳಾಗಿ ಕಂಡು, ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ಯತ್ನಿಸಿರುತ್ತಾರೆ” ಎಂದಿದ್ದಾರೆ.
“ಈ ಎಲ್ಲ ಘಟನೆಗಳಿಂದ ಬೇಸತ್ತು, ಫೆ.19 ರಂದು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನಿಡಿದ್ದೆ. ಅವರು, ತುಮಕೂರು ಗ್ರಾಮಾ೦ತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮೋಹನ್ ಅವರಿಗೆ ಎಫ್‌ಐಆರ್ ದಾಖಲಿಸುವಂತೆ ತಿಳಿಸಿರುತ್ತಾರೆ. ಆದರೆ, ಮೋಹನ್ ರವರು ಯಾವುದೇ ಎಫ್.ಐ.ಆರ್ ಅನ್ನು ದಾಖಲಿಸದೆ, ದಿನಾ೦ಕ 19-02-2025 ರಂದು ತುಮಕೂರು ಹಾಲು ಒಕ್ಕೂಟಕ್ಕೆ ಭೇಟಿ ನೀಡಿ ಸಿ.ಸಿ.ಟಿ.ವಿ. ವಿಡಿಯೋವನ್ನು ಪರಿಶಿಲೀಸಿದರು. ತಮ್ಮ ಸ್ವಂತ ಮೊಬೈಲ್‌ನಲ್ಲೂ ಕೃತ್ಯದ ವಿಡಿಯೊವನ್ನು ರೆಕಾರ್ಡ್ ಮಾಡಿಕೊಂಡರು. ಅದರಲ್ಲಿ, ಉಮೇಶ್ ಅವರು ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುವ ಹಾಗೂ ಅವಾಚ್ಯ ಶಬ್ದಗಳಿ೦ದ ಜಾತಿ ನಿಂದನೆ ಮಾಡುತ್ತಿರುವುದನ್ನು ಅವರು ಗಮನಿಸಿದರು. ಈ ಸಂದರ್ಭದಲ್ಲಿ ನಮ್ಮ ಒಕ್ಕೂಟದ ಪ್ರಭಾರಿ ಪ್ರಧಾನ ವ್ಯವಸ್ಥಾಸಪಕರಾಗಿರುವ ತಿಮ್ಮನಾಯಕ್, ವ್ಯವಸ್ಮಾಪಕರಾದ(ವಿತ್ತ) ಸಿ. ವೆ೦ಕಟೇಶ್, ಉಪ ವ್ಯವಸ್ಥಾಪಕರು(ಇ೦ಜಿನಿಯರಿ೦ಗ್) ರವಿಕಿರಣ್, ಉಪ ವ್ಯವಸ್ಥಾಪಕರು(ಉತ್ಪಾದನೆ) ರವರಾಗಿರುವ ತಿಪ್ಪೆಸ್ವಾಮಿ ಎಲ್ ಸೇರಿದಂತೆ ಹಲವರು ಇದ್ದರು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ಅಂತಾರಾಷ್ಟ್ರೀಯ ಬೂಕರ್ ವಿಜೇತ ಲೇಖಕಿ ಬಾನು ಮುಷ್ತಾಕ್