ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕವಣದಾಲ ಗ್ರಾಮದಲ್ಲಿ ಪೂಜೆ ಮಾಡಿಸಲು ರಾಮಾಂಜನೇಯ ದೇವಾಲಯ ಪ್ರವೇಶಿಸಿದ ದಲಿತ ಯುವಕನನ್ನು ಸವರ್ಣೀಯರು ಹೊರಗಡೆ ಕಳುಹಿಸಿದ ಆರೋಪ ಕೇಳಿ ಬಂದಿದೆ.
ಮೇ 10, ಶನಿವಾರ ಈ ಘಟನೆ ನಡೆದಿದೆ. ಗ್ರಾಮದ ಮಾದಿಗ ಸಮುದಾಯದ ಯುವಕ ಸ್ವಾಮಿನಾಥ ಎಂಬವರು ಪೂಜೆ ಮಾಡಿಸಲು ದೇವಾಲಯದ ಒಳಗೆ ಹೋಗಿದ್ದರು. ಅದನ್ನು ಕಂಡ ಸವರ್ಣೀಯರು ಅವರನ್ನು ಹೊರಗಡೆ ಬರುವಂತೆ ತಾಕೀತು ಮಾಡಿದ್ದಲ್ಲದೆ, ನೀನು ದೇವಾಲಯದ ಒಳಗೆ ಪ್ರವೇಶಿಸುವಂತಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದೇ ವಿಷಯವಾಗಿ ದೇವಾಲಯದ ಮುಂಭಾಗದಲ್ಲಿ ಯುವಕ ಮತ್ತು ಸವರ್ಣೀಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಯುವಕ “ನನಗೆ ದೇವಸ್ಥಾನದ ಒಳಗಡೆ ಹೋಗಿ ಪೂಜೆ ಮಾಡಲು ಅವಕಾಶ ಕೊಡಿ” ಎಂದು ಮನವಿ ಮಾಡುತ್ತಿರುವುದು ಮತ್ತು ಅದಕ್ಕೆ ಅಲ್ಲಿ ಗುಂಪು ಸೇರಿದ್ದ ಜನರು ವಿರೋಧ ವ್ಯಕ್ತಪಡಿಸಿ ವಾಗ್ವಾದ ನಡೆಸುತ್ತಿರುವುದನ್ನು ನೋಡಬಹುದು.
“ನನ್ನನ್ನು ಮಾತ್ರ ಗುರಿಯಾಗಿಸಿ ದೇವಸ್ಥಾನದಿಂದ ಹೊರಗಡೆ ಏಕೆ ಕರೆದ್ರಿ? ನಿಮ್ಮ ಜನರೆಲ್ಲ ಒಳಗೆ ಹೋಗುವಾಗ ನಾನೇಕೆ ಹೋಗಬಾರದು? ನಾನು ಈ ಊರಿನಲ್ಲೇ ಹುಟ್ಟಿ ಬೆಳೆದವ ಮತ್ತು ದೇವಸ್ಥಾನ ನಿರ್ಮಾಣಕ್ಕೆ ನಾನೂ ವಂತಿಗೆ ಕೊಟ್ಟಿದ್ದೇನೆ. ನೀವು ಮಾತ್ರ ಹೋಗಬೇಕು ನಾವು ದೇವಸ್ಥಾನದ ಒಳಗಡೆ ಹೋಗಬಾರದು ಎಂದರೆ, ಅಂಬೇಡ್ಕರ್ ಕೊಟ್ಟ ಸಂವಿಧಾನ, ಅದರಲ್ಲಿ ಹೇಳಿರುವ ಸಮಾನತೆಯ ತತ್ವಕ್ಕೆ ಬೆಲೆ ಇಲ್ವಾ? ಎಂದು ಯುವಕ ಪ್ರಶ್ನಿಸಿರುವುದು ಮತ್ತು “ಅನಾದಿ ಕಾಲದಿಂದಲೂ ನಿಮ್ಮ ಜಾತಿಯವರು (ಪರಿಶಿಷ್ಟ ಜಾತಿಯವರು) ಯಾರೂ ದೇಗುಲದ ಒಳಗಡೆ ಬಂದಿಲ್ಲ. ಈಗಲೂ ಬರುವುದು ಬೇಡ” ಎಂದು ಗುಂಪು ಸೇರಿದ ಜನರು ಹೇಳಿರುವುದು ವಿಡಿಯೋದಲ್ಲಿ ಇದೆ.
ಘಟನೆ ಕುರಿತು ಯುವಕ ಭಾನುವಾರ (ಮೇ.11) ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಗ್ರಾಮಸ್ಥರ ಒತ್ತಾಯದ ಮೇರೆಗೆ ದೂರು ವಾಪಸ್ ಪಡೆದು ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಸಮ್ಮುಖದಲ್ಲಿ ದೇವಾಲಯ ಪ್ರವೇಶ:
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ತುಮಕೂರು ಎಸ್ಪಿ, “ದೇವಾಲಯ ಪ್ರವೇಶಿಸಲು ಅವಕಾಶ ನೀಡದ ಬಗ್ಗೆ ಸ್ವಾಮಿನಾಥ ಅವರು ವಿಚಾರ ತಿಳಿಸಿದ್ದರು. ಈ ಹಿನ್ನೆಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್ ಅವರ ನೇತೃತ್ವದಲ್ಲಿ ಮಧುಗಿರಿ ಪೊಲೀಸ್ ಉಪಾಧೀಕ್ಷ, ಮಧುಗಿರಿ ತಾಲೂಕು ದಂಡಾಧಿಕಾರಿ, ಮಧುಗಿರಿ ವೃತ್ತ ನಿರೀಕ್ಷಕ, ಬಡವನಹಳ್ಳಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಕವಣದಾಲ ಗ್ರಾಮಕ್ಕೆ ಭೇಟಿ ನೀಡಿ ಕವಣದಾಲ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರನ್ನು ಒಗ್ಗೂಡಿಸಿ ಶಾಂತಿ ಸಭೆ ಮಾಡಿ ಅಸ್ಪೃಶ್ಯತೆ ಆಚರಣೆ ಮಾಡದಂತೆ ಹಾಗೂ ಗ್ರಾಮದಲ್ಲಿ ಎಲ್ಲಾ ಜನಾಂಗದವರು ಅನೂನ್ಯವಾಗಿ ದೇವಸ್ಥಾನದ ಪೂಜಾ ಕೈoಕಾರ್ಯಗಳಲ್ಲಿ ಭಾಗವಹಿಸುವಂತೆ ತಿಳುವಳಿಕೆ ನೀಡಿದ್ದೇವೆ. ನಂತರ ಗ್ರಾಮದ ಎಲ್ಲಾ ಸಮುದಾಯದವರ ಸಮಕ್ಷಮ ನೊಂದ ಸ್ವಾಮಿನಾಥರವರಿಗೆ ಹಾಗೂ ಅವರ ಸಮುದಾಯದವರಿಗೆ ಶ್ರೀರಾಮಾಂಜನೇಯ ಸ್ವಾಮಿ ದೇವಸ್ಥಾನದ ಪ್ರವೇಶ ಮಾಡಿಸಿ ಪೂಜೆ ಮಾಡಿಸಿರುತ್ತೇವೆ” ಎಂದು ತಿಳಿಸಿದ್ದಾರೆ.
ಮಧುಗಿರಿ ತಾಲ್ಲೂಕು ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕವಣದಾಲ ಗ್ರಾಮದಲ್ಲಿ ಶ್ರೀ ರಾಮಾಂಜಿನೇಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ದಿನಾಂಕ: 10-05-2025 ರಂದು ಸ್ವಾಮಿನಾಥ ಬಿನ್ ರಾಜಣ್ಣ ರವರು ಪೂಜೆ ಮಾಡಲು ಹೋದಾಗ ಅದೇ ಗ್ರಾಮದ ವಾಸಿಯಾದ ಶಿವಾನಂದ ಬಿನ್ ರಾಜಣ್ಣ 'ನೀನು ದೇವಸ್ಥಾನದ ಒಳಗೆ ಏಕೆ ಬಂದೆ' ಎಂದು ಹೇಳಿದ್ದರಿಂದ ನೊಂದ ಆಸಾಮಿ… pic.twitter.com/k7qSC2pHAe
— SP Tumakuru (@SPTumkur) May 11, 2025
ಮೇ 20 ಸಾರ್ವತ್ರಿಕ ಮುಷ್ಕರ | ಬೀದಿಗಿಳಿಯಲಿರುವ ರಾಜ್ಯದ ಲಕ್ಷಾಂತರ ರೈತ, ಕಾರ್ಮಿಕರು


