ಮೇಕೆ ಮತ್ತು ಪಾರಿವಾಳಗಳನ್ನು ಕಳ್ಳತನ ಮಾಡಿದ್ದಾರೆಂದು ಶಂಕಿಸಿ ನಾಲ್ವರು ದಲಿತ ಸಮುದಾಯದ ಯುವಕರನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಗುಂಪೊಂದು ದೊಣ್ಣೆಗಳಿಂದ ಥಳಿಸಿದ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಐವರು ತಲೆಮರೆಸಿಕೊಂಡಿದ್ದಾರೆ ಎಂದು ಅಹ್ಮದ್‌ನಗರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಖಂಡಿಸಿ ಶ್ರೀರಾಂಪುರ ತಾಲೂಕಿನ ಹರೇಗಾಂವ ಗ್ರಾಮದಲ್ಲಿ ನಿನ್ನೆ ಬಂದ್ ಆಚರಿಸಲಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಈ ಘಟನೆಯನ್ನು ಮಾನವೀಯತೆಯ ಮೇಲಿನ ಕಳಂಕ ಮತ್ತು ಬಿಜೆಪಿ ಹರಡುತ್ತಿರುವ ದ್ವೇಷದ ಭಾಗ ಎಂದು ಬಣ್ಣಿಸಿದೆ.
ಆಗಸ್ಟ್ 25 ರಂದು ಗ್ರಾಮದ ಆರು ಜನರ ಗುಂಪು 20ರ ಹರೆಯದ ನಾಲ್ವರು ದಲಿತ ಯುವಕರ ಮನೆಗೆ ಹೋಗಿ ಅವರನ್ನು ಜೊತೆಯಲ್ಲಿ ಕೆರೆದುಕೊಂಡು ಬಂದಿದ್ದರು. ಬಳಿಕ ಮೇಕೆ ಮತ್ತು ಪಾರಿವಾಳಗಳನ್ನು ಕದ್ದಿದ್ದಾರೆ ಎಂದು ಶಂಕಿಸಿ ಅವರನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ದೊಣ್ಣೆಗಳಿಂದ ಥಳಿಸಿದ್ದಾರೆ.
ಆರೋಪಿಗಳನ್ನು ಯುವರಾಜ್ ಗಲಾಂಡೆ, ಮನೋಜ್ ಬೋಡಕೆ, ಪಪ್ಪು ಪರ್ಖೆ, ದೀಪಕ್ ಗಾಯಕವಾಡ, ದುರ್ಗೇಶ್ ವೈದ್ಯ ಮತ್ತು ರಾಜು ಬೋರಗೆ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳಲ್ಲಿ ಓರ್ವ ಕೃತ್ಯದ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಅದನ್ನು ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಗಾಯಾಳುಗಳನ್ನು ನಂತರ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಥಳಿತಕ್ಕೊಳಗಾದ ಶುಭಂ ಮಗಡೆ ಎಂಬ ಯುವಕ ಪೊಲೀಸರಿಗೆ ದೂರು ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, ಸೆಕ್ಷನ್ 307 (ಕೊಲೆ ಯತ್ನ), 364 (ಅಪಹರಣ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಮೂರು ಮನೆಗಳಿಗೆ ಬೆಂಕಿ


