ನಾಲಿಗೆ ಮೇಲೆ ಹಿಡಿತವಿಲ್ಲದಂತೆ ಬಾಯಿಗೆ ಬಂದಂತೆ ಮಾಧ್ಯಮಗಳ ಮುಂದೆ ಮಾತನಾಡುತ್ತಿರುವ ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನು ಕನ್ನಡ ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಫಿಲ್ಮ್ ಚೇಂಬರ್‌ಗೆ ದೂರು ನೀಡಲಾಗಿದೆ.
ಕಳೆದ ಕೆಲವು ದಿನಗಳಿಂದ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಮುಂದೆ ಇಬ್ಬರೂ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ನಟ ದರ್ಶನ್ ಮತ್ತು ಇಂದ್ರಜಿತ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆ ದೂರು ದಾಖಲಿಸಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿರುವ ಮಾನವಹಕ್ಕು, ಭ್ರಷ್ಟಚಾರ ನಿಗ್ರಹದಳ ಸಂಸ್ಥೆ ಅಧ್ಯಕ್ಷ ಅಖಂಡ ಮೋಹನ್, ‘ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವಂತೆ ಅಸಭ್ಯವಾಗಿ ಮಾಧ್ಯಮದ ಮುಂದೆ ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿರುವ ನಟ ದರ್ಶನ್ ತೂಗುದೀಪ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಬ್ಬರೂ ಸಿನಿಮಾ ಶೈಲಿಯಲ್ಲಿ ಅಸಭ್ಯ ವರ್ತನೆ ಹಾಗೂ ರೌಡಿಗಳಂತೆ ನಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಕನ್ನಡ ಬೆಳ್ಳಿತೆರೆ, ಚಿತ್ರರಂಗದ ಗೌರವವನ್ನು ಹಾಳು ಮಾಡುತ್ತಿದ್ದಾರೆ” ಎಂದು ಆರೋಪಿಸಲಾಗಿದೆ.
“ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಕಲ್ಯಾಣ್ ಕುಮಾರ್, ಅಂಬರೀಶ್, ಶಂಕರ್ ನಾಗ್, ಅನಂತ್ ನಾಗ್, ಉದಯಕುಮಾರ್.. ಹೀಗೆ ಅನೇಕ ನಟರು ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಆದರೆ, ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ತುಚ್ಛ ಮಾತುಗಳಿಂದ ಕರ್ನಾಟಕದ ಗೌರವವನ್ನು ಹಾಳು ಮಾಡಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಇಬ್ಬರು ನಾಡಿನ ಯುವಸಮೂಹವನ್ನು ದಿಕ್ಕುತಪ್ಪಿಸಿ ಅವರ ಜೀವನವನ್ನು ಹಾಳು ಮಾಡಿ ಕೊಲೆಗಡುಕರನ್ನಾಗಿ ಪ್ರೇರಣೆ ನೀಡುವ ಮಾತುಗಳನ್ನು ಆಡುತ್ತಿದ್ದಾರೆ. ಇಬ್ಬರನ್ನೂ ಮುಂದಿನ ಐದು ವರ್ಷಗಳ ಕಾಲ ಚಲನಚಿತ್ರರಂಗದಿಂದ ಬಹಿಷ್ಕರಿಸಿ, ಯಾವುದೇ ರೀತಿಯ ಚಟುವಟಿಕೆಯಲ್ಲಿ ಭಾಗವಹಿಸದಿರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಸಂಸ್ಥೆ ಅಧ್ಯಕ್ಷ ಮೋಹನ್ ದೂರಿನಲ್ಲಿ ಆಗ್ರಹಿಸಿದ್ದಾರೆ.
ನಟ ದರ್ಶನ್ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಅತೀ ಕೆಟ್ಟ ಶಬ್ದಗಳಿಂದ ದರ್ಶನ್ ಮಾಧ್ಯಮಗಳಿಗೆ ಬೈದಿದ್ದರು. ಇಂದ್ರಜಿತ್ ಅವರ ವಿರುದ್ಧ ಮಾತನಾಡುವಾಗಲೂ ಅವಾಚ್ಯ ಶಬ್ದಗಳನ್ನು ಬಳಸಿದ್ದರು.
ಇದನ್ನೂ ಓದಿ: ವಂಚನೆ ಪ್ರಕರಣ: ವಿವಾದಕ್ಕೆ ತೆರೆ ಎಳೆದಿದ್ದೇವೆ ಎಂದ ನಟ ದರ್ಶನ್


