1979 ಮಾರ್ಚ್ 10ರಂದು ಬೆಂಗಳೂರಿನ ದೇವಾಂಗ ಸಂಘದಲ್ಲಿ ನಡೆದ ಮೊದಲನೇ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಕೋಲಾರದಿಂದ ನಾನು, ಕೋಟಿಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ, ಎಚ್ಚೆನ್, ಸೋಮಶೇಖರ ಗೌಡ, ಹ.ಸೋಮಶೇಖರ್ ಬಂದಿದ್ದೆವು. ನಾವು ಸತತವಾಗಿ ಓದುತಿದ್ದ ’ಸಂಕ್ರಮಣ’ ಪತ್ರಿಕೆಯ ಮೂಲಕ ನಮಗೆ ಅಪಾರ ಮೆಚ್ಚುಗೆಯಾಗಿದ್ದ ಚಂಪಾರನ್ನು ಅಂದೇ ಮೊದಲು ನೋಡಿದ್ದು. ಅವರ ಮೊನಚು, ವ್ಯಂಗ್ಯಗಳಿಂದಾಗಿ ಮಿಕ್ಕೆಲ್ಲ ಸಾಹಿತಿಗಳಿಗಿಂತಲೂ ಚಂಪಾ ನಮಗೆ ಹೆಚ್ಚು ಹತ್ತಿರವಾಗಿದ್ದರು. ಮಿಕ್ಕವರ ಸಾಹಿತ್ಯ ಅದರ ಸಂಕೀರ್ಣತೆಯಿಂದಾಗಿ ಆ ಹದಿಹರೆಯದ ವಯಸ್ಸಿನಲ್ಲಿ ನಮಗೆ ಅಷ್ಟೇನು ಅರ್ಥವಾಗುತ್ತಿರಲಿಲ್ಲ. ಅವರು ಬಂಡಾಯ ಸಮ್ಮೇಳನದ ಸಭಾಂಗಣದ ಮುಂದೆ, ಅದಾಗ ತಾನೇ ಬರೆದುತಂದಿದ್ದ ’ನಳಕವಿಯ ಮಸ್ತಕಾಭಿಷೇಕ’ ನಾಟಕದ ಪೋಸ್ಟರ್‌ಅನ್ನು ಕಂಬಕ್ಕೆ ಕಟ್ಟುತ್ತಿದ್ದರು. ದೂರದಿಂದ ಚಂಪಾ ಅವರನ್ನು ನಮಗೆ ಎಟುಕಲಾರದ ಬಹಳ ದೊಡ್ಡ ಸಾಹಿತಿ ಎಂದು ಊಹಿಸಿಕೊಂಡಿದ್ದೆವು, ಅಲ್ಲಿ ಅವರ ಸರಳತೆಯನ್ನು ಕಂಡು ದಂಗಾದೆವು!
ನಂತರದ ಬಂಡಾಯ ಸಾಹಿತ್ಯದ ಒಡನಾಟದಲ್ಲಿ ಚಂಪಾ ತೀರಾ ಹತ್ತಿರವಾಗಿಬಿಟ್ಟರು. ನಾನು ’ಲಂಕೇಶ್ ಪತ್ರಿಕೆ’ಯಲ್ಲಿ ಬರೆಯಲು ಆರಂಭಿಸಿದ ಮೇಲಂತೂ ತೀರಾ ಆಪ್ತರಾಗಿ, ಅವರು ಲಂಕೇಶರ ಜತೆ ಜಗಳವಾಡಿಕೊಂಡು ಹೊರಹೋದ ಮೇಲೂ ಅವರ ನನ್ನ ಬಾಂಧವ್ಯ ಕಡಿಮೆಯಾಗಲಿಲ್ಲ. ಲಂಕೇಶರು ನಿಧನರಾದ ನಂತರ, ನಾವೆಲ್ಲ ’ಅಗ್ನಿ’ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ ಮೇಲೆ ಅಗ್ನಿ ಶ್ರೀಧರ್ ಮತ್ತಿತರ ಸಾಹಿತಿ ಹೋರಾಟಗಾರರೊಂದಿಗೆ ಅನೇಕ ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಂಡೆವು, ಅದರಲ್ಲಿ ಪ್ರಮುಖ ಪಾತ್ರ ಚಂಪಾ ಅವರದೇ ಆಗಿತ್ತು.

ರಾಜಕುಮಾರ್ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿದಾಗ ಈ ಸಂಬಂಧ ನೆಡುಮಾರನ್ ಅವರನ್ನು ನೋಡಲು ಅಗ್ನಿ ಶ್ರೀಧರ್ ನೇತೃತ್ವದಲ್ಲಿ ದೇವನೂರು ಮಹದೇವ, ಅಗ್ರಹಾರ ಕೃಷ್ಣಮೂರ್ತಿ, ಎಲ್.ಹನುಮಂತಯ್ಯ ಮುಂತಾಗಿ ನಾವೆಲ್ಲ ಬಸ್ ಮಾಡಿಕೊಂಡು ಚೆನೈಗೆ ಹೋಗಿದ್ದೆವು. ಅದಕ್ಕೂ ಕ್ಯಾಪ್ಟನ್ ಚಂಪಾ ಅವರೇ ಆಗಿದ್ದರು.
ಅಮೆರಿಕದ ಬಾಲ್ಟಿಮೋರ್‌ನಲ್ಲಿ ನಡೆದ ’ಅಕ್ಕ’ ಸಮ್ಮೇಳನಕ್ಕೆ ಅನೇಕ ಸಾಹಿತಿ ಕಲಾವಿದರೊಂದಿಗೆ ಚಂಪಾ, ಜನ್ನಿ, ನಾನು ಕೂಡ ಹೋಗಿದ್ದೆವು. ಅಲ್ಲೇ ನೆಲೆಸಿರುವ ಸಿರೂರ್ ಹನುಮಂತ ರೆಡ್ಡಿ ನಮ್ಮೊಂದಿಗೆ ಸೇರಿಕೊಂಡರು. ಗೋಷ್ಠಿಯೊಂದರಲ್ಲಿ ಎಸ್.ಎಲ್.ಬೈರಪ್ಪನವರನ್ನು ಹಾಡಿ ಹೊಗಳುವ ಭಜನಾ ಕಾರ್ಯಕ್ರಮವೊಂದು ನಡೆಯುತಿತ್ತು. “ಸರ್.. ನಿಮ್ಮ ’ಪರ್ವ’ ಕಾದಂಬರಿ ಮಹಾಭಾರತದ ಮರುಸೃಷ್ಟಿ.. ಕನ್ನಡದಲ್ಲಿ ಇಂತಹದೊಂದು ಬರುವುದು ಅಪರೂಪ.. ಇದೇ ರೀತಿ ರಾಮಾಯಣದ ಮರುಸೃಷ್ಟಿ ಮಾಡಿ ಸರ್.. ನಿಮ್ಮಿಂದ ಮಾತ್ರ ಇದು ಸಾದ್ಯ..” ಎಂದು ಒಬ್ಬ ವಟು ಹೇಳಿದಾಕ್ಷಣ ಬೇರೆಲ್ಲಾ ವಟುಗಳು ’ವಟವಟ’ ಎನ್ನತೊಡಗಿದವು. ಬೈರಪ್ಪನವರು “ರಾಮಾಯಣ ಮರುಸೃಷ್ಟಿ ಸಾಧವಾಗಲಾರದು..” ಎನ್ನುತಿದ್ದಂತೆ ಹಿಂದೆ ನಮ್ಮೊಂದಿಗೆ ಕುಂತಿದ್ದ ಚಂಪಾ “ನೀವ್ಯಾರೂ ಕುವೆಂಪು ಅವರ ರಾಮಾಯಣ ದರ್ಶನಂ ಓದಿಲ್ಲೇನ್ರಿ.. ಅದು ರಾಮಾಯಣದ ಮರುಸೃಷ್ಟಿ ಅಲ್ಲೇನು” ಎನ್ನುತಿದ್ದಂತೆ ಬೈರಪ್ಪನವರ ವಂದಿಮಾಗಧ ವಟುಗಳು ಮೌನವಾದರು. ನಾವು ಆ ಭಜನಾ ಕಾರ್ಯಕ್ರಮವನ್ನು ಪ್ರತಿಭಟಿಸಿ ಹೊರಬಂದೆವು. ಅಂದು ಇಡೀ ರಾತ್ರಿ ತೀರ್ಥಸೇವನೆ ಮಾಡುತ್ತಾ ಚಂಪಾ ಅವರ ಜೋಕುಗಳಿಗೆ ಮನಸಾರೆ ನಕ್ಕೆವು.
ನಂತರದ ದಿನಗಳಲ್ಲಿ ಚಂಪಾ ಅವರೊಂದಿಗೆ ಅನೇಕ ಟಿ.ವಿ. ಡಿಬೇಟ್‌ಗಳಲ್ಲಿ ಭಾಗವಹಿಸುತ್ತಿದ್ದೆ.
ನಾವಿಬ್ಬರೂ ಸೇರಿದರಂತೂ ಚಡ್ಡಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದೆವು. ’ಲಿಂಗಾಯತ ಧರ್ಮ’ದ ಹೋರಾಟದಲ್ಲೂ ಇಬ್ಬರೂ ಜತೆಜತೆಯಾಗಿ ಅನೇಕ ಸಭೆಗಳಲ್ಲಿ ಪಾಲ್ಗೊಂಡೆವು. ಚಂಪಾ
ಕುರಿತು ಮಾತಾಡಲು ಬರೆಯಲು ಇನ್ನೂ ಸಾಕಷ್ಟಿದೆ, ಮುಂದೆ ಬರೆಯುತ್ತೇನೆ. ಕವಿ, ನಾಟಕಕಾರ, ಹೋರಾಟಗಾರರಾದ ಚಂಪಾ ನಮ್ಮಂತವರ ಸಾಕ್ಷಿಪ್ರಜ್ಞೆಯಾಗಿದ್ದರು. ಎಂದೂ ಎಲ್ಲೂ ರಾಜಿಯಾಗದ ತಮ್ಮ ಸಾಹಿತ್ಯ ಮತ್ತು ಹೋರಾಟಗಳಿಂದಾಗಿ ಸದಾ ಜೀವಂತವಾಗಿದ್ದ ಚಂಪಾರಿಗೆ ಸಾವಿಲ್ಲ, ಇನ್ನು ಮುಂದೆ ನಡೆಯುವ ಹೋರಾಟಗಳಲ್ಲೂ ಅವರು ನಮ್ಮೊಂದಿಗೆ-ನಮ್ಮೊಳಗೆ ಜೀವಂತವಾಗಿ ಇರುತ್ತಾರೆ.

ಸಿ.ಎಸ್.ದ್ವಾರಕಾನಾಥ್
ವೃತ್ತಿಯಿಂದ ವಕೀಲರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು. ಲಂಕೇಶ್ ಪತ್ರಿಕೆಯ ಒಡನಾಡಿಯಾಗಿದ್ದ ದ್ವಾರಕಾನಾಥ್, ’ಮೂಕ ನಾಯಕ’, ’ಗಾಂಧಿಮಟ್ಟಿದ ನಾಡಿನಲ್ಲಿ’, ’ಸಾಕ್ರೆಟಿಸ್ ಮತ್ತಿತರ ಕಥೆಗಳು’ ಕೃತಿಗಳನ್ನು ರಚಿಸಿದ್ದಾರೆ.
ಇದನ್ನೂ ಓದಿ: ಓಶೋ ಕಂಡಂತೆ ವಿವೇಕಾನಂದರು


