ಸೋಮವಾರ ಬಿಹಾರದ ಬಕ್ಸಾರ್‌ನ ಗಂಗಾ ನದಿ ತಟದಲ್ಲಿ ನೂರಕ್ಕೂ ಹೆಚ್ಚು ಮೃತದೇಹಗಳು ಕಂಡು ಬಂದಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಈಗ ಬಕ್ಸಾರ್‌ನಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಘಾಜಿಪುರದಲ್ಲಿಯೂ ಗಂಗೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ.
ಸತತ ಎರಡನೇ ದಿನವೂ ಗಂಗಾ ನದಿ ದಂಡೆಯಲ್ಲಿ ಮೃತದೇಹಗಳು ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ಮೃತ ದೇಹಗಳು ಉತ್ತರ ಪ್ರದೇಶದಿಂದ ಹರಿಯ ಬಿಡಲಾಗಿದೆ ಎಂದು ಬಿಹಾರದ ಅಧಿಕಾರಿಗಳು ಆರೋಪಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಮೃತದೇಹಗಳನ್ನು ನೀರಿಗೆ ಬಿಡುವ ಸಂಪ್ರದಾಯವಿಲ್ಲ ಎಂದು ವಾದಿಸಿದ್ದಾರೆ.
ಉತ್ತರ ಭಾರತದ ಗ್ರಾಮೀಣ ಭಾಗಗಳಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವುದರಿಂದ, ನದಿಯಲ್ಲಿ ತೇಲುತ್ತಿರುವ ಶವಗಳು ಕೋವಿಡ್ ಸೋಂಕಿತ ರೋಗಿಗಳ ಮೃತದೇಹಗಳೆಂದು ಶಂಕಿಸಲಾಗಿದೆ.
ಇದನ್ನೂ ಓದಿ: ಬಿಹಾರದ ಗಂಗಾ ನದಿ ತೀರದಲ್ಲಿ ತೇಲಿ ಬಂದ ಮೃತ ದೇಹಗಳು; ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಗ್ರಾಮೀಣ ಶವಾಗಾರಗಳಲ್ಲಿ ಯಾವುದೇ ಕೊರೊನಾ ನಿಯಮಾವಳಿಗಳನ್ನು ಪಾಲಿಸದಿರುವ ಕಾರಣ, ಈ ಮೃತದೇಹಗಳಿಂದ ಮತ್ತಷ್ಟು ಸೋಂಕು ಹರಡಬಹುದೆಂಬ ಭಯದಲ್ಲಿದ್ದಾರೆ ಸ್ಥಳೀಯರು. ನದಿಯಲ್ಲಿ ತೇಲುತ್ತಿರುವ ಶವಗಳನ್ನು ಆದಷ್ಟು ಬೇಗನೆ ರವಾನಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.
ನೀರಿನಲ್ಲಿ ಉಂಟಾಗುವ ಮಾಲಿನ್ಯವು ರೋಗದ ತ್ವರಿತ ಹರಡುವಿಕೆಗೆ ಕಾರಣವಾಗಬಹುದು ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದು, ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
“ನಮಗೆ ಮೃತದೇಹಗಳು ತೇಲುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಮ್ಮ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇವುಗಳು ಎಲ್ಲಿಂದ ಬಂದಿವೆ ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಘಾಜಿಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂಪಿ ಸಿಂಗ್ ಹೇಳಿದ್ದಾರೆ.
ಬಕ್ಸಾರ್ ಘಟನೆಯನ್ನು ಉಲ್ಲೇಖಿಸಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ರಾಜ್ಯಗಳನ್ನು ಕೇಳಿಕೊಂಡಿದ್ದಾರೆ.
“ಬಿಹಾರದ ಬಕ್ಸಾರ್ ಪ್ರದೇಶದ ಗಂಗಾ ನದಿಯಲ್ಲಿ ಶವಗಳು ತೇಲುತ್ತಿರುವ ಘಟನೆ ದುರದೃಷ್ಟಕರ. ಇದರ ಕುರಿತು ಖಂಡಿತವಾಗಿಯೂ ತನಿಖೆ ನಡೆಯಬೇಕಾಗಿದೆ” ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಉತ್ತರ ಪ್ರದೇಶದ ಮತ್ತು ಬಿಹಾರದ ಗಡಿಯಲ್ಲಿರುವ ಚೌಸಾ ಪಟ್ಟಣದಲ್ಲಿ ಸೋಮವಾರ 100 ಕ್ಕೂ ಹೆಚ್ಚು ಮೃತ ದೇಹಗಳು ಗಂಗಾ ನದಿಯಲ್ಲಿ ತೇಲುತ್ತಾ ನದಿ ದಡಗಳಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದವು. ಈ ದೃಶ್ಯಗಳನ್ನು ಕಂಡ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದರು.
ಗಂಗಾ ನದಿ ದಂಡೆಯಲ್ಲಿ ತೇಲುತ್ತಿರುವ ಈ ಮೃತ ದೇಹಗಳು ಉತ್ತರ ಪ್ರದೇಶ ಮತ್ತು ಬಿಹಾರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿವೆ. ಜೊತೆಗೆ ಈ ಮೃತದೇಹಗಳು ಉತ್ತರ ಪ್ರದೇಶದಲ್ಲಿ ಅಧಿಕಾರಿಗಳು ಮುಚ್ಚಿಡುತ್ತಿರುವ ಕೊರೊನಾ ಸಾವುಗಳಿಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: ‘ಬಡವರ ಕಷ್ಟಗಳನ್ನು ಲೆಕ್ಕಿಸದೆ ಲಾಕ್‌ಡೌನ್’: ಬೀದಿ ವ್ಯಾಪಾರಿಗಳ ಸಂಘದಿಂದ ಸರ್ಕಾರಕ್ಕೆ ಪತ್ರ


