Homeಅಂಕಣಗಳುಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್' ಸಿನೆಮಾ

ಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್’ ಸಿನೆಮಾ

- Advertisement -
- Advertisement -

ತನ್ನನ್ನು ನಾಗರಿಕ ಎಂದು ಕರೆದುಕೊಳ್ಳುವ ಸಮಾಜ ಪೂರ್ವಗ್ರಹಗಳಿದ್ದಲ್ಲಿ ಅವುಗಳನ್ನು ಮೂರು ತಾಸು ಬದಿಗೆ ಸರಿಸಿ ಮನತೆರೆದು ’ಜೈ ಭೀಮ್’ ಚಲನಚಿತ್ರವನ್ನು ಅದರ ಎಲ್ಲ ಮಿತಿಗಳೊಂದಿಗೆ ಒಮ್ಮೆ ನೋಡುವುದು ಒಳಿತು. ಬತ್ತಿ ಹೋಗಿರಬಹುದಾದ ಅಂತಃಕರಣದ ಸೆಲೆಗಳು ಮತ್ತೆ ಜಿನುಗಿಯಾವು!

ಕ್ರೂರ ಜಾತಿವ್ಯವಸ್ಥೆಯ ಧೂರ್ತ ಹುನ್ನಾರಗಳಿಗೆ ಕೊನೆಮೊದಲಿಲ್ಲ. ಮೇಲುಕೀಳಿನ ಹಾಲಾಹಲವನ್ನು ತುಂಬಿತುಳುಕಿಸುವ ಜಾತಿಪದ್ಧತಿ ಹಿಂದೂ ಸಮಾಜದ ವೈಶಿಷ್ಟ್ಯ. ಮನುಷ್ಯನೇ ಮನುಷ್ಯನನ್ನು ಹಿಂಸಿಸಿ ಅವಮಾನಿಸಿ ಮೃಗದಂತೆ ಬೇಟೆಯಾಡಿ ಕೊಲ್ಲುವ ಕ್ರೌರ್ಯದ ಅಮಾನುಷ ನಿರ್ಮಿತಿ.

’ಜೈ ಭೀಮ್’ ಚಲನಚಿತ್ರದ ಮೊದಲ ದೃಶ್ಯವೇ ’ನಾಗರಿಕ’ ಸಮಾಜದ ಕರಾಳ ಮುಖದ ಕುರೂಪವನ್ನು ತೆರೆದು ತೋರುತ್ತದೆ. ಬಿಡುಗಡೆಯಾದ ಕೈದಿಗಳನ್ನು ಜೈಲಿನ ಆವರಣದಲ್ಲಿ ಪೊಲೀಸರು ಅವರವರ ಜಾತಿಯ ಆಧಾರದ ಮೇಲೆ ಪ್ರತ್ಯೇಕಗೊಳಿಸಿ ನಿಲ್ಲಿಸುತ್ತಾರೆ. ಬಲಿಷ್ಠ ಜಾತಿಯವರನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ದಲಿತರು-ಆದಿವಾಸಿಗಳನ್ನು ಉಳಿಸಿಕೊಂಡು ಅವರು ಮಾಡಿಯೇ ಇಲ್ಲದ ಹೊಸ ಆಪಾದನೆಗಳನ್ನು ಹೇರಲಾಗುತ್ತದೆ. ನಿಜವಾದ ಅಪರಾಧಿಗಳು ಪತ್ತೆಯಾಗದೆ ಬಾಕಿ ಉಳಿದಿರುವ ಕೇಸುಗಳಲ್ಲಿ ಇವರನ್ನು ಸಿಲುಕಿಸಿ ಪುನಃ ಜೈಲಿಗೆ ಅಟ್ಟಲಾಗುತ್ತದೆ. ಬಗೆಹರಿಸಲಾಗದೆ ಬಾಕಿ ಉಳಿಸಿರುವ ಕೇಸುಗಳಲ್ಲಿ ಈ ಅತಿ ದೀನರನ್ನು ಇರುಕಿಸಲಾಗುತ್ತದೆ. ಹೀಗೆ ಬಲಿಪಶುಗಳನ್ನು ಪೂರೈಕೆ ಮಾಡುವ ಜೈಲರನ ಜೇಬುಗಳನ್ನು ಪೊಲೀಸರೇ ಭರ್ತಿ ಮಾಡುತ್ತಾರೆ.

ತಮಿಳುನಾಡಿನಲ್ಲಿ ಇರುಳರೆಂದೂ, ಕರ್ನಾಟಕದಲ್ಲಿ ಇರುಳಿಗರೆಂದೂ ಕರೆಯಲಾಗುವ ಈ ಸಮುದಾಯ ಅತ್ಯಂತ ಹಿಂದುಳಿದ ಬುಡಕಟ್ಟಿಗೆ ಸೇರಿದವರು. ಹಾವು ಹಿಡಿದು ಕಾಡಿಗೆ ಬಿಡುವ ಮತ್ತು ಹಾವಿನ ವಿಷಕ್ಕೆ ಔಷಧಿ ಕೊಡುವ ಈ ಜನರು ಹೊಲಗದ್ದೆಗಳಲ್ಲಿ ಫಸಲು ಮುಕ್ಕುವ ಇಲಿಗಳ ಹಿಡಿಯುವವರು. ಬ್ರಿಟಿಷ್ ಸರ್ಕಾರದಿಂದ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡಿದ್ದ ಹಲವಾರು ಜಾತಿಗಳು ಮತ್ತು ಬುಡಕಟ್ಟುಗಳ ಪೈಕಿ ಇರುಳರೂ ಸೇರಿದ್ದಾರೆ. ಎರಡು ಹೊತ್ತಿನ ಅನ್ನಕ್ಕೆ ಮತ್ತು ಗೇಣು ಬಟ್ಟೆಗೆ ಗಳಿಸುವಲ್ಲೇ ಮುಗಿದುಹೋಗುವ ದೀನ ಬದುಕುಗಳು ಇವರವು. ಇರುಳಿಗರನ್ನು ಮತ್ತು ಇವರಂತಹ ಅಸಂಖ್ಯ ತಬ್ಬಲಿ ಜಾತಿಗಳನ್ನು ಸವರ್ಣೀಯ ಸಮಾಜ ಮತ್ತು ನಮ್ಮ ಅಪರಾಧ ನ್ಯಾಯಾಂಗ ವ್ಯವಸ್ಥೆ (Criminal Justice System) ನಡೆಸಿಕೊಳ್ಳುವ ಪರಿ ಅಮಾನುಷ. ದಿಕ್ಕಿಲ್ಲದ ನಾಯಿ ನರಿಗಳು ಹುಳು ಹುಪ್ಪಟೆಗಳಿಗಿಂತಲೂ ಕೀಳಾಗಿ ಹುಟ್ಟಿ ಸಾಯುವ ಇವರನ್ನು ಮನುಷ್ಯರೆಂದು ಬಗೆದೇ ಇಲ್ಲ. ಹಾಗೆಂದೇ ಮಾನವಹಕ್ಕುಗಳು ಎಂಬ ಪರಿಕಲ್ಪನೆ ಇವರನ್ನು ದೂರದಿಂದಲೂ ಮುಟ್ಟುವುದಿಲ್ಲ. ಇವರ ಭಾರತವೇ ಬೇರೆ. ಅದು ಕತ್ತಲ ಭಾರತ. ಅದೃಶ್ಯ ಭಾರತ. ನಾಗರಿಕ ಎಂದು ಹೇಳಲಾಗುವ ಅನಾಗರಿಕ ಸಮಾಜದ ಕುರುಡುಗಣ್ಣಿಗೆ, ಕಿವುಡುಗಿವಿಗೆ, ಸತ್ತ ನಾಲಗೆಗೆ, ಅವಸಾನಗೊಂಡ ಆತ್ಮಸಾಕ್ಷಿಯನ್ನು ಆರ್ತತೆ, ಅಸಹಾಯಕತೆಯಿಂದ ನೋಡುವ ಆದಿವಾಸಿ-ದಲಿತ ಭಾರತ.

ಜೈ ಭೀಮ್ ಚಲನಚಿತ್ರದ ಕ್ರೌರ್ಯವನ್ನು ಛತ್ತೀಸಗಢ-ಝಾರ್ಖಂಡದಂತಹ ಆದಿವಾಸಿ ಬಹುಳ ಸೀಮೆಯಂತೂ ಅನವರತ ಎದುರಿಸುತ್ತ ಬಂದಿದೆ. ಉತ್ತರಪ್ರದೇಶ-ಬಿಹಾರದಲ್ಲಿ ನೆಲೆಸಿರುವ ಹೊಲಗದ್ದೆಗಳಲ್ಲಿ ಇಲಿ ಹಿಡಿದು ತಿನ್ನುವ ಮೂಸಾಹರ ಎಂಬ ಅತಿ ದಲಿತ ಜಾತಿಯೊಂದಿದೆ. ಅದರಲ್ಲಿ ಅಕ್ಷರಸ್ಥರ ಪ್ರಮಾಣ ಶೇ.ಮೂರು. ಇದೇ ಗತಿ ಮುಂದುವರೆದರೆ ಈ ಜಾತಿ ಸಂಪೂರ್ಣ ಸಾಕ್ಷರವಾಗಲು ನಾಲ್ಕು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬೇಕಾದೀತಂತೆ! ಮೂಸಾಹರರೊಂದಿಗೆ ಇರುಳರೂ ಸೇರಿದಂತೆ ಇನ್ನೂ ನೂರಾರು ಜಾತಿಗಳು- ಬುಡಕಟ್ಟುಗಳು ಈ ಪಟ್ಟಿಗೆ ಸೇರುವುದು ನಿಶ್ಚಿತ.

ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು Annihilation of Casteನ ಎಂಟನೆಯ ಅಧ್ಯಾಯದಲ್ಲಿ ಆದಿವಾಸಿಗಳ ದುಸ್ಥಿತಿಯ ಕುರಿತು ಎತ್ತಿರುವ ಪ್ರಶ್ನೆಯೊಂದು ಹೀಗಿದೆ: “ಆದಿವಾಸಿಗಳನ್ನು ಇವ ನಮ್ಮವನೆಂದು ತಬ್ಬಿಕೊಂಡು ಪ್ರೀತಿಸಲು ಹಿಂದೂ ಸಮಾಜ ಮುಂದಾಗಲೇ ಇಲ್ಲ. ಬದುಕಿಡೀ ಜಾತಿವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದೇ ಹಿಂದುವಿನ ಪರಮ ಉದ್ದೇಶವಾಗಿದ್ದಾಗ ಈ ಕೆಲಸ ಮಾಡಲು ಹಿಂದುವಿಗೆ ಹೇಗೆ ಸಾಧ್ಯವಾದೀತು”?

1871ರಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ ಕ್ರಿಮಿನಲ್ ಟ್ರೈಬ್ಸ್ ಕಾಯಿದೆಯನ್ನು 1951ರಲ್ಲಿ ರದ್ದು ಮಾಡಲಾಗುತ್ತದೆ. ಆದರೆ ಕಾಗದದ ಮೇಲೆ ಮಾತ್ರವೇ ರದ್ದಾಗಿರುವ ಈ ಕಾಯಿದೆಯನ್ನು ಪೊಲೀಸ್ ವ್ಯವಸ್ಥೆ ಜೀವಂತವಾಗಿ ಇರಿಸಿಕೊಂಡಿದೆ. ಕ್ರಿಮಿನಲ್ ಟ್ರೈಬ್ಸ್ ಹಣೆಪಟ್ಟಿ ಹಚ್ಚಲಾಗಿದ್ದ ನೂರಾರು ಬುಡಕಟ್ಟುಗಳ ಅಮಾಯಕ ಜನರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದೆ. ಅವರು ಮಾಡದೆ ಇರುವ ಅಪರಾಧಗಳಲ್ಲಿ ಬಂಧಿಸಿ ಜೈಲುಗಳಲ್ಲಿ ಚಿತ್ರಹಿಂಸೆ ಮಾಡಿ ಅವರಿಂದ ಬಲವಂತದ ಹುಸಿ ತಪ್ಪೊಪ್ಪಿಗೆ ಪಡೆದು, ಅದನ್ನು ನ್ಯಾಯಾಲಯಗಳಲ್ಲಿ ಮಂಡಿಸಿ, ಶಿಕ್ಷೆ ಕೊಡಿಸಿ ಜೈಲುಗಳ ನರಕಕ್ಕೆ ನೂಕಲಾಗುತ್ತಿದೆ. ಚಿತ್ರವಧೆಯ ಹಂತದಲ್ಲೇ ಪ್ರಾಣ ಬಿಡುವ ದಿಕ್ಕಿಲ್ದವರ ಲೆಕ್ಕವಿಲ್ಲ.

ಅಮಾಯಕ ಅನಕ್ಷರಸ್ಥ ತಬ್ಬಲಿ ಜನಾಂಗಗಳ ಈ ಚಿತ್ರವಧೆಯ ರಕ್ತ ನಾಗರಿಕ ಸಮಾಜದ ಕೈಗಳನ್ನು ಮೆತ್ತಿ ತೊಟ್ಟಿಕ್ಕುತ್ತಿದೆ. ಕಣ್ಣುಮುಚ್ಚಿ ಲೋಲುಪತೆಯಲ್ಲಿ ಮೈಮರೆತಿರುವ ಈ ಜಾತಿವ್ಯಾಧಿಪೀಡಿತ ಸಮಾಜದ ಆತ್ಮಸಾಕ್ಷಿ ಸಾವಿರಾರು ವರ್ಷಗಳ ಅಂಧ ಅಮಾನುಷ ಪರಂಪರೆಯಡಿ ಹೂತು ಹೋಗಿದೆ.

ರಾಷ್ಟ್ರೀಯ ಚಿತ್ರಹಿಂಸೆ ವಿರೋಧೀ ಆಂದೋಲನದ (National Campaign Against Torture) ಅಧ್ಯಯನದ ಪ್ರಕಾರ ದಿನಂಪ್ರತಿ ಸರಾಸರಿ ಐವರು ಬಂಧಿತರು ಪೊಲೀಸ್ ವಶದಲ್ಲಿ ಚಿತ್ರಹಿಂಸೆಯಿಂದ ಸಾಯುತ್ತಿದ್ದಾರೆ. 2019ರಲ್ಲಿ ಹೀಗೆ ಕಾನೂನುಪಾಲಕರಿಂದ ’ಕೊಲೆ’ ಯಾದವರ ಸಂಖ್ಯೆ 1,723.

2020ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದಾಖಲಿಸಿರುವ ನ್ಯಾಯಾಂಗ ವಶದ ಸಾವುಗಳ ಸಂಖ್ಯೆ 1,569. ಕಾಗದದ ಮೇಲೆ ಕಡತಗಳಲ್ಲಿ ಅಂಕಿಅಂಶಗಳಾಗಿ ಮಾತ್ರವೇ ದಾಖಲಾಗುವ ಈ ಸಾವುಗಳ ಹಿಂದೆ ಎಂತೆಂತಹ ಕ್ರೌರ್ಯ- ಕಣ್ಣೀರಿನ ಕತೆಗಳಿದ್ದಾವು!

ಠಾಣೆಗಳಲ್ಲಿ ಜರುಗುವ ಈ ’ಕೊಲೆ’ಗಳ ಬಲಿಪಶುಗಳು ಬಹುತೇಕ ತಳವರ್ಗಗಳಿಗೆ ಸೇರಿದವರು. ದಲಿತರು, ಬುಡಕಟ್ಟು ಜನಾಂಗಗಳವರು ಹಾಗೂ ಮುಸಲ್ಮಾನರು. ಭಾರತ ಸರ್ಕಾರ ಅಪರಾಧಗಳ ಕುರಿತು (ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರ್ಷವರ್ಷವೂ ಅಂಕಿಅಂಶಗಳನ್ನು ಪ್ರಕಟಿಸುತ್ತದೆ. ನಮ್ಮ ಕ್ರಿಮಿನಲ್ ನ್ಯಾಯವ್ಯವಸ್ಥೆಯು ಬಡವರು ಮತ್ತು ದಮನಿತರ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವ ದುಷ್ಟತನದ ಒಂದು ಸಣ್ಣ ಉದಾಹರಣೆ ಈ ಅಂಕಿಅಂಶಗಳು. ಹಣ ತೆತ್ತು ಉತ್ತಮ ವಕೀಲರನ್ನು ನೇಮಕ ಮಾಡಿಕೊಳ್ಳುವ ಹಣವಂತರು-ಬಲಿಷ್ಠರು-ಪ್ರಭಾವಿಗಳನ್ನು ಬಂಧಿಸಿಡುವ ಶಕ್ತಿ ಯಾವ ಜೈಲಿನ ಸಲಾಕೆಗಳಿಗೂ ಇಲ್ಲ.

ಸರ್ಕಾರಿ ಸಂಸ್ಥೆಯೇ ಆಗಿರುವ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಶಿಕ್ಷೆಯಾಗಿ ಸೆರೆವಾಸ ಅನುಭವಿಸಿರುವ ವಿಚಾರಣಾಧೀನ ಕೈದಿಗಳ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಮುಸಲ್ಮಾನರ ಪ್ರಮಾಣ ಶೇ.50.8. ದೇಶದ ಜನಸಂಖ್ಯೆಯಲ್ಲಿ ಇವರ ಒಟ್ಟು ಪ್ರಮಾಣ ಶೇ.39.4. ಈ ಮೂರೂ ಸಮುದಾಯಗಳು ಆರ್ಥಿಕ-ಸಾಮಾಜಿಕ-ಶೈಕ್ಷಣಿಕವಾಗಿ ಹಿಂದುಳಿದವುಗಳು. ದಾರಿದ್ರ್ಯದ ತಿರುಗಣಿಗೆ ಸಿಕ್ಕ ಈ ಸಮುದಾಯಗಳು ನಿರುದ್ಯೋಗದ ಉರಿಯನ್ನೂ ಎದುರಿಸುತ್ತ ಬಂದಿವೆ. ಭೂ ಒಡೆತನದ ಬಲವೂ ಇವುಗಳಿಗೆ ಇಲ್ಲ. ಬಲಿಷ್ಠ ಜಾತಿಗಳ ದಮನ ದೌರ್ಜನ್ಯ ಹಿಂಸೆಗಳಲ್ಲಿ ಬೇಯುತ್ತ ಬಂದಿವೆ. ಅಮೆರಿಕೆಯಲ್ಲಿ ಕೂಡ ದಮನಿತ ಜನಾಂಗವಾದ ಕಪ್ಪು ವರ್ಣೀಯರ ಜನಸಂಖ್ಯಾ ಪ್ರಮಾಣ ಶೇ.13. ಆದರೆ ಜೈಲುಗಳಲ್ಲಿ ಕೊಳೆಯುತ್ತಿರುವ ಕಪ್ಪು ಜನರ ಪ್ರಮಾಣ ಶೇ.40.

ತಾರತಮ್ಯ ತುಂಬಿ ತುಳುಕಿರುವ ವ್ಯಾಧಿಗ್ರಸ್ತ ಅಸಮಾನ ಸಮಾಜದ ಪ್ರತಿಬಿಂಬವಿದು. ಸ್ವಾತಂತ್ರ್ಯ, ಸಮಾನತೆ, ಸೋದರತೆ ಹೊಂದಿದ ಸಮಾಜ ಮಾತ್ರವೇ ಆರೋಗ್ಯಕರವೂ ಬಲಿಷ್ಠವೂ ಮತ್ತು ಸಮೃದ್ಧವೂ ಆಗಬಲ್ಲದು.


ಇದನ್ನೂ ಓದಿ:  ದಾಸ್ತಯೆವ್‌ಸ್ಕಿ 200; ಇಡೀ ಮನುಕುಲಕ್ಕೆ ಸಲ್ಲುವ ಕಥೆಗಳನ್ನು ರಚಿಸಿದ ಫ್ಯೊದೋರ್ ಮಿಖಾಯ್ಲೊವಿಚ್ ದಾಸ್ತಯೆವ್‌ಸ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...