ಬುಧವಾರ (ಫೆ.5) ಪ್ರಕಟಗೊಂಡ ಬಹುತೇಕ ಮತದಾನೋತ್ತರ ಸಮೀಕ್ಷೆಗಳು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಮೂರು ಸಮೀಕ್ಷೆಗಳು ಮಾತ್ರ ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿವೆ. ಇನ್ನೆರಡು ಸಮೀಕ್ಷೆಗಳು ಜಿದ್ದಾ ಜಿದ್ದಿನ ಸ್ಪರ್ಧೆಯ ಸುಳಿವು ನೀಡಿವೆ. ಗಮನಾರ್ಹವಾಗಿ 2020ರ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್, ಈ ಬಾರಿ ಖಾತೆ ತೆರೆಯಬಹುದು ಎಂದು ಹಲವು ಸಮೀಕ್ಷೆಗಳು ಹೇಳಿವೆ.
ಮತದಾರರನ್ನು ಭೇಟಿಯಾಗಿ ಸಂಗ್ರಹಿಸಿದ ಅಭಿಪ್ರಾಯಗಳ ಆಧಾರದ ಮೇಲೆ ಚುನಾವಣಾ ಸಮೀಕ್ಷಾ ಸಂಸ್ಥೆಗಳು ಮತದಾನೋತ್ತರ ಸಮೀಕ್ಷಾ ವರದಿಗಳನ್ನು ಪ್ರಕಟಿಸುತ್ತವೆ.
ಮತದಾನೋತ್ತರ ಸಮೀಕ್ಷೆಗಳು ಅಂದಾಜಿಸಿದಂತೆ ಫಲಿತಾಂಶ ಬರಲಿದೆ ಎನ್ನಲು ಸಾಧ್ಯವಿಲ್ಲ. ಅಂತಿಮ ಫಲಿತಾಂಶ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಬಹುದು.
2020ರ ದೆಹಲಿ ವಿಧಾನಸಭೆಯ ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಫಲಿತಾಂಶ ಪ್ರಕಟಗೊಂಡಾಗ ವಿಫಲವಾಗಿತ್ತು. 2024ರ ಲೋಕಸಭಾ ಚುನಾವಣೆ ಮತ್ತು ಹರಿಯಾಣದ ವಿಧಾನಸಭಾ ಚುನಾವಣೆಗಳಲ್ಲಿಯೂ ಮತದಾನೋತ್ತರ ಸಮೀಕ್ಷೆಗಳು ತಪ್ಪಾಗಿವೆ.
ಬುಧವಾರ ಪ್ರಕಟಗೊಂಡ ಮತದಾನೋತ್ತರ ಸಮೀಕ್ಷೆಗಳು ದೂರದರ್ಶನ ಚಾನೆಲ್‌ಗಳಿಗೆ ಸಂಬಂಧಿಸಿಲ್ಲ. ಆಕ್ಸಿಸ್ ಮೈ ಇಂಡಿಯಾ ಮತ್ತು ಟುಡೇಸ್ ಚಾಣಕ್ಯದಂತಹ ಪ್ರಮುಖ ಸಮೀಕ್ಷಾ ಸಂಸ್ಥೆಗಳು ಗುರುವಾರ ತಮ್ಮ ಸಮೀಕ್ಷಾ ವರದಿ ಬಿಡುಗಡೆ ಮಾಡುವುದಾಗಿ ತಿಳಿಸಿವೆ.
ಬುಧವಾರ, ಮ್ಯಾಟ್ರಿಝ್ ಮತ್ತು ಡಿ ವಿ ರಿಸರ್ಚ್ ಪ್ರಕಟಿಸಿದ ಎರಡು ಮತದಾನೋತ್ತರ ಸಮೀಕ್ಷೆ ವರದಿಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಎಎಪಿ ನಡುವೆ ಹತ್ತಿರದ ಸ್ಪರ್ಧೆ ಏರ್ಪಡಲಿದೆ ಎಂದಿವೆ. ಮ್ಯಾಟ್ರಿಝ್ ಬಿಜೆಪಿ +35-40 ಸ್ಥಾನಗಳು, ಎಎಪಿ 32-37 ಮತ್ತು ಕಾಂಗ್ರೆಸ್ 0-1 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಡಿ ವಿ ರಿಸರ್ಚ್ ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ 36-44 ಸ್ಥಾನಗಳು ಮತ್ತು ಎಎಪಿಗೆ 26-34 ಸ್ಥಾನಗಳು ಸಿಗಲಿವೆ ಎಂದು ಹೇಳಿವೆ.
ಆರು ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಗೆಲುವಿನ ಮುನ್ಸೂಚನೆ ನೀಡಿವೆ. ಅದರಲ್ಲಿ ಕೆಲವರ ಭರ್ಜರಿ ಗೆಲುವು ಕೂಡ ಸೇರಿದೆ. ಚಾಣಕ್ಯ ಸ್ಟ್ರಾಟಜೀಸ್ ಪ್ರಕಾರ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು 39-44 ಸ್ಥಾನಗಳನ್ನು, ಎಎಪಿ 25-28 ಮತ್ತು ಕಾಂಗ್ರೆಸ್ 2-3 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಪಿ ಮಾರ್ಕ್ ಬಿಜೆಪಿಗೆ 39-44 ಸ್ಥಾನ, ಎಎಪಿಗೆ 21-31 ಸ್ಥಾನ ಮತ್ತು ಕಾಂಗ್ರೆಸ್‌ಗೆ 0-1 ಸ್ಥಾನಗಳನ್ನು ನೀಡಿದೆ.
ಪೀಪಲ್ಸ್ ಪಲ್ಸ್ ಪ್ರಕಾರ ಬಿಜೆಪಿ +51 ರಿಂದ 60 ಸ್ಥಾನಗಳು, ಎಎಪಿ 10-19 ಸ್ಥಾನಗಳು ಮತ್ತು ಕಾಂಗ್ರೆಸ್ 0-1 ಸ್ಥಾನಗಳನ್ನು ಪಡೆಯಬಹುದು. ಪೀಪಲ್ಸ್ ಇನ್ಸೈಟ್ ಪ್ರಕಾರ ಬಿಜೆಪಿ+40-44 ಸ್ಥಾನ, ಎಎಪಿ 25-28 ಸ್ಥಾನ ಮತ್ತು ಕಾಂಗ್ರೆಸ್ 0-1 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಿದೆ. ಪೋಲ್ ಡೈರಿ ಪ್ರಕಾರ ಬಿಜೆಪಿ +42-50 ಸ್ಥಾನ, ಎಎಪಿ 18-25 ಸ್ಥಾನ ಮತ್ತು ಕಾಂಗ್ರೆಸ್ 0-2 ಸ್ಥಾನಗಳನ್ನು ಪಡೆಯಲಿವೆ.
ಜೆವಿಸಿ ಮತದಾನೋತ್ತರ ಸಮೀಕ್ಷೆಯ ಪ್ರಕಾರ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 39-45 ಸ್ಥಾನಗಳನ್ನು, ಎಎಪಿ 22-31 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 0-2 ಸ್ಥಾನಗಳನ್ನು ಪಡೆಯಲಿವೆ.
ಆದಾಗ್ಯೂ, ಇತರ ಮೂರು ಸಂಸ್ಥೆಗಳು ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಮೈಂಡ್ ಬ್ರಿಂಕ್ ಮೀಡಿಯಾ ಎಎಪಿ 44-49, ಬಿಜೆಪಿ 21-25 ಮತ್ತು ಕಾಂಗ್ರೆಸ್ 0-1 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ. ವೀ ಪ್ರೆಸೈಡ್ ಎಎಪಿಗೆ 46-52, ಬಿಜೆಪಿಗೆ 18-23 ಮತ್ತು ಕಾಂಗ್ರೆಸ್‌ಗೆ 0-1 ಸ್ಥಾನಗಳನ್ನು ನೀಡಿದೆ. ಕೆಕೆ ಸರ್ವೇಸ್ ಅಂಡ್ ಸ್ಟ್ರಾಟರ್ಜೀಸ್ ಎಎಪಿಯ ಸಂಭಾವ್ಯ ಸ್ಥಾನಗಳ ಸಂಖ್ಯೆ 44 ಮತ್ತು ಬಿಜೆಪಿಯದ್ದು 26 ಎಂದು ಅಂದಾಜಿಸಿದೆ.
ಬಿಜೆಪಿ ಮತದಾನೋತ್ತರ ಸಮೀಕ್ಷಾ ವರದಿಗಳನ್ನು ಸ್ವಾಗತಿಸಿದರೆ, ಎಎಪಿ ಅವುಗಳನ್ನು ತಿರಸ್ಕರಿಸಿದೆ. “2013, 2015 ಮತ್ತು 2020ರ ಮತದಾನೋತ್ತರ ಸಮೀಕ್ಷೆಗಳು ಎಎಪಿಗೆ ಸೋಲು ಎಂದಿತ್ತು. ಆದರೂ, ಎಎಪಿ ಬೃಹತ್ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ಬಾರಿಯೂ ಅದು ಭಿನ್ನವಾಗಿರುವುದಿಲ್ಲ” ಎಂದು ಎಎಪಿ ಮುಖ್ಯ ವಕ್ತಾರೆ ಪ್ರಿಯಾಂಕಾ ಕಕ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಮತದಾನೋತ್ತರ ಸಮೀಕ್ಷೆಗಳು ತೋರಿಸುತ್ತಿರುವ ಫಲಿತಾಂಶಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಫೆಬ್ರವರಿ 8 ರಂದು ನಮ್ಮ ಗೆಲುವು ಇಂದು ಸಮೀಕ್ಷೆಗಳು ತೋರಿಸಿದ್ದಕ್ಕಿಂತ ಹೆಚ್ಚು ಅದ್ಭುತವಾಗಿರುತ್ತದೆ” ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.
ಪ್ರತಿಯೊಂದು ಸಂಸ್ಥೆಯಲ್ಲಿಯೂ ದಲಿತರು-ದುರ್ಬಲ ವರ್ಗದ ನಾಯಕತ್ವ ನೋಡಲು ಬಯಸುತ್ತೇನೆ: ರಾಹುಲ್ ಗಾಂಧಿ


