ದೆಹಲಿಯ 70 ಸದಸ್ಯ ಬಲದ ವಿಧಾನಸಭೆಗೆ ಇಂದು (ಫೆ.5) ಮತದಾನ ನಡೆಯುತ್ತಿದೆ. ಮುಂದಿನ ಐದು ವರ್ಷಗಳ ಕಾಲ ಕೇಂದ್ರಾಡಳಿತ ಪ್ರದೇಶವಾದ ರಾಷ್ಟ್ರ ರಾಜಧಾನಿಯನ್ನು ಯಾರು ಮುನ್ನಡೆಸುತ್ತಾರೆ ಎಂಬುವುದನ್ನು ಈ ಚುನಾವಣೆ ನಿರ್ಧರಿಸಲಿದೆ. ಒಂದೇ ಹಂತದಲ್ಲಿ ನಡೆಯುವ ಚುನಾವಣೆಗೆ 13,033 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದೆ.
ಈ ಬಾರಿಯ ಚುನಾವಣೆಯಲ್ಲಿ ಆಡಳಿತರೂಢ ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಫೆಬ್ರವರಿ 8ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.
ಒಟ್ಟು 1.5 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸುವ ಅರ್ಹತೆ ಹೊಂದಿದ್ದು, 699 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಅಭ್ಯರ್ಥಿಗಳಲ್ಲಿ 603 ಪುರುಷರು, 95 ಮಹಿಳೆಯರು ಮತ್ತು ಒಬ್ಬರು ತೃತೀಯ ಲಿಂಗಿ ಇದ್ದಾರೆ.
ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಎಎಪಿಯೇ ಪ್ರಾಬಲ್ಯ ಹೊಂದಿತ್ತು. ಚುನಾವಣಾ ಪೂರ್ವದ ನಿರೀಕ್ಷೆಯಂತೆ ಗೆದ್ದು ಸರ್ಕಾರ ರಚಿಸಿತ್ತು. ಬಿಜೆಪಿ ಸಂಪೂರ್ಣ ನೆಲ ಕಚ್ಚಿತ್ತು, ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿತ್ತು.
2015ರ ಚುನಾವಣೆಯಲ್ಲಿ ಎಎಪಿ ಶೇಖಡ 54.6ರಷ್ಟು ಮತಗಳನ್ನು ಪಡೆದು ದಾಖಲೆಯ 67 ಸ್ಥಾನಗಳೊಂದಿಗೆ ಭರ್ಜರಿ ಜಯ ಸಾಧಿಸಿತ್ತು. ಉಳಿದ ಮೂರು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. 2020ರ ಚುನಾವಣೆಯಲ್ಲಿ ಎಎಪಿಯ ಮತ ಹಂಚಿಕೆ ಮತ್ತು ಸ್ಥಾನಗಳು ಕ್ರಮವಾಗಿ ಶೇಖಡ 53.6 ಮತ್ತು 62ಕ್ಕೆ ಅಲ್ಪ ಕುಸಿತ ಕಂಡಿತ್ತು. ಬಿಜೆಪಿ ಉಳಿದ ಎಂಟು ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ಮತ್ತೆ ತನ್ನ ಖಾತೆ ತೆರೆಯಲು ವಿಫಲವಾಗಿತ್ತು.
ಆದರೆ, ಈ ಬಾರಿ ಸಂಪೂರ್ಣ ಚಿತ್ರಣ ಬದಲಾಗಿದೆ. ಎಎಪಿಯ ಪ್ರಾಬಲ್ಯ ಕಳೆಗುಂದಿದಂತೆ ಕಾಣುತ್ತಿದೆ. ಬಿಜೆಪಿ ಮತ್ತೆ ಪುಟಿದೆದ್ದಿದೆ. ಕಾಂಗ್ರೆಸ್ ಕೂಡ ಗೆಲ್ಲುವ ಉತ್ಸಾಹದಲ್ಲಿದೆ. ಹಾಗಾಗಿ, ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಮೂರೂ ಪಕ್ಷಗಳು ಆರೋಪ-ಪ್ರತ್ಯಾರೋಪ, ದೂರು-ಪ್ರತಿದೂರು, ನೂರಾರು ಭರವಸೆಗಳೊಂದಿಗೆ ಮತದಾರರ ಮನವೊಲಿಸಲು ಶತ ಪ್ರಯತ್ನ ಮಾಡಿವೆ. ಅಂತಿಮವಾಗಿ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎನ್ನುವುದು ಫಲಿತಾಂಶ ಬಂದ ಬಳಿಕ ಗೊತ್ತಾಗಲಿದೆ.
ಕೆಲವೊಂದು ಕ್ಷೇತ್ರಗಳಲ್ಲಿ ಘಟಾನುಘಟಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ನವ ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ. ಇವರ ವಿರುದ್ದ ಬಿಜೆಪಿಯಿಂದ ಪರ್ವೇಶ್ ವರ್ಮಾ ಮತ್ತು ಕಾಂಗ್ರೆಸ್‌ನಿಂದ ಸಂದೀಪ್ ದೀಕ್ಷಿತ್ ಸ್ಪರ್ಧಿಸಿದ್ದಾರೆ. ಈ ಇಬ್ಬರೂ ಮಾಜಿ ಸಂಸದರು. ವಿಶೇಷವಾಗಿ ಸಂದೀಪ್ ದೀಕ್ಷಿತ್ ಅವರು ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ನಾಯಕಿ ದಿವಂಗತ ಶೀಲಾ ದೀಕ್ಷಿತ್ ಅವರ ಮಗನೂ ಹೌದು.
ಕಲ್ಕಾಜಿ ಕ್ಷೇತ್ರದಲ್ಲಿ ದೆಹಲಿಯ ಹಾಲಿ ಸಿಎಂ ಅತಿಶಿ ಮರ್ಲೇನಾ ಎಎಪಿಯಿಂದ ಮತ್ತೆ ಸ್ಪರ್ಧಿಸಿದ್ದಾರೆ. ಇವರ ವಿರುದ್ದ ಬಿಜೆಪಿ ಮಾಜಿ ಸಂಸದ, ವಿವಾದಾತ್ಮಕ ಹೇಳಿಕೆಗಳಿಂದ ಕುಖ್ಯಾತಿ ಪಡೆದಿರುವ ರಮೇಶ್ ಬಿಧುರಿ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ನಿಂದ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಅಲ್ಕಾ ಲಂಬಾ ಸ್ಪರ್ಧೆ ಮಾಡಿದ್ದಾರೆ.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಈ ಬಾರಿ ಪತ್ಪರ್‌ಗಂಜ್ ಬದಲಾಗಿ ಜಂಗ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇವರ ವಿರುದ್ದ ಬಿಜೆಪಿಯ ತರವಿಂದರ್ ಸಿಂಗ್ ಮಾರ್ವಾ ಮತ್ತು ಕಾಂಗ್ರೆಸ್‌ನ ಫರ್ಹಾದ್ ಸೂರಿ ಕಣಕ್ಕಿಳಿದಿದ್ದಾರೆ.
ಬಲ್ಲಿಮಾರನ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಮತ್ತು ಮಾಜಿ ಸಚಿವ ಹಾರೂನ್ ಯೂಸುಫ್ ಮತ್ತು ಹಾಲಿ ಎಎಪಿ ಸಚಿವ ಇಮ್ರಾನ್ ಹುಸೇನ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಗ್ರೇಟರ್ ಕೈಲಾಶ್, ಮಾಳವೀಯ ನಗರ, ಗಾಂಧಿ ನಗರ, ಮಂಗೋಲ್‌ಪುರಿ, ಪತ್ಪರ್‌ಗಂಜ್ ಮತ್ತು ಮಾಟಿಯಾ ಮಹಲ್ ಈ ಬಾರಿಯ ಚುನಾವಣೆಯಲ್ಲಿ ಪ್ರಾಮುಖ್ಯತೆ ಪಡೆದಿರುವ ವಿಧಾನಸಭಾ ಕ್ಷೇತ್ರಗಳಾಗಿವೆ.
ವಿಪಕ್ಷ ನಾಯಕರದ್ದು ‘ಅರ್ಬನ್ ನಕ್ಸಲರ ಭಾಷೆ’ ಎಂದ ಪ್ರಧಾನಿ ನರೇಂದ್ರ ಮೋದಿ


